ಪ್ರಮುಖ ವಾಣಿಜ್ಯ ವ್ಯಾಪಾರ- ವ್ಯವಹಾರ

ವಿಶೇಷ ಪ್ಯಾಕೇಜ್‌ನಲ್ಲಿ ಎಂಎಸ್‌ಎಂಇಗಳಿಗೆ 3 ಲಕ್ಷ ಕೋಟಿ ರೂ ಸಾಲ: ಸರಕಾರದ ಗ್ಯಾರಂಟಿ ನಿರೀಕ್ಷೆ

ಹೊಸದಿಲ್ಲಿ: ಸರಕಾರದಿಂದ ಬಹು ನಿರೀಕ್ಷಿತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯಕ್ಕೆ (ಎಂಎಸ್‌ಎಂಇ) 3 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲದ ಪ್ಯಾಕೇಜ್ ಅನ್ನು ಒದಗಿಸುವ ಸಾಧ್ಯತೆಯಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‌ನಲ್ಲಿ ಈ ಮೊತ್ತ ಎಂಎಸ್‌ಎಂಇ ವಲಯಕ್ಕೆ ಹರಿದು ಬರಲಿದೆ. ಅಲ್ಲದೆ ಸರಕಾರಿ ಗುತ್ತಿಗೆಗಳ ವಿತರಣೆಯಲ್ಲಿ ಮತ್ತಷ್ಟು ಉದಾರ ನೀತಿಯನ್ನು ನಿರೀಕ್ಷಿಸಲಾಗಿದೆ.

ಇದರ ಜತೆಗೆ ಹೆಚ್ಚುವರಿಯಾಗಿ ಸಣ್ಣ ಉದ್ಯಮಗಳಿಗೇ ಮೀಸಲಾದ ‘ಮುದ್ರಾ’ ಸಾಲಗಳಿಗೆ ಹೆಚ್ಚಿನ ನಿಧಿಯನ್ನು ಸರಕಾರ ಒದಗಿಸಲಿದೆ ಎಂದು ಉನ್ನತ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿವೆ.

ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟೀ ಕಂಪನಿ (ನ್ಯಾಷನಲ್‌ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ) ಮೂಲಕ ಸಣ್ಣ ಉದ್ಯಮಗಳ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಬಂಡವಾಳವನ್ನು ಒದಗಿಸುವ ಪ್ರಸ್ತಾವವೊಂದನ್ನು ವಿತ್ತ ಸಚಿವಾಲಯ ಸಚಿವ ಸಂಪುಟದ ಮುಂದಿರಿಸಿದೆ.

ಪ್ರಸ್ತುತ 6 ಕೋಟಿಗೂ ಅಧಿಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಉದ್ಯಮಗಳಿಗೆ 15 ಲಕ್ಷ ಕೋಟಿ ರೂ.ಗಳ ಮೊತ್ತ ಬ್ಯಾಂಕ್‌ಗಳ ಮೂಲಕ ಹರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್‌ 20 ಮತ್ತು ಮೇ 8ರ ನಡುವೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತುರ್ತು ಸಾಲ ಮತ್ತು ಬಂಡವಾಳ ವೃದ್ಧೀಕರಣಕ್ಕೆ ಅರ್ಹ ಸಾಲಗಾರರ ಪೈಕಿ ಶೇ 97ರಷ್ಟು ಸಾಲಗಾರರನ್ನು ಸಂಪರ್ಕಿಸಿ 65, 879 ಕೋಟಿ ರೂ ಮೊತ್ತದ ಸಾಲ ಮಂಜೂರು ಮಾಡಿವೆ.

ಆದರೆ ಈ ಮೊತ್ತ ವೇತನ ನೀಡಿಕೆ ಮತ್ತು ಮಾರಾಟದ ಇತರ ಬಾಕಿಗಳನ್ನು ಪಾವತಿವುದಕ್ಕೇ ಸಾಕಾಗುವುದಿಲ್ಲ. ಅಲ್ಲದೆ ದೊಡ್ಡ ಉದ್ಯಮಗಳು ಮತ್ತು ಸರಕಾರಿ ಇಲಾಖೆಗಳಿಂದ ಬರಬೇಕಾದ ಪಾವತಿಗಳು ಬಾರದೆ ಎಂಎಸ್‌ಎಂಇ ವಲಯಕ್ಕೆ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ವಿತ್ತ ಸಚಿವಾಲಯ ಮತ್ತು ಎಂಎಸ್‌ಎಂಇ ಸಚಿವಾಲಯಗಳು ಈ ನೆರವಿನ ಪ್ರಸ್ತಾವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.

ಎಂಎಸ್‌ಎಂಇಗಳಿಗೆ ಹೆಚ್ಚಿನ ನಿಧ ಒದಗಿಸಲು ಬ್ಯಾಂಕುಗಳಿಗೆ ಹೆಚ್ಚುವರಿ ಕಾರ್ಯವಾಹಿ ಬಂಡವಾಳವನ್ನು ಒದಗಿಸುವುದರ ಜತೆಗೆ ಪ್ರಸ್ತುತ ಆರ್‌ಬಿಐ ಘೋಷಿಸಿರುವ ಸಾಲ ಮರುಪಾವತಿ ಮೇಲಿನ ಮೂರು ತಿಂಗಳ ರಜೆಯನ್ನು ಇನ್ನಷ್ಟು ವಿಸ್ತರಿಸಲು ಸರಕಾರ ಕ್ರ ಕೈಗೊಳ್ಳುವ ನಿರೀಕ್ಷೆಯಿದೆ. ಆ ಮೂಲಕ ಎಂಎಸ್‌ಎಂಇ ವಲಯದ ಮೇಲೆ ಮರುಪಾವತಿಯ ಒತ್ತಡ ಬೀಳದಂತೆ ನೋಡಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಮಾರಾಟವಿಲ್ಲದೆ ಕಂಗೆಟ್ಟಿರುವ ಮತ್ತು ಹಣಕಾಸಿನ ಲಿಕ್ವಿಡಿಟಿ (ಹರಿವು) ಕೊರತೆ ಎದುರಿಸುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೆರವಾಗುವುದು ಸರಕಾರದ ಉದ್ದೇಶವಾಗಿದೆ.

ತಕ್ಷಣದ ನಗದು ಕೊರತೆಯನ್ನು ನಿವಾರಿಸುವುದು ಮತ್ತು ಎಂಎಸ್ಎಂಇ ವಲಯದ ಬಗ್ಗೆ ನೂತನ ವ್ಯಾಖ್ಯಾನವೊಂದನ್ನು ಪ್ರಕಟಿಸುವುದು ಕೂಡ ಪಾರುಗಾಣಿಕೆ (ಬೇಲ್‌ಔಟ್‌) ಪ್ಯಾಕೇಜ್‌ನಲ್ಲಿ ಸೇರಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಸರಕಾರಿ ಗುತ್ತಿಗೆಗಳ ಒಂದು ನಿರ್ದಿಷ್ಟ ಪ್ರಮಾಣವನ್ನು ಭಾರತೀಯ ಉದ್ಯಮಿಗಳಿಗೇ ನೀಡುವುದು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಂದಲೇ ಕಡ್ಡಾಯ ಖರೀದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಹೋಟೆಲ್‌ ಉದ್ಯಮದ ಮಹಾತಾರೆ: ರಾಯ್ ಬಹಾದ್ದೂರ್ ಮೋಹನ್ ಸಿಂಗ್ ಒಬೆರಾಯ್

Upayuktha

ಫೆ. 21ರಿಂದ 23: ಪುತ್ತೂರಿನಲ್ಲಿ 2ನೇ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

Upayuktha

80ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ 4ನೇ ದಿನದ ಬೆಳಗ್ಗಿನ ಸ್ಪರ್ಧೆಗಳ ವಿವರ

Upayuktha