ಕತೆ-ಕವನಗಳು

ಸಣ್ಣಕಥೆ: ಅಹಂಕಾರ ಇಳಿದದ್ದು ಯಾರದ್ದು?

(ಪ್ರಾತಿನಿಧಿಕ ಚಿತ್ರ- ಕೃಪೆ: ನ್ಯೂಸ್ 18)

ನೀವು ಮೊದಲು ಶಿಕ್ಷಿಸಬೇಕಾದ್ದು ಆನೆ ಕದ್ದವನನ್ನೇ ವಿನಃ ಅಡಿಕೆ ಕದ್ದವನನ್ನಲ್ಲ

ಅಂದು ನಮ್ಮ ಫ್ಲಾಟ್‌ನ ಎಲ್ಲ ಅಂಗಡಿಯವರು ಒಟ್ಟಾಗಿ ನನ್ನ ಕ್ಲಿನಿಕ್ ನಲ್ಲಿ ಸಭೆ ಸೇರಿದ್ದರು, ವಕೀಲರು, ಜೀವ ವಿಮ ಏಜೆಂಟರು, ಚಾರ್ಟೆಡ್ ಆಕೌಂಟೆಂಟ್, ಅಂಗಡಿ, ಹೋಟೆಲ್ ಮಾಲಕರು ಎಲ್ಲರೂ ಗಂಭೀರ ಸಮಸ್ಯೆಯೊಂದರ ಪರಿಹಾರಕ್ಕೆ ಒಟ್ಟಾಗಿದ್ದರು.

ಆತ ಬೋರಯ್ಯ. ಊರಿನ ಕಸವನ್ನು ಸಂಗ್ರಹಿಸಲು ಪಂಚಾಯತ್ ನಲ್ಲಿ ವ್ಯವಸ್ಥೆ ಮಾಡಲಾದ ಗಾಡಿಯಲ್ಲಿ ಬಂದು ಕಸ ಸಂಗ್ರಹಿಸುವ ವ್ಯಕ್ತಿ. ಪ್ರತಿ 2 ದಿನಕ್ಕೊಮ್ಮೆ ಬರುತ್ತಿದ್ದ. ಕಸದ ಜೊತೆ 10 ರೂ ಕೊಡದಿದ್ದರೆ ವಾರಕ್ಕೊಮ್ಮೆ ಬರುತ್ತಿದ್ದ, ಇವನ ರಗಳೆ ಬೇಡ ಎಂದು ಪ್ರತಿ ಅಂಗಡಿಯವರು 10 ರೂ ಕೊಡುತ್ತಿದ್ದರು. ಮೊನ್ನೆ ಆವ ಇನ್ನು ಮುಂದೆ ನನಗೆ 15 ರೂ ಕೊಡಬೇಕೆಂದು ಷರಾ ವಿಧಿಸಿದ್ದ. ಇದು ಹೆಚ್ಚಿನ ಸಿಬ್ಬಂದಿಗಳ ಸಿಟ್ಟಿಗೆ ಕಾರಣವಾಗಿತ್ತು. ಅಸೆ ಬುರುಕ ಬೋರಯ್ಯನ ಈ ಲಂಚ ಕೇಳುವ ಬುದ್ದಿಯನ್ನು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದರು. ಸಂಬಳ ತೆಗೆದುಕೊಂಡು ಮತ್ತೆ ಲಂಚಕ್ಕೆ ಕೈ ಒಡ್ಡುವ ಇಂತಹ ಜನರ ಬಗ್ಗೆ ಸಹಜವಾಗಿ ಸಿಟ್ಟಿತ್ತು ಜನರಿಗೆ.

ಅಂದು, 15 ರೂ ಕೊಟ್ಟರೆ ಮಾತ್ರ ಕಸ ಕೊಂಡೋಗುವುದು ಎಂದು ಬೋರಯ್ಯ ಹೇಳಿದಾಗ ಎಲ್ಲರೂ ಸಿಟ್ಟಲ್ಲಿ ಕುದಿಯ ತೊಡಗಿದರು. ಅಂದು 4, 5 ಆಫೀಸ್‌ನವರು ಒಟ್ಟಾಗಿ ನನ್ನ ಕ್ಲಿನಿಕ್ ಗೆ ಬಂದಿದ್ದರು. ಬೋರಯ್ಯನನ್ನು ಟ್ರ್ಯಾಪ್ ಮಾಡುವುದು ನಮ್ಮೆಲ್ಲರ ಪ್ಲಾನ್ ಆಗಿತ್ತು. ನನ್ನ ಕ್ಲಿನಿಕ್‌ನಲ್ಲಿರುವ ಸಿಸಿ ಟಿವಿ ಫೂಟೇಜ್ ಬಳಸಿಕೊಂಡು ಅವನು ಲಂಚ ತೆಗೆದುಕೊಳ್ಳುವ ವಿಡಿಯೋ ತೋರಿಸಿ ಅವನ ಅಹಂಕಾರ ಇಳಿಸಿ ಬಿಡಬೇಕು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿಸಿ ಅವನ ಅಹಂಕಾರ ಇಳಿಸಬೇಕು ಎಂಬುದು ನಮ್ಮ ಲೆಕ್ಕಾಚಾರ ಆಗಿತ್ತು.

ಮಧ್ಯಾಹ್ನ ಬಂದ ಬೋರಯ್ಯ ನೊಡನೆ ಬೇಕೆಂದೇ ತಯಾರಿಸಿಟ್ಟಿದ್ದ ಸ್ಕ್ರಿಪ್ಟ್ ನಿಂದ ಡೈಲಾಗ್ ಹೇಳಿದ್ದೆ. ಏನೋ ಬೋರಯ್ಯ ಮುಂಚೆ 10 ರೂ ಪ್ರತಿ ಅಂಗಡಿ ಅವರಿಂದ 2 ದಿನಕ್ಕೊಮ್ಮೆ ಹಣ ತೆಗೆದುಕೊಳ್ಳುತ್ತಿದ್ದಿ. ಈಗ 15 ರೂ ತೆಗೆದುಕೊಳ್ಳುತ್ತೀಯಲ್ಲ? ಸಂಬಳ ಸಿಕ್ಕಿಯೂ ಹೀಗೆ ಲಂಚ ಸ್ವೀಕರಿಸುವುದು ತಪ್ಪು ಅಲ್ಲವಾ? ಎಂದೆ.

ಏನ್ ಸರ್ ನೀವು 5 ರೂ ಗೆ ಅಷ್ಟೆಲ್ಲ ಮಾತಾಡ್ತಿದ್ದೀರಲ್ಲ ಎಂದಾಗ ಸುಮ್ಮಗಾಗುವ ಸರದಿ ನನ್ನದಾಗಿತ್ತು. 2 ದಿನಕ್ಕೊಮ್ಮೆ ಪ್ರತಿ ಅಂಗಡಿಯಿಂದ 15 ರೂನಂತೆ ತಿಂಗಳಿಗೆ 225 ರೂ.., ಈ ರೀತಿ 80-100 ಅಂಗಡಿಗಳಿಂದ ಒಟ್ಟಾಗಿ ಅವನ ಸಂಬಳದಿಂದಲೂ ಜಾಸ್ತಿಯೇ ಆಗುತಿತ್ತು ಗಿಂಬಳ! ಮತ್ತೆ ಸಿಟ್ಟು ಬಂದಿತ್ತು ಅವನ ಮೇಲೆ.

ಆತ ಹೋದ ಮೇಲೆ ಅಲ್ಲೇ ಅವಿತುಕೊಂಡಿದ್ದ ವಕೀಲರು, ಸಿಎ, ಅಂಗಡಿ ಮಾಲೀಕರು ಎಲ್ಲ ಹೊರ ಬಂದಿದ್ದರು. ಸೂಪರ್ ಕಣಯ್ಯಾ, ಬೋರಯ್ಯನ ಕತೆ ಮುಗಿಯಿತು. ಸಿಸಿ ಟಿವಿ ಫೂಟೇಜ್ ನಾಳೆ ರೆಡಿ ಇರಲಿ. ಯಾರ್ಯಾರಿಗೆ ಹೇಗೆ ಹೇಗೆ ಪತ್ರ ಬರೆಯಬೇಕೋ ಹಾಗೆ ನಾನೇ ಬರೆದಿಡುತ್ತೇನೆ ಎಂದರು ವಕೀಲರು.

ಮರುದಿನ ಬೆಳಿಗ್ಗೆ ಸಿಸಿ ಟಿವಿ ಫೂಟೇಜ್ ತೆಗೆಸಲು ಪಕ್ಕದ ಊರಿಗೆ ಸಿಸ್ಟಮ್ ನೊಂದಿಗೆ ಕಾರಲ್ಲಿ ಹೊರಟಿದ್ದೆ. ಫೂಟೇಜ್ ಸಿಕ್ಕಿತ್ತು. ಸುಂದರವಾದ ನನ್ನ ಮತ್ತು ಬೋರಯ್ಯನ ಮಾತುಕತೆಯ ಸಿಡಿ ಮಾಡಿಕೊಂಡು ಅದರ 10 ಕಾಪಿಯೊಂದಿಗೆ ಹೊರಟಿದ್ದೆ. ದಾರಿ ಮಧ್ಯೆ ನನ್ನ ಕಾರು ಕೆಟ್ಟು ಹೋಗಿತ್ತು. ಕಾರ್ ಮೆಕಾನಿಕ್‌ಗೆ ಫೋನ್ ಮಾಡಿ ಕಾರ್ ಅಲ್ಲೇ ಬಿಟ್ಟು ಅಲ್ಲೇ ಇದ್ದ ಒಳದಾರಿ ಹಿಡಿದು ಮನೆಕಡೆ ಹೋಗಲು 10 ಸಿಡಿ ಗಳೊಂದಿಗೆ ಹೊರಟಿದ್ದೆ.

ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಬಹಳಷ್ಟು ಜನಕ್ಕೆ ನನ್ನ ಪರಿಚಯವಾಗಿರಲಿಲ್ಲ. ಮಾಸ್ಕ್ ಗೆ ಧನ್ಯವಾದ ಅರ್ಪಿಸಿ ಮುಂದೆ ನಡೆಯುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ಆ ದೃಶ್ಯ. ಅದೊಂದು ಬಡ ಜನರ ಕಾಲೋನಿ. ಅಲ್ಲಿ ಒಂದು ಮನೆಯಲ್ಲಿ ಗಲಾಟೆ ನಡೆಯುತಿತ್ತು. ಕಂಬದ ಮರೆಯಿಂದ ಆ ಗಲಾಟೆಯನ್ನು ವೀಕ್ಷಿಸಬಹುದಾಗಿತ್ತು.

ಅಲ್ಲಿ ಮನೆ ಯಜಮಾನನ ಮುಖ ನನಗೆ ಗೊತ್ತಿರುವವನದಾಗಿತ್ತು. ಹಾಗಾಗಿ ಅಲ್ಲೇ ನಿಂತಿದ್ದೆ ನಾನು. ಅದೇ ನಮ್ಮ ಬೋರಯ್ಯ ಅಲ್ಲಿದ್ದ. ಅದು ಬೋರಯ್ಯನ ಮನೆಯಾಗಿತ್ತು.

ಕಂಬದ ಹಿಂದೆ ನಿಂತು ಅಲ್ಲಿಯ ಚಿತ್ರಣ ವೀಕ್ಷಿಸುತ್ತಿದ್ದೆ. ಅವನ ಹೆಂಡತಿ ಡೈವೋರ್ಸ್ ಕೇಳುತಿದ್ದಳು. ಲೋ ನಿನಗೆ 2 ಮಕ್ಕಳ ಶಾಲೆಯ ಫೀಸ್ ಕಟ್ಟಲು ಆಗುವುದಿಲ್ಲ ಎಂದಾದ ಮೇಲೆ ಯಾಕಯ್ಯ ನಿನಗೆ ಹೆಂಡತಿ ಮಕ್ಕಳು? ನಿನ್ನ ತರ ನಮ್ಮ ಮಕ್ಕಳು ಕಸ ಹೆಕ್ಕಿ ಬದುಕ ಬಾರದು ಎಂದು ಒಳ್ಳೆ ಶಾಲೆಗೆ ಸೇರಿಸಿದೆ, ಅವರಿವರ ಮನೆ ಪಾತ್ರೆ ತಿಕ್ಕಿ ನಾನು ಮನೆ ಸಾಗಿಸುತ್ತಿದ್ದೇನೆ, ನಿನ್ನ ಸಂಬಳದಿಂದ ಕೇವಲ ಮಕ್ಕಳ ಶಾಲೆ ಫೀಸ್ ಕಟ್ಟಲು ಆಗುತ್ತಿಲ್ಲ ಎಂದರೆ ಅಂತ ಕೆಲಸ ಯಾಕೆ ಬೇಕು ನಿಂಗೆ? ನಿನ್ನಂತ ಗಂಡ ಇದ್ದರೆಷ್ಟು ಹೋದರೆಷ್ಟು ದಬಾಯಿಸುತಿದ್ದಳು ಗಂಡನಿಗೆ.

ಬೋರಯ್ಯ ಬಡ ಬಡಾಯಿಸುತಿದ್ದ. ಇಲ್ಲ ಕಣೇ ಒಂದು ತಿಂಗಳು ಸಮಯ ಕೊಡು. ಬರುವ ಸಂಬಳ ಸಾಲ ಕಟ್ಟಲು, ಗುಂಪು ಸಾಲದ ಬಡ್ಡಿ ಕಟ್ಟಲು ಸರಿ ಆಗ್ತಿದೆ 10 ರೂ ಬದಲು 15 ರೂ ವಸೂಲು ಮಾಡ್ತಿದ್ದೇನೆ, 100 ಮನೆಯಲ್ಲಿ 70 ಮನೆಯವರು ಕರೆಕ್ಟ್ ಆಗಿ ಕೊಡ್ತಾರೆ. 2 ದಿನಕ್ಕೊಮ್ಮೆ ಅಂದ್ರು 225 ರೂ ಮನೆಯಿಂದ ಮೊದಲಿಗಿಂತ 6000 ತನಕ ಹೆಚ್ಚು ಸಿಗಲಿದೆ ಹಣ. ದಯವಿಟ್ಟು 1 ತಿಂಗಳು ತಡ್ಕೊಳ್ಳೇ ಎಂದ.

ಅಳುತ್ತ ಮಗ ಹೇಳುತ್ತಿದ್ದ ಅಪ್ಪ ಇವತ್ತು ಮಾಸ್ಟ್ರು ಫೀಸ್ ನ ಹಣ ಕಟ್ಟಿಲ್ಲ ಅಂತ ಇಡೀ ಕ್ಲಾಸ್ ಮುಂದೆ ಬೈದ್ರು. ನಿಮ್ಮಂತೋರ್ಗೆ ಶಾಲೆ ಯಾಕೆ ಬೇಕು ಅಂದ್ರು ಅಂತ ಅಳುತ್ತ ಕೂಗುತಿದ್ದ. ಬೋರಯ್ಯ ಮಗನನ್ನು ಗಟ್ಟಿಯಾಗಿ ಹಿಡಿದು ಅಳುತ್ತಿದ್ದ. ಅತ್ತ ಹೆಂಡತಿಯೂ ಅಳುತ್ತಿದ್ದಳು.

ಮುಂದೆ ನೋಡಲಾಗದೆ ಅಲ್ಲಿಂದ ಮುಂದೆ ನಡೆದೆ. 10 ರೂ ಜಾಸ್ತಿ ಕೇಳಿದ್ದಕ್ಕೆ, ಅಹಂಕಾರಿ ಹಾಗೆ ಹೀಗೆ ಎಂದು ಹೇಳಿ ಅವನ ಕೆಲಸವನ್ನೇ ಬಿಡಿಸಿ ಅವನನ್ನು ಅವನ ಸಂಸಾರವನ್ನು ಬೀದಿಗೆಳೆಯಲು ನಾವುಗಳು ಯೋಚಿಸಿದ್ದು ನೋಡಿ ನಾವೆಷ್ಟು ವಿದ್ಯಾವಂತ ಸ್ವಾರ್ಥಿಗಳು ಎಂದು ನಮ್ಮ ಬಗ್ಗೆಯೇ ಅಸಹ್ಯ ಹುಟ್ಟಿಸ ಹತ್ತಿತ್ತು ನನಗೆ.

ವಾಪಸ್ ಮನೆಗೆ ಹೋಗುವಾಗ ಲಾಯರ್ ಸಾಹೇಬರ ಕಾಲ್ ಬಂದಿತ್ತು. ಹಾಯ್ ಬೋರಯ್ಯನ ಲಂಚಾವತಾರದ ಲೆಟರ್ ತಯಾರಾಗಿದೆ. ಕಾಪಿ ಒಂದು ಮೀಡಿಯಾಕ್ಕೆ, ಒಂದು ಪಂಚಾಯತ್ ಗೆ, ಒಂದು ಡಿಸಿಯವರಿಗೆ, ಒಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಯಾರಾಗಿದೆ ಸಾಕ್ಷಿ. ಅವನ ವಿಡಿಯೋ ಫೂಟೇಜ್ ನಿನ್ನ ಬಳಿ ಇದೆ ತಾನೇ? ಎಷ್ಟು ಹೊತ್ತಿಗೆ ಬರುತ್ತೀಯ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಬೇಕಿದೆ, ಎಂದಿದ್ದ.

ನನ್ನ ತಪ್ಪನ್ನು ತಿದ್ದಿಕೊಳ್ಳಲು ಸುವರ್ಣಾವಕಾಶ ಎಂದು ತಿಳಿದಿದ್ದ ನಾನು, ಇಲ್ಲ ಕಣೋ ವಿಡಿಯೋ ಬ್ಲಾಂಕ್ ಆಗಿದೆಯಂತೇ. ನಮ್ಮ ಪ್ಲೇಯರ್ ಅಲ್ಲಿ ಪ್ರಾಬ್ಲಮ್ ಅಂತೆ. ಈ ಬಾರಿ ಫ್ಲಾಪ್ ಆಗಿದೆ, ಮುಂದೆ ನೋಡುವ ಎಂದವನೇ ನನ್ನ ಕೈಯಲ್ಲಿದ್ದ ಸಿಡಿ ಅನ್ನು ಪುಡಿ ಪುಡಿ ಮಾಡಿ ಹೊಳೆಗೆ ಎಸೆದಿದ್ದೆ. ನಾಳೆಯಿಂದ ಬೋರಯ್ಯನಿಗೆ ಕಸದ ಜೊತೆಗೆ 50 ರೂ ಕೊಡುವುದಾಗಿ ನಿರ್ಧರಿಸಿದೆ. ಕೊನೆಗೂ ಅಹಂಕಾರ ಸಂಪೂರ್ಣವಾಗಿ ಇಳಿದಿತ್ತು. ಬೋರಯ್ಯನದಲ್ಲ ನನ್ನದು.

*****
ನಿಜ ಇಂತಹ ಪರಿಸ್ಥಿತಿ ನಮ್ಮ ಸಮಾಜದಲ್ಲೂ ಇದೆ. ಅವ ಲಂಚ ತಿನ್ನುತ್ತಾನೆ.. ಅವನ ವಿರುದ್ಧ ಸಾಕ್ಷಿ ಕೊಡಿ ಅವನನ್ನು ಬಹಿಷ್ಕರಿಸಿ ಮುಂತಾದ ಕಠಿಣ ನಿರ್ಧಾರಕ್ಕೆ ಬರುವ ಮುನ್ನ ಅವನ ಪರಿಸ್ಥಿತಿಯನ್ನು ತಿಳಿದುಕೊಳ್ಳಿ. ಇಲ್ಲದೆ ಇದ್ದರೆ ನಮ್ಮ *ಭ್ರಷ್ಟಾಚಾರದ ಹೋರಾಟ ಬಡ ಪಾಯಿಯೊಬ್ಬನ ಜೀವನ ಹಾಳು ಮಾಡೀತು ಎಚ್ಚರ. ನೆನಪಿಡಿ ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ ಇದು ಸತ್ಯ… ಆದರೆ ಇಲ್ಲಿ ನಾವೆಲ್ಲ ಖಾಲಿ ಅಡಿಕೆ ಕದ್ದವರನ್ನು ಹಿಡಿದು ಶಿಕ್ಷಿಸಿ ನಮ್ಮ ಪ್ರತಾಪ ಪ್ರದರ್ಶಿಸುತ್ತೇವೆ… ಇದು ತಪ್ಪು ನಿಮ್ಮ ಪ್ರತಾಪ ಏನಿದ್ದರೂ ಆನೆ ಕದ್ದವನ ಮೇಲಿರಲಿ ಎಂಬುದಷ್ಟೇ ಈ ಕಥೆಯ ಆಶಯ.

(ಈ ಕಥೆ ಹಾಗೂ ಕಥೆಯ ಪಾತ್ರಗಳು ಕೇವಲ ಕಾಲ್ಪನಿಕ)

-ಡಾ. ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಣ್ಣಕಥೆ: ಪಂಜರ ಚಿನ್ನದ್ದಾದರೇನಂತೆ ಹಕ್ಕಿಯ ಪಾಲಿಗೆ ಅದು ಪಂಜರವೇ ತಾನೇ?

Upayuktha

*ಪಿಸು ಮಾತಿನ ಬೇಡಿಕೆ*

Harshitha Harish

ನೀ(ನಾ)ನು

Harshitha Harish