ಆತ ಏನಾದರೂ ಮಾಡಿ ಈ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಕಾರಣ ಜನರ ಮನಸ್ಸನ್ನು ಮುಟ್ಟುವ ಒಂದೆರಡು ಕೆಲಸ ಮಾಡಬೇಕೆಂದು ನಿರ್ಧರಿಸಿದ್ದ.
ಅಲ್ಲೇ ಊರಲ್ಲಿದ್ದ ನಿರಾಶ್ರಿತರ ಮಾನಸಿಕ ಹಾಗೂ ವಿಕಲ ಚೇತನರ ಆಶ್ರಮಕ್ಕೆ ಒಂದು ಲಕ್ಷ ರೂಪಾಯಿ ದಾನ ಮಾಡುವುದಾಗಿ ನಿರ್ಧರಿಸಿದ್ದ. ಅದಕ್ಕಾಗಿ ಸಕಲ ಸಿದ್ಧತೆಗಳು ಮುಗಿದಿದ್ದವು, ಪತ್ರಿಕೆಯಲ್ಲಿ ಅರ್ಧ ಪುಟ ಜಾಹೀರಾತಿಗೆ 2 ಲಕ್ಷ, ತನ್ನ ಬೆಂಬಲಿಗರಿಗೆ 1 ಲಕ್ಷ ಹಾಗೂ ಇತರ ಖರ್ಚು 1 ಲಕ್ಷ ಒಟ್ಟು 5 ಲಕ್ಷ ಖರ್ಚು ಮಾಡುವ ಪ್ಲಾನಿಂಗ್ ಹಾಕಿಕೊಂಡಿದ್ದ.
ಅಂದು ಆ ನಿರಾಶ್ರಿತರ ತಾಣದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು. ಬೆಂಬಲಿಗರೆಲ್ಲರೂ ಜೈಕಾರ ಹಾಕುತ್ತಿದ್ದರು. ಅಲ್ಲೊಂದು ಸಭಾ ಕಾರ್ಯಕ್ರಮ ಆಯೋಜಿಸಿದ್ದರು. ದೊಡ್ಡ ಸಭೆಯಲ್ಲಿ 1 ಲಕ್ಷದ ಚೆಕ್ ಕೊಡುವ ಸುಂದರ ಪ್ಲಾನಿಂಗ್ ಅದಾಗಿತ್ತು. ಸ್ಟೇಜ್ನಲ್ಲಿ ಈ ರಾಜಕೀಯ ಮುಖಂಡ ಇದ್ದ. ಎಂದಿನಂತೆ ಮಾತು, ಹೊಗಳಿಕೆ ನಡೆಯುತ್ತಿತ್ತು.
ಮೇಲೆ ಕೂತಿದ್ದವನ ದೃಷ್ಟಿ ಕೆಳಗೆ ಹೋಗುತ್ತದೆ. ಅಲ್ಲಿ ಒಂದು ಕಡೆ ನಿರ್ಗತಿಕರು, ಮಾನಸಿಕ ವಿಕಲ ಚೇತನರು ಕುಳಿತುಕೊಂಡಿದ್ದರೆ ಒಬ್ಬ ಕುರುಡ ಮಾತ್ರ ನಡೆಯುತ್ತಿದ್ದ. ಆದರೆ ಅಲ್ಲಿ ದೊಡ್ಡದೊಂದು ನೀರಿನ ಹೊಂಡವೊಂದಿತ್ತು. ಅದು ನೆಲದಿಂದ 6 ಫೀಟ್ ಕೆಳಗಿತ್ತು. ಅಲ್ಲಿ ಕಲ್ಲುಗಳಿದ್ದವು. ಕುರುಡ ನಡೆಯುತ್ತಾ ಮುಂದೆ ಮುಂದೆ ಬರುತ್ತಿದ್ದ. ಅವನಿಗೆ ಅದರ ಅರಿವಿರಲಿಲ್ಲ. ಎಲ್ಲರ ಗಮನ ಸಭೆಯತ್ತ ಇದ್ದ ಕಾರಣ ಯಾರೂ ಗಮನಿಸಿರಲಿಲ್ಲ ಅವನನ್ನು. ಇನ್ನೇನು ಕುರುಡ ಬೀಳುವುದರಲ್ಲಿದ್ದ ಅವನನ್ನು ರಕ್ಷಿಸ ಬಹುದಿತ್ತು. ಇವನಿಗೆ ಆದರೆ ಸಭೆಯಿಂದ ಏಳಲು ಧೈರ್ಯ ಮಾಡಿರಲಿಲ್ಲ ಈತ. ಇಲ್ಲಿ ತನಗಾಗಿ ನಡೆಯುತ್ತಿರುವ ಈ ಸಮಾರಂಭದಲ್ಲಿ ತನ್ನ ಇಮೇಜ್ ಹಾಳಾಗುವುದು ಇಷ್ಟವಿರಲಿಲ್ಲ ಅವನಿಗೆ.
ಕುರುಡ ಮತ್ತು ಮುಂದುವರಿದಿದ್ದ ಇನ್ನೇನು ಬೀಳುವುದರಲ್ಲಿದ್ದ. ಎತ್ತಿದ ಕಾಲು ಇಟ್ಟಿದ್ದರೆ ಕಂದಕಕ್ಕೆ ಬಿದ್ದೇ ಬಿಡುತ್ತಿದ್ದ. ಅಷ್ಟರಲ್ಲಿ ಅಲ್ಲೇ ವೀಲ್ ಚೇರಲ್ಲಿ ಕೂತಿದ್ದ ವಿಕಲ ಚೇತನನೊಬ್ಬ ಗಟ್ಟಿಯಾಗಿ ನಿಲ್ಲು ಎಂದು ಕೂಗಿದ್ದ. ಹಾಗೆ ಕಾಲು ಸರಿಯಾಗಿಲ್ಲದ ಇನ್ನೊಬ್ಬ ವಿಕಲ ಚೇತನನೊಬ್ಬ ಜೋರಾಗಿ ಕುಂಟುತ್ತಾ ಓಡಿ ಬಂದು ಬೀಳುತಿದ್ದ ಕುರುಡನನ್ನು ಹಿಡಿದು ಪಕ್ಕಕ್ಕೆ ಬೀಳುತ್ತಾನೆ. ಸಭೆಯಲ್ಲಿ ಈತ 1 ಲಕ್ಷ ಕೊಡುತ್ತಿದ್ದರೂ ಕೂಡ ಬಂದವರೆಲ್ಲರೂ ಸಭೆಗೆ ಬೆನ್ನು ಹಾಕಿ ಆ ಇಬ್ಬರು ವಿಕಲ ಚೇತನರಿಗೆ ಕ್ಲಾಪ್ ಹೊಡೆಯುತ್ತಿದ್ದರು. ಅವರ ಆ ಮಾನವೀಯತೆಯ ಎದುರು ಈತ ಕೊಟ್ಟ 1 ಲಕ್ಷ ನಗಣ್ಯವಾಗಿತ್ತು. ಅಲ್ಲಿ ತಾನು ಹೀರೋ ಆಗಬೇಕೆಂದು ಈತ 5 ಲಕ್ಷ ಖರ್ಚುಮಾಡಿದ್ದ. ಏನೂ ಖರ್ಚು ಮಾಡದ ಆ ಇಬ್ಬರು ವಿಕಲಚೇತನರು ನಾಯಕರಾಗಿದ್ದರು. ಎಲ್ಲ ಆಂಗಾಂಗ ಸರಿ ಇದ್ದೂ ಈತ, ಮಾನವೀಯತೆ ಇಲ್ಲದ ವಿಕಲ ಚೇತನನಾಗಿ ಬಿಟ್ಟ.
ನಮ್ಮಲ್ಲೂ ಇದ್ದಾರೆ, ಇಂತಹ ವಿಕಲ ಚೇತನರು ದಾರಿಯಲ್ಲಿ ವೃದ್ಧ ಭಿಕ್ಷುಕನನ್ನು ನೋಡಿಯೂ ನೋಡದಂತೆ ಹೋಗುವ ಕುರುಡ ರು,ರಸ್ತೆ ಬದಿ ಹೋಗುತಿದ್ದ ನಾಯಿಯ ಮೇಲೆ ವಾಹನದ ಚಕ್ರ ಹತ್ತಿಸುವ ವಿಕೃತ ಕಾಮಿಗಳು, ಕಣ್ಣೆದುರೇ ಅನ್ಯಾಯ ನಡೆಯುತಿದ್ದರೂ ಮಾತೇ ಆಡದ ಮೂಕರು, ಇಂತಹವರೊಂದಿಗೆ ಮಾತಾಡುವುದರಿಂದ ನಮ್ಮ ಸ್ಟೇಟಸ್ ಹಾಳಾಗುತ್ತದೆ ಎನ್ನುವ ಭ್ರಮಾಲೋಕದಲ್ಲಿರುವ ಇಂತಹ ವಿಕಲ ಚೇತನರಿಗೆ … ಇನ್ನಾದರೂ ನಿಮ್ಮ ಈ ಚಾಳಿಯನ್ನು ಬದಲಾಯಿಸಿ ಕೊಳ್ಳಿ, ಎಂಬುದನ್ನು ಹೇಳ ಬಯಸುತ್ತೇನೆ. ನೆನಪಿಡಿ ಇದರಿಂದ ಸಮಾಜದಲ್ಲಿ ನಿಮ್ಮ ಸ್ಟೇಟಸ್ ಕಮ್ಮಿ ಅಲ್ಲ ಖಂಡಿತ ಹೆಚ್ಚಾಗಲಿದೆ.
-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ