ಕತೆ-ಕವನಗಳು

ಸಣ್ಣ ಕತೆ: ಉಪ್ಪು ಸರಿಯಾದಾಗ

“ಅಯ್ಯೋ ಅಮ್ಮಾ, ಏನಿದು ಇಷ್ಟು ಉಪ್ಪು! ಅಲ್ಲ ಕಣೋ ಪ್ರತಾಪ್.. ನಿನ್ನ ಹೆಂಡತಿ ಉಪ್ಪಿನ ಡಬ್ಬಿಯಿಂದ ಪೂರ್ತಿ ಸುರಿದಿದ್ದಾಳೋ ಹೇಗೆ?” ಸ್ಮಿತಾ ಕೋಪದಿಂದ ಕೇಳಿದಳು.

ಉತ್ತರ ಕೊಡಲು ಇರಿಸುಮುರಿಸಾಗಿ ಪ್ರತಾಪ್ ಅಲ್ಲಿಂದ ಕಾಲ್ಕಿತ್ತನು. “ಇವತ್ತು ಆರತಿಯ ಅಡಿಗೆ. ಎಷ್ಟು ಹೇಳಿದ್ರೂ ಅಷ್ಟೇ. ನೀನು ಬರೋದು ಗೊತ್ತಿದ್ರೆ ನಾನೇ ಅಡುಗೆ ಮಾಡ್ತಿದ್ದೆ.” ಸುನಂದಾ ಅವರು ಹೇಳಿದರು.

ಅಂದ ಹಾಗೆ ಪ್ರತಾಪ್ ಮತ್ತು ಆರತಿ ಹೊಸದಾಗಿ ಮದುವೆಯಾದ ಜೋಡಿ! ಮದುವೆಯಾಗಿ ಹತ್ತು ತಿಂಗಳು ಆಯಿತಷ್ಟೆ. ಪ್ರತಾಪ್, ಆರತಿ, ಪ್ರತಾಪ್ ತಾಯಿ ಸುನಂದಾ, ತಂದೆ ವೆಂಕಟರಾಮ ಇವರು ಕುಟುಂಬದ ಸದಸ್ಯರು. ಪ್ರತಾಪನ ಅಕ್ಕ ಸ್ಮಿತಾ ಆಗಾಗ ಬರುತ್ತಿದ್ದಳು.

ಪ್ರತಾಪ್ ಆರತಿಯ ದೂರದ ಸಂಬಂಧಿ. ನೆಂಟರೊಬ್ಬರು ಹಾಕಿದ ಸಂಧಾನ. ಎರಡೂ ಕಡೆಯವರು ಒಪ್ಪಿ ಮದುವೆ ನಡೆಯಿತು. ಆರತಿಗೆ ಪ್ರತಾಪ್ ಇಷ್ಟವಾದರೂ ಇಷ್ಟು ಬೇಗ ಮದುವೆ ಬೇಡ, ಸ್ವಲ್ಪ ಸಮಯ ಸ್ವತಂತ್ರವಾಗಿ ಕೆಲಸ ಮಾಡುವ ಆಸೆ ಇತ್ತು. ಎಣ್ಣೆಗಪ್ಪಿನ‌ ಲಕ್ಷಣದ ಚುರುಕಿನ ಹುಡುಗಿ ಆರತಿ ಪ್ರತಾಪನಿಗೆ ತುಂಬಾ ಇಷ್ಟವಾದಳು. ತಮ್ಮದೇ ಬಣ್ಣವಾದರೂ ಆರತಿಯ ಬಣ್ಣ ಪ್ರತಾಪನ ಮನೆಯವರಿಗೆ ಇಷ್ಟವಾಗಲಿಲ್ಲ. ಅಲ್ಲದೆ‌ ಆರತಿಯ ಚುರುಕಿನ ಪಟ‌ಪಟ‌ ಮಾತು ಮೊದಲು ನೋಡುವ‌ ಇವರಿಗೆ ಹುಡುಗಿ ಜೋರೇನೋ ಎಂಬ ಅನುಮಾನ ಮೂಡಿಸಿತು. ಅಂತೂ ಪ್ರತಾಪನ ಅಭಿಪ್ರಾಯ ಮುಖ್ಯವಾಗಿ, ಆರತಿಯ ಮನೆಯವರ ಇಷ್ಟದಂತೆ ಮದುವೆಯು ನಡೆಯಿತು.

ಇನ್ನು ಉಪ್ಪಿನ ವಿಷಯಕ್ಕೆ ಬರೋಣ. ಸುನಂದಾ ಅವರಿಗೆ ಉಪ್ಪು ಜಾಸ್ತಿ ಹಾಕಬಾರದು. ಆರತಿಗೆ ಉಪ್ಪು ಸರೀ ಬೀಳಬೇಕು. ಅವಳ ತಾಯಿ ಮನೆಯಲ್ಲೂ ಹಾಗೆಯೇ ಮಾಡುವುದು. ಆರತಿ ಕೆಲಸಕ್ಕೆ ಹೋಗುವ ಕಾರಣ ವಾರಪೂರ್ತಿ ಸುನಂದಾರ ಅಡುಗೆ. ರಜಾದಿನಗಳಲ್ಲಿ  ಆರತಿಯ ಅಡುಗೆ. ಅಡುಗೆಯಲ್ಲಿ ಉಪ್ಪು ರಜಾದಿನಗಳಲ್ಲಿ ಸುನಂದಾ ಅವರಿಗೆ ಜಾಸ್ತಿ ಆದರೆ ಉಳಿದ ದಿನಗಳಲ್ಲಿ ಆರತಿಗೆ ಕಡಿಮೆ! ಉಪ್ಪಿನ ಅಂಶವೂ ದೇಹಕ್ಕೆ ಮುಖ್ಯ ಎಂದಾಗ ಹೆಂಡತಿಯ ಕಡೆ ಎಂದು ಸುನಂದಾರಿಗೆ ಕೋಪ! ಸ್ವಲ್ಪ ಉಪ್ಪು ಮತ್ತೆ ಬಟ್ಟಲಿಗೆ ಹಾಕಿದರಾಯಿತು ಎಂದಾಗ ಅಮ್ಮನ‌ ಮಗ, ಇದು ತನಗೂ ಮನೆಯಲ್ಲವೇ‌ ಎಂದು ಆರತಿಗೆ ಕೋಪ! ಪ್ರತಾಪನ ಪ್ರತಾಪ‌ ಇಬ್ಬರ ಮೇಲೂ ನಡೆಯಲಿಲ್ಲ.

ಇದು ಇಷ್ಟೇ ಅಲ್ಲ. ಸುನಂದಾ ಅವರು ಅಡುಗೆಮನೆ ಎಷ್ಟೇ ಸ್ವಚ್ಛವಾಗಿ ಇಟ್ಟರೂ ತನ್ನ ಅಮ್ಮನಂತೆ ಅತ್ತೆ ಸ್ವಚ್ಛ ಮತ್ತು ಅಂದವಾಗಿ ಇಡುವುದಿಲ್ಲ ಎಂಬುದು ಆರತಿಯ ದೂರು. ಆರತಿ ಕೊಠಡಿಯನ್ನು ಎಷ್ಟೇ ಒಪ್ಪವಾಗಿಟ್ಟರೂ ಸ್ಮಿತಾಳಷ್ಟು ಕಾಳಜಿ ಇಲ್ಲ ಎಂಬುದು ಸುನಂದಾರ ವಿಶ್ಲೇಷಣೆ. ಹೀಗೆ ಒಂದೇ ಎರಡೇ. ಎಲ್ಲಾ ಸಣ್ಣಪುಟ್ಟ ವಿಷಯಗಳೇ. ಹೊರಗಿನವರ ಚಾಡಿ ಮಾತು ಅಂತರವನ್ನು ಜಾಸ್ತಿ ಮಾಡಿತ್ತು. ಇವಳು ಬೇಡ ಅಂದಿದ್ದೆವಲ್ಲಾ ಎಂಬ ಕುಟುಂಬದ ಅಭಿಪ್ರಾಯ ತಪ್ಪಲ್ಲ ಎಂದು ಪ್ರತಾಪನಿಗೂ ಅನಿಸಲು ಶುರುವಾಗಿತ್ತು. ಆದರೂ‌ ಆರತಿಯನ್ನು ಬಿಡಲು ತಯಾರಿರಲಿಲ್ಲ.

ಈ ಸಮಯದಲ್ಲಿ ಕುಟುಂಬಕ್ಕೆ ಒಂದು ಸಿಹಿ ವಿಚಾರ ದೊರೆಯಿತು. ಪ್ರತಾಪ್ ಆರತಿ ತಂದೆ ತಾಯಿ ಆಗುತ್ತಿದ್ದಾರೆ. ವೆಂಕಟರಾಮ ಸುನಂದಾ ಅಜ್ಜ ಅಜ್ಜಿ ಆಗುತ್ತಿದ್ದಾರೆ. ಎಲ್ಲರಿಗೂ ಸಂಭ್ರಮ. ಆರತಿಯನ್ನು ಅಷ್ಟಕ್ಕಷ್ಟೇ ಆದರೂ ತಮ್ಮ ಮೊಮ್ಮಗು ಉದರದಲ್ಲಿದೆ ಎಂದು ತುಂಬಾ ಕಾಳಜಿ ಸುನಂದಾ ಅವರಿಗೆ. ಮೊದಲು ಸಿಹಿ ತಿಂತಾಳಂತ ಬೈಯುತ್ತಿದ್ದವರು ಈಗ ಮಾಡಿಕೊಡುತ್ತಿದ್ದರು. ಊಟಕ್ಕೆ ಉಪ್ಪೂ ಹಾಕುತ್ತಿದ್ದರು.

ತಾಯಿಯ ಕಾಳಜಿ ಇರಲಿ ಎಂದು ಆರತಿಯ ಆಸೆಯಂತೆ ಅವಳು ಬೇಗ ತಾಯಿ ಮನೆಗೆ ಹೋದಳು. ಸಂಭ್ರಮದ ಸೀಮಂತವೂ ಇತ್ತು. ಆಗಾಗ‌ ಪ್ರತಾಪ್ ಹಾಗೂ ಕುಟುಂಬದವರು ಭೇಟಿ ಕೊಡುತ್ತಿದ್ದರು. ಮದುವೆಯಾಗಿ ಬಂದ ಮೇಲೆ ಆರತಿ ಮತ್ತು ಪ್ರತಾಪ್ ಆರತಿಯ ತಾಯಿ ಮನೆಗೆ ಹೋಗುತ್ತಿದ್ದರು. ಆದರೀಗ ಕುಟುಂಬದವರೆಲ್ಲಾ ಬರುತ್ತಿದ್ದಾರೆ. ಸ್ಮಿತಾ ಕೂಡ ತನ್ನ ಕುಟುಂಬದ ಜೊತೆಗೆ ಬಂದು ಆರೋಗ್ಯ ವಿಚಾರಿಸಿದಳು.

ನವಮಾಸ ತುಂಬಿ ನವಜಾತ ಶಿಶುವಿನ ಆಗಮನವಾಯಿತು. ಲಕ್ಷಣವಾಗಿರುವ ಪುಟ್ಟ ಪ್ರಣತಿ ಎಲ್ಲರಿಗೂ ಅಚ್ಚುಮೆಚ್ಚು.

ಈಗಲೂ ಪ್ರತಾಪ್ ಹಾಗೂ ಕುಟುಂಬದವರು ಆಗಾಗ ಭೇಟಿ ಕೊಡುತ್ತಿದ್ದರು. ಒಮ್ಮೆ ಹೀಗೆ ಮೊಮ್ಮಗಳನ್ನು ನೋಡಲು ಬಂದ ಸುನಂದಾ ಅವರು “ಆರತಿ… ಹಾಲು ಚೆನ್ನಾಗಿ ಕುಡಿ. ಮಗುವಿಗೆ ಹಾಲು ಆಗಲು ಒಳ್ಳೆಯದು. ನಿನ್ನ ಆರೋಗ್ಯಕ್ಕೆ ಕೂಡ ಒಳ್ಳೆಯದು” ಎಂದರು. ಮೊಮ್ಮಗಳನ್ನು ತುಂಬಾ ಪ್ರೀತಿಸುವ ಸುನಂದಾ ಅವರು ಈಗೀಗ ಅವಳ ತಾಯಿಯ ಮೇಲೂ ಕಾಳಜಿ ಮಾಡುತಿದ್ದರು. ಎದುರಿನಿಂದ ಆಯಿತು ಎಂದಳಾದರೂ ಆರತಿಗೆ ಕೋಪ ಬಂದಿತ್ತು. “ಅಲ್ಲಮ್ಮಾ.. ನಮಗೂ ತಿಳಿದಿಲ್ಲವೇ ಹಾಲು ಕುಡಿಯಬೇಕೆಂದು. ನೀವು ಕೊಡೋದಿಲ್ಲ ಅಂತಾನ ಹೇಳೋದು?” ಅಸಮಾಧಾನವನ್ನು ತನ್ನ ತಾಯಿಯ ಬಳಿ ವ್ಯಕ್ತಪಡಿಸಿದಳು ಆರತಿ.

“ನನಗೆ‌ ಹಾಗೇನು‌ ಅನಿಸಲಿಲ್ಲ ಮಗಳೇ.. ಅವರು‌ ಕಾಳಜಿ ಮಾಡಿದರಷ್ಟೇ. ಒಂದು ವೇಳೆ ಅವರು ತಪ್ಪು ಮಾಡಿದರೂ, ಹೇಳಿದರೂ ಅದನ್ನು ಮನಸಿನಲ್ಲಿ ಇಡದೇ ಕ್ಷಮಿಸಿಬಿಡಬೇಕು. ಕ್ಷಮಿಸುವುದು ದೊಡ್ಡ ಗುಣ. ಅದು ಅಷ್ಟು ಸುಲಭವೂ ಅಲ್ಲ. ನಾನಾದರೆ‌ ನೀನು ಕ್ಷಮಿಸುವೆಯಲ್ಲಾ ಹಾಗೆ. ಗಂಡನ ತಾಯಿಗೆ ನಿನ್ನ ಮನದಲ್ಲಿ ತಾಯಿ ಸ್ಥಾನ ಕೊಡು ಅವರು ಹೇಗಿದ್ದರೂ.. ಆಗ ಅವರ ಎಷ್ಟೋ ಮಾತು ಕಾಳಜಿ ಅನಿಸುತ್ತದೆ. ಉಳಿದದ್ದು ಕ್ಷಮಿಸುವುದು.. ಇದರಿಂದ ನಿನಗೂ ಲಾಭವೇ!  ಕಿರಿಕಿರಿ ಕಮ್ಮಿ ಆಗಿ ಮನಸಿಗೆ ನೆಮ್ಮದಿ ಇರುತ್ತದೆ.” ಎಂಬ ಆರತಿಯ ತಾಯಿಯ ಮಾತು ಅವಳನ್ನು ಯೋಚಿಸುವಂತೆ ಮಾಡಿತು.

ಆರತಿ ಪುಟ್ಟ ಪ್ರಣತಿಯ ಜೊತೆಗೆ ತನ್ನ ಮನೆಗೆ ಬಂದಳು. ಈಗ ಎಲ್ಲವೂ ಮೊದಲಿನಂತಲ್ಲ. ಎಲ್ಲರಿಗೂ ಮಗುವನ್ನು ಮುದ್ದಿಸುವುದೇ ಕೆಲಸ. ಪ್ರಣತಿ ಎಂದರೆ ಎಲ್ಲರಿಗೂ ವಿಶೇಷ ಕಾಳಜಿ.

ಈ ವಿಷಯದಲ್ಲಿ ‌ ಸ್ಮಿತಾಳೂ ಹಿಂದೆ ಬಿದ್ದಿರಲಿಲ್ಲ. ಅವಳ ಮಗಳಿಗೂ ಪುಟ್ಟ ಅತ್ತಿಗೆ ಎಂದರೆ ಅಕ್ಕರೆ. ತನ್ನ ಸೊಸೆಗೆ ಅಂದ ಚೆಂದದ ಬಟ್ಟೆ ಆಟಿಕೆ ತರುತ್ತಿದ್ದಳು. ಹಾಲು ಕೊಡುವ ತಾಯಿ ಖುಷಿಯಿಂದ ಇದ್ದರೆ ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಆರತಿಯನ್ನು ಆದರಿಸುತ್ತಿದ್ದಳು. ಈ‌ ಮಧ್ಯೆ ಆರತಿಯನ್ನು ದೂರಲು ಅವಳಿಗೆ ಸಮಯವಾಗಲಿ ಆಸಕ್ತಿಯಾಗಲಿ‌ ಇರಲಿಲ್ಲ. ಆರತಿಗೂ ಅತ್ತಿಗೆಯ ಕಾಳಜಿ ಇಷ್ಟವಾಗುತ್ತಿತ್ತು.

ಒಂದು ರಾತ್ರಿ ಪ್ರಣತಿಗೆ ಜೋರು ಜ್ವರ ಬಂತು. ಆಗ ಮನೆಯವರೆಲ್ಲರೂ ಅತ್ಯಂತ ಕಾಳಜಿಯಿಂದ ನೋಡಿಕೊಂಡರು. ಮಗು ಉಷಾರಾಯಿತು. ತನ್ನ ಮನೆಯವರ ಕಾಳಜಿಯನ್ನು ಆರತಿ ಮೆಚ್ಚಿಕೊಂಡಳು. ಸುನಂದಾ ಅವರಿಗೂ ಸೊಸೆ ಮಗುವನ್ನು ನೋಡಿಕೊಂಡದ್ದು ಮನಸಿಗೆ ಮುಟ್ಟಿತು. ಆಗಾಗ ಮಗುವನ್ನು ನೋಡಲು ಆರತಿ ತಾಯಿ ಮನೆಯವರೂ ಬರುತ್ತಿದ್ದು ಒಳ್ಳೆಯ ಬಂಧ ಬೆಸೆದಿತ್ತು.

ತನ್ನ ತಾಯಿಯ ಮಾತನ್ನು ಅರ್ಥೈಸಿಕೊಂಡ ಆರತಿ ಖುಷಿಯಾಗಿದ್ದಳು. ಒಳ್ಳೆಯ ಗುಣದ‌ ಆರತಿಯನ್ನು, ತನ್ನ ಮೊಮ್ಮಗಳ ತಾಯಿಯನ್ನು ನೋಯಿಸಲು ಸುನಂದಾ ಅವರಿಗೂ ಮನಸು ಬರುತ್ತಿರಲಿಲ್ಲ. “ಎಷ್ಟಾದರೂ ಸಣ್ಣ ಹುಡುಗಿ. ತಪ್ಪಾದರೆ ಕ್ಷಮಿಸಬೇಕು. ತನ್ನ ಮಗಳಂತೆ ಅವಳೂ‌ ಅಲ್ಲವೇ? ” ಎಂಬ ಅಭಿಪ್ರಾಯ ಬಲವಾಗತೊಡಗಿತು. ಕಿವಿಯೂದುವವರ ಮಾತು ಇಬ್ಬರಿಗೂ ರುಚಿಸದಾಯಿತು.

ಅಂದ ಹಾಗೆ ಬಟ್ಟಲಿಗೆ ಉಪ್ಪು ಹಾಕಿಕೊಂಡು ಸೇರಿಸಿಕೊಳ್ಳುವುದು ಈಗ ಆರತಿಗೆ ಕಷ್ಟವಾಗುವುದಿಲ್ಲ. ಸುನಂದಾ ಅವರು ಈಗ ಸ್ವಲ್ಪ ಜಾಸ್ತಿಯೇ ಉಪ್ಪು ಹಾಕುತ್ತಾರೆ. ಮನೆಯಲ್ಲಿ ಯಾರದೂ ತಕರಾರಿಲ್ಲ.

ಮಗುವಿದ್ದಾಗ ದಿನ ಕ್ಷಣದಂತೆ ಕಳೆಯುತ್ತದೆ. ಪ್ರಣತಿ ಈಗ ಸ್ವಲ್ಪ ದೊಡ್ಡವಳಾಗಿದ್ದಾಳೆ. ಈಗ ಅಮ್ಮ ಅಜ್ಜಿ ಇಬ್ಬರೂ ಅವಳಿಷ್ಟದ ಅಡುಗೆ ಮಾಡುತ್ತಾರೆ. ಅತಿಯೂ‌ ಅಲ್ಲದೆ ಅಲ್ಪವೂ‌ ಅಲ್ಲದೆ ಸರಿಯಾಗಿ ಉಪ್ಪು ಹಾಕುತ್ತಾರೆ.

ಅಂತೂ ಪ್ರಣತಿ ತನ್ನ ಮನೆಯವರ ಮನದಲ್ಲಿದ್ದ ಗಾಢಾಂಧಕಾರವನ್ನು ದೂರಮಾಡಿ ಪ್ರೀತಿಯ ಪ್ರಣತಿಯನ್ನು ಹಚ್ಚಿದಳು. ಮನೆಯ ಅಡುಗೆಯಲ್ಲಿ ಉಪ್ಪು ಸರಿಯಾಯಿತು. ಮನೆಯವರ ಮನಗಳಲ್ಲಿ ಸುಮಧುರ ಬಾಂಧವ್ಯ ನೆಲೆಯಾಯಿತು.

-ಚೈತ್ರಾ ಗಣೀಶ್

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕವನ: ಸಂಭ್ರಮದ ಮೋಕಳೀಕು

Upayuktha

ಕವನ: ಧೀರ – ವೀರ

Upayuktha

*ಮೂರ್ಖನಾಗುತಿಹನು*

Harshitha Harish