ಮಾಂದ್ಯತೆಯ ಮುಗ್ಧ ಜನರಂತರಾತ್ಮದಿಂ
ರಕ್ಕಸ ಗುಣದಂತೆ ಅವಿತಿಹುದು
ಕರಿ-ಬಿಳುಪು ತ್ವಚೆಯ ಆಧಾರದಿಂ
ಹೊಡೆದೋಡಿಸೋಣ ರುಧಿರ ಕುದಿಯುತಿಹುದು
ಪಿಡಿಯಿರೊಮ್ಮೆ ಅಸ್ತ್ರಗಳ ಕರದಲಿ
ಜ್ವಾಲೆ ಪಸರಲಿ ನಾಡ ಉತ್ತುಂಗದಲಿ ।
ಕರಿಜನರನು ಸೋಣಗದಂತೆ ಕಾಣ್ವರು
ಬೆವರ ಪನಿಗದು ಬೆಲೆಯೇ ಇಲ್ಲದೆ
ಬಲ್ಲವರು ಬಿಲ್ಲದೊಳಗಡಗಿ ಕುಳಿತು
ಮೆಲ್ಲು ಧ್ವನಿಗಳನಾಚೆ ಹೊರಸೂಸಿ
ಅಧಮರೆಂದು ಶೋಷಿಸುತಿಹರಲ್ಲಾ..
ಇದು ಸತ್ಯ,ಧರ್ಮ,ಸಮಾನತೆಯ ಪಥವೇ..॥
ಶ್ವೇತ ವರ್ಣದವರೇನು ಶಾಶ್ವತವೇ ?
ಜಗ ನಿಯಮದೊಳಗವರೇನು ಪರಮ ಪಾವಿತ್ರರೇ?
ಅರಸರಲ್ಲ ಆ ಸುತರು
ಸಹಜ ಸ್ವರೂಪಿಯೇ ಅವರುಗಳು
ತ್ವಚೆಯಲ್ಲಿ ಅಳೆದಾಗ ದೊರಕುವುದಿಲ್ಲವಯ್ಯಾ
ಅವರ ಒಳ ಮರ್ಮದ ತಿರುಳು ।
ಅಂತರಾತ್ಮನ ತಿಳಿಯುವಂತಾಗಲಿ ಜಗವು
ಶೂನ್ಯವೀ, ಕರಿ ಬಿಳಿ ಬಣ್ಣದ ಒಲವು
ಒಳ ಮನದ ಬಿಳಿ ಭಾವನೆಗೇ ಗೆಲುವು
ಜಗದಾಟದ ಸಂತೆಯಲಿ ಸಾವಿರಾರು ತಿರುವು
ಹೊಮ್ಮಲಿ ಅಮಲು ನಶಿಸಲು ಛಲವು
ಇನ್ನಾದರೂ ಲಭಿಸಲಿ ಸಮಾನತೆಯ ಗೆಲುವು ॥
~ ಸಮ್ಯಕ್ತ್ ಜೈನ್