ಜೀವನ-ದರ್ಶನ

ಪತ್ರಂ ಪುಷ್ಪಂ ಫಲಂ ತೋಯಂ… ಕೃಷ್ಣನ ಒಲಿಸಲು ಇಷ್ಟೇ ಸಾಕು…

(ಚಿತ್ರಕೃಪೆ: ಭಾಗವತ.ಕಥಾ)

ಕೃಷ್ಣನನ್ನು ಒಲಿಸಿಕೊಳ್ಳಲು ಬಹಳ ಸುಲಭ. ಒಂದು ಎಲೆ, ಒಂದು ಹೂ, ಒಂದು ಹಣ್ಣು ಅಥವಾ ಒಂದು ಹನಿ ನೀರೂ ಸಾಕಾಗುತ್ತದೆ. ನಿಸ್ವಾರ್ಥ, ನಿಷ್ಕಲ್ಮಶ, ನಿಸ್ಸಂಶಯದ ಭಕ್ತಿ ಒಂದಿದ್ದರೆ ಶ್ರೀಕೃಷ್ಣ ತಾನೇ ತಾನಾಗಿ ಒಲಿಯುತ್ತಾನೆ ಮಾತ್ರವಲ್ಲ ತನ್ನನ್ನೇ ನಮಗೆ ಅರ್ಪಿಸಿಬಿಡುತ್ತಾನೆ. ಇಷ್ಟು ಸುಲಭದಲ್ಲಿ ಜಗತ್ತಿನಲ್ಲಿ ಒಲಿಯುವ ಒಂದು ಸರ್ವಶ್ರೇಷ್ಠವಾದ ಶಕ್ತಿ ಇದ್ದರೆ ಅದು ಶ್ರೀಕೃಷ್ಣ ತತ್ವವೆಂಬ ಶಕ್ತಿ ಮಾತ್ರ. ಹಾಗಾದರೆ ನಾವೆಲ್ಲರೂ ಕೃಷ್ಣಾನುಗ್ರಹಕ್ಕೆ ಪಾತ್ರರಾಗಿರಬೇಕಿತ್ತಲ್ಲ..! ಆಗಿದ್ದೇವೆಯೇ..? ಖಂಡಿತ ಉತ್ತರ ತೃಪ್ತಿದಾಯಕವಲ್ಲ. ಯಾಕೆಂದರೆ ಕೃಷ್ಣಾನುಗ್ರಹ ದೊರೆತರೆ ಅಥವಾ ಕೃಷ್ಣ ತತ್ವಕ್ಕೆ ಒಪ್ಪಿದರೆ ಇಂದು ಜಗತ್ತು ರಾಮರಾಜ್ಯವೇ ಆಗಬೇಕಿತ್ತು. ನಾವು ಎಡವಿದ್ದೇ ಇಲ್ಲಿ. ಯಾವುದು ಸುಲಭವೋ, ಸರಳವೋ, ಸರ್ವರಿಗೂ ಎಟಕುವುದೋ ಅದನ್ನು ನಾವು ಲಘುವಾಗಿ ಪರಿಗಣಿಸಿದ್ದು ನಮ್ಮ ಇಂದಿನ ಅಧಃಪಾತಕ್ಕೆ ಕಾರಣ.

ಇವತ್ತು ಹೆಚ್ಚಿನ ಕಡೆಗಳಲ್ಲಿ ಪೂಜೆ, ಹವನಗಳೇ ಮುಂತಾದ ದೇವರ ಕೆಲಸಗಳನ್ನು ಬಹು ವಿಜ್ರಂಭಣೆಯಿಂದ ನಡೆಸುತ್ತಾರೆ. ಇದು ದೇವರಿಗೆ ಬೇಡವಾದ ವಿಚಾರ. ದೇವರಿಗೆ ಭಕ್ತಿ ಸಮರ್ಪಣೆ ಆಗಬೇಕೇ ಹೊರತು ನಮ್ಮ ಶಕ್ತಿ ಪ್ರದರ್ಶನ ಆಗಬಾರದು. ಮೂಲ ವಿಚಾರವನ್ನೇ ಬದಿಗೆ ತಳ್ಳಿದಾಗ ಪರಿಣಾಮವೂ ಶೂನ್ಯವೇ ತಾನೆ. ಅದೇ ಕೃಷ್ಣ ಹೇಳಿದ್ದಾನೆ… ನೀನು ಏನನ್ನು ಉಣ್ಣುತ್ತೀಯೋ ಏನನ್ನು ಮಾಡುತ್ತೀಯೋ ಅದನ್ನೇ ನನಗರ್ಪಿಸು. ನನಗಾಗಿ ನೀನೇನೂ ಹೊಸತನವನ್ನು ಮಾಡಬೇಡ ನಿನ್ನ ಊಟ ಸಾತ್ವಿಕವಿರಲಿ, ಮಾತ್ರವಲ್ಲ ಸಾತ್ವಿಕ ರೀತಿಯಲ್ಲಿ ಸಂಪಾದಿಸಿದ್ದೇ ಇರಲಿ. ಹಾಗೂ ದೇವರಿಗೆ ಅರ್ಪಿತವೆಂಬ ಭಾವದ ಜತೆಗೆ ಶುಚಿಯಾಗಿ ರುಚಿಯಾಗಿರಲಿ. ಅದು ನನಗೆ ಇಷ್ಟ.

ನೀನು ಯಾವ ವೃತ್ತಿಯಲ್ಲಿದ್ದಿಯೋ ಅದನ್ನು ಪ್ರಾಮಾಣಿಕತೆಯಿಂದ ಮಾಡು ಅದುವೇ ನನ್ನ ಪೂಜೆ. ನನಗಾಗಿ ಅನ್ಯ ಪೂಜೆ, ನೈವೇದ್ಯ ಬೇಕಾಗಿಲ್ಲ. ನೀನು ಸ್ವೀಕರಿಸಿದ್ದನ್ನೇ ನನಗೆ ಅರ್ಪಿಸು ಮತ್ತು ನೀನು ಸ್ವೀಕರಿಸಬೇಕಾದ್ದನ್ನೇ ಸ್ವೀಕರಿಸು. ಆಹಾ ಎಷ್ಟೊಂದು ಸರಳ, ಎಷ್ಟೊಂದು ವೈಜ್ಞಾನಿಕ, ಎಷ್ಟೊಂದು ಉದಾತ್ತ ಚಿಂತನೆ..!! ಭೇಷ್ ಕೃಷ್ಣ ನಿನ್ನನ್ನು ತಿಳಿಯುವುದೆಂದರೆ, ನಮ್ಮನ್ನು ನಾವು ಎತ್ತರಿಸಿಕೊಂಡಂತೆ. ನಿನ್ನನ್ನು ಅನುಸರಿಸುವುದೆಂದರೆ, ನಮ್ಮನ್ನು ನಾವು ತಿದ್ದಿಕೊಂಡಂತೆ. ನಿನ್ನನ್ನು ಉಪೇಕ್ಷಿಸುವುದೆಂದರೆ ನಮ್ಮನ್ನು ನಾವೇ ಅಧಃಪಾತಕ್ಕೆ ತಳ್ಳಿಕೊಂಡಂತೆ.

ಕೇಳಬಹುದು ಕೆಲವರಾದರೂ ಒಂದು ಪತ್ರ ಒಂದು ಫಲವನ್ನು ನೀಡಿದರಷ್ಟೇ ಸಾಕೆಂದಾದರೆ ನಾವು ದಿನಾಲೂ ನೀಡಬಹುದಲ್ಲ..! ಆದರೆ ಇದು ನಾವು ಮೊದಲು ನಮಗೆ ಅನ್ವಯಿಸಿಕೊಳ್ಳಬೇಕು. ನಮಗೆ ದಿನಕ್ಕೊಂದು ಹಣ್ಣು ಸಾಕೆಂದಾದರೆ ಅದು ಕೃಷ್ಣನಿಗೂ ಸಾಕು. ನಮಗೆ ಹೊಟ್ಟೆ ತುಂಬ ಬೇಕು ಕೃಷ್ಣನಿಗೆ ಒಂದು ಹಣ್ಣು ಎಂದಾದರೆ ಆತನ ಹಸಿವು ಬಹಳ ದೊಡ್ಡದು. ನಮ್ಮ ತೃಪ್ತಿಯೇ ಇಲ್ಲಿ ಮುಖ್ಯ ಹೊರತು ಕೃಷ್ಣನ ವ್ಯಾಪ್ತಿ ನಮಗೆ ಎಟುಕುವಂಥದ್ದಲ್ಲ. ನಾವಿಂದು ಹೊಂಡ ತೋಡುತ್ತೇವೆ. ಗೊಬ್ಬರ ಹಾಕುತ್ತೇವೆ. ನೀರುಣಿಸುತ್ತೇವೆ. ಭಾರಿ ಬೇಲಿ ಹಾಕುತ್ತೇವೆ. ಕಾವಲಿಗೆ ಕಾವಲುಗಾರನನ್ನು ನೇಮಿಸುತ್ತೇವೆ. ಆದರೆ ಭಕ್ತಿಯೆಂಬ ಬೀಜವನ್ನು ಬಿತ್ತುವುದೇ ಇಲ್ಲ. ಬೀಜವೇ ಇಲ್ಲದ ಮೇಲೆ ಫಲವಾದರೂ ಎಲ್ಲಿಂದ.? ಇಲ್ಲಿ ಬೀಜ ಮುಖ್ಯವೇ ಹೊರತು ಆಡಂಬರವಲ್ಲ. ಎಷ್ಟೇ ಆಡಂಬರಗಳಿದ್ದರೂ ಬೀಜ ಬಿತ್ತದ ಹೊರತು ಶೂನ್ಯ. ಅಂತೆಯೇ ಯಾವುದೇ ಆಡಂಬರವಿಲ್ಲದೆಯೂ ಬೀಜ ಬಿತ್ತಿದರೂ ಫಲ ಸಿಗುವ ಸಾಧ್ಯತೆಗಳೇ ಹೆಚ್ಚಾಗಿರುವುದು, ಆಗ ನಮ್ಮ ಬಾಳು ಧನ್ಯ.

ಕೃಷ್ಣ ಆ ದಿನಗಳಲ್ಲಿ ಕೂಡ ಜಾತಿ ಅಂತಸ್ತನ್ನು ಕಡೆಗಣಿಸಿ ಸಾತ್ವಿಕ ಚಿಂತನೆ ಎಂಬ ಸಿರಿತನ ಇರುವಂಥವರನ್ನೇ ನೆಚ್ಚಿಕೊಂಡು ಅಂಥವರೊಡನೆಯೇ ಇರುತ್ತಿದ್ದನಲ್ಲವೇ. ಅವನಿಗೆ ನಮ್ಮ ಅಗತ್ಯಕ್ಕಿಂತ ನಮಗೆ ಆತನ ಅಗತ್ಯ ಕ್ಷಣಕ್ಷಣಕ್ಕೂ ಇದೆ. ಆದ್ದರಿಂದ ಆಡಂಬರವಿರದ ನಿಸ್ವಾರ್ಥ ಪ್ರೀತಿಯಿಂದ ಕೃಷ್ಣನನ್ನು ಆರಾಧಿಸಿ ನಮ್ಮ ಬಾಳನ್ನು ಕೃಷ್ಣಾರ್ಪಣ ಮಾಡೋಣ…

ಕೃಷ್ಣಂ ವಂದೇ ಜಗದ್ಗುರುಂ….🙏🙏
***********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬದುಕು-ಬವಣೆ: ತೊಂಭತ್ತೆರಡರ ಆ ಒಂದು ದಿನ…

Upayuktha

ಬಾಳಿಗೆ ಬೆಳಕು: ಯಥೇಚ್ಛಸಿ ತಥಾ ಕುರು… ಅಂದರೆ ಏನು ಬೇಕಾದರೂ ಮಾಡು ಎಂದಲ್ಲ…

Upayuktha

ಬಾಳೋಣ ಕೊನೆಯವರೆಗೂ… ಪಯಣವಿರಲಿ ಅಂತಿಮ ನಿಲುಗಡೆಯವರೆಗೂ

Upayuktha