ಕಲೆ ಸಂಸ್ಕೃತಿ ಲೇಖನಗಳು

ಯಕ್ಷಗಾನ ಕಾಯ್ದುಕೊಂಡು ಬಂದ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ

ಇಂದು ವಿಶ್ವಾದ್ಯಂತ ಕೊರೋನಾ ವೈರಸ್ಸಿನ ಹಾವಳಿಯಿಂದಾಗಿ ಬದುಕಿನಲ್ಲಿ ಹೊಸಹೊಸ ನಿಯಮಾವಳಿಗಳೊಂದಿಗೆ ಬದುಕುಳಿಯಲು ಹೊಸರೂಪುಗಳನ್ನು ಹುಡುಕುತ್ತಿದ್ದೇವೆ. ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಇನ್ನಿನೇನೋ? ವ್ಯಕ್ತಿ- ವ್ಯಕ್ತಿಗಳ ನಡುವಿನ ಅಂತರ ರೋಗಾಣುವನ್ನು ಪಸರಿಸದಿರಲು ಸಹಕಾರಿ. ಆದರೆ ಇದನ್ನು ಆದಿಯಿಂದಲೇ ಯಕ್ಷಗಾನ ಪ್ರತಿಪಾದಿಸುತ್ತಾ ಬಂದಿದೆ.

1000 ವರ್ಷಗಳ ಇತಿಹಾಸವುಳ್ಳ ಯಕ್ಷಗಾನಕ್ಕೆ ದೇಹಾಂತಕ ವೈರಾಣುವಿನ ಹಾವಳಿಯಿಲ್ಲದೇ ಇದ್ದಾಗಲೂ ಅದು ಸಾಮಾಜಿಕ ಅಂತರ, ಸ್ವಚ್ಛತೆ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡ ಕಲಾವಿದರ ಗಡಣ… ಹೀಗೆ ಎಲ್ಲಾ ವಿಚಾರಗಳಲ್ಲೂ ಆಗಲೇ ಪ್ರಚ್ಛನ್ನ ನಿಯಮಾವಳಿಯನ್ನು ಹೊಂದಿತ್ತು. ಅದರ ವಿಸ್ತರಣೆ ನಿಮ್ಮ ಮುಂದೆ… ಹೀಗಿದೆ ನೋಡಿ. ಚೌಕಿಯಿಂದ ಆರಂಭಿಸಿ: ಆದಿಯಲ್ಲಿ ಪ್ರತಿಯೊಬ್ಬ ಕಲಾವಿದನ ಸಾಮಾನು- ಸರಂಜಾಮುಗಳನ್ನು ತಾನೇ ಜೋಪಾನವಾಗಿಟ್ಟುಕೊಂಡು ಆಟ ನಡೆಯುವ ಸ್ಥಳಗಳಿಗೆ ತಾನೇ ತಲೆಹೊರೆಯಲ್ಲಿ ಹೊತ್ತು ಕೊಂಡು ಸಾಗಬೇಕಾಗಿತ್ತು. ಆಟದ ಸ್ಥಳದಲ್ಲಿ ಇಳಿಸಿ, ಹರಿವ ನದಿಯಲ್ಲೋ, ಊರ ಬಾವಿಯಲ್ಲೋ ಮಿಂದು ಮಡಿಯಾಗಿ ವಿಶ್ರಾಂತಿಗಾಗಿ ಮರದಡಿಯೇ ಅಥವಾ ಸಣ್ಣಸಣ್ಣ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು.

ಈಗ ದೇವರ ಪೆಟ್ಟಿಗೆ, ಸಾಮಾನು ಸರಂಜಾಮು, ಕಲಾವಿದರಿಗಾಗಿ ಓಡಾಟಕ್ಕೆ ಅನುಕ್ರಮವಾಗಿ ಲಾರಿ, ಬಸ್ಸುಗಳ ವ್ಯವಸ್ಥೆ ಇದೆ. ಅದರಲ್ಲಿ ಈಗಿನ ಬಹುತೇಕ ಕಲಾವಿದರು ಹಗಲು ಉದ್ಯೋಗಿಗಳಾಗಿ, ಕಲಾವಿದರಾಗಿ ದುಡಿಯುವುದರಿಂದ ಕ್ಯಾಂಪ್ ನಲ್ಲಿ ಉಳಿಯುವವರ ಸಂಖ್ಯೆ ವಿರಳವಾಗಿದೆ. ಹಾಗಾಗಿ ಸಾಮಾಜಿಕ ಅಂತರ ಸ್ವಾಭಾವಿಕ. ಇನ್ನು ಕ್ಯಾಂಪ್ ಗಳೂ ಹಾಗೆಯೇ ಸ್ವಚ್ಛವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದರಲ್ಲೂ ನನ್ನ ಸನ್ಮಿತ್ರರಾದ ಉಜಿರೆ ಅಶೋಕ ಭಟ್ಟರು ಹವ್ಯಾಸಿ ಕಲಾವಿದರಾಗಿದ್ದಾಗಲೇ ಈ ವಿಷಯದಲ್ಲಿ ಖಡಕ್. ನೇರಾನೇರ. ಚೌಕಿಯ ವ್ಯವಸ್ಥೆ, ರಂಗಸ್ಥಳದ ವ್ಯವಸ್ಥೆ ಸರಿ ಇಲ್ಲದಿದ್ದರೆ ಅಲ್ಲೇ ಸಂಘಟಕರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಸಹವೇಷಧಾರಿಯಾಗಿ ನಾನೇ ಪ್ರತ್ಯಕ್ಷ ನೋಡಿದ್ದೇನೆ. “ಕಲಾವಿದರನ್ನು ಮನುಷ್ಯರಂತೆ ಪರಿಗಣಿಸಿ” ಎಂದು ಮುಕ್ತವಾಗಿ ಹೇಳುತ್ತಿದ್ದರು. ನಂತರ ಅವರು ಒಂದು ಪ್ರಸಿದ್ಧ ಮೇಳದ ಪ್ರಬಂಧಕರಾಗಿ- ವೇಷಧಾರಿಯಾಗಿದ್ದ ಅಷ್ಟೂ ಕಾಲವೂ ಇದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಈ ವಿಚಾರದಲ್ಲಿ ಎಲ್ಲರೂ ಅವರನ್ನು ಪ್ರಶಂಸಿಸುತ್ತಿದ್ದುದ್ದನ್ನು ನಾನೇ ಕಿವಿಯಾರೆ ಕೇಳಿದ್ದೇನೆ.

ಇದು ಒಂದು ಸಾಂಗಿಕ ಸ್ವಚ್ಛತೆ. ಇನ್ನು ಚೌಕಿ ಬಿಡಿಸಿದ ಮೇಲೆ ದೇವರ ಸ್ಥಾಪನೆ. ಅದು ಕಲಾವಿದರಿಂದ ಸಾಕಷ್ಟು ದೂರವೇ ಇರುತ್ತದೆ. ದೇವರ ನಂತರ ಉಭಯಸಾಲುಗಳಲ್ಲಿ ವೇಷಧಾರಿಗಳ ಪೆಟ್ಟಿಗೆ. ಅಲ್ಲೂ ಅಂತರ ಕಾಪಾಡಿಕೊಂಡೇ ಜೋಡಣೆ. ಅಡ್ಡಸಾಲು ಹಾಸ್ಯಗಾರ ಮತ್ತು ಒತ್ತು ಹಾಸ್ಯಗಾರನದ್ದು. ಯಾರೂ ಯಾರನ್ನು ಸ್ಪರ್ಶಿಸಬೇಕಾದ ಸಂದರ್ಭ ಬರುವುದೇ ಇಲ್ಲ. ಇನ್ನು ಬಣ್ಣವೂ ಹಾಗೆಯೇ. ಅವರವರು ಅವರವರದ್ದೇ ಆದ ಬಣ್ಣ ತಂದು ಹಚ್ಚಿಕೊಳ್ಳುತ್ತಿದ್ದರು. ಈಗಲೂ ಹಾಗೆಯೇ ಇದೆ. ಯಜಮಾನ ಬಣ್ಣದ ಪುಡಿಗಳನ್ನು ಒದಗಿಸಿದರೂ ಪೌಡರ್ ಮತ್ತು ಕಾಡಿಗೆ ಅವರವರೇ ತಂದುಕೊಳ್ಳುವುದು ರೂಢಿ. ಇದಕ್ಕೆ ಆಗ ಕಾರಣಗಳಿಲ್ಲದೇ ಇರಬಹುದು. ಈಗ ಉತ್ತರ ಸಿಕ್ಕಿತಲ್ಲಾ! ಇನ್ನು ಬಣ್ಣ ಹಾಕುವಾಗ-ತೆಗೆಯುವಾಗ ಅವರವರದ್ದೇ ಬಣ್ಣ ತೆಗೆವ ವಸ್ತ್ರ.(ರಂಗಿನ ಬಟ್ಟೆ) ಇನ್ನು ಬಣ್ಣ ತೆಗೆದು ಶುಭ್ರವಾಗಿ ಚೌಕಿ ಬಿಡುವಾಗ ಕಲಾವಿದರ ಮರ್ಜಿಯೇ ಬೇರೆ.
ಉದಾಹರಣೆಗೆ ಶೇಣಿ, ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್ ಹೀಗೆ ಹೇಳುತ್ತಾ ಹೋದರೆ ಮುಗಿಯದ ಪರಂಪರೆಯ ಹೆಸರುಗಳು. ಶಿಸ್ತುಬದ್ಧವಾಗಿ ರಂಗವನ್ನಾಳಿದವರು.

ನಂತರ ಚೌಕಿಪೂಜೆಯೂ ಅಂತರ ಕಾಯ್ದುಕೊಂಡೇ ಆಗುತ್ತದೆ. ರಂಗದಲ್ಲೂ ಭಾಗವತರು ಮತ್ತು ಮದ್ದಳೆಯವರು ಅಂತರ ಕಾಯ್ದುಕೊಂಡೇ ಕುಳಿತುಕೊಳ್ಳುತ್ತಾರೆ. ಹಾರ್ಮೋನಿಯಂ ಇಲ್ಲದ ಕಾರಣ ಈಗ ಆ ಜಾಗವೂ ಖಾಲಿ. ಚೆಂಡೆಯವರಂತೂ ಬಹಳ ಅಂತರದಲ್ಲೇ ಇರುತ್ತಾರೆ. ಚಕ್ರ ತಾಳವೂ ಹಾಗೆಯೇ. ಇನ್ನು ವೇಷಗಳು ರಂಗಪ್ರವೇಶ ಮಾಡುವಾಗಲೂ ಚೆಂಡೆಯವರು ಆ ಕಲಾವಿದರಿಗೆ ಸ್ಥಳ ಬಿಟ್ಟುಕೊಟ್ಟೇ ನಿಲ್ಲುತ್ತಾರೆ. ಅಲಿಖಿತ ಅಂತರ ಕಾನೂನು ಯಾರೂ ಆದೇಶಿಸದ ಸಾಮಾಜಿಕ ಅಂತರ.

ಇನ್ನು ರಂಗದಲ್ಲಿ ವೇಷಗಳ ರಂಗ ಚಲನೆಯೂ ಹಾಗೆಯೇ. ಅಂತರವಿರಿಸಿಕೊಂಡೇ ವ್ಯವಹರಿಸುತ್ತದೆ. ಒಂದು ವೇಷ ಇನ್ನೊಂದು ವೇಷವನ್ನು ಸ್ಪರ್ಶಿಸಬಾರದು. ಹಾಗೊಂದು ವೇಳೆ ಅಂತಹ ಘಟನೆ ನಡೆದರೆ ಜೀವನಪರ್ಯಂತ ವಿರೋಧಿಗಳಾದ ಉದಾಹರಣೆಯೂ ನಮ್ಮಲ್ಲಿದೆ. ವೇಷಗಳು ಗಂಡ ಹೆಂಡತಿಯೇ ಆದರೂ ಮೈ ಸ್ಪರ್ಶಿಸಿ ವೇಷ ಮಾಡಬಾರದು ಎಂಬ ನಿಯಮ ಇದೆ. ಹಿಂದೆ ಹಲವು ವರ್ಷಗಳ ಮೊದಲು ನಾನು ಪಂಚವಟಿಯ ಸೀತೆಯ ಪಾತ್ರವನ್ನು ಮಾಡಿ… “ರಾಘವಾ ನೀ ಎನ್ನ ಬಿಟ್ಟು ಪೋಗದಿರಯ್ಯಾ…” ಎಂಬ ಹಾಡಿಗೆ ರಾಮನನ್ನು ತಡೆವಾಗ ಮೈ ಮುಟ್ಟಿದ್ದಕ್ಕೆ ಹಿರಿಯ ಕಲಾವಿದರೊಬ್ಬರು ನಂತರ ನನ್ನನ್ನು ತರಾಟೆಗೆ ಒಳಪಡಿಸಿದ್ದು ಈಗಲೂ ನೆನಪಿದೆ. ಆದರೆ ಈಗಂತೂ ಏಕಾಂತದ ವಿಚಾರಗಳನ್ನು ರಂಗದಲ್ಲಿ ತೋರಿಸುವ ಕಲಾವಿದರಿದ್ದಾರೆ ಬಿಡಿ. ಅದು ಅಪರೂಪ.. ಅಪವಾದವೇ ಎನ್ನಿ. ಹಾಗಾದರೆ ಈ ಅಂತರದ ಅಂತರ್ಯ ಆಗ ತಿಳಿಯದೇ ಹೋದರೂ ಈಗ ಪ್ರಸ್ತುತವಲ್ಲವೇ?

ಇನ್ನು ಶೃಂಗಾರರಸ, ಯುದ್ಧದ ಸಂದರ್ಭವೂ ಇದೇ ನಿಯಮ ಮುಂದುವರಿಯುತ್ತದೆ. ಮತ್ತು ಕೆಲವು ಪಾತ್ರಗಳು ಸಭೆಯಿಂದ ಪ್ರವೇಶವಾಗುವುದರಿಂದ ಪ್ರೇಕ್ಷಕರಿಗೂ ಕಲಾವಿದರಿಗೂ ಸಾಮೀಪ್ಯ ಉಂಟಾದರೂ ಅಂತರ ಇದ್ದೇ ಇರುತ್ತದೆ. ದೂರದರ್ಶನ, ಆಕಾಶವಾಣಿ, ಸ್ಟಾರ್ ಹೋಟೆಲುಗಳಲ್ಲಿ ಪ್ರದರ್ಶನ ಆಗುವಾಗಲೂ ಈ ವ್ಯವಸ್ಥೆ ಇದ್ದೇ ಇರುತ್ತದೆ. ಚೌಕಿಯ ಶಿಸ್ತಿಗೆ ಶ್ರೀ ಬೆನಕ ಕಲಾ ವೃಂದದವರು ಮಾದರಿ. ಯಾಕೆಂದರೆ ಅವರು ಮೊದಲು ಕೇಳುವುದು ಚೌಕಿಯ ವ್ಯವಸ್ಥೆಯನ್ನು. ಅದು ಚೆನ್ನಾಗಿದ್ದರೆ ಮತ್ತೆ ಅವರು ತೃಪ್ತರು. ಶಾಲಾ-ಕಾಲೇಜುಗಳಲ್ಲಿ ಆಗುವಾಗ ಹೇಗೂ ಶಾಲಾ ವೇದಿಕೆ, ತರಗತಿ ಕೊಠಡಿಗಳು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತವೆಯೆನ್ನಿ. ಇದು ಒಟ್ಟು ಪ್ರದರ್ಶನದ ಹಿಂದೆ ಮುಂದೆ ಇರುವ ಸಾಮಾಜಿಕ ಅಂತರದ ವ್ಯವಸ್ಥೆ‌.

ಇನ್ನು ಮುಖಗವಸ (ಮಾಸ್ಕ್) ನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕೂಟಗಳು ಮಾತಿನ ಮಂಟಪವೇ ಆಗಿರುತ್ತವೆ. ಸ್ಪಷ್ಟ ಕೇಳಿಸುವಿಕೆಗಾಗಿ ಧರಿಸುವಂತೆಯೇ ಇಲ್ಲ. ಪಾತ್ರಧಾರಿ ತನ್ನ ಪಾತ್ರ ಬರುವ ಸಮಯಕ್ಕಾಗುವಾಗ ಮುಖಗವಸು ತೆಗೆದು ಮಾತನಾಡಿ ನಂತರ ಧರಿಸಿಕೊಂಡು ಅದರ ಮಹತ್ವವನ್ನು ಸಾರಬಹುದು. ಈಗಾಗಲೇ ಭಾಸ್ಕರ ರೈ ಯವರ ಕೊರೋನಾದ ಬಗೆಗಿನ ಪ್ರಸಂಗ ಈ ಎಲ್ಲಾ ಅಂಗಗಳನ್ನು ಪ್ರತಿಪಾದಿಸಿದೆ. ತಕ್ಷಣ ಸ್ಪಂದಿಸುವ ಗುಣ ಯಕ್ಷಗಾನಕ್ಕೆ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಉಳಿದಂತೆ ಚೌಕಿ ಹಾಗೂ ರಂಗಸ್ಥಳದ ಶಿಸ್ತು ಎಲ್ಲರನ್ನೂ ಬೆರಗಾಗಿಸುವಂತಹುದೇ! ರಾತ್ರಿ 8:30ಕ್ಕೆ ದೇವರ ಪೂಜೆ ಆಗುವಾಗ ಭಾವುಕ ಭಕ್ತರು ಶ್ರೀ ದೇವರ ದರ್ಶನ, ಪ್ರಸಾದಕ್ಕಾಗಿ ಸರತಿ ಸಾಲಿನಲ್ಲಿ ಯಾವುದೇ ಗೊಂದಲಗಳಿಲ್ಲದೆ ಬಂದು ಶ್ರೀದೇವರ ಕೃಪೆಗೊಳಗಾಗುತ್ತಾರೆ. ಆಗ ಚೌಕಿ ಶಿಸ್ತಿನಿಂದ ಇರಬೇಕಾಗುವುದು ಅತ್ಯಗತ್ಯ. ಅದನ್ನು ನಿತ್ಯವು ಪಾಲಿಸುವ ಆರಾಧನಾ ಕೇಂದ್ರ ಬಣ್ಣದ ಮನೆ (Green Room) ಅದನ್ನು ಕಂಡೇ ಜನ ಪುಳಕಿತರಾಗುತ್ತಾರೆ. ಕಲಾವಿದರಲ್ಲಿಯೂ ಇರುವ ಆರಾಧನಾ ಭಾವದ ಆ ಸ್ಥಳಕ್ಕೂ ದಂಗಾಗುತ್ತಾರೆ.

ಇನ್ನು ರಂಗದ ಶಿಸ್ತು-ಶುಚಿತ್ವ ಹೇಗೂ ಕಾಪಾಡಿಕೊಳ್ಳಲೇಬೇಕಾಗುತ್ತದೆ. ಪ್ರದರ್ಶನದಲ್ಲಿ ರಂಗಚಾಕಚಕ್ಯತೆ ಒಂದು ವಿಶೇಷ ಭಾಗ. ರಂಗಾಲಂಕರಣ ಹರಕೆ ಪೂಜೆಯ ಭಾಗವೇ. ಈಗೆಲ್ಲಾ ರಂಗಸ್ಥಳಗಳು “ಫಿಕ್ಸ್” ಮಾಡುವಂತದ್ದು. ಆದುದರಿಂದ ಅಷ್ಟೇನೂ ಕಷ್ಟವಿಲ್ಲ. ಇಬ್ಬರು ಕಸುಬುದಾರರು ಗಂಟೆಯೊಂದರೊಳಗೆ ರಂಗ ನಿರ್ಮಾಣ ಮಾಡಬಹುದು. ‘ರಂಗಸ್ಥಳಕ್ಕೆ ಗುಂಡಿ’ ತೆಗೆಯುವವರು ಎಂಬ ಸ್ಥಾನವಿಲ್ಲ. ಹಿಂದಾದರೆ ಆಟ ಆಗುವ ಗದ್ದೆಯಲ್ಲಿ ಮಣ್ಣನ್ನು ಅಗೆದು ‘ತಿಟ್ಟೆ’ ರಚನೆ ಮಾಡಿ, ಅದರಲ್ಲಿ ರಂಗಸ್ಥಳವನ್ನು, ಕಂಬಗಳನ್ನು ಹೂತು ನಿರ್ಮಿಸಬೇಕಾಗಿತ್ತು. ತಿಂಗಳೊಪ್ಪತ್ತು ಮೊದಲೇ ಬಯಲಾಟದ ರಂಗಸ್ಥಳ ಬಯಲಿನಲ್ಲಿ ಸಿದ್ಧವಾಗುತ್ತಿತ್ತು. ಕಲಾವಿದರೂ ಚೆನ್ನಾಗಿ ಕುಣಿದು ಸಂಭ್ರಮಿಸುತ್ತಿದ್ದರು. ಮಾವಿನ ಎಲೆ, ಹೂವುಗಳಿಂದ ಅಲಂಕರಿಸಿ ದೊಂದಿ ಬೆಳಕಿನಲ್ಲಿ ಆಟವಾಡುತ್ತಿದ್ದರು. ನಂತರ ಗ್ಯಾಸ್ ಲೈಟ್ ಬಂತು. ಈಗಂತೂ ವಿದ್ಯುತ್ ನದ್ದೇ ಪ್ರಕಾಶ ಬೆಳಗುತ್ತದೆ. ಆದರೆ ಇತ್ತೀಚಿನವರೆಗೂ ಗ್ಯಾಸ್ ಲೈಟ್ ಮರೆಯಾಗಿರಲಿಲ್ಲ. ಬಣ್ಣದ ವೇಷದವರ ಬಳಿ ಆ ಒಂದು ಬೆಳಕು ಇತ್ತು. ಚಿಟ್ಟಿ ಚೆನ್ನಾಗಿ ಒಣಗುತ್ತಿತ್ತು. ಈಗಿನ ತಲೆಮಾರಿಗೆ ಚಿಟ್ಟಿಯ ಕೃತಕ ರೂಪೂ ಬಂದಿದೆ. ಹಿಂದೆಲ್ಲಾ ಪರಂಪರೆಯಾಗಿತ್ತು. ಈಗ ವಿಧವಿಧ ವಿನ್ಯಾಸಗಳಲ್ಲಿ ಚಿಟ್ಟಿ ಬರೆಯುವ ನಿಷ್ಣಾತ ಕಲಾವಿದರು ಮುಂದಿನ ಪೀಳಿಗೆಗೆ ಆಶಾಕಿರಣ.

ವೇಷಭೂಷಣ ಕಟ್ಟಿಸಿ ಕೊಳ್ಳುವುದರಲ್ಲೂ ಸ್ವಚ್ಛತೆ ಇದ್ದೇ ಇರುತ್ತದೆ. ಒಪ್ಪವಾಗಿ, ಓರಣವಾಗಿ ವೇಷ ಎದ್ದು ನಿಲ್ಲುವುದೇ ಸಂಭ್ರಮ. ಅಚ್ಚುಕಟ್ಟಾದ ವೇಷವನ್ನು ನೋಡುವುದೂ ಒಂದು ಸುಸಂಭ್ರಮ. ಅರೆಬರೆ ವೇಷ ಕಟ್ಟಿ, ಹಗ್ಗಗಳು ಜಾರಿ ನೇತಾಡಿಕೊಂಡು, ಕಿರೀಟ ಸ್ವಸ್ಥಾನದಲ್ಲಿ ನಿಲ್ಲದೇ ಇದ್ದರೆ ಆ ವೇಷಕ್ಕೆ ದೋಷ ಹೇಳಬೇಡವೇನೋ? ನಂತರ ಹಗಲಿನಲ್ಲಿ ನಿನ್ನೆ ರಾತ್ರಿಯ ಎಲ್ಲಾ ವೇಷಭೂಷಣಗಳನ್ನು ಸುಡು ಬಿಸಿಲಿನಲ್ಲಿ ಒಣಗಿಸಿ ಇಂದಿನ ರಾತ್ರಿಯ ವೇಷಕ್ಕೆ ಸಿದ್ಧಗೊಳಿಸಲಾಗುತ್ತದೆ. ಕೆಲವು ಕಲಾವಿದರು ಹಗಲಿನಲ್ಲಿ ಆಗಾಗ್ಗೆ ತಮ್ಮ ವೇಷಭೂಷಣಗಳನ್ನು ತಾವೇ ತೊಳೆದು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತಾರೆ. ಬಾಡಿಗೆಗೆ ವೇಷಭೂಷಣಗಳನ್ನು ಒದಗಿಸುವ ತಂಡದವರು ವರ್ಷಕ್ಕೆ ನಾಲ್ಕು ಬಾರಿ ಅವನ್ನು ತೊಳೆಯುತ್ತಾರಂತೆ. ಅಲ್ಲವಾದರೆ ಮೇಲು ವಸ್ತ್ರಗಳಾದ ಸೋಗವಲ್ಲಿ, ಬಾಳ್ ಮುಂಡು, ಜಟ್ಟಿ ಮೇಲಂಗಿಗಳಲ್ಲಿ ಅಲ್ಲಲ್ಲಿ ಬಣ್ಣದ ಕಲೆಗಳು ಎದ್ದು ಕಾಣುತ್ತವೆ. ಇದು ಸ್ವಚ್ಛ ವೇಷಕ್ಕೆ ಕೊರತೆಯೂ ಹೌದು.

ವರುಷವೂ ಆಭರಣಗಳಿಗೆ ಬೇಗಡೆ (ಬಣ್ಣದ ಬೇಗಡೆ) ಅಂಟಿಸಿ, ನೈಜವಾಗುವ ಪ್ರಯತ್ನವೂ ಆಗುತ್ತದೆ. ಸ್ತ್ರೀ ವೇಷದಾರಿಗಳು ಎಲ್ಲರೂ ತಮ್ಮ ಸ್ವಂತ ವೇಷಭೂಷಣಗಳಿಂದ ರಂಜಿಸುತ್ತಾರೆ. ಪುರುಷ ಪಾತ್ರ ಕಲಾವಿದರಾದ ಡಿ. ಮನೋಹರ ಕುಮಾರ್, ಕೊಲ್ಲಂಗಾನ ಗಣಾಧಿರಾಜ ಉಪಾಧ್ಯಾಯರು ತಮ್ಮ ವೇಷದ ಪೂರ್ಣ ಆಭರಣ ವೇಷಭೂಷಣಗಳನ್ನು ಸ್ವಂತವಾಗಿ ಹೊಂದಿದ್ದಾರೆ. ದಿ|| ಚೆನ್ನಪ್ಪ ಶೆಟ್ಟರು ತಮ್ಮ ರಾಮ-ಕೃಷ್ಣ ಪಾತ್ರಗಳಿಗೆ ತಮ್ಮದೇ ಕಿರೀಟ ಆಭರಣಗಳನ್ನು ಹೊಂದಿದ್ದರು. ಈಗ ಪೆರ್ಲ ಜಗನ್ನಾಥ ಶೆಟ್ಟಿ ಆ ದಾರಿಯಲ್ಲಿದ್ದಾರೆ. ಕಾಸರಗೋಡು ಶ್ರೀ ಸುಬ್ರಾಯ ಹೊಳ್ಳರು ಸೇರಿದಂತೆ ಹಲವು ಕಲಾವಿದರು ತಮ್ಮ ತಮ್ಮ ವೇಷಗಳಿಗೆ ಆಗುವ ಕನಿಷ್ಠ ಅವಶ್ಯಕತೆಗಳನ್ನು ಹೊಂದಿದ್ದಾರೆ. ಗೆಜ್ಜೆ, ಸಾಕ್ಸ್, ಚಿಟ್ಟೆ ಪಟ್ಟಿ, ಇಜಾರು, ಮೇಲಂಗಿ ಎಲ್ಲವೂ ಸ್ವಂತವಾಗಿಯೇ ಹೊಂದಿರುತ್ತಾರೆ. ಡಾ|| ಶ್ರೀಧರ ಭಂಡಾರಿ, ಶ್ರೀ ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡುರವರು ಕಲಾವಿದರಾಗಿ ಸ್ವಂತ ವೇಷಭೂಷಣಗಳನ್ನು ಹೊಂದಿ ಅನೇಕ ಯಕ್ಷ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಅವರಿಗೆಲ್ಲ ಆಟದ ಅನುಭವ ಇರುವುದರಿಂದ ಆ ವೇಷಭೂಷಣಗಳು ಸಹಜವಾಗಿಯೇ ಮಡಿಯಾಗಿಯೇ ಇರುತ್ತವೆ.

ರೋಗನಿರೋಧಕ ಶಕ್ತಿ:

ಪ್ರಾಯಶಃ ಯಕ್ಷಗಾನ ಕಲಾವಿದರಿಗೆ ಇರುವಷ್ಟು ರೋಗನಿರೋಧಕ ಶಕ್ತಿ ಅದ್ಭುತವಾದದ್ದೇ! ದಿನಕ್ಕೊಂದೂರಿಗೆ ಸಾಗಿ ಬಂದ ಸಿಕ್ಕಸಿಕ್ಕ ನೀರುಕುಡಿದು, ಆಹಾರವನ್ನು ಉಂಡು, 6 ತಿಂಗಳು ಮನೆಗೆ ಹೋಗದೆ ಘಟ್ಟದ ಚಳಿಯನ್ನೂ, ನಗರದ ಶೆಖೆಯನ್ನೂ ಮೀರಿ ಒಬ್ಬ ವೇಷಧಾರಿ ಬೆಳಗುತ್ತಾನೆಂದರೆ ಆತನಿಗೆ ‘ಭಾರತ ರತ್ನ’ ಕ್ಕಿಂತ ಕೆಳಗಿನ ಪ್ರಶಸ್ತಿಯ ಅಗತ್ಯವಿಲ್ಲ. ತನ್ನ ದೇಹದಲ್ಲಿ 40ಕ್ಕಿಂತಲೂ ಹೆಚ್ಚು ಕಟ್ಟುಗಳನ್ನು ಬಿಗಿಸಿಕೊಂಡು, ಕಿರೀಟದ ನೋವನ್ನು ಸಹಿಸಿಕೊಂಡು ಪ್ರಸಂಗಾರಂಭದಿಂದ ಬೆಳಗಿನವರೆಗೆ 8 ಗಂಟೆಯ ಕಾಲ ವೇಷ ಮಾಡಿ, ನಾಳೆ ಇನ್ನೊಂದೂರಿಗೆ ಹೋಗಿಬಿಡುವ ಕಲಾವಿದನ ಶ್ರಮ ಎಣಿಕೆಗೆ ಮೀರಿದ್ದು. ನಾನು ಯಕ್ಷಗಾನ ಕಲಾವಿದರ ಬಗ್ಗೆಯೇ ಯಾಕೆ ಹೇಳಿದೆನೆಂದರೆ, ಬೇರೆ ಯಾವ ರಂಗ ಪ್ರಕಾರವೂ ಆರು ತಿಂಗಳ ಕಾಲ (180 ಆಟಗಳು ಕೆಲವೊಮ್ಮೆ 190ರ ಹತ್ತಿರ) ರಾತ್ರಿ ನಿದ್ದೆಗೆಟ್ಟು ಪ್ರದರ್ಶನಗಳನ್ನು ಕೊಡುವುದಿಲ್ಲ. ಸಾಧ್ಯವೂ ಇಲ್ಲ. ಶ್ರೀದೇವಿಯಂತಹ ದೇಹದ ಭಾಗಗಳಲ್ಲದ ಕೈಗಳನ್ನೂ, ಕೆಳಗಿನ ಭೂಷಣವಾದ ನೆರಿಯನ್ನೂ, ಮಹಿಷಾಸುರನ ಪಾತ್ರದ ಕೊಂಬನ್ನೂ, ಗಜೇಂದ್ರ ಮೋಕ್ಷದ ಆನೆ-ಮಕರಗಳ ಮುಖವಾಡವನ್ನು ಹೊತ್ತು ಕೆಲಸ ಮಾಡುವುದೆಂದರೆ ಅದು ಹರಸಾಹಸವೇ ಹೌದು. ಉಳಿದವರಿಗಿದು ಕಷ್ಟಸಾಧ್ಯ. (ಸಾಧ್ಯ- ಆದರೆ ಕಷ್ಟ) ಇಷ್ಟನ್ನೂ ಮಾಡಿ ರಂಗದಲ್ಲಿ ಮೆರೆದು 7 ದಶಕಗಳ ಕಾಲ ಯಕ್ಷ ಮೇರು, ಗುರು ಶ್ರೀ ಗೋವಿಂದ ಭಟ್ಟರು ಈಗಲೂ ಕಲಾವಿದರಾಗಿ ತಿರುಗಾಟ ಮಾಡುತ್ತಿರುವುದೇ ಸಾಕ್ಷಿ.

ಹರಿದಾಸರಾಗಿಯೂ ಮೆರೆದು ಕಲಾವಿದರಾಗಿದ್ದ ಶೇಣಿ, ಸಾಮಗರೂ ನಮ್ಮ ಮುಂದೆ ಬರುತ್ತಾರೆ. ಇದಕ್ಕೆ ಅವರಲ್ಲಿದ್ದ ರೋಗನಿರೋಧಕ ಶಕ್ತಿಯೇ ಕಾರಣ. ರಾಮದಾಸ ಸಾಮಗರಂತೂ ಹೃದಯ ಸಂಬಂಧಿ ಕಾಯಿಲೆ ಇದ್ದರೂ ಕೊನೆಯವರೆಗೂ ಕಲಾವಿದರಾಗಿಯೇ ಇದ್ದರು. ಕಡಂದೇಲು (ಕಟೀಲು) ಪುರುಷೋತ್ತಮ ಭಟ್ಟರು ಶತಾಯುಷಿಗಳಾದರು. ಅರುವ ಕೊರಗಪ್ಪ ಶೆಟ್ಟರು ಚಿರಯುವಕ. ಚೌಕಿಗೆ ಬಂದು ಕುಡಿದ್ರೆ ಒಂದು ಲೋಟ ಹಾಲು; ತಿಂದ್ರೆ ಒಂದು ಸೇಬು, ತನ್ನ ಸೂಟ್ ಕೇಸ್ ತಲೆಯಡಿಗಿಟ್ಟು ಮಲಗಿದರೆ ತನ್ನ ವೇಷಕ್ಕಾಗುವಾಗ ಏಳುವ ಸವ್ಯಸಾಚಿ ಕಲಾವಿದ. ಶ್ರೀ ಕಟೀಲು ಮೇಳಗಳಲ್ಲೂ ಅಂತಹ ಕಲಾವಿದರಿದ್ದಾರೆ. ಅರ್ಧ ಗಂಟೆಯ ನಿದ್ರೆ ಬಿಟ್ಟರೆ ಅಳುವ ಈಗಿನ ಯುವಕರ ಮುಂದೆ ಆರು ತಿಂಗಳು ಅಸಹಜ ಸಮಯದಲ್ಲಿ ನಿದ್ರಿಸುವ ಅಥವಾ ರಾತ್ರಿಯಿಡೀ ನಿದ್ರಿಸದ ಇವರು ದಂತಕಥೆಗಳಾಗಿ ನಿಲ್ಲುತ್ತಾರೆ. ರಾಮದಾಸ ಸಾಮಗರಂತೂ ಚೌಕಿಗೆ ಬರುವಾಗ ತಮ್ಮ ಜೋಳಿಗೆಯಲ್ಲಿ ತಮಗಾಗಿ ಚಹಾ ಮತ್ತು ಬ್ರೆಡ್ ತಂದು ತಿಂದು ಉಳಿದವರಿಗೂ ಹಂಚಿ ಸಂಭ್ರಮಿಸುತ್ತಿದ್ದರು. ಆಗೆಲ್ಲಾ ನಾನಾ ರೋಗಗಳು ಬಂದರೂ ಅದನ್ನು ತಮಗೆ ತಾವೇ ನಿಗ್ರಹಿಸಿಕೊಳ್ಳುವ ಶಕ್ತಿ ಬೆಳೆಸಿ ಕೊಳ್ಳುತ್ತಿದ್ದರು.

ಈಗಿನವರಂತೆ ‘ಕೊಳ್ಳುಬಾಕ ಸಂಸ್ಕೃತಿ’ ಇರುತ್ತಿರಲಿಲ್ಲ. ರಾತ್ರಿ ಆಟವಾದರೆ ಹಗಲು ಹರಿಕಥೆ/ಕೂಟಗಳಿಂದಾಗಿ ಪ್ರಸಿದ್ಧರಾದ ಇವರು ದೀರ್ಘಾಯಸ್ಸನ್ನು ಹೊಂದಿ ಬಾಳುತ್ತಿದ್ದರೆಂದರೆ ಇನ್ನೆಂತಹ ರೋಗನಿರೋಧಕ ಶಕ್ತಿ… ಆ ಕಲಾ ಮಾತೆಯೇ ನೀಡಿ ಹರಸುತ್ತಾಳೆ ಎಂಬುದೇ ಸತ್ಯ. ಯುವ ಕಲಾವಿದರೆಲ್ಲರಿಗೂ ‘ಕಲೆ’ ನಿಂತ ಈ ಹೊತ್ತಲ್ಲಿ ಉತ್ತಮ ಆರೋಗ್ಯವನ್ನು ಹಾರೈಸಲೇಬೇಕು.

ಇದನ್ನು ವಿಮರ್ಶಿಸುತ್ತಾ ಹೋದಂತೆ ಯಕ್ಷಗಾನ ಲಾಗಾಯ್ತಿನಿಂದಲೂ ಈಗ ನಾವು ಅನುಸರಿಸುತ್ತಿರುವ ಸ್ವಚ್ಛತೆ -ಮಾಸ್ಕ್ -ಸಾಮಾಜಿಕ ಅಂತರದ ಪ್ರತಿಪಾದಕ ಕಲೆಯಾಗಿ ಮೂಡಿಬಂದಿತ್ತು. ಆದರೆ ಉಳಿದ ಕಲೆಗಳಿಗೆ ಯಕ್ಷಗಾನವನ್ನು ಯಕ್ಷಗಾನವಾಗಿಯೇ ನೋಡಿದಾಗ ಮಾತ್ರ ಇದನ್ನು ಗ್ರಹಿಸಲು ಸಾಧ್ಯ. ಕೊರೋನಾ ಆದಷ್ಟು ಬೇಗ ತೊಲಗಿ ಕಲೆ ಕಲಾವಿದರ ಬದುಕು ಮೊದಲಿನಂತಾಗಲಿ ಎಂಬ ಹಾರೈಕೆಯೇ ಲೇಖನದ ಉದ್ದೇಶ.

– ರವಿ ಅಲೆವೂರಾಯ ವರ್ಕಾಡಿ
ಯಕ್ಷಗುರು, “ಬಸವ ರತ್ನ” ರಾಷ್ಟ್ರ ಪ್ರಶಸ್ತಿ ಪುರಸ್ಕೃತರು

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಡಿಡಿ ಚಂದನದಲ್ಲಿ ಮೇ 17ಕ್ಕೆ ತುಳು ತಾಳಮದ್ದಳೆ ‘ಮಾಯಕೊದ ಬಿನ್ನೆದಿ’

Upayuktha

ಇಂದು (ಆ.13) ವಿಶ್ವ ಎಡಚರ ದಿನ- ಇವರಿಗೆಲ್ಲ ‘ಎಡವೇ ಬಲ’

Upayuktha

ಕಾರ್ಕಳದಲ್ಲಿ ಕಳೆಗಟ್ಟಿದ ‘ಶಂಕರಾಭರಣ’- ಇದು ಶಂಕರನಾಗ್ ಸ್ಮರಣೆ

Upayuktha