ಕತೆ-ಕವನಗಳು ಧರ್ಮ-ಅಧ್ಯಾತ್ಮ

ಶ್ರೀ ಶಂಕರಾಚಾರ್ಯರ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರಮ್ -ಕನ್ನಡ ರೂಪ

ನಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿ ಕಥಾಃ|
ನ ಜಾನೇ ಮುದ್ರಾಸ್ತೇ ತದಪಿ ಚನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್||೧||

ಮಂತ್ರವರಿಯೆನು ಯಂತ್ರವರಿಯೆನು ತಾಯೆ ನಿನ್ನನು ಒಲಿಸುವ
ನಿನ್ನ ಕರೆಯುವ ಧ್ಯಾನಿಸುವ ಪರಿ ಸ್ತುತಿ ಕಥೆಗಳನು ತಿಳಿಯೆ ನಾ|
ಮುದ್ರೆ ಮಾಡಲು ಮೊರೆಯನಿಡಲೂ ಅರಿಯದಿಹ ಅಜ್ಞಾನಿ ನಾ
ಅರಿವೆನಮ್ಮಾ ನಿನ್ನ ದಾರಿಯಲಿರಲು ಸಂಕಟ ದೂರವು||೧||

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್|
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವಿತಿ||೨||

ಜಡತೆ ಬಡತನ ವಿಧಿಯ ಆಟವು ನನ್ನ ಅವಿನಯ ಸೇರಲು
ನಿನ್ನ ಅಡಿದಾವರೆಗಳಡಿಯಲಿ ಸೇವೆ ಮಾಡದೆ ಹೋದೆನು|
ಅಮ್ಮಾ ಸಕಲೋದ್ಧಾರಿಣಿಯೆ ಶಿವೇ ಕ್ಷಮಿಸು ತಪ್ಪುಗಳೆಲ್ಲವ
ಕೆಟ್ಟ ಮಗನಿರಬಹುದು ಲೋಕದಿ ಕೆಟ್ಟ ತಾಯಿಯು ಇರುವಳೇ?||೨||

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸಂತಿ ಸರಲಾಃ
ಪರಂ ತೇಷಾಂ ಮಧ್ಯೇ ವಿರಲತರಲೋsಹಂ ತವ ಸುತಃ|
ಮದೀಯೋsಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||೩||

ಪುಣ್ಯಪುರುಷರೆ ಆಗಿರುವ ಎನಿತೆನಿತು ಮಕ್ಕಳು ಇರುವರು
ಅವರ ನಡುವೆಯೆ ನಿನ್ನ ಮಗ ಈ ಪಾಪಿ ಇರುವೆನು ನೋಡು ನೀ|
ಶುಭದೇ ಶಿವೆಯೆ ನಿನ್ನ ಮರೆತೆನು ನೀನು ಮಗನನು ಮರೆತೆಯಾ
ಕೆಟ್ಟ ಮಗನಿರಬಹುದು ಲೋಕದಿ ಕೆಟ್ಟ ತಾಯಿಯು ಇರುವಳೇ?||೩||

ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ|
ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||೪||

ಅಮ್ಮ ನಾ ನಿನ್ನ ಚರಣಸೇವೆಯ ಗೈಯಲಿಲ್ಲವು ಎಂದಿಗೂ
ನಿನ್ನ ಸೇವೆಗೆ ಸರ್ವ ಸಂಪದ ದಾನ ಮಾಡದ ಲೋಭಿಯು|
ತಾಯೆ ಆದರು ನಿನಗೆ ನನ್ನಲಿ ಎನಿತು ಒಲವದು ಅಚ್ಚರಿ
ಕೆಟ್ಟ ಮಗನಿರಬಹುದು ಲೋಕದಿ ಕೆಟ್ಟ ತಾಯಿಯು ಇರುವಳೇ?||೪||

ಪರಿತ್ಯಕ್ತ್ವಾ ದೇವಾನ್ ವಿವಿಧವಿಧಸೇವಾಕುಲತಯಾ
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ|
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಂ||೫||

ಅಮ್ಮ, ಮುದಿಯನು ನಾನು ಅರಿವಿನ ಹಿರಿಯನಲ್ಲವು ಅಜ್ಞನು
ಪೂಜೆಗೈಯುವ ಪರಿಗಳರಿಯದೆ ತೊರೆದೆ ದೇವರ ಪೂಜೆಯ|
ತಾಯೆ ಲಂಬೋದರನ ಅಂಬೆಯೆ ತೋರದಿರೆ ನೀ ಕರುಣೆಯ
ಇನ್ನಾವ ದೇವಗೆ ಮೊರೆಯನಿಡಲೀ ನಿನ್ನ ಮಗನು ಅನಾಥನು||೫||

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿ ಕನಕೈಃ|
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ||೬||

ಹೇ ಅಪರ್ಣೇ,ನಿನ್ನ ಮಂತ್ರಗಳನ್ನು ಕೇಳಿದ ಅಜ್ಞನು
ಉಲಿವ ಜೇನ್ನುಡಿಗಳನು ಸುಮಧುರ ಕಂಠ ಸಿರಿಯಲಿ ಎಲ್ಲವ|
ಕುಬೇರನಂತಹ ಸಿರಿಯ ಒಡೆಯನೆ ಆಗುವನು ಕಡುಬಡವನು
ನಿನ್ನ ಜಪ ತಪ ಮಾಡುವವನೇನಾಗಲಾರನು ಜಗದಲಿ ?||೬||

ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರಃ
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ|
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನಿ ತ್ವತ್ಪಾಣಿಗ್ರಹಣಪರಿಪಾಟೀಫಲಮಿದಂ||೭||

ಚಿತೆಯ ಭಸ್ಮವ ಲೇಪಿಸಿಹ ವಿಷಕಂಠ ಶಿವನು ದಿಗಂಬರ
ನಾಗಹಾರನು ಜಟೆಯ ಧಾರನು ಪಶುಪತಿಯು ಭೂತೇಶನು|
ಕಪಾಲ ಹಸ್ತನು ನಿನ್ನ ಕೈಹಿಡಿದಂದೆ ಜಗಪತಿಯಾದನು
ಏನು ಅದ್ಭುತ ತಾಯೆ ನಿನ್ನಯ ಮಹಿಮೆ ಎನ್ನನು ಕಾಯದೇ?||೭||

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವವಾಂಛಾsಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಪುನಃ|
ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ||೮||

ಮೋಕ್ಷ ಧನ ಸಂಪದಗಳಾಸೆಯು ಇಲ್ಲ ತಾಯಿಯೆ ನನ್ನಲಿ
ಜ್ಞಾನ ವೈಭವ ಸಕಲ ಸುಖಗಳ ಆಸೆ ಇಲ್ಲವು ನನ್ನೊಳು|
ಶಿವೆ ಮೃಡಾನೀ ಶಿವೆ ರುದ್ರಾಣೀ ಹೇ ಭವಾನೀ ಎನ್ನುತ
ಜಪಿಸಿ ಜನುಮವ ಕಳೆವ ಭಾಗ್ಯವ ಕರುಣಿಸೆನಗೆ ತಾಯಿಯೇ||೮||

ನಾರಾಧಿತಾsಸಿ ವಿಧಿನಾ ವಿವಿಧೋಪಚಾರೈಃ
ಕಿಂ ರೂಕ್ಷಚಿಂತನಪರೈರ್ನ ಕೃತಂ ವಚೋಭಿಃ|
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ||೯||

ಕಾಲ ಕಳೆಯಿತು ಅರ್ಥ ಸಾರಗಳಿಲ್ಲದ ಚಿಂತನೆಯಲಿ
ಅಮ್ಮ ತಾಯಿಯೆ,ನಿನ್ನ ಉಪಚಾರಗಳ ಪೂಜೆಯ ಮಾಡದೆ|
ಈ ದೀನ ಮಗನಲಿ ಕೃಪೆಯ ತೋರುವ ತಾಯೆ ಹೇ ಕರುಣಾಳುವೇ
ನೀನು ತಾಯಾಗಿರುತ ಕಾಯುವೆ ಮಕ್ಕಳನು ವಾತ್ಸಲ್ಯದಿ||೯||

ಆಪತ್ಸು ಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇ ಶೀ|
ನೈತಛಠತ್ವಂ ಮಮ ಭಾವಯೇಥಾಃ
ಕ್ಷುಧಾಃತೃಷಾರ್ತಾ ಜನನೀಂ ಸ್ಮರಂತಿ||೧೦||

ಸಟೆಯ ಬದುಕನು ಕಳೆದೆನಮ್ಮಾ ಸಟೆಯ ಸ್ಮರಣೆಯಿದಲ್ಲವು
ಈಶ್ವರಿಯೆ ಹೇ ಲೋಕಮಾತೆಯೆ ಸಂಕಟದ ಮೊರೆ ಎನ್ನದು|
ಆಟವಾಡುತಲಿರುವ ಮಕ್ಕಳು ಕರೆಯರೆಂದೂ ತಾಯನು
ಹಸಿವು ಬಳಲಿಕೆ ಬಿದ್ದ ಮಾತ್ರಕೆ ತಾಯ ಕರೆಯರೆ ಕೂಡಲೇ||೧೦||

ಜಗದಂಬ ವಿಚಿತ್ರ ಮತ್ರ ಕಿಂ
ಪರಿಪೂರ್ಣಾ ಕರುಣಾsಸ್ತಿ ಚೇನ್ಮಯಿ|
ಅಪರಾಧಪರಂಪರಾsವೃತಂ
ನ ಹಿ ಮಾತಾ ಸಮುಪೇಕ್ಷತೇ ಸುತಮ್||೧೧||

ಜಗದ ಜನನಿಯೆ ಪಾಪಿ ಮಗ ನಾನೆನಗೆ ನೀ ದಯೆ ತೋರಲು
ಅಚ್ಚರಿಯು ಎನಗಾಗದೆಂದೂ ಮಾತೆ ಕ್ಷಮೆ ಸಂಪನ್ನೆಯು|
ಪಾಪ ಸಂಕುಲ ನನ್ನನಾವರಿಸಿದರು ಹೇ ಜಗಜನನಿಯೇ
ನೀನು ನಿನ್ನೀ ಕಂದನನು ತಿರಸ್ಕರಿಸದೇ ಪರಿಪಾಲಿಸು||೧೧||

ಮತ್ಸಮಃ ಪಾತಕೀ ನಾಸ್ತಿ,ಪಾಪಘ್ನೀ ತ್ವತ್ಸಮಾ ನ ಹಿ|
ಏವಂ ಜ್ಞಾತ್ವಾ ಮಹಾದೇವಿ, ಯಥಾಯೋಗ್ಯಂ ತಥಾ ಕುರು||೧೨||

ಅಸಮ ಪಾಪಿಯು ನಾನು ನೀ ಅಸಮಾನ್ಯ ಪಾಪವಿಮೋಚನೀ|
ಉಚಿತವಾದುದ ಮಾಡು ತಾಯೇ
ತೋರು ದಯೆಯನು ಎನ್ನಲಿ||೧೨||

“ಶ್ರೀಶಂಕರರಿಗೆ ಅರ್ಪಣೆ”

-ವಿಶ್ವೇಶ್ವರ ಭಟ್ ಉಂಡೆಮನೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕವನ: ಬದುಕಿನ ಬಂಡಿ

Upayuktha

ಮಕ್ಕಳ ಕತೆ: ಆನೆ… ಒಂದಾನೆ (ಭಾಗ 4)

Upayuktha

ಭಕ್ತಿಗೀತೆ: ಕಾಪಾಡು ಅಯ್ಯಪ್ಪ

Upayuktha