ಧರ್ಮ-ಅಧ್ಯಾತ್ಮ ಲೇಖನಗಳು

ಚಿಪ್ಪಗಿರಿಯ ತಪೋಮೂರ್ತಿ ಶ್ರೀ ವಿಜಯದಾಸರು

ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ | ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ||

ಕರ್ನಾಟಕ ಸಂಗೀತದ ಇತಿಹಾಸದಲ್ಲಿ ದಾಸಯುಗದ ಅಮೂಲ್ಯ ಕೊಡುಗೆಗಳಿಂದ, 15 ಮತ್ತು 16ನೇ ಶತಮಾನಗಳು ‘ಸುವರ್ಣ ಯುಗ’ಗಳಾಗಿ ಪರಿಣಮಿಸಿದವು. ಈ ಶತಮಾನದಲ್ಲಿ ಹರಿದಾಸ ಪಂಥದ ಶ್ರೀ ಪುರಂದರದಾಸರು, ಶ್ರೀ ಕನಕದಾಸರು ಮುಂತಾದ ದಾಸವರೇಣ್ಯರಿಂದ ಹರಿದಾಸ ಸಾಹಿತ್ಯ ಶ್ರೀಮಂತವಾಗಿ ಬೆಳೆಯಿತು. ಹರಿದಾಸ ಕೂಟದಲ್ಲಿ 18ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು ಎಂದರೆ ವಿಜಯವಿಠಲರು. ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ (ಚೀಕಲಪರವಿ) ಎಂಬ ಗ್ರಾಮದವರು.

ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ದಾಸಪ್ಪ. ಬಡತನದ ಬೇಗೆಯಲ್ಲಿ ಬೆಂದ ಇವರನ್ನು ‘ಕೂಸಿ ಮಗ ದಾಸ’ ಎಂದು ಹಗುರವಾಗಿ ಹೀಯಾಳಿಸಿ ಜನ ಕರೆಯುತ್ತಿದ್ದರು. ಈ ಅವಮಾನ ಮತ್ತು ಬಡತನದ ಬೇಗೆ ಸಹಿಸಲಾರದೇ ಚಿಕ್ಕ ವಯಸ್ಸಿನಲ್ಲಿಯೇ ದೇಶಾಂತರ ಹೊರಟು ಕಾಶಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಹಲವಾರು ಸಾಧು ಸಂತರ ಸತ್ಸಹವಾಸ ಮಾಡಿ, ಪವಿತ್ರ ಗಂಗಾಸ್ನಾನ ಮಾಡುತ್ತಾ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ನಾಲ್ಕು ವರುಷಗಳ ನಂತರ ಸ್ವಂತ ಊರಿಗೆ ಮರಳಿದರು. ಅಲ್ಲಿ ಅವರಿಗೆ ಅರಳಮ್ಮ ಎಂಬುವರೊಡನೆ ವಿವಾಹವಾಯಿತು. ಅಲ್ಲಿ 16 ವರ್ಷಗಳ ಕಾಲ ಸಾಂಸಾರಿಕ ಬದುಕು ನಡೆಸಿದರು.

ನಂತರ ತಮ್ಮ 32ನೇ ವಯಸ್ಸಿನಲ್ಲಿ ಈ ಜೀವನದ ಜಂಜಾಟಗಳನ್ನು ಸಹಿಸಲಾರದೇ ಮತ್ತೆ ಕಾಶಿ ಕ್ಷೇತ್ರಕ್ಕೆ ಹಿಂದಿರುಗಿದರು. ಗಯಾದಲ್ಲಿ ಹೆತ್ತವರ ಶ್ರಾದ್ಧ ಮಾಡಿ ಪಿತೃ ಋಣ ತೀರಿಸಿ ಸಾಧು ಸಂತರೊಂದಿಗೆ ಓಡಾಡುತ್ತಾ ನಿಷ್ಠೆಯಿಂದ ತಪಸ್ಸನ್ನಾಚರಿಸಿದರು. ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀ ವೇದವ್ಯಾಸರ ದರ್ಶನ ಮಾಡಿಸಿ ನಾಲಗೆಯ ಮೇಲೆ “ವಿಜಯ” ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು. ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆ ಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ “ವಿಜಯದಾಸ”ರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು. ಆಗ ಅವರ ರಚನೆಯೊಂದು ಹೀಗಿದೆ,

ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೋ ಎನಗೆ|| ಅಂತರಂಗದ+
ಹೃದಯಕಮಲದ ಒಳಗಿರುವ ವಿಜಯವಿಠಲನ ಕಂಡೆ|| |ಅಂತರಂಗದ||

ಹೀಗೆ ಪುರಂದರ ದಾಸರ ಅನುಗ್ರಹದಿಂದಲೇ ವಾಗ್ಗೇಯಕಾರ ಸಾಮರ್ಥ್ಯವನ್ನು ಪಡೆದು, ಪುರಂದರ ದಾಸರನ್ನೇ ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದವರು ಶ್ರೀ ವಿಜಯದಾಸರು. ಇವರ ಅಮೂಲ್ಯವಾದ ರಚನೆಗಳಿಂದಲೇ ಪುರಂದರ ದಾಸರ ಜೀವನವನ್ನು ಚಿತ್ರಿಸಲು ಸಾಧ್ಯವಾಯಿತು. ಇವರು ವಿಜಯವಿಠಲ ಎಂಬ ಅಂಕಿತದೊಡನೆ 25,000 ಕೃತಿಗಳನ್ನು ರಚಿಸಿ ಪುರಂದರದಾಸರ 4,75,000 ರಚನೆಗಳನ್ನು 5,00,000ಕ್ಕೆ ಪೂರ್ಣ ಮಾಡಿದರೆಂದು ಪ್ರತೀತಿ ಇದೆ. ಇವರದ್ದು ಸುಮಾರು 1200 ರಚನೆಗಳ ಮಾತ್ರ ದೊರಕಿವೆ. ಅವುಗಳಲ್ಲಿ ಉಗಾಭೋಗಗಳು 70 ಆದರೆ ಸುಳಾದಿಗಳ ಸಂಖ್ಯೆ 580. ಹೀಗಾಗಿ ಇವರನ್ನು ಸುಳಾದಿ ವಿಜಯದಾಸರು ಎಂದು ಜನ ಗುರುತಿಸುತ್ತಿದ್ದರು. ಕಂಕಣಾಕಾರ ಸುಳಾದಿ, ಹಬ್ಬದ ಸುಳಾದಿ, ಹರಿದಾಸ ಲಕ್ಷಣ ಸುಳಾದಿ, ಶ್ರೀ ಕೃಷ್ಣ ಮಹಿಮೆಗಳನ್ನು ತಿಳಿಸುವ ಸುಳಾದಿ ಮುಂತಾದ ವಿಷಯಾಧಾರಿತ ಸುಳಾದಿಗಳನ್ನು ಹಾಡಿದ್ದಾರೆ. ವೇದ ಉಪನಿಷತ್ತಿನ ಸಾರವನ್ನೆಲ್ಲಾ ತಮ್ಮ ರಚನೆಗಳಲ್ಲಿ ಬಟ್ಟಿ ಇಳಿಸಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನೆಂದರೆ ಅಪಾರ ಭಕ್ತಿ. ಅವನನ್ನು ಮುಟ್ಟಿ ಭಜಿಸುವ ಸೌಭಾಗ್ಯಕ್ಕಾಗಿ ಕೃಷ್ಣನನ್ನು ಹಾಡಿ ಕೊಂಡಾಡಿದರು.

ಕೃಷ್ಣಾ… ಕೃಷ್ಣಾ….
ಭಕ್ತಜನಪಾಲಕ
ಭಕ್ತಿ ಸುಖದಾಯಕ
ಮುಕ್ತೀಶ ದೀನಬಂಧು
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ
ಸತ್ಯವತಿ ಸುತನೇ ಕಾಯೋ ಕೃಷ್ಣಾ ಕೃಷ್ಣಾ||ಭಕ್ತ||
ಆನಂದ ತೀರ್ಥಮುನಿಯ ದ್ಯಾನಿಪರ ಸಂಘ
ಆನಂದದಲಿ ನಿಲ್ಲಿಸೋ ಕೃಷ್ಣಾ ಕೃಷ್ಣಾ
ದೀನ ಗಣ ಮಂದಾರ ನೀನೆಂದು ನಂಬಿದೆನೋ
ಸಾನುರಾಗದಿ ಕಾಯೋ ಕೃಷ್ಣಾ ಕೃಷ್ಣಾ || ಭಕ್ತ||
ಕೆಟ್ಟ ಜನರ ಸಂಘ ಇಷ್ಟು ದಿನವು ಮಾಡಿ
ನಷ್ಟವಾಗಿ ಪೋದೆನೋ ಕೃಷ್ಣಾ ಕೃಷ್ಣಾ
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ
ಇಷ್ಟಗಳ ಎನಗೆ ಕೊಡಿಸೋ ಕೃಷ್ಣಾ ಕೃಷ್ಣಾ||ಭಕ್ತ||
ವಿಜಯದಾಸರು ಪವಾಡ ಪುರುಷರಾಗಿ ಮೆರೆದ ದಂತಕಥೆಗಳು ಅನೇಕ ಇವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ

“ಸಾಗಿಬಾರಯ್ಯಾ ಭವರೋಗ ವೈದ್ಯ

ಒಮ್ಮೆ ತಿರುಪತಿ ತಿರುಮಲೆಯಲ್ಲಿ ರಥೋತ್ಸವ. ಜನಜಂಗುಳಿ ರಥದ ಮುಂದೆ ಕಿಕ್ಕಿರಿದಿದೆ. ಪೂಜೆ ಪುನಸ್ಕಾರಗಳೆಲ್ಲಾ ನಡೆಯುತ್ತಿದೆ. ಗೋವಿಂದ ನಾಮಸ್ಮರಣೆ ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಂತರ ಭಕ್ತರೆಲ್ಲಾ ಸೇರಿ ರಥವನ್ನೆಳೆಯಲು ಪ್ರಾರಂಭಿಸಿದರು. ಆದರೆ ರಥದ ಚಕ್ರ ಒಂದರ್ಧ ಇಂಚಿನಷ್ಟೂ ಅಲ್ಲಾಡಲಿಲ್ಲ. ಜನಗಳಿಗೆ ಆಶ್ಚರ್ಯ. ತುಂಬಿದ ಜನರೆಲ್ಲಾ ರಥಕ್ಕೆ ಕಟ್ಟಿದ ಹಗ್ಗವನ್ನು ತಮ್ಮ ಶಕ್ತಿ ಮೀರಿ ಎಳೆಯುತ್ತಿದ್ದಾರೆ . ಕೊನೆಗೆ ಆನೆಗಳ ಕೈಯಲ್ಲಿ ಎಳೆಸಿದರೂ ರಥ ಅಲ್ಲಾಡಲಿಲ್ಲ. ಆಗ ಯಾರೋ, “ಅಯ್ಯೋ ವಿಜಯದಾಸರು ಇಲ್ಲಿಲ್ಲ. ಅದಕ್ಕೆ ರಥ ಮುಂದೆ ಚಲಿಸುತ್ತಿಲ್ಲ.” ಎಂದು ಕೂಗಿದರು. ಆಗ ವಿಜಯದಾಸರನ್ನು ಹುಡುಕಿ ಕರೆತರಲು ಕೆಲವರು ಹೋದರಂತೆ. ಅವರನ್ನು ಅಲ್ಲಿ ಇಲ್ಲಿ ಹುಡುಕಿ ಅಂತೂ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಕಂಡರು. ದೇವರ ಮುಂದೆ ಕುಳಿತು ಗೋವಿಂದನ ನಾಮಸ್ಮರಣೆಯಲ್ಲಿ ತಲ್ಲೀನರಾಗಿ ಹೋಗಿದ್ದರು ವಿಜಯದಾಸರು. ಅಲ್ಲಿ ಬಂದ ಜನ ಮೂಕವಿಸ್ಮಿತರಾಗಿ ಅಲ್ಲೇ ನಿಂತರು.

ನಂತರ ಅವರನ್ನು ರಥ ಚಲಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಆಗ ಅವರು ರಥದ ಬಳಿ ಬಂದು “ಸಾಗಿಬಾರಯ್ಯಾ ಭವರೋಗ ವೈದ್ಯ” ಎಂದು ಕೂಗಿ ಕರೆದರಂತೆ. ಆಗ ರಚಿಸಿದ ಅವರ ರಚನೆ ಒಂದು ಹೀಗೆ ಇದೆ.
ಬಾಬಾ ಭಕುತರ ಹೃದಯ ಮಂದಿರ
ಬಾಬಾ ಜಗದೋದ್ಧಾರ
ಬಾಬಾ ವೆಂಕಟಾಚಲವಿಹಾರ
ಬಾಬಾ ಅನೇಕಾವತಾರ ನೀ ರಘುರಾ||ಬಾಬಾ||
ವಿಜಯದಾಸರು ಬೇಡಿದ ಮೇಲೆ ಇನ್ನು ರಥ ನಿಲ್ಲುವುದುಂಟೇ! ಕೂಡಿದ್ದ ಜನರ ಹರ್ಷೋದ್ಗಾರದೊಂದಿಗೆ ರಥ ಚಲಿಸಿಯೇ ಬಿಟ್ಟಿತು. ಹೀಗೆ ಅವರ ಅನೇಕ ಪವಾಡಗಳ ಬಗ್ಗೆ ಕಥೆಗಳು ಇವೆ. ಅವರ ಶಿಷ್ಯರಾದ ಶ್ರೀ ಮೋಹನದಾಸರಿಗೆ ಜೀವದಾನ ಮಾಡಿದ್ದು, ನೀರಡಿಕೆಯಿಂದ ಬಳಲುತ್ತಿದ್ದ ಕತ್ತೆಗೆ ತಮ್ಮ ಸ್ನಾನಕ್ಕೆಂದು ಇಟ್ಟುಕೊಂಡಿದ್ದ ನೀರನ್ನು ಕುಡಿಸಿ ನಂತರ ಚಿಲುಮೆಯಲ್ಲಿ ನೀರು ಬರುವಂತೆ ಮಾಡಿ ಆಹ್ನಿಕಗಳನ್ನು ಪೂರೈಸಿದುದು, ತನ್ನ ಪರಮಾಪ್ತ ಗೆಳೆಯರಾದ ಕೇಶವರಾಯರ ಮಗನನ್ನು ಬದುಕಿಸಿ ಅವರನ್ನು ಪುತ್ರ ಶೋಕದಿಂದ ಪಾರು ಮಾಡಿದುದು, ಹೀಗೆ ಹತ್ತು ಹಲವಾರು.ಸಮಾಜದಿಂದ ಬಹಿಷ್ಕೃತಳಾದ ಶ್ರೀಮಂತ ಮಹಿಳೆಯ ಆತಿಥ್ಯ ಸ್ವೀಕರಿಸಿ, ಆಕೆಯ ಶವ ಸಂಸ್ಕಾರಗಳನ್ನು ತಾನೇ ನಿಂತು ಮಾಡಿದರು. ಇಂತಹ ಅನೇಕ ಬಗೆಗಳ ಜನಸೇವೆಯನ್ನೂ ಮಾಡಿದ್ದಾರೆ.

ಒಟ್ಟಿನಲ್ಲಿ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವಿಜಯದಾಸರ ಕಾಲ ವಿಶೇಷ ಮಹತ್ತ್ವವನ್ನು ಪಡೆದಿದೆ. ಇವರು ತಮ್ಮ ಶಾಸ್ತ್ರ ಗರ್ಭಿತವಾದ ಸುಳಾದಿಗಳಲ್ಲಿ ಸ್ವಧರ್ಮ ನಿಷ್ಠೆಯನ್ನು ತೋರಿಸಿದ್ದಾರೆ. ಇವರ ರಚನೆಗಳಲ್ಲಿ ಮಾನವನ ನಿತ್ಯ ಜೀವನದ ಬಗ್ಗೆ ವಿಶ್ಲೇಷಣೆ ಇದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಾದಿಗಳ ವಸ್ತು ವಿಷಯಗಳ ಬಗ್ಗೆ ಉಲ್ಲೇಖಗಳಿವೆ. ಭಗವಂತನ ಲೀಲಾ ವಿನೋದಗಳ ಬಗ್ಗೆ ವೈವಿಧ್ಯಮಯ ಚಿತ್ರಣಗಳಿವೆ. ಇವರ ಇಬ್ಬರು ಪ್ರಮುಖ ಶಿಷ್ಯರು ಎಂದರೆ ದಾಸಪರಂಪರೆಯನ್ನು ಬೆಳೆಸಿದ ಮೋಹನದಾಸರು ಹಾಗೂ ಗೋಪಾಲದಾಸರು. ಇವರು 1755ರಲ್ಲಿ ದೇಹತ್ಯಾಗ ಮಾಡಿದರು.

ವಿಜಯ ದಾಸರ ಸ್ಮರಣೆ

ಕೂಸಿ ಮಗ ದಾಸಪ್ಪ ಎಂದು ಪ್ರಸಿದ್ಧ. ಬಾಲ್ಯದಿಂದಲೇ ಕಡು ಬಡತನ ಸಿದ್ಧ.ತಾಯಿ, ಮಗ ಸಂಜೆವರೆಗೆ ತಿರಗಿದರೂ ಹೊಟ್ಟೆಗೆ ಹಿಟ್ಟಿಲ್ಲದ ದಿನಗಳು. ಬಾಯ್ದೆರೆದು ಕೇಳಿದರೂ ಕೈಗೊಂದು ಕಾಸಿಲ್ಲ. ದುಡಿದರೂ ಇಲ್ಲ, ದಣಿದರೂ ಇಲ್ಲ.
ಹೊಸ ವಸ್ತ್ರ ಕನಸು. ಹಳೆಯ ಹರಿದ ವಸ್ತ್ರವೇ ಭೂಷಣ. ಹೆಂಡತಿ ಜೊತೆ ಊಟ ದೂರ. ಅವಳೊಬ್ಬಳಿಗೆ ಊಟಕ್ಕೆ ಹಾಕುವದೂ ಕಠಿಣತರ. ಕಾಡುವ ಬಡತನ. ದಾಸಪ್ಪ ಬೇಸತ್ತ. ಮನೆ ಬಿಟ್ಟ. ಊರೂ ಬಿಟ್ಟ.ಗೊತ್ತು ಗುರಿ ಇಲ್ಲದ ಪಯಣ. ನಡೆದಿದ್ದೇ ದಾರಿ, ಮುಟ್ಟಿದ್ದೇ ಊರು.ದಾಸಪ್ಪನಿಗೆ ಗುರಿ ಗೊತ್ತಿರಲಿಕ್ಕಿಲ್ಲ. ಆದರೆ ಈಶಪ್ಪನಿಗೆ ಗೊತ್ತಿತ್ತು. ದೊಡ್ಡ ಯೋಗ್ಯತೆ ದಾಸಪ್ಪನದು.

ಜಗದೀಶಪ್ಪ ತನ್ನ ಸನ್ನಿಧಿ ಕಾಶಿಗೇ ದಾಸಪ್ಪನನ್ನು ಕರೆತಂದ. ದಾಸಪ್ಪನ ಅಧ್ಯಾತ್ಮ ಭಾಗ್ಯದ ಬಾಗಿಲು ತೆರೆಯಿತು. ಕಾಶಿ ವಿಶ್ವೇಶ್ವರನ ಅನುಗ್ರಹ, ಶ್ರೀ ಹರಿ ಬಿಂದುಮಾಧವನ ಪ್ರಸಾದ, ವಿಠ್ಠಲನ ಅಪರೋಕ್ಷ -ಇನ್ನೇನು ಇನ್ನೇನು! ವಿಜಯವಿಠ್ಠಲನ ದರುಶನವಾಯಿತು. ‘ನಿನ್ನ ಕಂಡು ಧನ್ಯನಾದೆ ವಿಠ್ಠಲಾ’ ಎಂದರು. ಲೌಕಿಕದ ಮೇಲೆ ವಿಜಯ ಹೊಂದಿದರು. ವಿಜಯದಾಸರಾದರು. ಮಸ್ತಕದಲ್ಲಿ ಮಧ್ವ ಶಾಸ್ತ್ರ.ಕಂಗಳಲ್ಲಿ ಶ್ರೀ ರಂಗನಾಲಿಗೆ ಮೇಲೆ ಸರಸ್ವತಿ.
ಹೃದಯದಲ್ಲಿ ವಿಠ್ಠಲ. ಅಂತಃಕರಣದಲ್ಲಿ ತುಂಬು ಭಕ್ತಿ.ಕೈಯಲ್ಲಿ ತಂಬೂರಿ. ಕಾಲಲ್ಲಿ ಗೆಜ್ಜೆ. ಡಂಗುರ ಸಾರಿದರು ಹರಿಮಹಾತ್ಮೆ.

ವಿಜಯದಾಸರು ನಡೆದಾಡಿದ್ದೆಲ್ಲ ತೀರ್ಥಯಾತ್ರೆ ಆಯಿತು. ಮಾಡಿದ್ದೆಲ್ಲ ಹರಿಪೂಜೆ. ಮಾತನಾಡಿದ್ದೆಲ್ಲ ಮಾಧವನ ಮಹಿಮೆ. ದೇವರ ನಾಮ. ಶಾಸ್ತ್ರದ ತಾತ್ಪರ್ಯವಾಯಿತು. ನೋಡಿದ್ದೆಲ್ಲ ಹರಿರೂಪ. ಉಂಡಿದ್ದು ಹರಿ ನೈವೇದ್ಯ. ಜೀವನ ಪರಮಾತ್ಮಮಯವಾಯಿತು. ದಾಸರು ಬಂದಲ್ಲೆಲ್ಲ ಬರಗಾಲ ಮಾಯ. ಮಳೆಬೆಳೆ ಸುಭಿಕ್ಷ್ಯ. ಜ್ಞಾನ ಮಯ. ಸುಖಕಾಲ.

ಅವರು ಅಂದದ್ದು ಅಂದಂತೆ ನಡೆಯುತ್ತಿತ್ತು. ನಡೆಯುವದನ್ನು ಮೊದಲೇ ಅನ್ನುತ್ತಿದ್ದರು. ಬೇಡಿ ಬಂದವರಿಗೆ ಕಷ್ಟ ಪರಿಹಾರ. ಬಯಸಿ ಬಂದವರಿಗೆ ಸುಖ ಪ್ರಾಪ್ತಿ. ಎಲ್ಲರಿಗೂ ಅಧ್ಯಾತದ ಉನ್ನತಿ. ನೂರಾರು ಸುಜನ ಶಿಷ್ಯರಾದರು. ಅನೆಕಾನೇಕರು ದಾಸದೀಕ್ಷೆ ಪಡೆದರು. ಹರಿದಾಸ ಸಾಹಿತ್ಯ, ಪಂಥ, ವೈಭವ ಶಿಖರಕ್ಕೇರಿದವು. ವಿಠ್ಠಲನ ಒಲುಮೆಯಾದವನಿಗೆ ಏನು ತಾನೇ ಅಲಭ್ಯ?

ಸುಜನರು ಹಿಂಡುಹಿಂಡಾಗಿ ದಾಸರ ಹಿಂಬಾಲಿ ಸಿದರು. ತಮ್ಮ ತಮ್ಮ ಊರಿಗೆ ಆಹ್ವಾನಿಸಿ ಕರೆದೊಯ್ಯುವರು. ಎಲ್ಲೆಡೆಗೆ ಸನ್ಮಾನ, ಸತ್ಕಾರ ಶಾಲು ಶಕಲಾತಿ. ನೂರಾರು ಸಜ್ಜನರ ಜೊತೆ ಭೂರಿ ಸಹಭೋಜನ. ಅಪಾರ ಸಂಪತ್ತು. ಆ ಭಾರಿ ವೈಭವ ಕಣ್ಣಿಗೇ ಹಬ್ಬ! ದೈವಾನುಗ್ರಹ ದಾಸರಿಗೆ.ಸಂಚರಿಸುತ್ತ ಬಂದರು ಮರಳಿ ತಮ್ಮ ಊರಿಗೆ ಆಗ ಯಾವ ಊರು ದಾಸಪ್ಪನನ್ನು ಹೊರಗೆ ಹಾಕಿತ್ತೋ ಅದೇ ಊರು ಈಗ ವಿಜಯದಾಸರನ್ನು ಭವ್ಯವಾಗಿ ಸ್ವಾಗತಿಸಿತು. ಅದೇ ಬಂಧುಗಳ ಮನೆಗೆ ಬಂದರು ದಾಸರು.

ಮಧ್ಯಾನ್ಹ ಸಹಸ್ರಬ್ರಹ್ಮ ಭೋಜನ. ನೂರೆಂಟು ಭಕ್ಷ್ಯಭೋಜ್ಯಗಳು. ವೈಭವ ತುಂಬಿ ತುಳುಕುತ್ತಿತ್ತು. ಊಟಕ್ಕೆ ಕುಳಿತ ದಾಸರಿಗೆ ಪೂರ್ವದ ಸ್ಮರಣೆ.ಇದೇ ಮನೆಯಲ್ಲಿ. ತಾನು ತನ್ನ ತಾಯಿ. ಹೇಳಿದ ಕೆಲಸ ಮಾಡಿದೆವು. ತುತ್ತಿಗಾಗಿ ತೊತ್ತಾಗಿ ಸಂಜೆವರೆಗೆ ಕಾದೆವು. ಹೊಟ್ಟೆಗೆ ಒಂದು ಸೌಟು ಗಂಜಿ ಸಿಗಲಿಲ್ಲ ಸ್ವಾಮಿ. ಇಂದು ನೋಡು ಈ ಪರಿ ಕಂಡರಿಯದ ವೈಭವ! ಎದುರಿಗೆ ನೋಡುತ್ತಾರೆ -ವಿಜಯವಿಠ್ಠಲ. ತುಂಟ ನಗುಮೊಗ. ಆಗ ಅದನ್ನು ಕೊಟ್ಟವನು ನಾನೇ. ಈಗ ಇದನ್ನು ಇಟ್ಟವನೂ ನಾನೇ ಎನ್ನುವಂತಿತ್ತು. ಬಿಟ್ಟಾರೆಯೇ ದಾಸರು. ಹಾಡಿನಿಂದ ಕಟ್ಟಿ ಹಾಕಿದರು ಹರಿಯನ್ನು! ಭಕ್ತಿ ಭಾವದಿಂದ ಸ್ತುತಿಸಿ ಸಂತಸ ಪಟ್ಟರು. ‘ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ!’ ಹೇ, ದೇವರ ದೇವ ಏನಿದು ನಿನ್ನ ಲೀಲೆ! ವೈಚಿತ್ರ್ಯ. ವೈಭವ! ಇಲ್ಲದ್ದು ಕಂಡಿದ್ದೆ. ಇದ್ದದ್ದು ಕಂಡಿರುವೆ. ಅಂದು -ಹಸಿದ ಹೊಟ್ಟೆ, ಹರಕು ಬಟ್ಟೆ, ಬಾಯಿ ಬಿಟ್ಟು ಬೇಡಿ ಕೆಟ್ಟೆ. ಇಂದು -ಭೂರಿ ಅಶನ ಭಾರೀ ವಸನ. ತುಂಬು ಧನ. ಏನುಂಟು ಏನಿಲ್ಲ ಸ್ವಾಮೀ. ಯಾತರ ಪ್ರಾಪ್ತಿ ಇದು? ಈ ಪರಿ ಪುಣ್ಯ ನನ್ನದುಂಟೇ? ಇಲ್ಲ ಮತ್ತೆ ಅಲ್ಲ.ಬರಿಗಾಲು, ಬರಿಹೊಟ್ಟೆ, ಬರಿ ಮೈ ನನ್ನ ಯೋಗ್ಯತೆ. ತುಂಬಿ ತುಳುಕುವ ಈ ವೈಭವ ನಿನ್ನ ಒಲುಮೆ. ಬಂದು ಮನ್ನಿಸುವ ಜನ ನಿನ್ನದಯ್ಯಾ ಸ್ವಾಮಿ. ನೀ ಕೊಟ್ಟರೆ ಉಂಟು. ಇಲ್ಲದಿರೆ ಇಲ್ಲ. ಸೂತ್ರದ ಬೊಂಬೆ ನಾವು.ಸೂತ್ರಧಾರ ನೀನು. ನಿನ್ನ ಇಚ್ಛೆಯಂತೆಯೇ ಜಗದ ಆಟ. ನಿನ್ನ ಪರಿಯ ಯೋಚಿಸಿ ನೋಡಲು ಸೋಜಿಗವಾಗುತ್ತದೆ. ‘ಸ್ವಾಮಿ, ವಾಚೋ ನಿವರ್ತಂತೆ’ನಿನ್ನ ಹೇಳಲು ಹೋದ ಶಬ್ದಗಳು ಸೋತು ಮರಳಿದವು. ಸರ್ವಶಬ್ದ ವಾಚ್ಯನೂ ಹೌದು, ವಾಚ್ಯಾತೀತನೂ ಹೌದು ಸ್ವಾಮಿ ನೀನು.ಇಂಥ ಜಗತ್ತಿಗೇ ಸೋಜಿಗವಾಗಿರುವ ಸೋಜಿಗ ನಾಮಕ, ಸೋಜಿಗಕಾರಕ ಸೋಜಿಗಮಯ ಪ್ರಭು ನಿನಗೆ ಸಹಸ್ರ ಶಿ ಸಾ ನಮಸ್ಕಾರಗಳು. ನಿನ್ನ ಒಲುಮೆ ಸದಾ ಇರಲಿ ನಮಗೆ.

-ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸಂಸ್ಕೃತಿ ಚಿಂತಕರು, ಬೆಂಗಳೂರು
9739369621 pranavapsg@gmail.com

Related posts

ತುಳುವರ ಧಾರ್ಮಿಕ ಆಚರಣೆಗಳ ಶುಭಮಂಗಳ- ಪತ್ತನಾಜೆ

Upayuktha

ಅಕ್ಷರಲೋಕದ ಮಾತ್ರಿಕ ರವಿ ಬೆಳಗೆರೆ ಇನ್ನಿಲ್ಲವೆಂದರೆ ನಂಬಲಾದೀತೆ..?

Upayuktha

ಕನ್ನಡವಿಲ್ಲದೆ ಕರುನಾಡು ಇರಲು ಸಾಧ್ಯವೇ?

Upayuktha