ಕತೆ-ಕವನಗಳು

ತೊಟ್ಟಿಲು ತೂಗುವ ಕೈ…!!! (ಸಣ್ಣ ಕಥೆ)

(ಚಿತ್ರ: ಶೈಲೇಶ್ ಉಜಿರೆ)

ಹೌದು… ತೊಟ್ಟಿಲು ತೂಗುವ ಕೈ ಎಂದೆಂದೂ ಪರಿಶುದ್ಧವೇ. ಇದಕ್ಕೆ ಸ್ವಾರ್ಥ, ಕಪಟ, ವಂಚನೆ, ಮೋಸ ಎಂಬುದು ಗೊತ್ತೇ ಇಲ್ಲ. ಸದಾ ನಿಸ್ವಾರ್ಥತೆ, ಕರುಣೆ, ದಯೆ, ಮಮಕಾರ, ನಿರ್ಮಲ ಪ್ರೀತಿ ಮಾತ್ರ ಮೈಗೂಡಿಸಿಕೊಂಡಿರುವುದು. ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಈ ವಾತ್ಸಲ್ಯಮೂರ್ತಿಯೂ ಕಠಿಣ ನಿರ್ಧಾರಗಳನ್ನು ತಾಳಬೇಕಾಗಿರುವುದು ಅದೆಷ್ಟು ಅನಿವಾರ್ಯವೆಂದರೆ.. ಅದು ಅನುಭವಿಸಿದವರಿಗೆ ಮಾತ್ರ ವೇದ್ಯ.

ಗಂಗಮ್ಮ ಬಹಳ ಬಡತನದಲ್ಲಿ ಬದುಕಿದವರು ಮಾತ್ರವಲ್ಲ ಬಹಳ ಆತ್ಮಾಭಿಮಾನಿಯೂ ಆಗಿದ್ದರು. ಸರಳತೆ, ನೇರ ನಡೆ, ಅಂಜಿಕೆ ಇಲ್ಲದಿರುವ ದಿಟ್ಟತನವೇ ಅವರ ಸ್ವಭಾವ ಆಗಿತ್ತು. ಆ ಕಾಲದಲ್ಲಿ ಕುಟುಂಬ ಯೋಜನೆಗಳಂಥ ಪರಿಕಲ್ಪನೆ ಇಲ್ಲದ ಸಹಜ ಬದುಕಿನ ಆದರ್ಶ ಮಹಿಳೆಯಾಗಿದ್ದರು. ಇವರಿಗೆ ನಾಲ್ಕು ಹೆಣ್ಣು ನಾಲ್ಕು ಗಂಡು ಒಟ್ಟು ಎಂಟು ಮಕ್ಕಳ ತುಂಬಿದ ಸಂಸಾರ. ಆಳು ಕಾಳು, ಹಟ್ಟಿ ದನಕರು ಬೇಸಾಯ ಎಂಬಂಥ ಬಹಳ ದೊಡ್ಡ ವ್ಯವಹಾರವೂ ಗಂಗಮ್ಮನಲ್ಲಿರಲಿಲ್ಲ. ಆದರೂ ಸ್ವಂತ ದುಡಿಮೆ ಮಾಡಿಕೊಂಡು ಸಣ್ಣ ಹಿಡುವಳಿದಾರರಾಗಿದ್ದರು. ಆರಕ್ಕೇರದ ಮೂರಕ್ಕಿಳಿಯದ ಸಂತೃಪ್ತ ಜೀವನ ನಡೆಸುತ್ತಿದ್ದರು ಗಂಗಮ್ಮ. ಹೀಗಿರುವಾಗ ಅದೊಂದು ದಿನ ಗಂಗಮ್ಮನ ಗಂಡ ಅಚಾನಕಾಗಿ ಕೆಮ್ಮತೊಡಗಿದರು. ಬೀಡಿ ಬಹಳ ಸೇದುವುದರಿಂದ ಕೆಮ್ಮು ಬಂದಿರಬಹದೆಂದೆಣಿಸಿ ಗಂಗಮ್ಮ ಗಂಡನಿಗೆ ಗದರಿದಳು ಬೀಡಿ ಯಾಕೆ ಸೇದುತ್ತೀರಿ.. ಬಿಡಬಾರದೆ ಅದನ್ನು… ಹೀಗೇ ಅನೇಕ ಬಾರಿ ಗಂಗಮ್ಮ ಹೇಳಿದ್ದರೂ ಈ ಸಲದ ಕೆಮ್ಮು ಆತನ ಬೀಡಿ ಚಟವನ್ನು ಶಾಶ್ವತವಾಗಿ ಬಿಡುವಂತೆ ಮಾಡಿತು.

ಆಗಾಗ್ಗೆ ಬರುತ್ತಿರುವ ಕೆಮ್ಮು ಹೆಚ್ಚಾಗುತ್ತ ಹೋದಂತೆ ಗಂಗಮ್ಮ ವೈದ್ಯರಲ್ಲಿ ಗಂಡನನ್ನು ಕರಕೊಂಡು ಹೋದರೆ, ವೈದ್ಯರು ಪರೀಕ್ಷಿಸಿ ಇದು ಕ್ಷಯ ರೋಗವೆಂದಾಗ ಗಂಗಮ್ಮ ನಿಂತಲ್ಲೇ ಕುಸಿಯುತ್ತಿದ್ದಳು. ಆದರೆ ಗಂಗಮ್ಮ ಗಟ್ಟಿಗಿತ್ತಿ. ಕುಸಿಯಲಿಲ್ಲ ಎದುರಿಸಿದಳು. ಸಣ್ಣ ಮಕ್ಕಳು ಒಂದ ಕಡೆ ಆದರೆ, ಸಣ್ಣ ಬೇಸಾಯ ಇನ್ನೊಂದು ಕಡೆ. ಜತೆಗೆ ಗಂಡನ ಅನಾರೋಗ್ಯದ ಜವಾಬ್ದಾರಿ ಮತ್ತೊಂದು ಕಡೆ. ಮೊದಮೊದಲು ಎಲ್ಲವನ್ನೂ ನಿಭಾಯಿಸುತ್ತಿದ್ದ ಗಂಗಮ್ಮ ಬರಬರುತ್ತ ಹೈರಾಣವಾಗತೊಡಗಿದಳು. ಕ್ರಮೇಣ ಗಂಡ ಅನಾರೋಗ್ಯದಿಂದಲೇ ಕೊನೆಯುಸಿರೆಳೆಯುವಂತಾದದ್ದು ಗಂಗಮ್ಮನ ಗಟ್ಟಿತನಕ್ಕೊಂದು ಸವಾಲೇ ಸರಿ. ಆದರೂ ಮಕ್ಕಳೆಲ್ಲರಿಗೂ ಗಂಗಮ್ಮ ಪದವಿ ಶಿಕ್ಷಣ ಕೊಡಿಸದಿದ್ದರೂ ವಿದ್ಯಾಭ್ಯಾಸ ಕೊಡಿಸಿದ್ದಳು. ತಿನ್ನುವ ಬಾಯಿ ಹಲವಾಗಿ ದುಡಿಯುವ ಕೈ ಮಾತ್ರ ಎರಡೇ ಆಗಿರುವಾಗ ಯಾರು ತಾನೆ ಸೋಲದಿರಬಹುದು..? ಹಾಗೆಂದು ಗಂಗಮ್ಮ ಯಾರಲ್ಲೂ ಸಾಲ ಸೋಲ ಮಾಡಿದವಳಲ್ಲ. ಗಂಡ ದುಡಿಯುತ್ತಿರುವಾಗ ಮಾಡಿ ಹಾಕಿದ ಕೆಲವಾರು ಸೊತ್ತುಗಳಿದ್ದವು. ಇವತ್ತಿನ ಅಗತ್ಯಕ್ಕೆ ಅತ್ಯವಶ್ಯಕವಲ್ಲದ ಕೆಲವಾರು ಸೊತ್ತುಗಳನ್ನು ಮಾರಾಟ ಮಾಡಿ ಗಂಗಮ್ಮ ಹೇಗಾದರೂ ನಿಭಾಯಿಸುತ್ತಿದ್ದಳು. ಆದರೆ ದಿನ ಕಳೆದಂತೆ ಮಾರಾಟ ಮಾಡಬಹುದಾದದ್ದು ಏನೂ ಉಳಿಯದಂತಾದಾಗ ಮಾತ್ರ ಗಂಗಮ್ಮ ಸಣ್ಣಕ್ಕೆ ನಡುಗಿದಳು. ಮಕ್ಕಳು ದುಡಿಯುವಷ್ಟಾಗಲಿಲ್ಲ ಹಾಗೆಂದು ಖರ್ಚು ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿದ್ದಾಗ, ಬೇಸಾಯ ಮಾಡಲು ಆಳುಗಳನ್ನು ಹೇಳುವಷ್ಟು ಅನುಕೂಲವಿಲ್ಲದಾಗ, ಜಮೀನು ಹಾಳು ಬೀಳುವಾಗ, ಪ್ರಾಥಮಿಕ ಅವಶ್ಯಕತೆಗಳು ಹೆಚ್ಚಾದಾಗ, ಹಸಿವೆಂಬ ರಾಕ್ಷಸ ಬಾಯಿ ತೆರೆದು ನಿಂದಾಗ ಗಂಗಮ್ಮನ ಗಟ್ಟಿತನವೂ ದಿನದಿಂದ ದಿನಕ್ಕೆ ಕರಗತೊಡಗಿತು.

ಆ ಒಂದು ದಿನ ಗಂಗಮ್ಮ ಭವಿಷ್ಯದ ಚಿಂತೆಯಲ್ಲಿರುವಾಗ ಸಣ್ಣ ಮಗು ಅಳುತ್ತಿರುವ ಶಬ್ದ ಕೇಳಿ ಅತ್ತ ಹೋಗಿ ನೋಡಿದ್ದರು, ಎರಡು ಸಣ್ಣ ಮಕ್ಕಳು ತೊಟ್ಟಿಲಲ್ಲಿ ಮಲಗುವ ವಿಚಾರದಲ್ಲಿ ಜಗಳವಾಡುತ್ತಿದ್ದರು. ಸಹಜವಾಗಿ ದೊಡ್ಡ ಮಗು ಜೋರಾಗಿ ಸಣ್ಣದನ್ನು ಹೊರ ದೂಡಿ ಕೂತಿತ್ತು. ಇದು ನಿತ್ಯವೂ ಆಗುವ ಕಲಹ. ಎಲ್ಲ ಮಕ್ಕಳೂ ತೊಟ್ಟಿಲಿನ ಹಂತದಿಂದ ಮೇಲೆ ಬಂದಿರುವುದರಿಂದ ಗಂಗಮ್ಮ ಆ ತೊಟ್ಟಿಲನ್ನು ಅಟ್ಟಕ್ಕೆ ಹಾಕಿ ಈ ಜಗಳಕ್ಕೆ ಶಾಶ್ವತ ಪರಿಹಾರ ಕಂಡು ಕೊಂಡಿದ್ದರು. ಆದರೆ ಇಂದೇಕೋ ಗಂಗಮ್ಮನಿಗೆ ಆ ತೊಟ್ಟಿಲ ನೆನಪು ಪುನಃ ಬಂದಿತ್ತು. ಬಡತನವೆನ್ನುವುದು ಎಷ್ಟೊಂದು ಕ್ರೂರಿ ಎನ್ನುವುದು ಇತ್ತೀಚೆಗೆ ಗಂಗಮ್ಮ ಚೆನ್ನಾಗಿ ಅರಿತಿದ್ದರು. ಇಲ್ಲದಿದ್ದರೆ ಇಂತಹ ಒಂದು ಯೋಚನೆ ಬಂದದ್ದಾದರು ಯಾಕಿರಬಹುದು…

ಹೇಗೂ ಮಕ್ಕಳು ದೊಡ್ಡವರಾಗಿದ್ದಾರೆ. ಅವರಿಗಿನ್ನು ತೊಟ್ಟಿಲಿನ ಅವಶ್ಯಕತೆ ಖಂಡಿತ ಇಲ್ಲ. ಈ ಹಿತ್ತಾಳೆ ತೊಟ್ಟಿಲು ಮಾರಾಟ ಮಾಡಿದರೆ ಒಂದು ತಿಂಗಳ ಊಟಕ್ಕೆ ಸಾಕಾಗುವಷ್ಟು ಗಳಿಸಬಹುದು. ಬೇರೆಲ್ಲ ಬೆಲೆ ಬಾಳುವ ವಸ್ತುಗಳು ಅಂಗಡಿ ಸೇರಿ ಆಗಿದೆ. ಮಕ್ಕಳು ದೊಡ್ಡವರಾಗಿ ಅವರಿಗೆ ಮದುವೆ ಮಕ್ಕಳಾಗುವಾಗ ಏನೇನು ಬದಲಾವಣೆಗಳಾಗುವದೋ ಜಗದಲ್ಲಿ. ಅಲ್ಲಿವರೇಗೆ ಈ ತೊಟ್ಟಿಲು ಕೂಡ ನಿಷ್ಪ್ರಯೋಜಕವೇ. ಹಾಗೆಂದು ಎಲ್ಲ ವಸ್ತುಗಳನ್ನು ಮಾರಾಟ ಮಾಡಿದಂತೆ, ಎಲ್ಲ ಮಕ್ಕಳೂ ಬೆಳೆದು ದೊಡ್ಡವರಾದ ಈ ಭಾವನಾತ್ಮಕ ಸಂಬಂಧವನ್ನು ಮಾರಾಟ ಮಾಡಲಾಗುತ್ತದೆಯೇ.? ಸಾಧ್ಯವೇ ಇಲ್ಲ….

ಆದರೆ ಇವೆಲ್ಲ ಭಾವನೆಗಳು ಹೊಟ್ಟೆ ಹಸಿವಿನ ಮುಂದೆ ಗೌಣವೇ. ತೊಟ್ಟಿಲಿಗೆ ಬೆಲೆ ಸಿಗಬಹುದು. ಆದರೆ ಅದರಲ್ಲಿ ಪ್ರತಿಯೊಂದು ಮಕ್ಕಳ ಭವಿಷ್ಯವೂ ರೂಪಿತವಾದಂಥ ಭದ್ರ ಅಡಿಪಾಯಕ್ಕೆ ಯಾವ ಬೆಲೆ ಕಟ್ಟಬಹುದು.? ಯಾವಾಗಲೂ ಹಾಗೆಯೇ ನಮ್ಮ ತಲೆಗೊಂದು ವಿಚಾರ ಹೊಳೆದರೆ ಪ್ರತಿಯೊಂದು ಸಮಸ್ಯೆಗೂ ಅಲ್ಲಿಂದಲೇ ಪರಿಹಾರ ಕಂಡುಕೊಳ್ಳುತ್ತೇವೆ. ಹಾಗೆಯೇ ನಮ್ಮ ಮುಂದಿನ ಎಲ್ಲ ಸಮಸ್ಯೆಗಳೂ ಪರಿಹಾರವಾಗದಿದ್ದರೂ ತೊಟ್ಟಿಲು ಮಾರಾಟ ಮಾಡುವುದೇ ಈ ದಿನದ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದರು ಗಂಗಮ್ಮ. ಮರುದಿನವೇ ಮನಸ್ಸನ್ನು ಕಲ್ಲು ಮಾಡಿ ಮತ್ತೊಮ್ಮೆ ತೊಟ್ಟಿಲಿನ ಒಳಗೂ ಹೊರಗೂ ಸವರಿ ಮುದ್ದಾಡಿ ಎಲ್ಲ ಮಕ್ಕಳ ಬಾಲ್ಯವನ್ನು ಪುನಃ ಪುನಃ ನೆನಪಿಸಿ ಸಾಧ್ಯವಾದಷ್ಟು ಕಣ್ಣೀರು ಸುರಿಸಿ ಮನೆಯ ಒಬ್ಬ ಸದಸ್ಯನನ್ನು ಕಳಕೊಂಡ ಭಾವದಲ್ಲಿ ಗಂಗಮ್ಮ ತೂಗುತ್ತಿದ್ದ ಕೈಗಳಿಂದಲೇ ಹೃದಯದ ಒಂದು ಭಾಗವಾಗಿರುವಂಥ ತೊಟ್ಟಿಲನ್ನು ಮಾರಿಯೇ ಬಿಟ್ಟಳು…..!!!!!!
************
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

~~~~~

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕವಿತೆ: ಅವಳಿಲ್ಲದೆ ಅವನಿಲ್ಲ

Upayuktha

🕉 ಚೌತಿಯ ಸಡಗರ ✡

Upayuktha

ಕವನ: ಭವಿಷ್ಯ

Harshitha Harish

Leave a Comment

error: Copying Content is Prohibited !!