ಕತೆ-ಕವನಗಳು

ಸಣ್ಣಕಥೆ: ಲಾಕ್ ಡೌನ್ ಎಫೆಕ್ಟ್

ಆತ ಉಡುಪಿಯ ಬಡ ದಿನ ಕೂಲಿ ಕಾರ್ಮಿಕ. ದಿನ ಕೆಲಸಕ್ಕೆ ಹೋದರೆ ಮಾತ್ರ ಹೆಂಡತಿ ಹಾಗೂ 3 ಮಕ್ಕಳು ಊಟ ಮಾಡಬಹುದಿತ್ತು, ಪುಣ್ಯಕ್ಕೆ ಕಳೆದ ಕೆಲವು ತಿಂಗಳು ಊಟಕ್ಕೇನೂ ಕೊರತೆ ಇರಲಿಲ್ಲ. ಆದರೆ ಅಂದು ಆ ಭಯಾನಕ ದಿನ ಬಂದೇ ಬಿಟ್ಟಿತು.

ಅಂದು ಕೊರೊನ ಲಾಕ್ ಡೌನ್‌ನ ಮೊದಲನೆಯ ದಿನ ಬೆಳಿಗ್ಗೆಯಿಂದ ಜೋಪಡಿಯಲ್ಲಿ ಗಂಡ ಹೆಂಡತಿ ಸಪ್ಪೆ ಮುಖದಲ್ಲಿ ಕೂತಿದ್ದರು. ಮನೆಯಲ್ಲಿ ಒಂದು ಅಕ್ಕಿ ಕೂಡ ಇರಲಿಲ್ಲ ರಾತ್ರಿ ಕೂಡ 3 ವರ್ಷದ ಚಿಕ್ಕ ಗಂಡು ಮಗು ಹಾಗೆ 7, 9 ವರ್ಷದ ಹೆಣ್ಣು ಮಕ್ಕಳಿಗೆ ಊಟ ಕೊಟ್ಟು ಗಂಡ ಹೆಂಡತಿ, ನೀರು ಹಾಗೆ ಉಳಿದ ಗಂಜಿ ಕುಡಿದು ಮಲಗಿದ್ದರು.

ಬೆಳಿಗ್ಗೆಯಿಂದ ಯಾರೂ ಏನೂ ತಿಂದಿರಲಿಲ್ಲ. ಮನೆಯಲ್ಲಿ ಒಂದು ಅನ್ನದ ಅಗುಳೂ ಇರಲಿಲ್ಲ. ಕೈಯಲ್ಲಿ 1 ಪೈಸೆ ಕೂಡ ಇರಲಿಲ್ಲ, ಆತನೂ ರಾತ್ರಿಯಿಂದ ಊಟ ಮಾಡಿರಲಿಲ್ಲ. ಹೊರಗೆ ಅಲ್ಲಿ ಪೊಲೀಸರು ಲಾಠಿ ಹಿಡಿದು ದಾರಿಯಲ್ಲಿ ಬಂದವರಿಗೆಲ್ಲ ಬಾರಿಸುತ್ತಿದ್ದರು. ಗಂಟೆ ಮಧ್ಯಾಹ್ನ 1 ಆದಾಗ ಮಕ್ಕಳ ಮುಖ ಹಸಿವೆಯಿಂದ ಬಾಡಿತ್ತು. ಯಾವಾಗ 3 ವರ್ಷದ ಮಗ ಹಸಿವೆಯಿಂದ ಕೂಗಿದನೋ ಆಗ ಅಪ್ಪನಾದವನಿಗೆ ತಡೆಯಲಾಗಿರಲಿಲ್ಲ.

ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಒರೆಸಿದವನೇ ಆದದ್ದಾಗಲಿ ಎಂದು ನಿರ್ಧರಿಸಿದವನೇ ಸೀದಾ ಅಂಗಿ ಹಾಕಿ ಹೊರಗೆ ಹೋಗಿಯೇ ಬಿಟ್ಟಿದ್ದ, ಹೆಂಡತಿ ಮಕ್ಕಳಿಗೂ ಹಸಿವಿತ್ತು. ಆತನನ್ನು ಯಾರೂ ತಡೆದಿರಲಿಲ್ಲ.

ಸುಮಾರು ಮಧ್ಯಾಹ್ನ ಗಂಟೆ 2 ಆದಾಗ ಅಪ್ಪ ಮನೆಗೆ ಬಂದಿದ್ದ, ಕೈಯಲ್ಲಿ ಊಟದ ಕಟ್ಟು ಇತ್ತು. ಯಾರೋ ಪುಣ್ಯಾತ್ಮರು ಊಟ ಕೊಟ್ಟಿದ್ದರು. “ಮೊದಲು ಮಕ್ಕಳಿಗೆ ಕೊಡು ಪಾಪ ಹಸಿದಿವೆ. ಆ ಮೇಲೆ ನೀನು ಊಟ ಮಾಡು, ನಾನು ಊಟ ಮಾಡಿ ಬಂದೆ ಮತ್ತೊಂದು ಸುಳ್ಳು ಹೇಳಿ ಅಂಗಿ ಬಿಚ್ಚಿಟ್ಟು ಮಲಗಿದ್ದ.

ಮೊದಲೇ ಹಸಿವೆಯಿಂದ ಕಂಗಾಲಾಗಿದ್ದ ಮಕ್ಕಳು, ಹೆಂಡತಿ ಗಬಗಬನೆ ತಿಂದಿದ್ದರು. ಹೆಂಡತಿಗೆ ಹೊಟ್ಟೆ ತುಂಬುತ್ತಿದ್ದಂತೆ ಏನೋ ಅನುಮಾನ ಬಂದು ಯಾವಾಗಲು ರಾತ್ರಿ ಮಲಗುವ ನಮ್ಮವರು ಇಂದೇಕೆ ಬೇಗ ಮಲಗಿದ್ದಾರೆ ನೋಡೋಣ ಎಂದು ಆಕಡೆ ಪರದೆ ಸರಿದು ಹೋಗಿದ್ದಳು.

ಗಂಡ ಬೆನ್ನು ಮೇಲೆ ಮಾಡಿ ಅಂಗಿ ಕಳಚಿಟ್ಟು ಮಲಗಿದ್ದ. ಬೆನ್ನ ಮೇಲೆ ಪೊಲೀಸರ ಲಾಠಿ ಏಟಿನ ಬಾಸುಂಡೆಗಳಿದ್ದವು.

ಕೊನೆಗೂ ಹೆಂಡತಿ ಮಕ್ಕಳ ಹಸಿವು ನೀಗಿಸಲು ಈತ ಪೊಲೀಸರ ಲಾಠಿ ಏಟು ತಿಂದಿದ್ದ. ಆಕೆಯ ಕರುಳು ಚುರುಕ್ ಎಂದಿತ್ತು. ಅಲ್ಲೇ ಇದ್ದ ತೆಂಗಿನ ಎಣ್ಣೆ ಪಾತ್ರೆಯಿಂದ ಎಣ್ಣೆ ಯನ್ನು ಬಾಸುಂಡೆಗಳ ಮೇಲೆ ಉಜ್ಜುತ್ತಾ, ಗಂಡನ ಮುಖವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು, ಇಬ್ಬರ ತಲೆಯಲ್ಲೂ ನಾಳೆಯ ಊಟದ ಯೋಚನೆಗಳಿದ್ದವು.

ಅಲ್ಲೇ ಚಿಕ್ಕ ರೇಡಿಯೋದಲ್ಲಿ ಪದವೊಂದು ಗುನುಗುತಿತ್ತು. ನಾನು ಬಡವ, ನೀನು ಬಡವಿ ಒಲವೇ ನಮ್ಮ ಜೀವನ.
ಇದು ಕಥೆಯಲ್ಲ ಲಾಕ್ಡೌನ್ ನ ಈ ಸಂದರ್ಭದಲ್ಲಿ, ಅದೆಷ್ಟೋ ದಿನಕೂಲಿ ಕೆಲಸಗಾರರ ಜೀವನವೇ ಆಗಿದೆ, ಲಾಕ್ ಡೌನ್ ಲಾಕ್ ಡೌನ್ ಬಗ್ಗೆ ಭಾಷಣ ಮಾಡುವ ದೊಡ್ಡ ದೊಡ್ಡ ಮಂದಿ ಇಂತಹ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಯೋಚಿಸಬೇಕಾಗಿದೆ. ಲಾಠಿ ಎತ್ತುವ ಪೊಲೀಸರೇ ನಿಮಗೊಂದು ಕಿವಿಮಾತು, ಲಾಕ್ ಡೌನ್ ದಿನ ಹೊಟ್ಟೆ ತುಂಬಿದವ ರಸ್ತೆಯ ಮೇಲೆ ತಿರುಗುತ್ತಿದ್ದರೆ ನಿಮ್ಮ ಲಾಠಿ ರುಚಿ ತೋರಿಸಿ. ಆದರೆ ಹಸಿವೆಯಿಂದ ರಸ್ತೆಗೆ ಬರುವ ಬಡ ಕೂಲಿ ಕೆಲಸಗಾರರ ಮೇಲೆ ಕರುಣೆ ಇರಲಿ. ಯಾಕೆಂದರೆ ಹೊಟ್ಟೆ ಹಸಿವು ನಿಮ್ಮಿಂದ ಯಾವುದೇ ತಪ್ಪು ಮಾಡಿಸಬಲ್ಲದು.

-ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಬಾಲವನ

Harshitha Harish

*ಕಾತ್ಯಾಯನಿ*

Harshitha Harish

ಸಣ್ಣಕಥೆ: ಮಾತಿನ ಮೋಡಿ

Upayuktha