ಧರ್ಮ-ಅಧ್ಯಾತ್ಮ ಪ್ರಮುಖ ಲೇಖನಗಳು

ಮೌನಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು

ಜಾತ್ಯತೀತ ಮನೋಭಾವದಿಂದ ಸರ್ವಜಾತಿ ಬಾಂಧವರನ್ನೂ ಸಮನಾಗಿ ಸ್ವೀಕರಿಸಿ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರಿಗೆ ಶಕ್ತಿಯನ್ನು ತುಂಬಿದ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಅಮರ ಸಂದೇಶವನ್ನು ನೀಡಿ ವಿಶ್ವ ಪ್ರಸಿದ್ಧರಾದ ಈ ಮಹಾನ್ ವ್ಯಕ್ತಿ ಬೇರಾರೂ ಅಲ್ಲ.

ಅವರೇ ಮಹಾಸಂತ, ದಾರ್ಶನಿಕ, ಸಮಾಜ ಸುಧಾರಕ, ವಿಶ್ವ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು. ಆಧ್ಯಾತ್ಮಿಕ ಸಾಧಕ ರಾಗಿದ್ದ ಅವರು ಓರ್ವ ಶ್ರೇಷ್ಠ ಸಾಮಾಜಿಕ ಚಿಂತಕರಾಗಿದ್ದರು. ನಾರಾಯಣ ಗುರುಗಳು ಸಮಾಜದ ಎಲ್ಲಾ ಮಗ್ಗುಲುಗಳತ್ತ ದೃಷ್ಟಿ ಹರಿಸುವ ಮೂಲಕ ಸಮಾಜದಲ್ಲಿರುವ ಅನಿಷ್ಟ ಪದ್ಧತಿ, ಅಸ್ಪೃಶ್ಯತೆ, ಬಡತನ, ಶೋಷಣೆ, ದೌರ್ಜನ್ಯಗಳಿಂದ ವರ್ಗೀಕರಿಸಿದ ಮನುಷ್ಯ ಕಲ್ಪಿತ ಕೃತಕ ಗೋಡೆಯನ್ನು ಕೆಡವಿ ಒಂದು ಸುಂದರ ಸಮಾಜದ ನಿರ್ಮಾಣ ಅವರ ಕನಸಾಗಿತ್ತು.

ಬಾಲ್ಯ ಜೀವನ:
ಜಾತಿ, ಮತ, ಧರ್ಮ, ದೇವರುಗಳ ಹೆಸರಲ್ಲಿ ದಬ್ಬಾಳಿಕೆಯ ಅಟ್ಟಹಾಸದಲಿ ನಲುಗುತ್ತಿದ್ದ ಕೇರಳದ ತಿರುವನಂತಪುರದ ಬಳಿಯ ಚೆಂಬಳಂತಿ (ಚೆಂಪಳಂಡಿ/ಚೆಂಪುಜಂತಿ)ಯೆಂಬ ಹಳ್ಳಿಯಲ್ಲಿ1854ರ ಆಗಸ್ಟ್ 20ರಂದು ಈಳವ ಜಾತಿಯ ಮಾದನಾಶಾನ್ ಮತ್ತು ಕುಟ್ಟಿ ಅಮ್ಮ ದಂಪತಿಗಳ ಮಗನಾಗಿ ಶ್ರೀಗಳ ಜನನವಾಯಿತು. ಬಾಲ್ಯದಲ್ಲಿ ನಾಣು ತುಂಟನಾಗಿದ್ದ. ಬಾಲಕನಾಗಿದ್ದ ತನ್ನ ಸುತ್ತ ಮುತ್ತಲ ಜನ ಜೀವನದ ಸಾಮಾಜಿಕ ವ್ಯವಸ್ಥೆಯ ಕಡೆಗೆ ಗಮನ ನೀಡುತ್ತಿದ್ದು. ಮುಂದೆ ನಾಣು ಸಾಮಾಜಿಕ, ಆರ್ಥಿಕ ಅಡೆತಡೆಗಳ ಮಧ್ಯೆ ಗುರುಕುಲವನ್ನು ಸೇರಿ ಮೇಲ್ವರ್ಗಕ್ಕೆ ಸೀಮಿತವಾಗಿದ್ದ ತಮಿಳು, ಮಲಯಾಳಂ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ. ಜೊತೆಗೆ ವೇದ, ಉಪನಿಷತ್ತು ಭಗವದ್ಗೀತೆ, ಬ್ರಹ್ಮಸೂತ್ರ, ನಾನಾ ಗ್ರಂಥಗಳಗಳ ಬಗ್ಗೆ ಜ್ಞಾನ ಪಡೆದುಕೊಂಡರು. ಗುರುಕುಲ ಶಿಕ್ಷಣ ಮುಗಿಯುತ್ತಿದ್ದಂತೆ ಪರಮಾತ್ಮ ಸಾನ್ನಿಧ್ಯಕ್ಕೆ ಸತ್ಯದ ಶೋಧನೆಯನ್ನು ಬಯಸಿ ಹಗಲು ರಾತ್ರಿಯೆನ್ನದೆ, ಮಳೆ ಬಿಸಿಲೆನ್ನದೆ ಅಧ್ಯಾತ್ಮ ಸಾಧನೆಗಾಗಿ ಅಜ್ಞಾತ ವಾಸಿಯಾಗಿ ಗುಹೆಗಳಲ್ಲಿ ತಪಸ್ಸು ಮಾಡಿ ಸಂನ್ಯಾಸಿ ಎನಿಸಿಕೊಂಡರು. ಬ್ರಹ್ಮ ಜ್ಞಾನವನ್ನು ಪಡೆದ ಇವರು `ಬ್ರಹ್ಮಶ್ರೀ’ಯಾಗಿ ಜಗದ್ಗುರುವಾದರು. ಶ್ರೀನಾರಾಯಣಗುರು ಧರ್ಮಪರಿಪಾಲನಾ ಯೋಗಂ ಮೂಲಕ ಅಸ್ಪೃಶ್ಯರ, ಶೋಷಿತ ವರ್ಗದ ಸುಧಾರಕನಾಗಿ ಇಡೀ ದಕ್ಷಿಣ ಭಾರತ ಸುತ್ತಿದರು.

ಇತರ ಧರ್ಮಗಳ ಬಗ್ಗೆ ನಾರಾಯಣ ಗುರುಗಳ ನಿಲುವು:
ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದೂ ಧರ್ಮದಲ್ಲಿ ಜನಿಸಿದರೂ ಆ ಧರ್ಮವೇ ಶ್ರೇಷ್ಠವೆಂದು ಭಾವಿಸದೆ ಇತರ ಧರ್ಮಗಳನ್ನು ಗೌರವಿಸಿದರು. ಇದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಯಾಗಿದ್ದಾಗ ಅವರು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಗ್ರಂಥಗಳ ಸಾರವನ್ನು ತಿಳಿಯ ಬಯಸಿ ಅವನ್ನು ಆಳವಾಗಿ ಅಧ್ಯಯನ ಮಾಡಿದರು. ಇದೇ ರೀತಿ ಹಲವಾರು ಧರ್ಮಗುರುಗಳು ಇವರ ಬಗ್ಗೆ ತೋರುತ್ತಿದ್ದ ವಿಶ್ವಾಸ, ಗೌರವ ಅವರ ಸರಳತೆಗೆ ನಿದರ್ಶನವಾಯಿತು. ಈ ಧರ್ಮಗಳ ಜನರೊಂದಿಗೆ ಅವರು ಸಹ ಭೋಜನವನ್ನು ಮಾಡುವ ಮೂಲಕ ಧಾರ್ಮಿಕ ಬಾಂಧವ್ಯ ಬೆಸೆಯಲು ನಾಂದಿಯಾದರು. ಅವರ ಮಹತ್ವ ಅರಿತ ಕ್ರೈಸ್ತ ಪಾದ್ರಿಯೊಬ್ಬರು ತಮ್ಮ ಧರ್ಮ ಸ್ವೀಕರಿಸಿ ಆಮಂತ್ರಿಸಿದಾಗ ಸೌಜನ್ಯದಿಂದ ತಿರಸ್ಕರಿಸಿದರು. ಇತರೆ ಧರ್ಮದವರು ಇವರ ಅನುಯಾಯಿಗಳಾಗಿದ್ದರು. ನಾರಾಯಣ ಗುರುಗಳು ಜಾತಿ, ಧರ್ಮ, ಪಂಗಡವೆಂದು ಕಲಹ ಮಾಡದೆ ನಾವು ಏನಾಗಿದ್ದೇವೋ ಅದರಲ್ಲಿ ಜೀವನ ಸಾಗಿಸಬೇಕೆಂದು ಸಾರಿದರು.

ಸಾಮಾಜಿಕ ಬದಲಾವಣೆಯಲ್ಲಿ ಗುರುಗಳು:
ಸಾಮಾಜಿಕ ವಿಷಮತೆಯ ಸಮಸ್ಯೆಗಳ ಮೂಲ ತಿಳಿದಿದ್ದ ಗುರುಗಳು ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದರು. ದೀನ ದಲಿತರ ಸಂಘಟನೆಯ ಮತ್ತು ಜ್ಞಾನದ ಅಭಾವವನ್ನು ಮನಗಂಡು ಸಂಘಟನೆಯಿಂದ ಬಲಯುತರಾಗಿ ಎಂದು. ಅಂದಿನ ಕಾಲದಲ್ಲಿ ದೇವರು ಮೇಲ್ವರ್ಗದವರ ಸೊತ್ತಾಗಿತ್ತು. ದೇವಾಲಯ ಪ್ರವೇಶವು ಕೆಳವರ್ಗದವರಿಗೆ ನಿಷಿದ್ಧವಾಗಿತ್ತು. ಇಂತಹ ಸಂದರ್ಭದಲ್ಲಿ ಗುರುಗಳು ಮಡಿ ದೇವರುಗಳು ಪೂಜಿಸಲು ಅಸಾಧ್ಯವೆಂದಾದರೆ ಮೈಲಿಗೆ ದೇವರನ್ನು ಪೂಜಿಸೋಣವೆಂದು ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿದರು. ಅವರ ಪ್ರಕಾರ ಧರ್ಮದ ದೇವರುಗಳು ಯಾರ ಖಾಸಗಿ ಸೊತ್ತಲ್ಲ. ಪ್ರತಿಯೊಬ್ಬರಿಗೂ ದೇವರು ಹೊಂದುವ ಅಥವಾ ಪೂಜಿಸುವ ಹಕ್ಕಿದೆ. ಅವರು ಸ್ಥಾಪಿಸಿದ ದೇವಾಲಯದಲ್ಲಿ ಎಲ್ಲಾ ಜಾತಿಯವರಿಗೂ ಅವಕಾಶ ನೀಡಲಾಯಿತು. ಈ ಸ್ಫೂರ್ತಿಯಿಂದ ಕೇರಳ ಸೇರಿದಂತೆ ಹಲವೆಡೆ ದೇವಸ್ಥಾನಗಳು ಹುಟ್ಟಿಕೊಂಡವು. ಇದಕ್ಕೆ ಮೇಲ್ವರ್ಗದವರು ವಿರೋಧ ವ್ಯಕ್ತಪಡಿಸಿದರೂ ಗುರುಗಳೆದುರು ಅವೆಲ್ಲವೂ ವಿಫಲವಾಯಿತು.

ವಿದ್ಯೆಯಿಂದ ಸ್ವತಂತ್ರರಾಗಿ ಎಂಬ ಆಶಯದಂತೆ ಹಲವೆಡೆ ಶಾಲೆಗಳನ್ನು ತೆರೆದರು. ಇಲ್ಲಿ ಜಾತಿ ಮತ್ತು ಭೇದವಿಲ್ಲದೆ ಎಲ್ಲರಿಗೂ ಕಲಿಯಲು ಅವಕಾಶ ನೀಡಲಾಯಿತು. ಕೆಳವರ್ಗದವರಿಗೆ ಸಂಸ್ಕೃತ ಕಲಿಸುವ ಉದ್ದೇಶದಿಂದ ಕೇರಳದಲ್ಲಿ ಅದ್ವೈತಾಶ್ರಮ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದರು. ಶ್ರಮಿಕ ವರ್ಗದವರಿಗೆ ರಾತ್ರಿ ಶಾಲೆಗಳ ಸ್ಥಾಪನೆಗೆ ಚಾಲನೆ ನೀಡಿದರು. ಇಂದಿಗೂ ನಾರಾಯಣ ಗುರುಗಳ ಹೆಸರಿನಲ್ಲಿ ಹಲವಾರು ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ನಾರಾಯಣಗುರುಗಳು ಸಂಸ್ಕೃತ, ತಮಿಳು, ಮಲಯಾಳಂಗಳಲ್ಲಿ ಭಜನೆ, ಸಂಕೀರ್ತನೆ ಗಳನ್ನು ರಚಿಸಿದ್ದಾರೆ.

ಗುರುಗಳೊಂದಿಗೆ ನಾಯಕರುಗಳು:
ನಾರಾಯಣಗುರುಗಳ ಸಾತ್ವಿಕ ಚಿಂತನೆಯನ್ನು ಅರಿತ ಮಹಾತ್ಮಗಾಂಧೀಜಿಯವರು ಗುರುಗಳನ್ನು ಭೇಟಿಯಾಗಿದ್ದರು.ಗುರುಗಳ ಜೀವನಾದರ್ಶ ಅವರ ಮೇಲೆ ಪ್ರಭಾವ ಬೀರಿತ್ತು. ಆಚಾರ್ಯ ವಿನೋಭಾ ಭಾವೆ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟಾಗೋರರು ಕೂಡ ಗುರುಗಳ ಜೀವನ ದರ್ಶನಗಳನ್ನು ಕೊಂಡಾಡಿದ್ದಾರೆ.

ನಾರಾಯಣಗುರುಗಳ ಕಾಲಾನಂತರ ಹಲವಾರು ರಾಷ್ಟ್ರ ನಾಯಕರುಗಳು ಶಿವಗಿರಿಯನ್ನು ಸಂದರ್ಶಿಸಿದ್ದಾರೆ. ಆ ಮೂಲಕ ಗುರುಗಳು ಇತರರಿಗೂ ಆದರ್ಶಪ್ರಾಯರಾಗಿದ್ದಾರೆ.

ಸಾರ್ವಕಾಲಿಕವಾದ ಗುರುಗಳ ಸಂದೇಶಗಳು:

ತಮ್ಮ ಸಂದೇಶದಲ್ಲಿ ಗುರುಗಳು ಮತೀಯ ಸಂಕುಚಿತ ಮನೋಭಾವನೆಯನ್ನು, ಜಾತಿ-ಧರ್ಮದ ಅತಿಯಾದ ಮೋಹಕ್ಕೆ ಒಳಗಾಗದಿರುವಂತೆ ಕರೆ ನೀಡಿದ್ದಾರೆ. ಗುರುಗಳ ಆಯ್ದ ಸಂದೇಶಗಳು…
*ಜ್ಞಾನ ಮಾತ್ರ ಸರ್ವತ್ರ ಪ್ರಕಾಶಿಸುತ್ತದೆ.ಬೇರೆ ಯಾವುದೂ ಅಲ್ಲ. ಯಾವುದು ಪ್ರಕಾಶಿಸುವುದಿಲ್ಲವೋ ಅದು ಸತ್ತ ಹಾಗೆ. ಆದುದರಿಂದ ಜ್ಞಾನ ಸಂಪಾದನೆ ನಮ್ಮ ಕರ್ತವ್ಯವಾಗಿರಬೇಕು.

*ತನ್ನಂತೆ ಪರರಿಗೂ ಹಿತವನ್ನು ಬಯಸುವುದು ನಿಜವಾದ ಸಮಾಜ ಸೇವೆ. ಜನಸೇವೆ ನಮ್ಮ ಋಣದ ಹೊರೆ ಹಗುರವಾಗಿಸುವ ಯತ್ನ. ನಾವು ಉಪಕಾರ ಮಾಡುತ್ತೇವೆ ಎನ್ನುವ ಭ್ರಮೆ ಸರಿ ಅಲ್ಲ.

*ಬದುಕು ನಿಂತ ನೀರಾಗಬಾರದು. ನಿರಂತರ ಹರಿಯುತ್ತಿರಬೇಕು. ಆಗ ಮಾತ್ರ ಬದುಕಿನಲ್ಲಿ ಲವಲವಿಕೆ ಉಳಿದುಕೊಳ್ಳಲು ಸಾಧ್ಯ.

*ಒಳ್ಳೆಯ ಗುಣ ಸಂಸ್ಕಾರದಿಂದ ಬೆಳಗುತ್ತದೆ. ಬರಿಯ ಹುಟ್ಟಿನಿಂದ ಯಾರೂ ದೊಡ್ಡವರಾಗುವುದಿಲ್ಲ. ಒಳ್ಳೆಯ ಗುಣದಿಂದ ಉತ್ತಮ ರಾಗುತ್ತಾರೆ.

*ಆತ್ಮವಿಶ್ವಾಸ ಉಳಿಸಿಕೊಂಡು ಮಿಕ್ಕೆಲ್ಲವನ್ನೂ ಕಳೆದುಕೊಂಡರೂ ಚಿಂತೆಯಿಲ್ಲ. ಏಕೆಂದರೆ ಆತ್ಮವಿಶ್ವಾಸದ ಬಲದಿಂದ ಎಲ್ಲವನ್ನೂ ಸಂಪಾದಿಸಬಹುದು.

*ಒಂದೇ ಜಾತಿ ಒಂದೇ ಮತ ಒಂದೇ ದೇವರು ಮಾನವರೆಲ್ಲರಿಗೂ.

*ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು.

*ಅನುಕಂಪ ಇರುವವನು ಜೀವಿ.

*ಅನ್ಯರನ್ನು ತನಗಿಂತ ಬೇರೆಯವನೆಂದು ತಿಳಿಯದಿರುವುದೇ ಅದ್ವೈತದ ಮೂಲ ಮಂತ್ರ.

*ಧಾರ್ಮಿಕತೆ ವಾದಿಸಲು ಅಲ್ಲ ಜಯಿಸಲೂ ಅಲ್ಲ, ತಿಳಿಯಲು ತಿಳಿಸಲು ಮಾತ್ರ.

*ತನ್ನ ಎಲ್ಲಾ ಕೆಲಸ ಕಾರ್ಯಗಳು ಎಲ್ಲರ ಹಿತಕ್ಕಾಗಿರಲಿ.

*ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ.

*ಮಾನವ ಜನ್ಮ ಶ್ರೇಷ್ಠವಾದುದು. ಸತ್ಕರ್ಮಗಳಿಂದ ಜೀವನ ಸಾರ್ಥಕಗೊಳಿಸಿ.

*ಪರಂಪರೆ ನಮ್ಮ ಗತಕಾಲದ ಸಂಚಯ, ಈ ಪರಂಪರೆ ಒಂದು ಜಾತಿಗೆ ಮೀಸಲಾಗಿರದೆ ಮನುಷ್ಯ ಜಾತಿಯ ಪರಂಪರೆಯ ಕುರಿತು ಮಾತ್ರ ನಾವು ಯೋಚಿಸಬೇಕು.

ಇಂತಹ ಹಲವಾರು ಸಂದೇಶಗಳೊಂದಿಗೆ ಮದ್ಯ ಒಂದು ರೀತಿಯ ವಿಷ. ಅದರ ತಯಾರಿ, ಮಾರಾಟ ಮಾಡಬಾರದೆಂದು ಕರೆ ನೀಡಿದ್ದರು. ಸ್ತ್ರೀಯರನ್ನು ಗೌರವಿಸಬೇಕೆಂದು ಕರೆ ನೀಡಿ ಆ ಮೂಲಕ ಅವರ ಉದ್ಧಾರಕ್ಕಾಗಿ ಕ್ರಮ ಕೈಗೊಂಡರು. ಬಾಲ್ಯ ವಿವಾಹವನ್ನು ವಿರೋಧಿಸಿ, ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ಆಡಂಬರದ ಮದುವೆ, ಸಭೆ-ಸಮಾರಂಭಗಳನ್ನು ವಿರೋಧಿಸಿದರು. ಸಹಭೋಜನ, ದೇವಾಲಯ ಪ್ರವೇಶ, ಅಸ್ಪೃಶ್ಯತೆಯ ನಿವಾರಣೆಗೆ ಒತ್ತು ನೀಡಿದರು.

ಶ್ರೀನಾರಾಯಣಗುರುಗಳು 1928 ಸೆಪ್ಟೆಂಬರ್ 21ರಂದು ಶಿವಗಿರಿಯಲ್ಲಿ ಸಮಾಧಿಸ್ಥರಾದರು. ಭಾರತ ಸರಕಾರ ಗುರುಗಳ ಗೌರವಾರ್ಥವಾಗಿ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದೆ. ಹಲವಾರು ರೀತಿಯ ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ಬದಲಾವಣೆಯೊಂದಿಗೆ ಸಮಾಜದ ಪ್ರಗತಿಗೆ ಶ್ರಮಿಸಿದ ಗುರುಗಳ ನಡೆಯು ಶ್ಲಾಘನೀಯ. ಇಂದಿನ ಸಮಾಜದಲ್ಲಿಯ ಅಶಾಂತಿಯ ಸನ್ನಿವೇಶದಲ್ಲಿ ಮತ್ತೊಮ್ಮೆ ಗುರುಗಳಂತಹ ಮಹನೀಯರ ಅವಶ್ಯಕತೆಯಿದ್ದು ಗುರುಗಳಂತಹ ದಾರ್ಶನಿಕರು ಹುಟ್ಟಿ ಬರಲಿ ಎಂದು ಆಶಿಸೋಣ.

-ದೀಪಕ್ ಬೀರ, ಪಡುಬಿದ್ರಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕೊರೊನಾ ತಡೆ ಕ್ರಮಗಳು: ಮುಖ್ಯಮಂತ್ರಿಗಳ ಜತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್‌; ಲಾಕ್‌ಡೌನ್ ನಂತರದ ದಿನಗಳಿಗಾಗಿ ಕಾರ್ಯಪಡೆ ರಚನೆ

Upayuktha

ವಿಶ್ವ ಥಲಸೇಮಿಯಾ ದಿನ-ಮೇ 8: ಜೀವನ ಪೂರ್ತಿ ನೋವು ನೀಡುವ ಈ ರಕ್ತದ ಕಾಯಿಲೆ ಬಗ್ಗೆ ತಿಳಿದುಕೊಳ್ಳಿ

Upayuktha

ಉಡುಪಿ ಪರ್ಯಾಯಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್‌; ಸಂಚಾರ ಬದಲಾವಣೆ, ಡ್ರೋನ್ ಹಾರಾಟ ನಿಷೇಧ

Upayuktha