ಕತೆ-ಕವನಗಳು

ಸಣ್ಣಕಥೆ: ಯಾರು ನಿಜವಾದ ಕಳ್ಳರು?

ಕಳ್ಳನ ಲೆಕ್ಕಾಚಾರ ಸ್ಪಷ್ಟವಿತ್ತು. ಆ ಮನೆಯಲ್ಲಿ ಒಂಟಿ ವೃದ್ದೆ ವಾಸವಾಗಿದ್ದಳು. ಆ 90 ವರ್ಷದ ವೃದ್ದೆ ಹಾಸಿಗೆ ಹಿಡಿದಿದ್ದಳು. ದಿನ ಬೆಳಿಗ್ಗೆ ಕೆಲಸದ ಹೆಂಗಸು ಮನೆಗೆ ಬಂದು ಊಟ ಕೊಟ್ಟು ಮಧ್ಯಾಹ್ನ ಊಟ ಕೊಟ್ಟು ಸಂಜೆ ತನಕ ನಿಂತು ಸಂಜೆ ಊಟ ಕೊಟ್ಟು ವೃದ್ಧೆಯ ಕೆಲಸ ಮುಗಿಸಿ ಹೋಗುತ್ತಿದ್ದಳು. ಅದಕ್ಕೆಂದೇ ವೃದ್ಧೆಯ ಮಕ್ಕಳು ಹಣ ಕೊಡುತ್ತಿದ್ದರು ಆಕೆಗೆ. ಸಂಜೆ 6 ಗಂಟೆಗೆ ಹೋದರೆ ಮತ್ತೆ ಬೆಳಿಗ್ಗೆ 8 ಗಂಟೆಗೆ ಬರುತ್ತಿದ್ದಳು ಈಕೆ.

ಅಲ್ಲಿಯ ತನಕ ಆ ಮನೆಯ ಹಾಸಿಗೆ ಮೇಲೆ ಜೀವಂತ ಶವವಾಗಿ ಮಲಗಿರುತ್ತಿದ್ದಳು ಈ ವೃದ್ದೆ. ಮನೆಯಲ್ಲಿ ಸ್ವಲ್ಪ ಚಿನ್ನ ಇರಬಹುದು ಹೇಗೋ ವೃದ್ಧೆಗೆ ಹಾಸಿಗೆಯಿಂದ ಏಳಲಾಗದು. ರಾತ್ರಿ 8 ಗಂಟೆಗೆ ಕನ್ನ ಕೊರೆದು ಬಂದರೆ 12 ಗಂಟೆಯೊಳಗೆ ಕೆಲಸ ಮುಗಿಸಬಹುದು- ಹೀಗೆ ಲೆಕ್ಕಾಚಾರ ಮಾಡಿಯೇ ಅಂದು ಒಳ ಬಂದಿದ್ದ ಕಳ್ಳ.

ಕಳ್ಳ ಅಲ್ಮೇರಾದ ಬೀಗ ಒಡೆದು ಅಲ್ಲಿದ್ದ ಚಿನ್ನವನ್ನೆಲ್ಲ ತನ್ನ ಬ್ಯಾಗ್‌ಗೆ ತುಂಬುತ್ತಿದ್ದ ಒಳಗಿನಿಂದ ವೃದ್ದೆ ನೀರು ನೀರು ಎಂದು ಕೂಗುತ್ತಿದ್ದುದು ಕೇಳಿಸಿತ್ತು, ತಕ್ಷಣ ಅಲ್ಲೇ ಇದ್ದ ನೀರನ್ನು ಲೋಟೆಗೆ ಹಾಕಿ ಕುಡಿಸಿ ಮಲಗಿಸಿದ ಕಳ್ಳ. ಕಳ್ಳನ ಹೃದಯ ಕರಗಿತ್ತು. ಆ ವೃದ್ಧೆಯ ಅಸಹಾಯಕ ಪರಿಸ್ಥಿತಿ ನೋಡಿ ಮತ್ತೆ ವೃದ್ಧೆಯನ್ನು ಮಲಗಿಸಿ ತನ್ನ ಕಾಯಕ ಮುಂದುವರೆಸುತ್ತಿದ್ದ ಕಳ್ಳ. ಮತ್ತೆ ವೃದ್ದೆ ಕೂಗುತ್ತಿತ್ತು. ಒಂದೇ ಸಮನೆ ಚಳಿಯಲ್ಲಿ ನಡುಗುತಿತ್ತು, ಮತ್ತೆ ಹೋಗಿ ನೋಡಿದರೆ ಉಬ್ಬಸ ಜೋರಾಗಿತ್ತು ಚಳಿ ಜ್ವರದಲ್ಲಿ ನಡುಗುತ್ತಿದ್ದಳು ಅಜ್ಜಿ.

ಅಲ್ಲೇ ನೆಬುಲೈಸರ್ ಇತ್ತು. ಆಸ್ತಲಿನ್ ರೇಸ್ಪುಲ್ ಕೂಡ. ತಕ್ಷಣ ರೇಸ್ಪುಲ್ ತೆರೆದು ವೃದ್ದೆಯನ್ನು ಎತ್ತಿ ಕೂರಿಸಿ ನೆಬುಲೈಸರ್ ಇಟ್ಟಿದ್ದ. ಅಲ್ಲೇ ಇದ್ದ ಜ್ವರದ ಪ್ಯಾರಸಿಟಮಾಲ್ ಮಾತ್ರೆ ಕೊಟ್ಟು ನೀರು ಕೊಟ್ಟು 15 ನಿಮಿಷದ ನಂತರ ಅಜ್ಜಿಯನ್ನು ಮಲಗಿಸಿ ಬಟ್ಟೆ ಹೊದೆಸಿ ಫ್ರಿಡ್ಜ್ ನಿಂದ ಕೋಲ್ಡ್ ವಾಟರ್ ತೆಗೆದು ಒದ್ದೆ ಬಟ್ಟೆ ಮಾಡಿ ಹಣೆಗೆ ಇಟ್ಟು ಮಲಗಿಸಿದ. ಕಳ್ಳತನ ಈತನ ವೃತ್ತಿ ಇರಬಹುದು. ಈತನೂ ಮನುಷ್ಯನೇ ತಾನೇ?

ಮತ್ತೆ ತನ್ನ ವೃತ್ತಿ ಮುಂದುವರಿಸಿದ. ಇಡೀ ಮನೆಯ ಚಿನ್ನ ಬಾಚಿದ್ದ. ಒಟ್ಟು 7 ಲಕ್ಷ ಮೌಲ್ಯದ ಚಿನ್ನ ಅವನ ಬ್ಯಾಗ್ ಅಲ್ಲಿತ್ತು. ಬೆಳಿಗ್ಗೆ 3 ಗಂಟೆ ಆಗಿತ್ತು. ಅಲ್ಲಿಂದ ಹೊರಡ ಬೇಕಿತ್ತು, ಆದರೂ ಮನಸ್ಸು ಕೇಳಿರಲಿಲ್ಲ ಮತ್ತೆ ವೃದ್ಧೆಯ ಕೋಣೆಗೆ ಹೋದ ಕಳ್ಳ.

ವೃದ್ದೆ ಹಾಯಾಗಿ ಮಲಗಿದ್ದರು; ಜ್ವರ ಇರಲಿಲ್ಲ ಉಬ್ಬಸ ಹೋಗಿತ್ತು. ಹಾಗೆ ಸರಿದಿದ್ದ ಬಟ್ಟೆ ಯನ್ನು ಸರಿಯಾಗಿ ಹಾಕಿದ ಕಳ್ಳ ಹೋಗಲು ತಯಾರಾದ ಯಾರೋ ಕೈ ಹಿಡಿದ ಅನುಭವವಾಗಿತ್ತು. ನೋಡಿದರೆ ವೃದ್ದೆ ಕೈ ಹಿಡಿದು ಕೊಂಡಿದ್ದಳು. ಕಳ್ಳನಿಗೆ ಹೆದರಿಕೆ ಯಾಗಿತ್ತು. ಕೈ ಎಳೆದುಕೊಂಡ ಅಜ್ಜಿ ಬಿಗಿಯಾಗಿ ಹಿಡಿದುಕೊಂಡಿದ್ದರು.

ಮಗ ನೀನು ಚಿನ್ನ ಮಾತ್ರ ಕದ್ದಿದ್ದು ಇಲ್ಲೊಂದು ಅಲ್ಮೇರಾ ಇದೆ ನೋಡು ಅದರೊಳಗೆ 20,000 ರೂ ಇದೆ ಅದರಲ್ಲಿ 10000 ತೆಗೆದುಕೋ ಹಾಗೆ ಪ್ರತಿ ತಿಂಗಳಿಗೊಮ್ಮೆ ಕದಿಯಲು ಬರುತಿರು 10,000 ನಾನೇ ನಿನಗಾಗಿ ತೆಗೆದಿಟ್ಟಿರುತ್ತೇನೆ.. ಎನ್ನುವಾಗ ಅಜ್ಜಿಯ ಕಣ್ಣಲ್ಲಿ ನೀರಿತ್ತು.

ಕದ್ದ ಬ್ಯಾಗ್ ಅನ್ನು ಕಳ್ಳ ಅಲ್ಲೇ ಬಿಟ್ಟು ವೃದ್ಧ ಹೆಂಗಸಿನ ಕಾಲ ಬಳಿ ಅಳುತ್ತ ಕೂತಿದ್ದ. ಆ ಅಜ್ಜಿ ಅವನ ತಲೆ ಸವರುತ್ತಾ ಹೀಗೆ ಹೇಳಿದರು.

ಮಗ ಅಳುವುದು ನಿಲ್ಲಿಸು, ಕಳ್ಳ ನೀನಲ್ಲ, ನಿನ್ನೆ ನನ್ನ 93ನೇ ಹುಟ್ಟಿದ ದಿನ ನನಗೆ 4 ಗಂಡು ಮಕ್ಕಳು ಹಾಗೂ 3 ಹೆಣ್ಣು ಮಕ್ಕಳು ಅವರ ಮಕ್ಕಳು ಮರಿಮಕ್ಕಳು ಎಲ್ಲಾ ಇದ್ದಾರೆ. ಆದರೆ ಕಳೆದ 5 ವರ್ಷಗಳಿಂದ ನನ್ನ ಗಂಡ ಕಟ್ಟಿದ ಮನೆಯಲ್ಲಿ ಜೀವಂತ ಹೆಣವಾಗಿ ಬಿದ್ದಿದ್ದೇನೆ. ಮಕ್ಕಳೆಲ್ಲ ಅವರವರ ಲೋಕದಲ್ಲಿ ಸಂತೋಷದಿಂದ ಇದ್ದಾರೆ.

ಯಾರಿಗೂ ನಾನು ಬೇಕಿಲ್ಲ. ಮತ್ತೆ ಅಳುತ್ತಿದ್ದಳು ಅಜ್ಜಿ, ಕೆಲಸದವಳಿಗೆ ಹಣ ಕೊಟ್ಟು ನನ್ನ ಜವಾಬ್ಧಾರಿ ವಹಿಸಿಕೊಟ್ಟಿದ್ದಾರೆ ಆಕೆ ಹೇಗೆ ನೋಡಿಕೊಳ್ಳುತ್ತಿದ್ದಾಳೆ, ಸರಿಯಾಗಿ ಆರೈಕೆ ಮಾಡುತಿದ್ದಾಳೋ ಇಲ್ಲವೋ ಅಮ್ಮನ ಕಷ್ಟಗಳೇನು ಏನೊಂದು ಬೇಕಿಲ್ಲ ಇವರಿಗೆ. ಅದೆಷ್ಟೋ ಬಾರಿ ನಿನ್ನೆಯ ಅನ್ನ ತಿಂದಿದ್ದೇನೆ, ಅದೆಷ್ಟೋ ರಾತ್ರಿ ಚಳಿ ಜ್ವರ ಬಂದಾಗಲೂ, ಹಸಿವೆ ಬಾಯಾರಿಕೆ ಯಾದಾಗಲೋ ಟಾಯ್ಲೆಟ್ ಗೆ ಹೋಗಬೇಕು ಎನ್ನುವಾಗಲೂ ಯಾರೂ ಇರದೇ ಅದೆಷ್ಟು ಕಷ್ಟ ಅನುಭವಿಸುತ್ತಿದ್ದೇನೆ, ಫ್ಯಾನ್ ಇಲ್ಲದ ಅದೆಷ್ಟೋ ರಾತ್ರಿ ಇನ್ವರ್ಟರ್ ಇದ್ದೂ ಸೊಳ್ಳೆ ತಿಗಣೆಗಳಿಂದ ಕಚ್ಚಿಸಿಕೊಂಡಿಲ್ಲ ನಾನು. ಏನೇ ಆಗಲಿ ನನ್ನ ಹುಟ್ಟಿದ ದಿನದಂದು ಆದರೂ ಒಂದು ಫೋನ್ ಆದರೂ ಬರಬಹುದು ಅಂದುಕೊಂಡೆ ರಾತ್ರಿ ತನಕ ಯಾರೂ ಬರದಾಗ ಕಣ್ಣೀರು ಹಾಕಿ ಕೊಂಡೇ ಮಲಗಿದ್ದೆ.

ಹಾಗೆ ದೇವರಲ್ಲಿ ಕೇಳಿಕೊಂಡಿದ್ದೆ ಕೂಡಾ ನನ್ನ ಮಗ ರಾತ್ರಿ ಬಂದು ಅಮ್ಮ ಎಂದು ಬಾಯಿ ತುಂಬಾ ಒಂದೆರಡು ಮಾತಾಡಿ ಹೋಗಬಾರದಿತ್ತಾ? ಎಂದು. ಆಗ ರಾತ್ರಿ ಕಣ್ಣು ತೆರೆಯುವಾಗ ನೀನಿದ್ದೆ ನನ್ನ ಆರೈಕೆ ಮಗನಿಂದಲೂ ಹೆಚ್ಚಾಗಿ ಮಾಡಿದೆ ನೀನಿರುವಾಗ ನನಗೆ ನನ್ನ ಮಕ್ಕಳ ಯೋಚನೆಯೇ ಬಂದಿರಲಿಲ್ಲ. ನೀನು ಕಳ್ಳ ನಾದರೂ ಅಡ್ಡಿ ಇಲ್ಲ ಪ್ರತಿ ತಿಂಗಳು ಕದಿಯುವ ಸಲುವಾಗಿ ಆದರೂ ನಮ್ಮ ಮನೆಗೆ ಬರೋದನ್ನ ಮರಿಯಾ ಬೇಡ ಎನ್ನುವಾಗ ವೃದ್ಧೆಯ ಕಣ್ಣು ಒದ್ದೆಯಾಗಿತ್ತು… ಕಳ್ಳನದ್ದು ಕೂಡ.

ಇನ್ನು ವಿಷಯಕ್ಕೆ ಬರೋಣ ತಂದೆ ತಾಯಿ ಪ್ರಾಯ 80 ದಾಟಿದಾಗ ವೃದ್ಧಾಶ್ರಮಕ್ಕೆ ಬಿಡುವ ಮಕ್ಕಳು, ಮನೆಯಿಂದ ಹೊರ ದಬ್ಬುವ ಮಕ್ಕಳು, ವರ್ಷಕ್ಕೊಮ್ಮೆಯೂ ಮಾತಾಡಿಸದ, ನೋಡದ ಮಕ್ಕಳು, ಅರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಹಾಕಬೇಕು ಬನ್ನಿ ಎಂದು ಆಶ್ರಮದಿಂದ ಕರೆ ಬಂದಾಗಲೂ ಇರ್ಲಿ ಅಡ್ಡಿಲ್ಲ ಏನಾದರೂ ಹೆಚ್ಚು ಕಮ್ಮಿ ಆದರೆ ಫೋನ್ ಮಾಡಿ ಎನ್ನುವ ಮಕ್ಕಳು, ಹಾಗೆ ಇದ್ದಾಗ ವಿಚಾರಿಸದೇ ಸತ್ತಾಗ ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಊರಿಗಿಡೀ ಅದ್ದೂರಿಯಾಗಿ ಊಟ ಹಾಕುವ ಮಕ್ಕಳನ್ನು ಹೆತ್ತು, ಹೊತ್ತು ಸಾಕುವ ಬದಲು ಹುಟ್ಟಿದಾಗಲೇ ಕತ್ತು ಹಿಡಿದು ಸಾಯಿಸಿದ್ದರೆ ಆ ಹಿರಿಯ ಜೀವಗಳ ಒದ್ದಾಟ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗುತ್ತಿತ್ತೋ ಏನೋ?

ಈಗ ನೀವೇ ಹೇಳಿ. ಯಾರು ಇಲ್ಲಿ ನಿಜವಾದ ಕಳ್ಳ?

-ಡಾ.ಶಶಿಕಿರಣ್ ಶೆಟ್ಟಿ, ಉಡುಪಿ
9945130630

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

*ಬೇಸಾಯದವ ಬೇಗ ಸಾಯ*

Harshitha Harish

ಕವನ: ತಾಯಿ

Upayuktha

ಮಕ್ಕಳ ಕತೆ: ಆನೆ….ಒಂದಾನೆ… (ಭಾಗ 3)

Upayuktha