ಕತೆ-ಕವನಗಳು

ಸಣ್ಣಕಥೆ: ಆಗಿದ್ದೆಲ್ಲವೂ ಒಳ್ಳೇದಕ್ಕೇ ಆಗಿದೆ, ಆಗಲಿರುವುದು ಕೂಡ ಒಳ್ಳೆಯದೇ ಆಗಲಿದೆ

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
(9945130630)

ಆಕೆ 60ರ ಇಳಿವಯಸ್ಸಲ್ಲಿ ಮಗಳ ಮನೆಯಲ್ಲಿ ಖುಷಿ ಖುಶಿಯಾಗಿದ್ದಳು. ಮಗಳು ಸರಕಾರಿ ಇಲಾಖೆ ಒಂದರಲ್ಲಿ ಉದ್ಯೋಗದಲ್ಲಿದ್ದು ಅಳಿಯ ವಿದೇಶದಲ್ಲಿದ್ದ, ಮೊಮ್ಮಗಳೊಂದಿಗೆ ಇರುವಾಗ ತನ್ನ ಜೀವನದ ಕಹಿ ಘಟನೆಗಳನ್ನೂ ಒಮ್ಮೆ ಮೆಲುಕು ಹಾಕತೊಡಗಿದ್ದಳು.

ಯಾರೋ ಹೇಳಿದ್ದು ನೆನಪು- ಭಗವಂತ ಉಪಯೋಗವಿಲ್ಲದ್ದು ಎಂದು ಯಾವುದನ್ನೂ ಸೃಷ್ಟಿಸಿಲ್ಲ. ಆತನ ಸೃಷ್ಟಿಯಲ್ಲಿ ಚಿಕ್ಕ ಹುಲ್ಲು, ಹಾಗೆ ದೊಡ್ಡ ಪರ್ವತ ಎಲ್ಲದರ ಸೃಷ್ಟಿಗೂ ಅದರದ್ದೇ ಆದ ಕಾರಣಗಳಿವೆಯಂತೆ. ಅದೇ ರೀತಿ ನಮ್ಮ ದೇಹದಲ್ಲಿರುವ ಪ್ರತಿಯೊಂದು ಚಿಕ್ಕ ಅಂಗ ಕೂಡ ಅದರದ್ದೇ ಆದ ಕೆಲಸವನ್ನು ಹೊಂದಿದೆ ಉಪಯೋಗವಿಲ್ಲದ್ದು ಎಂದು ಒಂದೂ ಇಲ್ಲ ಎಂಬುದು ಇವಳ ಪಾಲಿಗೆ ಸುಳ್ಳು ಎಂದೇ ನಂಬಿದ್ದಳು.

ಕೈ ಕಾಲು ಬೆರಳುಗಳಲ್ಲಿ ಇರುವ ಉಗುರು ಬೆಳೆಯುತ್ತಿರುತ್ತದೆ. ಈ ರೀತಿ ಬೆಳೆಯುವ ಉಗುರುಗಳು ಮನುಷ್ಯನಿಗೆ ಎಂದೂ ಉಪಯೋಗಕ್ಕೆ ಬರದವುಗಳು ಉಗುರುಗಳು ಇರಬಹುದಿತ್ತು. ಆದರೆ ಅದರ ಬೆಳವಣಿಗೆಯ ಅಗತ್ಯವಿರಲಿಲ್ಲ. ಹಾಗೆ ತನ್ನ ಜೀವನದ ಆ 25 ವರ್ಷಗಳು ಇರಬಾರದಿತ್ತು. ಅದು ಉಪಯೋಗಕ್ಕಿಲ್ಲದ ವರ್ಷಗಳು ಎಂದು ಯೋಚಿಸಹತ್ತಿದಳು ಕಣ್ಣಲ್ಲಿ ನೀರ ಹನಿಯೊಂದು ಜಿನುಗುತ್ತಿತ್ತು.

ಹೌದು ಆಕೆಗೆ ಮದುವೆಯಾಗಿದ್ದ ಆರಂಭದ ದಿನಗಳಲ್ಲಿ ಗಂಡ ಕುಡುಕ ಎಂಬುದು ತಿಳಿಯುವಾಗ ತುಂಬಾ ತಡವಾಗಿತ್ತು. ತವರು ಮನೆಯವರು ಕೈತೊಳೆದು ಕೊಂಡುಬಿಟ್ಟಿದ್ದರು. ನಿತ್ಯ ಮನೆಯಲ್ಲಿ ಹೊಡೆದಾಟ ಬೈದಾಟ. ಅದೆಷ್ಟು ಕಷ್ಟದ ಜೀವನ ಮತ್ತೆ ಗಂಡ ತೀರಿ ಹೋದ ಬಳಿಕವೂ ಮನೆ ಕೆಲಸ ಮಾಡಿ ಒಪ್ಪೊತ್ತು ಊಟ ಮಾಡಿ ಮಗಳನ್ನು ಬೆಳೆಸಿದ ಆ ದಿನಗಳು.

ಯೋಚಿಸುತ್ತಿದ್ದಂತೆ ಕಣ್ಣೀರ ಹನಿಗಳು ಕೆನ್ನೆಯಿಂದ ಜಾರಿ ನೆಲವನ್ನು ಮುತ್ತಿಕ್ಕುತ್ತಿದ್ದವು, ಆ 25 ವರ್ಷ ಸುತ್ತಲೂ ಕತ್ತಲ ದಿನಗಳು ಇಲ್ಲದಿದ್ದರೆ ಈ ಜೀವನ ಎಷ್ಟೊಂದು ಒಳ್ಳೆದಿತ್ತು. ನನ್ನ ಜೀವನದಲ್ಲಿ ಮದುವೆ ಒಂದು ಕಪ್ಪು ಚುಕ್ಕಿಯೇ ಆಗಿತ್ತು. ಅಷ್ಟು ದಿನಗಳು ಇಲ್ಲದಿದ್ದರೆ ಬದುಕು ಸುಂದರವಿತ್ತು. ಬದುಕಲ್ಲಿ ಡಿಲೀಟ್ ಆಪ್ಶನ್ ಇದ್ದಿದ್ದರೆ ಅದಷ್ಟನ್ನು ಡಿಲೀಟ್ ಮಾಡಿ ಬಿಡಬೇಕು ಎಂದು ಅದೆಷ್ಟೋ ಬಾರಿ ಯೋಚಿಸಿದ್ದಳು. ಭಗವಂತನಲ್ಲೂ ಅದೆಷ್ಟೋ ಬಾರಿ ಕೇಳಿಕೊಂಡಿದ್ದಳು ಕೂಡ.

ಆದರೆ ಸತ್ಯವೇ ಹೀಗೆ ವಿಚಿತ್ರ ಮನಸ್ಸಿನ ಮೂಲೆಯಲ್ಲಿದ್ದ ಸತ್ಯ ಹೊರಬಂದಿತ್ತು. ನಾನೀಗ ಇರುವುದು ಮಗಳ ಆಶ್ರಯದಲ್ಲಿ ಇಂದಿನ ನನ್ನ ಸುಂದರ ಬದುಕಿಗೆ ಕಾರಣ ನನ್ನ ಮಗಳು. ಆ ಮಗಳನ್ನು ಈ ಪ್ರಪಂಚಕ್ಕೆ ತಂದದ್ದು ಆ ಮದುವೆ ತಾನೇ, ಅಂದು ಆ ಜೀವನ ಅನುಭವಿಸಿದ್ದರಿಂದ ಇಂದು ಈ ಜೀವನ ಇದೆ. ನನಗೆ ಹಾಗಿದ್ದ ಮೇಲೆ ಆ ಜೀವನ ಡಿಲೀಟ್ ಮಾಡಿದ್ದರೆ ಇಂದು ಖುಷಿಯಿಂದ ಇರಲು ಸಾಧ್ಯವಿರಲಿಲ್ಲ ಎಂದಿತ್ತು ಅವಳ ಒಳಮನಸ್ಸು.

ಆದರೂ ದೇವರ ಈ ಸೃಷ್ಟಿಯಲ್ಲಿ ಬೆಳೆಯುವ ಉಗುರುಗಳು ಅವಶ್ಯವೇ? ಮತ್ತೆ ಅದೇ ಉಗುರುಗಳಿಂದ ತಲೆ ಕೆರೆದುಕೊಂಡು ಯೋಚಿಸಿದಳು. ಮತ್ತೆ ಒಳಮನಸ್ಸು ಉತ್ತರಿಸಿತ್ತು. ಉಗುರು ಬೆಳೆಯದೆ ಇದ್ದರೆ ತಲೆ ಕೆರೆದು ಕೊಳ್ಳಲು ಒಂದು ಮರದ ಟೊಂಗೆ ಹಿಡಿದುಕೊಳ್ಳಬೇಕಿತ್ತು ತುರಿಸಿಕೊಳ್ಳಲು. ರಾತ್ರಿ ಎಲ್ಲಾದರೂ ತಲೆ ತುರಿಸಿದರೆ ಎಲ್ಲಿಂದ ತರುವುದು ಮರದ ಟೊಂಗೆಯನ್ನ? ನಿಜ ಭಗವಂತನ ಸೃಷ್ಟಿ ನಿಜಕ್ಕೂ ಅದ್ಭುತ. ಅಲ್ಲಿ ಪ್ರತಿಯೊಂದು ಅಂಗವೂ ವ್ಯರ್ಥವಾಗಿರಲಿಲ್ಲ, ಬೆಳೆಯುವ ಉಗುರೂ ಕೂಡ. ಹಾಗೆ ಜೀವನದಲ್ಲಿ ಎದುರಾಗಿದ್ದ ಸೋಲುಗಳಿಂದಲೇ ಇಂದು ಯಶಸ್ಸು ನಮ್ಮದಾಗಿದೆ ಎಂಬ ಸತ್ಯದ ಅರಿವು ಅವಳಿಗಾಗಿತ್ತು ಅಂದು.

ಹೌದು ಅಂದು ಕಾಲೇಜು ಜೀವನದಲ್ಲಿ ಒಂದು ಸಬ್ಜೆಕ್ಟ್ ಫೇಲ್ ಆಗಿದ್ದು, ನಂತರ ಪ್ರೀತಿ ಕೈಕೊಟ್ಟಿದ್ದು, ವ್ಯಾಪಾರ ನಷ್ಟವಾಗಿದ್ದು. ಎಲ್ಲ ನನ್ನ ಜೀವನದ ಬಹುದೊಡ್ಡ ಸೋಲುಗಳು ಎಂದುಕೊಳ್ಳುವ ಬದಲು ಸಬ್ಜೆಕ್ಟ್ ಫೇಲ್ ಆಗಿದ್ದೇ ನಾನು ಬೇರೆ ದೃಷ್ಟಿಕೋನದಲ್ಲಿ ಮುಂದುವರಿಯಲು ಕಾರಣವಾಗಿತ್ತು, ಹಾಗೆ ಪ್ರೀತಿ ಕೈಕೊಟ್ಟದ್ದರಿಂದ ಇಂದು ಮುತ್ತಿನಂತ ಹೆಂಡತಿ ಇದ್ದಾಳೆ. ಆ ವ್ಯಾಪಾರ ನಷ್ಟದಿಂದ ಕಲಿತ ಪಾಠವೇ ಹೊಸ ಯಶಸ್ಸಿಗೆ ಕಾರಣವಾಗಿದೆ ಎಂದು ಯೋಚಿಸಬಾರದೇಕೆ? ನೆನಪಿಡಿ ಭಗವಂತನ ಸೃಷ್ಟಿಯಲ್ಲಿ ಡಿಲೀಟ್ ಮಾಡುವ ಯಾವ ಅಂಶವೂ ಇರುವುದಿಲ್ಲ. ಇಂದಿನ ಸೋಲು ನಾಳೆಯ ಗೆಲುವಿನ ಮೊದಲ ಮೆಟ್ಟಿಲಷ್ಟೇ. ಹಾಗಾಗಿ ಸೋತಾಗ ಎದೆಗುಂದದೆ ಹೋರಾಡಿದರೆ, ಸುಂದರವಾದ ನಾಳೆಗಳು ನಮಗಾಗಿ ಕಾದಿರುತ್ತದೆ. ಈ ಸಂದರ್ಭದಲ್ಲಿ ಆ ಮಹಾನುಭಾವರ ಮಾತೊಂದನ್ನು ನೆನಪಲ್ಲಿಡಿ.

“ಆಗಿದ್ದೆಲ್ಲವೂ ಒಳ್ಳೆಯದಕ್ಕೇ ಆಗಿದೆ, ಮುಂದೆ ಅಗಲಿರುವುದು ಅದೂ ಒಳ್ಳೆಯದೇ ಆಗಲಿದೆ.
ರೋದಿಸಲು ನೀನೇನು ಕಳೆದು ಕೊಂಡಿರುವೆ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ಅದೇನು ತಂದಿದ್ದರೂ ಇಲ್ಲಿಂದಲೇ ತಂದಿರುವೆ.
ಹಿಂದೆ ಯಾರದ್ದೋ ಆಗಿದ್ದಿದ್ದು ಇಂದು ನಿನ್ನದಾಗಿದೆ. ನಾಳೆ ಇನ್ನ್ಯಾರದ್ದೋ ಆಗಲಿದೆ.
ಪರಿವರ್ತನೆ ಜಗದ ನಿಯಮ. ನೆನಪಿಡಿ…

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಅಮ್ಮ

Harshitha Harish

ಸಣ್ಣ ಕಥೆ: ಅವಳು

Upayuktha

ನಾಡ ಗೀತೆ: ಭಾರತ ಜನನಿ

Harshitha Harish