ಕತೆ-ಕವನಗಳು

ಸಣ್ಣಕಥೆ: ನೀನು ಅವನಾದರೆ ನೀನು ನೀನಾಗುತ್ತಿರಲಿಲ್ಲ

ಆ ಕಾಗೆ ಅಂದು ನವಿಲನ್ನು ನೋಡುತ್ತಿತ್ತು. ಜನ ಅದರ ಅಂದಕ್ಕೆ ಮಾರು ಹೋಗಿ ಫೋಟೋ ತೆಗೆಯುತ್ತಿದ್ದುದು ಅದಕ್ಕೆ ಅಸೆ ಆಗುತ್ತಿತ್ತು. ಮನಸ್ಸಲ್ಲಿ ಯೋಚಿಸಿತ್ತು ನಾನು ನಾವಿಲಾಗಿದ್ದರೆ ಎಷ್ಟು ಚೆನ್ನ ಎಂದು. ಸ್ವಲ್ಪ ದೂರದಲ್ಲಿ ಸಿಂಹವೊಂದು ನವಿಲನ್ನು ಕೊಂದು ತಿನ್ನುತ್ತಿತ್ತು. ದೇಹ ದೊಡ್ಡದಾದ್ದರಿಂದ ನೆಲದಲ್ಲಿ ಕೂತಾಗ ಸಿಂಹದ ಆಕ್ರಮಣ ದಿಂದ ರಕ್ಷಿಸಿಕೊಳ್ಳಲಾಗಿರಲಿಲ್ಲ.

ಅಯ್ಯೋ, ನವಿಲು ಬೇಡ, ಆ ಸಿಂಹ ನಾನಾಗಿದ್ದಿದ್ದರೆ ಜೀವನ ಎಷ್ಟೊಂದು ಸುಖಕರ ವಾಗಿತ್ತು.. ಶಕ್ತಿ ಶಾಲಿಯಾದ ಸಿಂಹ ತನಗೆ ಬೇಕಾದದ್ದನ್ನು ಕೊಂದು ತಿನ್ನುತಿತ್ತು. ಅದು ಕಾಗೆಗೆ ಆ ಕ್ಷಣ ಇಷ್ಟವಾಗಿತ್ತು.

ಸ್ವಲ್ಪ ಮುಂದೆ ಹೋದಾಗ ಬೇಟೆಗಾರನೊಬ್ಬ ಸಿಂಹವನ್ನು ಗುಂಡು ಹೊಡೆದು ಕೊಂದು ತನ್ನ ಮನೆಗೆ ಹೊತ್ತೊಯ್ಯುತ್ತಿದ್ದ. ಕಾಗೆ ಮತ್ತೆ ಯೋಚಿಸಿತು- ಮನುಷ್ಯನೇ ಸಿಂಹಕ್ಕಿಂತ ಶಕ್ತಿಶಾಲಿ ನನ್ನನ್ನು ಮನುಷ್ಯನಾಗಿ ಮಾಡು ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿತು.

ಸ್ವಲ್ಪ ದೂರದಲ್ಲಿ ಆ ವಿಷದ ಹಾವೊಂದು ಬೇಟೆಗಾರನಿಗೆ ಕಚ್ಚಿತ್ತು. ಬೇಟೆಗಾರ ಸತ್ತಿದ್ದ. ಕಾಗೆಗನ್ನಿಸಿತ್ತು- ಹಾವಲ್ಲಿ ವಿಷ ಇದ್ದುದರಿಂದ ತನ್ನ ರಕ್ಷಣೆ ಮಾಡಬಲ್ಲದು. ಹಾಗಾಗಿ ಹಾವಾಗಿದ್ದರೆ ಚೆನ್ನ ಎಂದೆನಿಸಿತ್ತು.

ಸ್ವಲ್ಪ ದೂರದಲ್ಲಿ ಆ ಹಾವನ್ನು ನವಿಲೊಂದು ಕಚ್ಚಿ ತೆಗೆದುಕೊಂಡು ಕುಕ್ಕಿ ತಿನ್ನುತ್ತಿತ್ತು. ಮತ್ತೆ ಆ ನವಿಲು ಮುಂದೆ ವಿದ್ಯುತ್ ತಂತಿ ತಾಗಿ ಸತ್ತು ಬಿದ್ದಿತ್ತು. ತನ್ನ ಬಂಧುಗಳೆಲ್ಲ ಕುಕ್ಕಿ ಕುಕ್ಕಿ ತಿನ್ನುತಿದ್ದವು. ಮತ್ತೆ ಕಾಗೆ ಯೋಚಿಸಿತು- ನಾನು ಕಾಗೆಯಾಗಿದ್ದರೇ ಚೆನ್ನ ಎಂದು ದೇವರಿಗೆ ಧನ್ಯವಾದವನ್ನರ್ಪಿಸಿ ನವಿಲಿನ ಮಾಂಸ ತಿನ್ನಲು ಹಾರಿ ಹೋಗಿತ್ತು.

*****

ನಾವೂ ಕಾಗೆಯ ಹಾಗೆ ಎಷ್ಟೋ ಸಲ ಯೋಚಿಸುವುದುಂಟು. ನಮ್ಮದೂ ಒಂದು ಬದುಕೆ? ಅಧ್ಯಾಪಕನಾಗಿದ್ದರೆ ಎಷ್ಟು ಒಳ್ಳೆದಿತ್ತು? ವರ್ಷದಲ್ಲಿ 3 ತಿಂಗಳು ರಜೆ ಅಲ್ಲೂ ಸಂಬಳ, ವೈದ್ಯನಾಗಿದ್ದರೆ ನೋಟಿನ ಕಟ್ಟು ಕಟ್ಟು ಎಣಿಸಬಹುದಿತ್ತು, ಪೊಲೀಸ್ ಅಧಿಕಾರಿ ಆಗಿದ್ದಿದ್ದರೆ ಜನರ ಗೌರವ ಸಿಗುತ್ತಿತ್ತು, ಸ್ವಂತ ಉದ್ಯಮ ಇದ್ದಿದ್ದರೆ ಯಾರಿಗೂ ಹೆದರದೆ ಇರಬಹುದಿತ್ತು… ಇನ್ನು ಕೆಲವರಂತೂ ಟಾಟಾ ಬಿರ್ಲಾ, ಪ್ರಧಾನಿ, ರಾಷ್ಟ್ರಪತಿಯ ಕನಸು ಕಂಡವರಿದ್ದಾರೆ.

ಆದರೆ ಒಂದು ಸತ್ಯ ನೆನಪಿರಲಿ, ಯಾವುದೇ ಹುದ್ದೆ ಇರಲಿ ಅದರ ಹಿಂದಿನ ಕಷ್ಟ ಅನುಭವಿಸಿದವರಿಗೆ ಗೊತ್ತಿರುತ್ತದೆ. ಕಲ್ಲು ಕೂಡ ಉಳಿಯ ಪೆಟ್ಟು ತಿಂದರೇನೇ ಮೂರ್ತಿಯಾಗುವುದು. ಹಾಗಾಗಿ ನೀವು ಮಾಡುವ ಕೆಲಸವನ್ನೇ ಮನಸ್ಸಿಟ್ಟು ಪ್ರಾಮಾಣಿಕವಾಗಿ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ನೆನಪಿಡಿ.
ನೀನು ಅವನಾದರೆ ನೀನು ನೀನಾಗುತ್ತಿರಲಿಲ್ಲ….

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮಕ್ಕಳ ಕತೆ: ಆನೆ… ಒಂದಾನೆ (ಭಾಗ 4)

Upayuktha

ಕವನ: ತೈಯಂ

Upayuktha

ಕವಿತೆ: ನಿನ್ನೊಲವಿನ ಕುಬೇರ

Upayuktha