ಆರೋಗ್ಯ ಲೇಖನಗಳು

ಗೊರಕೆ ಹೊಡೆಯೋದ್ಯಾಕೆ…? ನಿಲ್ಸೋದು ಹೇಗೆ…?

ಉಸಿರಾಡುವುದು ಒಂದು ಜೈವಿಕವಾದ ಪ್ರಕ್ರಿಯೆಯಾಗಿದ್ದು, ಇದು ಜೀವಂತಿಕೆಯ ಲಕ್ಷಣವಾಗಿರುತ್ತದೆ. ನಾವು ನಿದ್ರಾವಾಸ್ಥೆಯಲ್ಲಿರುವಾಗಲೂ ನಮ್ಮ ಮೆದುಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಆಗುತ್ತಿರುತ್ತದೆ. ಶ್ವಾಸೋಚ್ಛಾಸ ಎನ್ನುವುದು ನಿರಂತವಾದ ಒಂದು ದೇಹದ ಸ್ಥಿತಿಯಾಗಿರುತ್ತದೆ. ಮೂಗಿನ ಹೊರಳೆಗಳ ಮುಖಾಂತರ ದೇಹದ ಒಳಸೇರುವ ಗಾಳಿ ಬಾಯಿ, ಗಾಳಿ ಕೊಳವೆ ಮುಖಾಂತರ ಸಾಗಿ ಶ್ವಾಸಕೋಶದೊಳಗಿನ ಗಾಳಿ ಚೀಲಗಳಿಗೆ ತಲುಪುತ್ತದೆ. ಅಲ್ಲಿಂದ ದೇಹದ ರಕ್ತನಾಳಗಳಿಗೆ ಆಮ್ಲಜನಕ ಪೂರೈಕೆಯಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಗಾಳಿಯ ಚಲನೆ ಯಾವುದೇ ರೀತಿಯ ಶಬ್ದವನ್ನು ಮಾಡದು. ಯಾಕೆಂದರೆ ವ್ಯಕ್ತಿ ಎಚ್ಚರದಲ್ಲಿರುವಾಗ ಈ ರೀತಿಯ ಗಾಳಿಯ ಚಲನೆಗೆ ತೊಂದರೆಗಳು ಉಂಟಾಗುವುದಿಲ್ಲ. ಆದರೆ ನಾವು ಮಲಗಿದಾಗ ನಮ್ಮ ಅಂಗಳು, ಗಂಟಲಿನ ಒಳಗಿನ ಸ್ನಾಯಖಂಡಗಳು ಮತ್ತು ಗಾಳಿ ಕೊಳವೆಗಳ ಸುತ್ತಲಿನ ಸ್ನಾಯಖಂಡಗಳು ಕೊಂಚ ಸಡಿಲಗೊಂಡು, ಕುಗ್ಗಿಕೊಳ್ಳುತ್ತದೆ. ಹೀಗಾದಾಗ ಶ್ವಾಸ ಮಾರ್ಗ ಪುಟ್ಟದಾಗುತ್ತದೆ. ಹೀಗಾದಾಗ ಗಾಳಿಯ ಸರಾಗ ಚಲನೆಗೆ ಅಡ್ಡಿಯಾಗಿ ಉಸಿರಾಡುವಾಗ ಶಬ್ದ ಉಂಟಾಗುತ್ತದೆ. ಈ ಶಬ್ದವನ್ನೇ ಗೊರಕೆ ಎನ್ನುತ್ತಾರೆ. ಶ್ವಾಸನಾಳದ ಅಡ್ಡಿಯ ತೀವ್ರತೆಯ ಪ್ರಮಾಣಕ್ಕನುಗುಣವಾಗಿ ಗೊರಕೆಯ ತೀವ್ರತೆಯೂ ಜಾಸ್ತಿಯಾಗುತ್ತದೆ.

ಗೊರಕೆ ಎಂಬ ನರಕ: ಗೊರಕೆ ಎನ್ನುವುದು ಬಹಳ ಸಿಲ್ಲಿ ಅಥವಾ ಪುಟ್ಟ ಸಮಸ್ಯೆ ಎಂದು ಮೂಗುಮುರಿಯುವ ಸಂಗತಿಯಂತೂ ಅಲ್ಲವೇ ಅಲ್ಲ. ಯಾಕೆಂದರೆ ಸಣ್ಣ ಗೊರಕೆ ನವದಂಪತಿಗಳ ಸುಖದಾಂಪತ್ಯಕ್ಕೆ ಹುಳಿಹಿಂಡಿ ವಿಚ್ಛೇಧನದಲ್ಲಿ ದುಖ್ಯಾಂತವಾದ ಎಷ್ಟೋ ನಿದರ್ಶನಗಳೂ ನಮ್ಮ ಮುಂದಿದೆ. ಗೊರಕೆಯ ನರಕಯಾತನೆಯನ್ನು ಅನುಭವಿಸಿದವರೂ ಮಾತ್ರ, ಈ ಸಮಸ್ಯೆಯ ತೀವ್ರತೆಯನ್ನು ಅಂದಾಜಿಸಬಹುದು. ಯಾವಾಗಲೊಮ್ಮೆ ಶೀತ ನೆಗಡಿ, ಮೂಗು ಕಟ್ಟಿಕೊಂಡಾಗ ಗೊರಕೆ ಬಂದಲ್ಲಿ ಅದನ್ನೂ ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಳ್ಳಬೇಕಾಗಿಲ್ಲ.

ಆದರೆ ಇದೇ ಗೊರಕೆ ನಿರಂತರವಾದಲ್ಲಿ ಮನೆಯಲ್ಲಿನ ನಾಲ್ಕು ಕೋಣೆಗಳ ನಡುವೆ, ಗಂಡಹೆಂಡಿರ ಸುಖದಾಂಪತ್ಯಕ್ಕೆ ಗೊರಕೆ ಬಿರುಕು ಮೂಡಿಸಿದಲ್ಲಿ ಆಶ್ಚರ್ಯವೇನಲ್ಲ. ಗೊರಕೆ ಸಮಸ್ಯೆ ಯಾರಿಗಾದರೂ ಬರಬಹುದು. ಆದರೆ ಸ್ಥೂಲಕಾಯದವರಲ್ಲಿ ಗೊರಕೆ ಸಾಧ್ಯತೆ ಜಾಸ್ತಿಯಿರುತ್ತದೆ ಮತ್ತು ಸಾಮಾನ್ಯವಾಗಿ ಸ್ತ್ರೀಯರಿಗಿಂತ ಪುರುಷರಲ್ಲಿ ಗೊರಕೆ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ವಯಸ್ಸಾದಂತೆಲ್ಲಾ ಗೊರಕೆಯ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತದೆ. ವಯಸ್ಸಾದಂತೆ ಸ್ನಾಯಗಳು ಸಡಿಲಗೊಳ್ಳುವುದೇ ಇದಕ್ಕೆ ಕಾರಣವಿರಬಹುದು. ಹಿರಿಯರಲ್ಲಿ ಸುಮಾರು 50 ಶೇಕಡಾ ಮಂದಿ ಗೊರಕೆ ಹೊಡೆಯುತ್ತಾರೆ ಎಂದೂ ಸಂಶೋಧನೆಗಳಿಂದ ತಿಳಿದುಬಂದಿದೆ.

ಕಂಡು ಹಿಡಿಯುವುದು ಹೇಗೆ?
ನಿಮ್ಮ ದೇಹದ ಸ್ಥಿತಿ, ಮಾನಸಿಕ ಸ್ಥಿತಿ, ಕೌಟುಂಬಿಕ ಹಿನ್ನಲೆ, ವಯಸ್ಸು, ಆಹಾರ ಪದ್ಧತಿ, ಜೀವನಶೈಲಿ ಇವೆಲ್ಲವನ್ನೂ ಕೂಲಂಕುಷವಾಗಿ ನಿಮ್ಮ ಕುಟುಂಬ ವೈದ್ಯರ ಅಭ್ಯಸಿಸುತ್ತಾರೆ. ನಿಮ್ಮ ಗೊರಕÉಗೆ ಕಾರಣವಾದ ನಿಮ್ಮ ದೇಹದ ಸ್ಥೂಲಕಾಯ, ಮಾನಸಿಕ ದುಗುಡ, ಕೌಟುಂಬಿಕ ಕಲಹ, ಇಳಿ ವಯಸ್ಸು, ಮದ್ಯಪಾನ, ಇತ್ಯಾದಿಗಳಿಗೂ ಪರಿಹಾರ ನೀಡಲು ಸೂಕ್ತ ಸಲಹೆ ನೀಡುತ್ತಾರೆ. ಗೊರಕೆಯ ತೀವ್ರತೆ ಮತ್ತು ರೋಗದ ಲಕ್ಷಣಗಳನ್ನೂ ಹೊಂದಿಕೊಂಡು ನಿಮ್ಮ ದೇಹದ ಮತ್ತು ಮೆದುಳಿನ ಮೇಲಾಗುವ ಪರಿಣಾಮಗಳನ್ನು ತಿಳಿಯಲು ಸ್ಲೀಪ್ ಸ್ಟಡಿ ಅಥವಾ ಪಾಲಿಸೋಮ್ನಗ್ರ್ರಾಫಿ ಎಂಬ ಪರೀಕ್ಷೆಗೆ ಒಳಪಡಿಸುತ್ತಾರೆ. ಈ ಪರೀಕ್ಷೆಯಲ್ಲೂ ಹಲವು ಬಗೆಯ ಉಪಕರಣಗಳನ್ನು ದೇಹಕ್ಕೆ ಜೋಡಿಸಿ, ರಾತ್ರಿ ಇಡೀ ನಿಮ್ಮ ನಿದ್ರೆಯ ಏರಿಳಿತ ಮತ್ತು ವಿಧಾನಗಳನ್ನು ನಮೂದಿಸುತ್ತಾರೆ. ನಿದ್ರಾವಸ್ಥೆಯ ಸಮಯದಲ್ಲಿ ಮೆದುಳಿನಲ್ಲಿ ಉಂಟಾಗುವ ತರಂಗಗಳ ಏರಿಳಿಕೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣದ ಏರಿಳಿತ, ಹೃದಯದ ಬಡಿತದ ವೇಗ, ಉಸಿರಾಟದ ವೇಗ, ನಿದ್ರೆಯ ಹಂತಗಳು ಅಥವಾ ಘಟನೆಗಳು ಇತ್ಯಾದಿಗಳನ್ನೆಲ್ಲಾ ಸಂಪೂರ್ಣವಾಗಿ ದಾಖಲಾತಿ ಮಾಡಲಾಗುತ್ತದೆ. ಈ ಮೂಲಕ ಶ್ವಾಸನಾಳದಲ್ಲಿ ಉಂಟಾಗುವ ಅಡಚಣೆಯ ಪ್ರಮಾಣವನ್ನು ಕಂಡುಹಿಡಿದು, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತೆ. ‘ಗೊರಕೆ’ ಎನ್ನುವುದು ಪುಟ್ಟ ಸಮಸ್ಯೆಯಾದರೂ ನಿರ್ಲಕ್ಷ್ಯ ಮಾಡಿದಲ್ಲಿ ಈ ಪುಟ್ಟ ಸಮಸ್ಯೆಯೇ ಬ್ರಹಧಾಕಾರವಾಗಿ ಬೆಳೆದು ನಿಂತು ಹತ್ತು ಹಲವು ಮಾನಸಿಕ ದೈಹಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ನಾಂದಿ ಹಾಡುವ ಎಲ್ಲ ಸಾಧ್ಯತೆಗಳೂ ಇದೆ. ಈ ಕಾರಣದಿಂದಲೇ ಗೊರಕೆಯನ್ನು ಅತ್ಯಂತ ಗೌರವದಿಂದ ಕಂಡು, ಸೂಕ್ತ ಚಿಕಿತ್ಸೆ ಸಕಾಲದಲ್ಲಿ ತೆಗೆದುಕೊಳ್ಳುವುದು ಸೂಕ್ತ.

ಚಿಕಿತ್ಸೆ ಹೇಗೆ?
ಗೊರಕೆಗೆ ಒಂದು ನಿದಿಷ್ರ್ಟವಾದ ಚಿಕಿತ್ಸೆ ಇಲ್ಲದಿದ್ದರೂ, ಯಾವ ಕಾರಣಕ್ಕಾಗಿ ಗೊರಕೆ ಉಂಟಾಗುತ್ತದೆ ಎಂಬುದನ್ನು ಅರಿತು ಸೂಕ್ತ ಚಿಕಿತ್ಸೆ ನೀಡತಕ್ಕದ್ದು. ಹೆಚ್ಚಿನ ಎಲ್ಲಾ ಚಿಕಿತ್ಸೆಗಳೂ ಶ್ವಾಸೋಚ್ಛಾಸದ ಪ್ರಕ್ರಿಯೆಗೆ ಪೂರಕವಾಗುವಂತೆ ಮಾಡುವ ಚಿಕಿತ್ಸೆಯನ್ನೂ ಒಳಗೊಂಡಿದೆ. ಯಾವುದೇ ಔಷಧಿಯನ್ನು ನೀಡಿ ಈ ಗೊರಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಗೊರಕೆಗೆ ಕಾರಣವಾದ ಅಂಶಗಳನ್ನು ಸರಿಪಡಿಸಿ ಗೊರಕೆಯ ತೀವ್ರತೆಯನ್ನು ಕಡಮೆ ಮಾಡಲಾಗುತ್ತದೆ.
1. ಮೂಗಿನ ಒಳಗೆ ಸರಾಗ ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಎಲ್ಲಾ ದುರ್ಮಾಂಸಗಳು, ಅಥವಾ ಮೂಳೆಯ ವೈಪರೀತ್ಯಗಳನ್ನು ಶಸ್ತ್ರ ಚಿಕಿತ್ಸೆ ಮುಖಾಂತರ ಸರಿ ಪಡಿಸಲಾಗುತ್ತದೆ. ಅಲರ್ಜಿಯ ಕಾರಣದಿಂದ ಮೂಗಿನ ಒಳಗಿನ ಪದರದಲ್ಲಿ ಏರುಪೇರಾಗಿದ್ದಲ್ಲಿ ಔಷಧಿ ನೀಡಿ ಸರಿಪಡಿಸಲಾಗುತ್ತದೆ.
2. ಜೀವನ ಶೈಲಿಯ ಬದಲಾವಣೆ, ಗೊರಕೆ ಚಿಕಿತ್ಸೆಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ದೇಹದ ತೂಕವನ್ನು ಇಳಿಸುವುದು, ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸುವುದು ಮುಂತಾದವುಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಅತಿಯಾದ ಧೂಮಪಾನದಿಂದ ಗಂಟಲಿನ ಸ್ನಾಯಗಳು ಸಡಿಲಕೊಂಡು ಗಾಳಿಯ ಸರಾಗ ಚಲನೆಗೆ ಅಡ್ಡಿ ಮಾಡುತ್ತದೆ. ಇದೇ ರೀತಿ ಮದ್ಯಪಾನ ಕೂಡ ಗಂಟಲಿನ ಸ್ನಾಯಗಳನ್ನು ದುರ್ಬಲವಾಗಿಸುತ್ತದೆ. ರಾತ್ರಿ ಹೊತ್ತು ಮಲಗುವಾಗ ಅತಿಯಾದ ನಿದ್ರೆ ಮಾತ್ರ ಸೇವನೆ ಅಥವಾ ದೇಹದ ಸ್ನಾಯಗಳನ್ನು ದುರ್ಬಲಗೊಳಿಸುವ ಔಷಧಿಗಳನ್ನು ಹೆಚ್ಚಾಗಿ ತ್ಯಜಿಸತಕ್ಕದ್ದು. ಬೋರಲಾಗಿ ತಲೆ ಮೇಲುಮುಖವಾಗಿ ಮಲಗುವುದರಿಂದ ನಾಲಿಗೆಯ ಹಿಂಭಾಗಕ್ಕೆ ಚಲಿಸಿ ಗಂಟಲಿನ ಮೇಲೆ ಒತ್ತಡ ಹಾಕಿ ಗಾಳಿಯ ಚಲನೆಗೆ ಅಡ್ಡಿ ಮಾಡುತ್ತದೆ. ಸಾಧ್ಯವಾದಷ್ಟು ಎಡ ಅಥವಾ ಬಲಭಾಗದಲ್ಲಿ ಹೊರಳಿ ಮಲಗುವುದನ್ನು ರೂಢಿ ಮಾಡಬೇಕು. ರಾತ್ರಿ ಹೊತ್ತು ಅತಿಯಾಗಿ ಆಹಾರ ಸೇವಿಸಬಾರದು. ಹೀಗೆ ಮಾಡಿದ್ದಲ್ಲಿ ಗೊರಕೆಯ ತೀವ್ರತೆ ಹೆಚ್ಚಾಗುತ್ತದೆ.
3. ಸರಾಗವಾದ ಗಾಳಿಯ ಚಲನೆ ಪೂರಕವಾಗುವಂತೆ ಮಾಡುವ ಮೂಗಿನೊಳಗೆ ಸಿಂಪಡಿಸುವ ಔಷಧಿಗಳು ಲಭ್ಯವಿದೆ. ಅದೇ ರೀತಿ ನಾಲಗೆ ಹಿಂಭಾಗಕ್ಕೆ ಜೋತು ಬೀಳದಂತೆ ತಡೆಯುವ ಸಾಧನಗಳೂ ಮಾರುಕಟ್ಟೆಯಲ್ಲಿ ವೈದ್ಯರ ಸೂಚನೆಯ ಮೇರೆಗೆ ಸಿಗುತ್ತದೆ. ಅದೇ ರೀತಿ ಗೊರಕೆ ತೀವ್ರತೆ ಕಡಮೆ ಮಾಡುವ ದಿಂಬುಗಳು, ಬಟ್ಟೆಗಳೂ ಲಭ್ಯವಿದೆ. ಆದರೆ ಅವುಗಳ ದೀರ್ಘಕಾಲಿಕ ಪರಿಣಾಮ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತದೆ. ಆ ಬಳಿಕವಷ್ಟೇ ಇವುಗಳ ಧನಾತ್ಮಕ ಪರಿಣಾಮ ಬಗ್ಗೆ ಫಲಿತಾಂಶ ಹೊರಬಹುದು. ‘ಗೊರಕೆ ದಿಂಬುಗಳು’ ವಿಶೇಷವಾಗಿ ವಿನ್ಯಸಗೊಳಿಸಲ್ಪಟ್ಟಿದ್ದು, ಕುತ್ತಿಗೆಯ ಭಾಗಕ್ಕೆ ಹೆಚ್ಚು ಬಲ ನೀಡುತ್ತದೆ. ಇದರಿಂದ ಕುತ್ತಿಗೆ ಹಿಂಭಾಗಕ್ಕೆ ಬಾಗುವಂತೆ ಮಾಡಿ, ಕೆಳಗಿನ ದವಡೆ ಮತ್ತು ನಾಲಗೆ ಮುಂಭಾಗಕ್ಕೆ ಬಾಗುವಂತೆ ಮಾಡುತ್ತದೆ ಮತ್ತು ಆ ಮೂಲಕ ಸರಾಗವಾಗಿ ಗಾಳಿ ಚಲಿಸುವಂತೆ ಮಾಡುತ್ತದೆ. ಅದೇ ರೀತಿ ದಂತ ವೈದ್ಯರು ಕೆಳಗಿನ ದವಡೆಯ ಹಲ್ಲಿನ ಅಳತೆಯನ್ನು ತೆಗೆದು ವಿಶೇಷವಾಗಿ ವಿನ್ಯಾಸ ಮಾಡಿದ ‘ಪರಿಕರ’ವನ್ನು ಬಾಯಿಗೆ ಜೋಡಿಸುತ್ತಾರೆ. ಹೀಗೆ ಮಾಡಿದಾಗ ಕೆಳಗಿನ ದವಡೆ ಮುಂಭಾಗಕ್ಕೆ ಎಳೆಯಲ್ಪಟ್ಟು ಗಂಟಲಿನ ಭಾಗದಲ್ಲಿ ಗಾಳಿಯ ಚಲನೆಗೆ ಸೂಕ್ತವಾದ ಮಾರ್ಗವನ್ನು ನಿರ್ಮಿಸುತ್ತದೆ.
4. ಶಸ್ತ್ರಚಿಕಿತ್ಸೆ: ಅತಿಯಾದ ಗೊರಕೆ ಉಂಟಾಗಿ, ಉಸಿರಾಟದ ತೊಂದರೆ ಇದ್ದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯ. ಈ ಹಂತದಲ್ಲಿ ಕೆಳಗಿನ ದವಡೆಯನ್ನು ಸರ್ಜರಿ ಮುಖಾಂತರ ಮುಂಭಾಗದಲ್ಲಿ ಬರುವಂತೆ ಮಾಡಿ ಶ್ವಾಸಮಾರ್ಗದ ಪರಧಿಯನ್ನು ಹೆಚ್ಚಿಸಲಾಗುತ್ತದೆ. ಕೆಲವೊಮ್ಮೆ ಗಂಟಲಿನ ಒಳಭಾಗದ ಸಡಿಲಗೊಂಡ ಸ್ನಾಯಗಳನ್ನು ಶಸ್ತ್ರ ಚಿಕಿತ್ಸೆ ಮುಖಾಂತರ ಬಿಗಿಗೊಳಿಸಲಾಗುತ್ತದೆ. ಹೀಗೆ ಮಾಡಿದಾಗ ಶ್ವಾಸ ಮಾರ್ಗದ ಸುತ್ತಳತೆ ಜಾಸ್ತಿಯಾಗಿ, ಗಾಳಿಯ ಸರಾಗ ಚಲನೆಯಾಗಿ ಗೊರಕೆಯ ತೀವ್ರತೆ ಕಡಮೆಯಾಗುತ್ತದೆ.

ತಡೆಗಟ್ಟುವುದು ಹೇಗೆ?:
1. ದೇಹದ ತೂಕ ನಿಯಂತ್ರಣ:- ಸ್ಥೂಲಕಾಯದವರಲ್ಲಿ ಕತ್ತಿನ ಸುತ್ತಲೂ ಕೊಬ್ಬು ಶೇಖರಣೆಯಾಗುವ ಎಲ್ಲಾ ಸಾದ್ಯತೆಯೂ ಇದೆ. ಹೀಗಾದಲ್ಲಿ ಕುತ್ತಿಗೆಯ ಸ್ನಾಯಗಳ ಮೇಲೆ ವಿಪರೀತ ಒತ್ತಡ ಬಿದ್ದು, ‘ಸರಾಗ ಗಾಳಿ’ ಚಲನೆಗೆ ತೊಂದರೆಯಾಗಿ ‘ಗೊರಕೆ’ ಬರುವ ಸಾಧ್ಯತೆ ಇದೆ. ಹಿತಮಿತ ಆಹಾರ, ನಿರಂತರ ವ್ಯಾಯಾಮ ಮಾಡಿ ತೂಕವನ್ನು ನಿಯಂತ್ರಿಸಿದಲ್ಲಿ ಗೊರಕೆ ಕಡಮೆಯಾಗಬಹುದು.
2. ಜೀವನಶೈಲಿ ಬದಲಾವಣೆ: ವಿಪರೀತ ಮದ್ಯಪಾನ ಮಾಡಬಾರದು. ಮದ್ಯಪಾನಿಗಳಲ್ಲಿ ಗೊರಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಮದ್ಯಪಾನಿಗಳಲ್ಲಿ ಸ್ನಾಯಗಳ ಮೇಲಿನ ನಿಯಂತ್ರಣ ಹೆಚ್ಚು ಇರುವುದಿಲ್ಲ. ಮದ್ಯಪಾನದಿಂದ ಕತ್ತಿನ ಸ್ನಾಯಗಳ ಸಡಿಲಕೊಂಡು ಗೊರಕೆಯನ್ನು ಹೆಚ್ಚಾಗಿಸುವುದು. ಧೂಮಪಾನ ಕೂಡಾ ಗಂಟಲಿನ ಒಳಭಾಗದಲ್ಲಿ ಉರಿಯೂತ ಉಂಟು ಮಾಡಿ ಸ್ನಾಯುಗಳನ್ನು ಸಡಿಲಗೊಳಿಸಿ ಗೊರಕೆಗೆ ಕಾರಣವಾಗಬಹುದು. ಧೂಮಪಾನ ವರ್ಜಿಸುವುದರಿಂದ ಗೊರಕೆಯ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರಕುತ್ತದೆ.
3. ಮೂಗಿನಲ್ಲಿನ ಆಂತರಿಕ ವೈಪರೀತ್ಯ: ಮಕ್ಕಳಲ್ಲಿ ಪದೇ ಪದೇ ನೆಗಡಿ, ಶೀತ, ಟಾನ್ಸಿಲ್ ಸಮಸ್ಯೆ ಇದ್ದಲ್ಲಿ ಕಿವಿ, ಗಂಟಲು ತಜ್ಞರಲ್ಲಿ ತೋರಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯತಕ್ಕದ್ದು, ಹಾಗೇ ಬಿಟ್ಟಲ್ಲಿ ಗಾಳಿಯ ಸರಾಗ ಚಲನೆಗೆ ತೊಂದರೆಯಾಗಿ ಮುಂದೆ ಅದೇ ಹವ್ಯಾಸವಾಗಿ ಬದಲಾಗುತ್ತದೆ.
4. ಮಾನಸಿಕ ಖಿನ್ನತೆ: ಹಗಲು ಹೊತ್ತು ನಿದ್ರಿಸುವುದನ್ನು ಕಡಮೆಮಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಮುಂತಾದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಹೆಚ್ಚಿನ ವ್ಯಕ್ತಿಗಳಲ್ಲಿ ಮಾನಸಿಕ ಖಿನ್ನತೆ ಮತ್ತು ಹಗಲು ಹೊತ್ತಿನಲ್ಲಿ ನಿದ್ರೆ, ರಾತ್ರಿ ಗೊರಕೆಗೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.

ಗೊರಕೆ ಬಗ್ಗೆಗಿನ ಮಿಥ್ಯಗಳು
1. ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿದ್ದಾರೆ ಅದಕ್ಕೆ ಹಾಯಾಗಿ ನಿದ್ರಿಸುತ್ತಿದ್ದಾರೆ ಎಂದು ಕೆಲವರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಗೊರಕೆ ಹೊಡೆಯುವುದು ಆರೋಗ್ಯದ ಲಕ್ಷಣವಂತೂ ಅಲ್ಲವೇ ಅಲ್ಲ. ಗೊರಕೆ ಇದ್ದರೆ ಈ ವ್ಯಕ್ತಿ ಸುಖನಿದ್ರೆಯಿಂದ ವಂಚಿತನಾಗಿದ್ದಾನೆ ಎಂದರ್ಥ. ಗಾಳಿಯನ್ನು ಸರಾಗವಾಗಿ ಪ್ರವೇಶಿಸಲು ತೊಂದರೆಯಾಗಿ, ದೇಹಕ್ಕೆ ಅಗತ್ಯವಾದ ಆಮ್ಲಜನಕದ ಪೂರೈಕೆಗೆ ಕಡಿವಾಣ ಹಾಕುತ್ತದೆ. ಬಾಯಿಯೊಳಗಿನ ಅಂಗಾಂಗಗಳು, ಗಾಳಿಯು ಪ್ರವೇಶಕ್ಕೆ ನಿಯಂತ್ರಣ ಹೀರುತ್ತದೆ ಎಂದರ್ಥ. ಹೀಗಾದಾಗ ಹೃದಯದ ಬಡಿತ ಜೋರಾಗಿ, ಹೆಚ್ಚು ಆಮ್ಲಜನಕದ ಸರಬರಾಜು ಆಗುವಂತೆ ಮಾಡುತ್ತದೆ. ಇದರಿಂದಾಗಿ ದೀರ್ಘಕಾಲಿಕ ಮತ್ತು ಅಲ್ಪಕಾಲಿಕ ತೊಂದರೆಗಳು ಉಂಟಾಗಬಹುದು.
2. ಗೊರಕೆ ಹೊಡೆಯುವುದು ಮೂಗು ಕಟ್ಟುವುದರಿಂದ, ಇದು ಅನಾರೋಗ್ಯದ ಸಂಕೇತದಲ್ಲಿ ಎಂದು ಹೆಚ್ಚಿನವರು ತಪ್ಪು ಭಾವನೆ ಹೊಂದಿದ್ದಾರೆ. ಮೂಗಿನಲ್ಲಿ ಶ್ವಾಸದ ಸರಾಗ ಚಲನೆಗೆ ತೊಂದರೆ ಆದರೆ ಗೊರಕೆ ಬರುವುದು ನಿಜ. ಇದ್ದು ಕೇವಲ 10 ರಿಂದ 15 ಶೇಕಡಾ ಜನರಲ್ಲಿ ಮಾತ್ರ ಅನ್ವಯವಾಗುತ್ತದೆ. ಉಳಿದಂತೆ 85 ಶೇಕಡಾ ಮಂದಿಯಲ್ಲಿ ಸ್ಥೂಲಕಾಯ, ಮದ್ಯಪಾನ, ನಿದ್ರಾಹೀನತೆ, ಮಾನಸಿಕ ಅನಾರೋಗ್ಯ, ಕೆಳದವಡೆಯ ಚಿಕ್ಕ ಗಾತ್ರ, ದೊಡ್ಡದಾದ ನಾಲಗೆ ಮುಂತಾದ ನಿರ್ದಿಷ್ಟ ಕಾರಣವಿದ್ದೇ ಇರುತ್ತದೆ. ಅದಕ್ಕೆ ಸೂಕ್ತ ಚಿಕಿತ್ಸೆ ಅತೀ ಅಗತ್ಯ.
3. ಗೊರಕೆಗೆ ಚಿಕಿತ್ಸೆಯಿಲ್ಲ, ಇದು ಸರಿಪಡಿಸಲಾಗದ ಕಾಯಿಲೆ ಎಂಬುದು ತಪ್ಪು ತಿಳಿವಳಿಕೆ. ಗೊರಕೆ ಯಾಕಾಗಿ ಬರುತ್ತದೆ ಯಾವ ಕಾರಣದಿಂದ ಎಷ್ಟು ತೀವ್ರತೆಯಿಂದ ಬರುತ್ತದೆ ಎಂದು ನಿರ್ಧರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ದೀರ್ಘಕಾಲಿಕ ತೊಂದರೆಗಳಿಗೆ ನಾಂದಿ ಹಾಡಬಹುದು. ‘ಸ್ಲೀಪ್ ಆಪ್ನಿಯಾ’ ಎಂಬ ನಿದ್ರೆಯನ್ನು ಭಂಗಮಾಡುವ ರೋಗಕ್ಕೆ ಮೂಲ ಗೊರಕೆಯಲ್ಲಿಯೇ ಇದೆ ಎಂಬುದು ಸಾರ್ವಕಾಲಿಕ ಸತ್ಯ. ತೀವ್ರತರವಾದ ಅಡಚಣೆ ಶ್ವಾಸೋಚ್ಛಾಸಕ್ಕೆ ಉಂಟಾದಾಗ ಈ ರೀತಿಯ ‘ಸ್ಲೀಪ್ ಅಪ್ನಿಯಾ’ ಖಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
4. ಗೊರಕೆ ಎನ್ನುವುದು ತನ್ನ ವೈಯುಕ್ತಿಕ ವಿಚಾರ. ಇದರಲ್ಲಿ ಇತರರು ಮೂಗು ತೂರಿಸುವುದರ ಅಗತ್ಯವಿಲ್ಲ ಎಂಬುದು ಗೊರಕೆ ಸಂಘದವರ ಸಾರ್ವತ್ರಿಕ ಸಮಾಜಾಯಿಷಿ. ಇದು ಖಂಡಿತ ಒಪ್ಪತಕ್ಕ ವಿಚಾರವಲ್ಲ. ಗೊರಕೆ ಎನ್ನುವುದು ಕೌಟುಂಬಿಕ ಸಮಸ್ಯೆ. ಎಷ್ಟೋ ಕುಟುಂಬಗಳು ಗೊರಕೆಯಿಂದ ಬೀದಿಗೆ ಬಂದಿದೆ. ಸೂಕ್ತ ಚಿಕಿತ್ಸೆ ನೀಡಿದಲ್ಲಿ ಕುಟುಂಬದ, ದಂಪತಿಗಳ ಮೈಮನಸ್ಕತೆ ಮತ್ತು ನಿದ್ರಾಹೀನತೆಗೆ ಪೂರ್ಣ ವಿರಾಮ ಹಾಕಬಹುದು.

ಕೊನೆಮಾತು:
ನೆನಪಿಡಿ ‘ಗೊರಕೆ’ ಹೊಡೆಯುವುದು ನಿಮ್ಮ ಜನ್ಮಸಿದ್ಧ ಹಕ್ಕಲ್ಲ. ನೀವೂ ಮಲಗಿ ಇತರರನ್ನು ನೆಮ್ಮದಿಯಿಂದ ಮಲಗಲು ಬಿಡಿ, ಎಂಬ ಶಾಂತಿ ಮಂತ್ರವನ್ನು ಪಾಲಿಸಿದಲ್ಲಿ ಖಂಡಿತವಾಗಿಯೂ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸಬಹುದು. ಅದರಲ್ಲಿಯೇ ಕುಟುಂಬದ ಸಮಾಜದ ಒಳಿತು ಅಡಗಿದೆ.

-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ: 09845135787

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಪ್ರತಿಭೆ ಎಂಬುದು ಪಾಪವೇ..? ಇಲ್ಲಿ ನೆಟ್ಟು ಬೆಳೆಸಿದ ವೃಕ್ಷ ಇನ್ನೆಲ್ಲೋ ಫಲ ಕೊಡುವುದು ತಪ್ಪಬೇಕು

Upayuktha

ಕೋವಿಡ್-19 ಮತ್ತು ಧೂಮಪಾನ: ಕೊರೊನಾ ಉಗ್ರತೆ ಧೂಮಪಾನಿಗಳಲ್ಲಿ ಹೆಚ್ಚು

Upayuktha

ಮೋಸ ಮಾಡಿದ ಊಹೆಗಳು..!!

Harshitha Harish