ಕಿರುತೆರೆ- ಟಿವಿ ಯೂತ್

ಡ್ಯಾನ್ಸಿಂಗ್ ಸ್ಟಾರ್ ಸೋನಾಲಿ ಭದೋರಿಯಾ

ತಂತ್ರಜ್ಞಾನ ಇಂದು ಮನುಷ್ಯನ ಜೀವನಕ್ಕೆ ಅನಿವಾರ್ಯವಾಗಿದೆ ಮತ್ತು ಸಾಧನೆಗೆ ಕೂಡ ಪೂರಕವಾಗಿದೆ. ತಂತ್ರಜ್ಞಾನವನ್ನು ಜಾಣ್ಮೆಯಿಂದ ಉಪಯೋಗಿಸಿಕೊಂಡ ಯುವಜನತೆ ಸಾಧನೆಯ ಶಿಖರವೇರಿದ್ದಾರೆ. ನಮ್ಮ ಇಂದಿನ ಸ್ಟಾರ್ ಸೋನಾಲಿ ಭದೋರಿಯಾ. ಯೂ ಟ್ಯೂಬ್ ಮೂಲಕ ಲಕ್ಷಾಂತರ ಜನರ ಮನಗೆದ್ದು ಇಂದು ಸ್ಟಾರ್ ಆಗಿ ಮೆರೆಯುತ್ತಿರುವವರು. ನಮಗೆ ನಿಜವಾಗಿಯೂ ಸಾಧಿಸಬೇಕೆಂಬ ಸಂಕಲ್ಪ ಮತ್ತು ಹಂಬಲವಿದ್ದರೆ ಯಾವುದೂ ಕೂಡ ನಮ್ಮನ್ನು ತಡೆಯಲಾರವು ಎಂಬ ಮಾತಿಗೆ ಅನ್ವರ್ಥವಾದವಳು ಸೋನಾಲಿ. ಸಾಫ್ಟ್‌ವೇರ್ ಇಂಜಿನಿಯರ್ ಟರ್ನ್ಡ್ ಯೂ ಟ್ಯೂಬ್ ಸ್ಟಾರ್.

1989 ರಲ್ಲಿ ಮುಂಬಯಿಯಲ್ಲಿ ಜನಿಸಿದ ಸೋನಾಲಿ ತಂದೆ ಭಾರತೀಯ ನೇವಿಯಲ್ಲಿ ಉದ್ಯೋಗಿ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲೆ ನೃತ್ಯದ ವಿಪರೀತ ಹುಚ್ಚು ಸೋನಾಲಿಗೆ. ಟಿ.ವಿ ಯಲ್ಲಿ, ರೇಡಿಯೋದಲ್ಲಿ ಬರುತ್ತಿದ್ದ ಸಿನಿಮಾ ಹಾಡುಗಳಿಗೆ ಅದರೆದುರೇ ನಿಂತು ಸ್ಟೆಪ್ ಹಾಕಿ ನಂತರ ಬಾಗಿಲು ಹಾಕಿಕೊಂಡು ರೂಮಿನಲ್ಲಿ ಅದನ್ನು ಮತ್ತೆ ಅಭ್ಯಸಿಸುತ್ತಿದ್ದಳು. ಈ ಹವ್ಯಾಸ ಡ್ಯಾನ್ಸ್ ಕ್ವೀನ್ ಆಗಲು ಪೂರಕವಾಯಿತು. ಶಾಲೆಯಲ್ಲಿ ಯಾವುದೇ ಸಮಾರಂಭವಿದ್ದರೂ ಸೋನಾಲಿ ನೃತ್ಯ ಇದ್ದೇ ಇರುತ್ತಿತ್ತು. ಶಾಲಾ ಸ್ಪರ್ಧೆಗಳಲ್ಲಿ, ಸ್ಕೂಲ್ ಡೇಗಳಲ್ಲಿಯ ನೃತ್ಯಗಳು ಸೋನಾಲಿಯನ್ನು ಆಗಲೇ ಸೆಲೆಬ್ರಿಟಿಯಾಗಿಸಿದ್ದವು. ತಾನೊಬ್ಬ ಪ್ರಸಿದ್ಧ ನೃತ್ಯಗಾತಿಯಾಗಬೇಕೆಂಬ ಕನಸು ಮೂಡಿದ್ದು ಅವಳಿಗೆ ಆಗಲೇ.

ಬದುಕು ನಾವಂದುಕೊಂಡಂತೆ ಸಾಗುವುದಿಲ್ಲ. ಬಾಲ್ಯದಲ್ಲಿ ಅಪಾರ ಪ್ರತಿಭೆ ಮೆರೆದ ಮಕ್ಕಳು ಬೆಳೆದಂತೆ ಅನಿವಾರ್ಯವಾಗಿ ಅದರಿಂದ ದೂರವಾಗುತ್ತಾರೆ. ಜೀವನ ನಿರ್ವಹಣೆಯ ಒತ್ತಡ ಹವ್ಯಾಸಗಳನ್ನು ದೂರಾಗಿಸುತ್ತದೆ. ಸೋನಾಲಿಗೂ ಇದೇ ಆಯಿತು. ತನ್ನಿಷ್ಟದ ನೃತ್ಯವನ್ನು ಬದಿಗಿಟ್ಟು ಕಲಿಕೆಗೆ ಒತ್ತು ಕೊಡುವ ಸೋನಾಲಿ ಡಾನ್ ಬಾಸ್ಕೋ ಇನ್ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ಸಯನ್ಸ್ ಪದವಿ ಪಡೆಯುತ್ತಾಳೆ. ಪದವಿ ದೊರೆತೊಡನೆ ಸಾಪ್ಟವೇರ್ ಕಂಪನಿಯಲ್ಲಿ ವೃತ್ತಿ ಆರಂಭಿಸುತ್ತಾಳೆ. ಈಗಂತೂ ನೃತ್ಯ ದೂರವೇ ಆಗುತ್ತದೆ.

ತಾನು ಕೆಲಸ ಮಾಡುವ ಕಂಪನಿಯಲ್ಲೆ ಅದರ ಉದ್ಯೋಗಿಗಳು ಸೇರಿ “ಕ್ರೇಜಿ ಲೆಗ್ಸ್” ಎಂಬ ಡ್ಯಾನ್ಸ್ ಕ್ಲಬ್ ಆರಂಭಿಸಿರುತ್ತಾರೆ. ಇದನ್ನು ನೋಡಿದ ಸೋನಾಲಿ ಕನಸು ಮತ್ತೆ ಚಿಗುರುತ್ತದೆ. ಬಾಲ್ಯದ ಕನಸಿಗೆ ಜೀವ ಬರುತ್ತದೆ. ಕ್ರೇಜಿ ಲೆಗ್ಸ್ ಗೆ ಸೇರಿ ಮತ್ತೆ ನರ್ತಿಸಲು ಆರಂಭಿಸುವ ಸೋನಾಲಿ ಕ್ಲಬ್ ನ ಖಾಯಂ ವಿದ್ಯಾರ್ಥಿಯಾಗುತ್ತಾಳೆ.ಬಾಲ್ಯದ ಅದೇ ಚುರುಕು, ಲವಲವಿಕೆ ಮತ್ತೆ ಮೂಡುತ್ತದೆ. ತನ್ನ ಪ್ರತಿಭೆಯ ವಿಕಸನಕ್ಕೆ ಸಿಕ್ಕಿದ ಅವಕಾಶ ಅವಳಲ್ಲಿದ್ದ ನಾಟ್ಯ ಮಯೂರಿ ಮತ್ತೆ ಗರಿಗೆದರುವಂತೆ ಮಾಡುತ್ತದೆ. ವೃತ್ತಿಯ ಒತ್ತಡದ ನಡುವೆಯೂ ಸಮಾರಂಭಗಳಿಗೆ, ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾಳೆ. ಇದೇ ಸಮಯ ತನ್ನ ಹವ್ಯಾಸ ಮೆಚ್ಚುವ ಹುಡುಗನ ಮನದರಸಿ ಕೂಡ ಆಗುತ್ತಾಳೆ ಸೋನಿಯಾ.

ಮತ್ತೆ ವೇದಿಕೆಯಲ್ಲಿ ನಲಿವ ಸೋನಾಲಿ ಈಗ ಮುಂದುವರಿಯಲು ಯೋಚಿಸುತ್ತಾಳೆ. ನರ್ತಿಸುವುದರ ಜೊತೆಗೆ ಕೊರಿಯೋಗ್ರಾಫಿ ಆರಂಭಿಸುತ್ತಾಳೆ. ಈ ನಿರ್ಧಾರ ಅವಳ ನೃತ್ಯ ಜೀವನಕ್ಕೆ ಸಿಕ್ಕ ದೊಡ್ಡ ಬ್ರೇಕ್ ಆಗುತ್ತದೆ.ತನ್ನದೇ ನೃತ್ಯ ತಂಡ ಆರಂಭಿಸಿ ನೃತ್ಯ ಸಂಯೋಜಿಸುತ್ತಾಳೆ. ಹಗಲು ದುಡಿದು ತಡರಾತ್ರಿವರೆಗೆ ತನ್ನ ತಂಡದ ಜೊತೆ ಇರುತ್ತಾಳೆ.ತಂಡಕ್ಕೆ ಅವಕಾಶಗಳು ದೊರೆಯುತ್ತದೆ. ಸೋನಾಲಿ ಅಭಿಮಾನಿ ಬಳಗ ವೃದ್ಧಿಸುತ್ತದೆ. ಹೆಸರು ಮತ್ತಷ್ಟು ಪ್ರಸಿದ್ಧಿಗೆ ಬರುತ್ತದೆ. ಸೆಲೆಬ್ರಿಟಿ ಸಮಾರಂಭಗಳಿಗೆ ಆಹ್ವಾನ ಖಾಯಂ ಆಗುತ್ತದೆ. ಸೋನಾಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಜನರಿಗೆ ಮತ್ತಷ್ಟು ಹತ್ತಿರವಾಗಬೇಕೆಂದು ಸೋನಾಲಿ ತನ್ನದೇ ಯೂ ಟ್ಯೂಬ್ ಚಾನಲ್ “LiveToDance With Soanali” ಆರಂಭಿಸುತ್ತಾಳೆ. ತನ್ನ ನೃತ್ಯ ಮತ್ತು ತಾನು ಕೊರಿಯೋಗ್ರಾಫಿ ಮಾಡಿದ ಎಲ್ಲ ನೃತ್ಯಗಳನ್ನು ಅಪ್ಲೋಡ್ ಮಾಡುತ್ತಾಳೆ. ವೃತ್ತಿ ಮತ್ತು ನೃತ್ಯದ ನಡುವೆ ಹೊಂದಾಣಿಕೆ ಕಷ್ಟವಾದಂತೆ ಕೆಲಸ ತೊರೆದು ಪೂರ್ಣಪ್ರಮಾಣದಲ್ಲಿ ನೃತ್ಯಕ್ಕೆ ಮೀಸಲಾಗುತ್ತಾಳೆ. ಯೂ ಟ್ಯೂಬ್ ನಲ್ಲಿ ಬಹು ದೊಡ್ಡ ಸ್ಟಾರ್ ಆಗುತ್ತಾಳೆ. ಇವಳ ಪ್ರತಿ ನಿರ್ಧಾರದ ಹಿಂದೆ ಪತಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ.

ಯಶಸ್ಸು ಬಾಗಿಲು ಬಡಿಯಲು ಆರಂಭಿಸುತ್ತದೆ. ಇದೇ ಸಮಯ “Nashi Si Chadh Gayi” ಮತ್ತು “Shape Of You” ಎಂಬ ಇವಳ ಕೊರಿಯೋಗ್ರಾಫಿಯ 2 ಹಾಡುಗಳು ಯೂ ಟ್ಯೂಬ್ ನಲ್ಲಿ ಬಹಳ ಜನಪ್ರಿಯವಾಗುತ್ತವೆ. ಯಶಸ್ಸಿನ ಉತ್ತುಂಗಕ್ಕೇರುವ ಸೋನಾಲಿ ಭಾರತದ ಅತಿ ಜನಪ್ರಿಯ ನೃತ್ಯಗಾತಿಯೆನಿಸಿಕೊಳ್ಳುತ್ತಾಳೆ.

ಯೂ ಟ್ಯೂಬ್ ನ ಸ್ಟಾರ್ ಆಗುವ ಸೋನಾಲಿಗೆ ಯೂ ಟ್ಯೂಬ್ ನಲ್ಲಿ 16 ಲಕ್ಷ ಫಾಲೋವರ್ ಗಳಿದ್ದಾರೆ. ಫೇಸ್ಬುಕ್ನಲ್ಲಿ77 ಸಾವಿರ ಮತ್ತು ಇನ್ಸ್ಟಾಗ್ರಾಮ್ ನಲ್ಲಿ 4.25 ಲಕ್ಷ ಫಾಲೋವರ್ ಗಳಿದ್ದಾರೆ.

ನೃತ್ಯವನ್ನು ಜೀವನವಾಗಿಸುವ ಸೋನಾಲಿ ವೃತ್ತಿಯನ್ನು ತ್ಯಜಿಸಿ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಳು. ಅಪಾರ ಜನಪ್ರಿಯತೆ ಪಡೆದು ಯುವ ಜನತೆಗೆ ಸ್ಫೂರ್ತಿಯಾದಳು. ತನ್ನ ಸಾಧನೆಯನ್ನು ಅಭಿಮಾನಿಗಳಿಗರ್ಪಿಸುವ ಸೋನಾಲಿ “ದೈನಂದಿನ ಜೀವನಕ್ಕೆ ಹೊಂದಿಕೊಳ್ಳಬೇಡಿ, ಬದಲಿಗೆ ನಿಮ್ಮ ಕನಸುಗಳನ್ನು ಬೆನ್ನಟ್ಟಿ” ಎನ್ನುತ್ತಾಳೆ.

-ತೇಜಸ್ವಿ ಕೆ, ಪೈಲಾರು, ಸುಳ್ಯ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಜನ್ಮ ಕ್ರಿಯೇಷನ್ಸ್ ರವರ “ವಂದೇ ಮಾತರಂ” ಕವರ್ ಸಾಂಗ್ ಬಿಡುಗಡೆ

Harshitha Harish

ರಾಮಾಯಣದ ಭರತ- ಸಂಜಯ್ ಜೋಗ್

Upayuktha

ರಾಮಾಯಣವೆಂಬ ಮಹಾಯಾನ: ವೀಕ್ಷಕರನ್ನು ತ್ರೇತಾಯುಗಕ್ಕೆ ಕರೆದೊಯ್ದ ಮಹಾ ದೃಶ್ಯಕಾವ್ಯ

Upayuktha
error: Copying Content is Prohibited !!