ಕತೆ-ಕವನಗಳು

ಸಣ್ಣಕಥೆ: ಪಂಜರ ಚಿನ್ನದ್ದಾದರೇನಂತೆ ಹಕ್ಕಿಯ ಪಾಲಿಗೆ ಅದು ಪಂಜರವೇ ತಾನೇ?

ಅಂದು ವಿನಯನಿಗೆ ವಿಶ್ವ ಹಿರಿಯರ ದಿನದಂದು ಟೌನ್ ಹಾಲ್ ನಲ್ಲಿ ಭಾಷಣ ಮಾಡಬೇಕಿತ್ತು. ಸಭೆ ಕಿಕ್ಕಿರಿದು ತುಂಬಿತ್ತು. ಭಾಷಣ ಆರಂಭಿಸಿದ “ಈ ವೃದ್ದಾಶ್ರಮಗಳು ಇರಲೇ ಬಾರದಿತ್ತು. ಆಗ ಎಲ್ಲರಿಗೂ ಹಿರಿಯರ ಮಹತ್ವ ತಿಳಿಯುತ್ತಿತ್ತು, ಎಲ್ಲ ವೃದ್ದಾಶ್ರಮ ಗಳನ್ನು ಮುಚ್ಚಿಸಿ ಬಿಡಬೇಕು. ಆಗ ಮತ್ತೆ ಮನೆ ಮನೆಗಳಲ್ಲಿ ಅಜ್ಜ ಅಜ್ಜಿಯರು ಇರುತ್ತಿದ್ದರು” ಎಂದಿದ್ದ. ಇಡೀ ಟೌನ್ ಹಾಲ್‌ನ ಜನರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದರು. ಈ ಅದ್ಭುತ ಭಾಷಣ ಮಾಡಿದ್ದಕ್ಕೆ ಒಂದು ಸ್ಮರಣಿಕೆ ಕೊಟ್ಟಿದ್ದರು.

ಅದನ್ನು ಹಿಡಿದುಕೊಂಡು ಮನೆ ಕಡೆ ಬರುತ್ತಿದ್ದರೆ ಮೊಬೈಲ್‌ನಲ್ಲಿ ಸಂದೇಶ ಒಂದು ಬಂದಿತ್ತು. ಮನೆಯಿಂದ ಅಪ್ಪ ಮೆಸೇಜ್ ಮಾಡಿದ್ದರು. ಬಹಳ ಅಪರೂಪಕ್ಕೆ ಬಂದ ಅಪ್ಪನ ಮೆಸೇಜ್, ವಿನಯ್ ನನ್ನು ಒಂದು ಕ್ಷಣ ಮೆಸೇಜ್ ಓದುವಂತಾಗಿಸಿಬಿಟ್ಟಿತ್ತು.

“ವಿನೂ ನಾನು ನಮ್ಮ ಮನೆ ಪಕ್ಕದ ಬೀದಿಯಲ್ಲಿರೋ “ಬದುಕು” ವೃದ್ಧಾಶ್ರಮಕ್ಕೆ ಹೋಗ್ತಿದ್ದೀನಿ. ಇವತ್ತಿಂದ ನನ್ ಮನಸ್ಸು ಪ್ರಶಾಂತವಾಗೊ ತನಕ ಅಲ್ಲಿದ್ದು ಬರ್ತೀನಿ ಕಣೋ. ಹೇಗೋ 20000 ಪೆನ್ಷನ್ ಬರತ್ತಲ್ಲ, ಅಲ್ಲಿ ತಿಂಗಳಿಗೆ 10,000 ಅಷ್ಟೇ ಕೊಟ್ಟರಾಯಿತು, ಮನಸ್ಸಿಗೊಂದಿಷ್ಟು ಶಾಂತಿ ಸಿಗುವುದು. ನಿನಗೆ ಆಶ್ಚರ್ಯ ವಾಗುತ್ತಿರಬಹುದು ಒಳ್ಳೆಯ ಕೋಣೆ, ಒಳ್ಳೆಯ ಊಟ, ಆರಾಮದ ಬದುಕನ್ನು ಬಿಟ್ಟು ಹೋಗುತ್ತಿರುವುದು ಹುಚ್ಚುತನ ಎಂದು. ಆದರೆ…

ಪಂಜರ ಚಿನ್ನದ್ದಾದರೂ ಪಂಜರ ಪಂಜರವೇ ತಾನೇ??”

ಕಳೆದ ವರ್ಷ ನಿಮ್ಮಮ್ಮ ಹೋದ ಮೇಲೆ ಒಬ್ಬಂಟಿ ಎನಿಸುತ್ತಿದೆ ಕಣೋ, ಮನೆಯಲ್ಲಿ ನೀನು ನಿನ್ನ ಮಕ್ಕಳು, ಸೊಸೆ ಎಲ್ಲ ಇದ್ದಾರೆ ಆದರೆ ಎಲ್ಲ ನಿಮ್ಮ, ನಿಮ್ಮ ಲೋಕದಲ್ಲೇ ಬ್ಯುಸಿ ಇರುತ್ತೀರಿ. ನಾನು ಮಾತ್ರ ಒಬ್ಬಂಟಿ. ಅದು ನಿಮ್ಮ ತಪ್ಪಲ್ಲ ಈ ಸಮಾಜವೇ ಹಾಗೆ ಏನೂ ಹೇಳುವಂತಿಲ್ಲ, ಮನಸ್ಸಿಗೆ ತೋಚಿದ್ದನ್ನು ಗೋಡೆಯ ಬಳಿ ಹೇಳಿ ಹೇಳಿ ಸಾಕಾಗಿದೆ ಕಣೋ. ಬೆಳಿಗ್ಗೆ ಏಳುವುದು ರಾತ್ರಿ ಮಲಗುವುದು ಇವಿಷ್ಟೇ ಬದುಕಾಗಿ ಬಿಟ್ಟಿದೆ. ಮನೆ ಯಲ್ಲಿ ನಡೆಯುವ ಚಿಕ್ಕ ಪುಟ್ಟ ವಿಷಯಗಳೂ ಕೂಡ ಮನಸ್ಸಿಗೆ ನೋವುಂಟು ಮಾಡುತ್ತಿದೆ, ಸೊಸೆ ಊಟದ ಬಟ್ಟಲನ್ನು ಕುಕ್ಕುವುದು, 2 ಬಾರಿ ಹೇಳಿದಾಗಲೂ ಊಟ ಮಾಡದಾಗ ಬದಲಾಗುವ ಮುಖಭಾವ, ಯಾಕೋ ನಾನು ನನ್ನದೇ ಮನೆಯೊಳಗೇ ನಿರ್ಲಕ್ಷ್ಯಕ್ಕೊಳಗಾಗುತಿದ್ದೇನೆ ಎನ್ನುವ ಅನವಶ್ಯಕ ಯೋಚನೆಗಳು ನನ್ನ ಬಿಪಿ, ಶುಗರ್ ಅನ್ನು ಹೆಚ್ಚಿಸುತ್ತಿದೆ. ಆ ದೇವರು ನಿನ್ನಮ್ಮನನ್ನು ಮಾತ್ರ ಕರೆದುಕೊಂಡು ನನಗೆ ಅನ್ಯಾಯ ಮಾಡಿದನೇನೋ ಎನಿಸುತ್ತಿದೆ.

ಮೊನ್ನೆ ವಾಕಿಂಗ್ ಗೆ ಹೋದವ ಆ ವೃದ್ಧಾಶ್ರಮಕ್ಕೊಮ್ಮೆ ಹೋಗಿದ್ದೆ. ಅಲ್ಲೊಂದು ಅರ್ಧ ಗಂಟೆ ಕೂತಿದ್ದೆ ಅಲ್ಲಿಯ ವಾತಾವರಣ ಹಿತವೆನಿಸಿತ್ತು ವಿನು. ಅಲ್ಲಿ ನನ್ನದೇ ವಯಸ್ಸಿನ ಹಿರಿ ಜೀವಗಳೊಂದಿಗೆ ಮಾತಾಡುವಾಗ ನಮ್ಮ ಬಾಲ್ಯದ ಶಾಲಾ ದಿನಗಳು ನೆನಪಿಗೆಬಂದಿತ್ತು. ಎಲ್ಲ ಒಟ್ಟಾಗಿ ದೊಡ್ಡ ಹಾಲ್ ಒಂದರಲ್ಲಿ ಮಲಗುವಾಗ ಏನೋ ಸಂತಸ ಬಂತು. ನನ್ನದೇ ಪ್ರಾಯದ ಅಜ್ಜಿಯರ ಭಾವನೆಗಳು ಅವರ ಕುಟುಂಬದ ಕತೆಗಳು ಆಗಾಗ ಎಲ್ಲರೊಂದಿಗೆ ಆಚರಿಸಿ ಕೊಳ್ಳುವ ಹುಟ್ಟು ಹಬ್ಬದ ಆಚರಣೆ, ಬೆಳಿಗ್ಗೆ ಎಲ್ಲ ಒಟ್ಟಾಗಿ ಯೋಗ ಮಾಡುವುದಿರಲಿ ಸಂಜೆ ಕೇರಂ ಆಡುವುದಿರಲಿ ಏನೋ ಒಂತರ ಮನಸ್ಸಿಗೆ ಹಿತವೆನಿಸಿತ್ತು. ಹೇಗೂ ಬರುವ ತಿಂಗಳು ನನ್ನ ಜಾನು (ಜಾನಕೀ, ನಿನ್ನ ತಾಯಿ) ಹುಟ್ಟಿದ ದಿನ ಅಲ್ಲೇ ಆಚರಿಸಬೇಕೆಂದಿದ್ದೇನೆ. ನಿನಗೆ ನೆನಪು ಹೋಗಿರಬಹುದು ಮಗ ನಾನು ಹೇಗೆ ಮರೆಯಲಿ 43 ವರ್ಷ ಗಳು ಒಂದು ದಿನವೂ ಮರೆಯದೆ ತಿಂದಿದ್ದ ಕ್ಯಾರೆಟ್ ಹಲ್ವಾ. ಇರಲಿ, ಸಂಜೆ 5 ಗಂಟೆಗೆ ಹೋಗುತಿದ್ದೇನೆ ಎಲ್ಲ ಪ್ಯಾಕಿಂಗ್ ಆಗಿದೆ. ಸಾಧ್ಯ ಆದರೆ ಬೇಗ ಬಂದು ಬಿಡೋ”.

ಅಪ್ಪ ಕೇಳಿದ್ದಲ್ಲ, ಹೇಳಿದ್ದು ಎಂಬುದು ಅರ್ಥವಾಗಿತ್ತು ವಿನಯನಿಗೆ. ಅಪ್ಪನ ಈ ಒಂದು ಸಂದೇಶ ನನ್ನ ನಂಬಿಕೆಗಳಿಗೆ ಕೊಡಲಿ ಪೆಟ್ಟು ಕೊಟ್ಟಿತ್ತು. ಈಗ ತಾನೇ ಟೌನ್ ಹಾಲ್ ನಲ್ಲಿ ಎಲ್ಲ ವೃದ್ದಾಶ್ರಮಗಳನ್ನು ಮುಚ್ಚಬೇಕು ಎಂದಿದ್ದ. ತನ್ನ ಅಭಿಪ್ರಾಯ ತಪ್ಪು ಎಂದು ಈಗ ಸ್ಪಷ್ಟವಾಗಿತ್ತು ವಿನಯ್‌ಗೆ.

ಆ ಸ್ಮರಣಿಕೆಯನ್ನು ಅಲ್ಲೇ ಕಸದ ಬುಟ್ಟಿಗೆ ಎಸೆದಿದ್ದ. ನಾನು ಆ ಸ್ಮರಣಿಕೆಗೆ ಅರ್ಹನಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿತ್ತು ಅವನಿಗೆ. ಬೇಗ ಬೇಗ ಬೇಕರಿಗೆ ಹೋಗಿ ಅಮ್ಮನ ಹೆಸರಿನ ಕೇಕ್ ನೊಂದಿಗೆ ಮನೆಯತ್ತ ಪಯಣಿಸಿದ್ದ. ಅಪ್ಪ ಕಾಯುತ್ತಿರುತ್ತಾರೆ ಎಂಬುದು ತಿಳಿದಿತ್ತು ಈತನಿಗೆ.

ಇದು ಹೆಚ್ಚಿನ ಎಲ್ಲ ಮನೆಯ ಪರಿಸ್ಥಿತಿ ಹಿರಿಯ ಜೀವಗಳನ್ನು ಗಾಳಿ, ಬೆಳಕಿಲ್ಲದ, ಕೊಳಕು ಬಟ್ಟೆಗಳ ಹಾಸಿಗೆಯಲ್ಲಿ ಮಲಗಿಸಿ.. ನನ್ನ ತಂದೆ ತಾಯಿಯನ್ನು ನಾನೇ ನೋಡಿದೆ ಹಾಗೆ ಹೀಗೆ ಎಂದು ಮೆರೆಯುವ ಬುದ್ದಿಹೀನ ಮಕ್ಕಳಿರಬಹುದು, ಕೊನೆಯ ದಿನಗಳಲ್ಲಿ ಯಾವುದೊ ವೃದ್ದಾಶ್ರಮದಲ್ಲಿ ಹಾಕಿ ಸತ್ತ ಬಳಿಕ ಬಂದು ಆದ್ದೂರಿಯಾಗಿ ಬೊಜ್ಜ ಮಾಡಿ, ಲಕ್ಷಗಟ್ಟಲೆ ಖರ್ಚು ಮಾಡುವ ಅವಿವೇಕಿ ಮಕ್ಕಳಿರಬಹುದು, ತಂದೆ ತಾಯಿಗಳನ್ನೂ ಮನೆಯಿಂದಲೇ ಹೊರ ಹಾಕುವ ಪಾಪಿಷ್ಟ ಮಕ್ಕಳಿರಬಹುದು. ಒಮ್ಮೆ ಅವರ ಜಾಗದಲ್ಲಿ ಇದ್ದು ನೋಡಿ ಇಂದು ಅವರಿಗಾಗಿದ್ದು ನಾಳೆ ನಿಮಗಾಗದೆ ಇದ್ದೀತೇ? ಒಮ್ಮೆ ಯೋಚಿಸಿ.

ಇದರ ಬದಲು ಇಂದೇ ಬದಲಾಗಿ ತಂದೆ ತಾಯಿಗಳನ್ನು ಅವರಿಷ್ಟದಂತೆ ಬದುಕಲು ಬಿಡಿ. ಅವರ ಕೊನೆಯ ದಿನಗಳು ಹೇಗಿರಬೇಕು ಎಂದು ಅವರು ಆ ಪರಿಸ್ಥಿತಿಗೆ (ಯೋಚನಾ ಶಕ್ತಿ ಕಳಕೊಳ್ಳುವ) ಮೊದಲೇ ಕೇಳಿ ತಿಳಿದು ಕೊಳ್ಳಿ ಅದನ್ನೊಂದನ್ನು ನಡೆಸಿಕೊಡಿ. ಮತ್ತೆ ಜ್ಞಾಪಿಸುತ್ತಿದ್ದೇನೆ ಕಿವಿ ಕೊಟ್ಟು ಕೇಳಿ.

ಪಂಜರ ಚಿನ್ನದ್ದಾದರೇನಂತೆ… ಹಕ್ಕಿಯ ಪಾಲಿಗೆ ಅದು ಪಂಜರವೇ ತಾನೇ??

-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕವನ: ವೈದ್ಯೋ ನಾರಾಯಣೋ ಹರಿ

Upayuktha

ಕವನ: ಮರಳಿ ದೊರಕದ ಬಾಲ್ಯ

Upayuktha

ಗಝಲ್: ಗೆಳೆಯ ಬಿಡಿಸಿದ ಚಿತ್ರ

Upayuktha