ಪೊಲೀಸರ ಅಮಾನತು ಪ್ರಕರಣ
ಮಂಗಳೂರು: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ…. ಇದು ಸದ್ಯ “ಸಿಸಿಬಿ ಪೊಲೀಸರು ಕಾರು ಮಾರಾಟ” ಪ್ರಕರಣದ ತನಿಖೆಯ ವೈಖರಿಗೆ ಹೇಳಿ ಮಾಡಿಸಿದಂತಿದೆ.
ಯಾವ ರಗಳೆಗೂ ಇಲ್ಲದ, ಪ್ರಕರಣದಲ್ಲಿ ನೈತಿಕವಾಗಿ ಯಾವ ತಪ್ಪೂ ಮಾಡದ ಎನ್ಸಿಪಿಎಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಅವರ ಫೋಟೊ ಮಾಧ್ಯಮಗಳಲ್ಲಿ ಬರುವಾಗ ಯಾರಿಗಾದರೂ ಸತ್ಯ ತಿಳಿದ ಹೃದಯವಂತರಿಗೆ ಹೃದಯ ಕರಗಲೇ ಬೇಕು. ಉಳಿದವರ ಸ್ಥಿತಿ ಭಿನ್ನವೇನಿಲ್ಲ.
ಕದ್ದ ಕಾರು ಮಾರಾಟ ಎಂದು ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಆದರೆ ಈ ಕಾರನ್ನು ಖುದ್ದು ಮಾಲೀಕನೇ ಇನ್ನೊಬ್ಬರಿಗೆ ಮಾರಾಟ ಮಾಡಿದ್ದಾನೆ. ಕಾರಿನ ದಾಖಲೆಗಳನ್ನು ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ.
ಇಲ್ಲಿ ಪೊಲೀಸ್ ಅಧಿಕಾರಿ ಕಾರನ್ನು ಖರೀದಿಸಲು ಪ್ರಭಾವ ಬೀರಿದ್ದಾರೆ. ಇದು ತಪ್ಪೇ .. ಆದರೆ ಶಿಕ್ಷೆ ಯಾರಿಗೆ?
ಹೀಗಾಗಿ ಇಲ್ಲಿ ಆದದ್ದೇನು ಎನ್ನುವುದನ್ನು ಮೊದಲು ಸರಳವಾಗಿ ಹೇಳಬೇಕು.
ಹಣ ದ್ವಿಗುಣ ಗೊಳಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ನೆಲ್ಯಾಡಿಯ ಮಹಿಳೆಯೊಬ್ಬಳು ನೆಲ್ಯಾಡಿಯ ಠಾಣೆಗ ದೂರು ನೀಡುತ್ತಾಳೆ. ಅಲ್ಲಿ ಏನೂ ಆಗದಿದ್ದಾಗ ಪೊಲೀಸ್ ಅಧಿಕಾರಿಗಳ ಜತೆ ನಂಟು ಹೊಂದಿರುವ ಪ್ರಭಾವಿ ಮೂಲಕ ಮಂಗಳೂರು ಪೊಲೀಸ್ ಕಮಿಷನರ್ಗೆ ದೂರು ನೀಡಲಾಗುತ್ತದೆ. ಅವರು ಆರೋಪಿಗಳ ಕಚೇರಿ ಮಂಗಳೂರಲ್ಲಿ ಇರುವುದರಿಂದ ಕೇಸ್ ದಾಖಲಿಸುತ್ತಾರೆ. ಆಗ ಅವರ ಬಳಿ ಇದ್ದ ಮೂರು ಐಶಾರಾಮಿ ಕಾರು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಅದರಲ್ಲಿ ಜಾಗ್ವಾರ್ ಕಾರು ಮಾತ್ರ ಆರೋಪಿಯ ಹೆಸರಲ್ಲಿ ಇರುವುದಿಲ್ಲ. ಆಗ ಒಬ್ಬ ಅಧಿಕಾರಿಗೆ ಕಾರಿನ ಮೇಲೆ ಮನಸ್ಸಾಗುತ್ತದೆ. ತನ್ನ ಗೆಳೆಯನ ಮೂಲಕ ಬೇನಾಮಿಯಾಗಿ ಕಾರು ಖರೀದಿಸಲು ಪ್ಲಾನ್ ಮಾಡುತ್ತಾರೆ. ಬೆಂಗಳೂರಿನ ಬೂಪಿಂದರ್ ತೇಜ್ ಸಿಂಗ್ ಹೆಸರಲ್ಲಿ ಕಾರು 16 ಲಕ್ಷಕ್ಕೆ ನಿಯಮಬದ್ಧವಾಗಿಯೇ ಮಾರಾಟವಾಗುತ್ತದೆ.
ಸಿಸಿಬಿ ವಶದಲ್ಲಿದ್ದ ಕಾರನ್ನು “ಆರೋಪಿಯ ಹೆಸರಲ್ಲಿ ಕಾರು ಇಲ್ಲ ಬಿಟ್ಟು ಬಿಡಿ” ಎಂದು ಕಿರಿಯ ಅಧಿಕಾರಿಗಳಿಗೆ ಹಿರಿಯ ಅಧಿಕಾರಿ ಸೂಚಿಸುತ್ತಾರೆ ಈ ಸೂಚನೆಯನ್ನು ಪಾಲಿಸಿದ್ದೇ ಕಿರಿಯ ಪೊಲೀಸರ ಅಮಾನತಿಗೆ ಹೇತುವಾಗುತ್ತದೆ.
ವಿಚಿತ್ರ ಎಂದರೆ ಹಣ ದ್ವಿಗುಣಗೊಳಿಸುವ ವಂಚನೆ ಮಾಡಿದ ವಂಚಕರ ಫೋಟೊ ಪತ್ರಿಕೆಗಳಲ್ಲಿ ಬರಲಿಲ್ಲ. ಕಾರು ಮಾರಾಟವಾದ ಬಳಿಕ ಬಂದ ಹಣದಲ್ಲಿ 6ಲಕ್ಷ ರು. ಪಡೆದುಕೊಂಡ ಸಂತ್ರಸ್ತೆಯ ಹೇಳಿಕೆ ಮಾಧ್ಯಮಗಳಲ್ಲಿ ಬರಲಿಲ್ಲ.
ಆರೋಪಿಯ ಬಳಿಯಿಂದ ಕಾರನ್ನು ತಂದ ಪೊಲೀಸರ ವಿಚಾರಣೆ ನಡೆಸಿಲ್ಲ. ಆರೋಪಿಯನ್ನು ಬಂಧಿಸಿದ ಎಎಸ್ಐ ಅವರ ವಿಚಾರಣೆ ನಡೆಸಿಲ್ಲ, ಹೇಳಿಕೆ ಪಡೆದಿಲ್ಲ. ಹಿಂದಿನ ಸಿಸಿಬಿ ಇನ್ಸ್ಪೆಕ್ಟರ್ ಹೆಸರು ಈ ಪ್ರಕರಣದಲ್ಲಿ ಪದೇ ಪದೇ ಮಾಧ್ಯಮಗಳಲ್ಲಿಯೂ ಪ್ರಕಟವಾಗುತ್ತಿತ್ತು.
ವಿಚಾರಣೆ ಸಂದರ್ಭ ಸಿಸಿಬಿಯ ಹಿಂದಿನ ಮುಖ್ಯಸ್ಥರನ್ನೇ ಕೈ ಬಿಡಲಾಗಿದೆ.
ವೆಂಟಿಲೇಟರ್ ನಲ್ಲಿದ್ದ ಸಿಬ್ಬಂದಿ ಫಿಕ್ಸ್!
ಕಾರು ಕೇಸ್ ಆಗಿರುವುದು 2020 ಅ.26. ಕಾರನ್ನು ವಶಕ್ಕೆ ಪಡೆದಿರುವುದು ಅ.26.
ವಿಶೇಷ ಎಂದರೆ ಈ ಆರೋಪಿಗಳ ಬಂಧನ, ಕೇಸ್ ದಾಖಲಾದ ಸಂದರ್ಭ ಸಿಸಿಬಿ ಸಿಬ್ಬಂದಿಯೊಬ್ಬರು ಕೊರೊನ ಬಂದು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಬಳಿಕ ಕ್ವಾರಂಟೇನ್ನಲ್ಲಿದ್ದರು. ಆ ಸಿಬ್ಬಂದಿಯನ್ನೂ ಕೇಸ್ ಒಳಗೆ ಫಿಕ್ಸ್ ಮಾಡಲಾಗಿದೆ.
ಅವರೀಗ ಮಾನನಷ್ಟ ಮೊಕದ್ದಮೆ ಮತ್ತು ಕೆಎಟಿಗೆ ದೂರು ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ ಎಂದು ನಿಕಟವರ್ತಿಗಳು ಹೇಳುತ್ತಿದ್ದಾರೆ.
ಇದೆಲ್ಲ ನೋಡುವಾಗ ಮೂಡುವ ಪ್ರಶ್ನೆ?.. ಒಂದು ಕೊಲೆ ನಡೆದರೆ ಪೊಲೀಸರು ಹೇಗೆ ತನಿಖೆ ನಡೆಸುತ್ತಾರೆ?
ಕೊಲೆಯಾದವ ಯಾರು?, ಅವನ ಮೇಲೆ ದ್ವೇಷ ಯಾರಿಗೆ ಇತ್ತು ಜತೆಗೆ ಸಿಸಿ ಕ್ಯಾಮೆರಾ, ಸಿಡಿಆರ್ ಮೊದಲಾದ ಪೂರಕ ದಾಖಲೆಗಳನ್ನು ನೋಡಿ ಆರೋಪಿಯನ್ನು ಪತ್ತೆ ಹಚ್ಚಿ ತನಿಖೆ ನಡೆಸುತ್ತಾರೆ.
ಇಲ್ಲಿ ತನಿಖೆ ಹೇಗೆ ನಡೆದಿರಬಹುದು ಎಂದರೆ ಕೊಲೆಗೆ ಬಳಸಲಾದ ತಲವಾರ್ ಎಲ್ಲಿ ನಿರ್ಮಿಸಿದ್ದು, ಅದಕ್ಕೆ ಕಬ್ಬಿಣವನ್ನು ಎಲ್ಲಿಂದ ಖರಿದಿಸಿದ್ದು ಅದನ್ನು ಯಾವ ಅಂಗಡಿಯಲ್ಲಿ ಹಂತಕ ಖರೀದಿಸಿದ್ದು ಅಂಗಡಿಯ ಯಜಮಾನ ಯಾರು? ಬಳಿಕ ಸಾಣೆ ಮಾಡಿದವರು ಯಾರು? ಈ ರೀತಿ ಆ ವ್ಯಕ್ತಿಗಳ ವಿಚಾರಣೆ.
ಬಳಿಕ ಫೋಟೊಗಳನ್ನು ಅವರ ವಿಚಾರಣೆಗಳ ವಿವರಗಳನ್ನು ಎಲ್ಲ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ರೆ ಹೇಗಿರುತ್ತದೆ!
ಕಾರು ಮಾರಾಟ ಪ್ರಕರಣದಲ್ಲಿ ಆದದ್ದೂ ಇಷ್ಟೇ…. ಇದರಲ್ಲಿ ಮುಖ್ಯ ಪಾತ್ರಧಾರಿಗಳು ಇನ್ನೂ ಕಾಣಿಸಿಕೊಂಡಿಲ್ಲ. ಅದನ್ನು ನಾವು ಹೇಳುತ್ತೇವೆ ಕೇಳಿ.
ಈ ಪ್ರಕರಣದಲ್ಲಿ ಜಾಗ್ವಾರ್ ಕಾರು ಖರೀದಿಸಿದವರು ಬೆಂಗಳೂರಿನ ಭೂಪಿಂದರ್ ತೇಜ್ ಸಿಂಗ್. ಅವರಿಗೆ ಕಾರನ್ನು ಕೊಟ್ಟವ ಅಂದರೆ ಮಾರಾಟ ಮಾಡಿದವ ಆರೋಪಿಯ ಮಗ ವೈಶಾಖ್. ಮೂಲ ಮಾಲೀಕನಿಂದ ೧೬ ಲಕ್ಷಕ್ಕೆ ಕಾರು ಮಾರಾಟವಾಗಿದೆ. ಇದರಲ್ಲಿ ಸಂತ್ರಸ್ತರ ಖಾತೆಗೆ ಆರೋಪಿಗಳು ದುಡ್ಡೂ ಹಾಕಿದ್ದಾರೆ.
ಅಂದ ಹಾಗೆ ೨೦೦೭ರ ಮಾಡೆಲ್ನ ರ್ಡ್ ಹ್ಯಾಂಡ್ ಜಾಗ್ವಾರ್ ಕಾರಿಗೆ ಎಷ್ಟಿರಬಹುದು ನೀವೇ ಊಹಿಸಿ 15ರಿಂದ 2೦ ಲಕ್ಷ. ಪತ್ರಿಕೆಗಳಲ್ಲಿ ಅದರೆ ಬೆಲೆ 5೦ ಲಕ್ಷ, ಕೋಟ್ಯಂತರ ರು. ತಲುಪಿದೆ. ಅದು ತಿಳಿವಳಿಕೆ ಇಲ್ಲ ಎಂದು ಪಕ್ಕಕ್ಕಿಡೋಣ.
ದುರಂತ ಎಂದರೆ ಕಾರು ಖರೀದಿಸಿದ ಸಿಂಗ್ನನ್ನು ಇಲಾಖೆ ವಿಚಾರಣೆಗೆ ಕರೆದೇ ಇಲ್ಲ. ಕರೆದರೆ ಐಫಿಎಸ್ ಅಧಿಕಾರಿಗಳ ಗುಟ್ಟು ಹೊರಬೀಳುತ್ತದ್ದಲ್ಲಾ?!
ಅದಕ್ಕಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗ ಅಗತ್ಯ ಬಿದ್ದರೆ ಕಾರು ಖರೀದಿಸಿದವರ ವಿಚಾರಣೆಗೆ ಕರೆಸಲಾಗುವುದು ಎಂದು ನಿರೀಕ್ಷಣಾ ಜಾಮೀನು ರೀತಿಯಲ್ಲಿ ಜಾಣ್ಮೆ ಪ್ರದರ್ಶಿಸಲಾಗಿದೆ. (ಐಪಿಎಸ್ ಅಧಿಕಾರಿಗಳ ಬೇನಾಮಿ ಆಸ್ತಿಗಳನ್ನು ನೋಡಿಕೊಳ್ಳಲು ಇಂಥ ಸ್ನೇಹಿತ ವರ್ಗವೇ ಬೇಕಾದಷ್ಟಿವೆ.)
ಈ ಸಿಂಗ್ಗೂ ಮಂಗಳೂರಿನಲ್ಲಿದ್ದ ಐಪಿಎಸ್ ಅಧಿಕಾರಿಗಳಿಗೂ ಇರುವ ಸಂಬಂಧ ಏನು ಎನ್ನುವ ಕುರಿತು ಪೊಲೀಸರು ತನಿಖೆ ಮಾಡಿದರೆ ಬಡಪಾಯಿ ಪೊಲೀಸರನ್ನು ವಿಚಾರಣೆ ಗುರಿ ಮಾಡುವ, ಎಸ್ಐ, ಇನ್ಸ್ಪೆಕ್ಟರ್ಗಳನ್ನು ಅಮಾನತು ಮಾಡುವ ಅವರ ಫೋಟೊಗಳನ್ನು ಸತತವಾಗಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಪ್ರಸಂಗವೇ ಎದುರಾಗುತ್ತಿರಲಿಲ್ಲ.
ಅಯ್ಯೋ ಅದು ಹೇಗಾಗುತ್ತದೆ! ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸೋದು ಹೇಗೆ_ ಎಂಬ ಪ್ರಶ್ನೆ ಬರುತ್ತದೆ. ಅದು ಕಷ್ಟ ಎಂದಾದರೆ ಜಾಗ್ವಾರ್ ಕಾರಿನಲ್ಲಿ ಇನ್ಬಿಲ್ಟ್ ಜಿಪಿಎಸ್ ಸಿಸ್ಟಮ್ ಇದೆ. ಅದು ಕಳೆದ ಮೂರು ತಿಂಗಳಿಂದ ಯಾವ ಸ್ಥಳ ತೋರಿಸುತ್ತಿತ್ತು ಎಂಬುದನ್ನು ಕಣ್ಣು ಮುಚ್ಚಿ ತೆರೆಯವುದರೊಳಗೆ ಸುಲಭವಾಗಿ ತಿಳಿಯಬಹುದು.
ಇನ್ನು ಕಾರು ಖರೀದಿಸಿದ್ದಾರೆ ಎಂದು ಸಂಶಯ ಇರುವ ಪೊಲೀಸ್ ಮೇಲಧಿಕಾರಿಗಳ ಮೊಬೈಲ್ ಸಿಡಿಆರ್ ತೆಗೆದರೆ ಎರಡಕ್ಕೂ ಟ್ಯಾಲಿಯಾದರೆ ಅಲ್ಲಿಗೆ ಕೇಸ್ ಕಥಂ.
ಚಿಟಿಕೆ ಹೊಡೆಯುವುದರಲ್ಲಿ ಕಾರು ಕದ್ದವ ಯಾರು ಮಾರಾಟ ಮಾಡಿದವ ಯಾರು ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಾಗುತ್ತಿತ್ತು.
ವಿಷಯ ಇಲ್ಲೇ ಇರೋದು.
ಅದು ಗೊತ್ತಾಗಬಾರದು…
ಈ ವಿಚಾರ ಪೊಲೀಸ್ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ. ವಾಸನೆಯಿಂದಲೇ ಶವ ಕೊಳೆತು ಎಷ್ಟು ದಿನವಾಗಿದೆ ಎಂದು ಹೇಳಬಲ್ಲ, ಕೊಲೆಯಾದ ರೀತಿ ನೋಡಿದರೆ ಯಾರು, ಯಾಕೆ ಕೊಲೆ ಮಾಡಿದ್ದಾರೆ ಎಂದು ಅಂದಾಜಿಸುವ ಸೂಕ್ಷ್ಮ ಮತಿ ಪೊಲೀಸರಿಗಿದೆ.
ಆದರೆ ಈ ತನಿಖೆಯಲ್ಲಿ ಇದ್ದ ಏಕ ಮಾತ್ರ ಉದ್ದೇಶ ಸಿಸಿಬಿಯ ಹಿಂದಿನ ಎಸ್ಐ ಮತ್ತು ಇಬ್ಬರು ಪೊಲೀಸರರ ಬಲಿ ಪಡೆಯುವುದು. ಮಂಗಳೂರಲ್ಲಿ ಡ್ರಗ್ಸ್ ಹಗರಣವನ್ನು ಬಯಲಿಗೆ ಎಳೆದವರೂ ಈ ಮೂವರೇ. ಆ ಸಂದರ್ಭದಲ್ಲಿ ರಾಜಕಾರಣಿಗಳ ಹೆಸರನ್ನು ಇವರೇ ಉದ್ದೇಶಪೂರ್ವಕವಾಗಿ ಎಳೆದು ತಂದಿದಾರೆ, ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎನ್ನುವ ಅನುಮಾನ ಸಂಶಯಗಳೇ ಇಷ್ಟಕ್ಕೆಲ್ಲಾ ಕಾರಣ.
ಇದರ ಜತೆಗೆ ಸಿಸಿಬಿಯಲ್ಲಿದ್ದಾಗ ದಾಳಿಯಿಂದ ಹೊಡೆತ ತಿಂದ ಅನೇಕ ಕುಳಗಳೂ ಇತ್ತ ಕಡೆ ಒಂದುಗೂಡಿದ್ದರು. ಮಾಧ್ಯಮ ಮತ್ತು ರಾಜಕಾರಣಿಗಳಿಗೆ ಫೀಡ್ ಬ್ಯಾಕ್ ನೀಡುವ ಹೊಣೆ ಅವರು ಹೊತ್ತುಕೊಂಡರು.
ಇದೇ ಸಂದರ್ಭ ಉಳ್ಳಾಲದಲ್ಲಿ ಸಿಸಿಬಿ ಪೊಲೀಸರು ಬಾರ್ ನಲ್ಲಿ ಬುಕ್ಕಿಯೊಬ್ಬನ ಜತೆ ಸೇರಿ ಪಾರ್ಟಿ ಮಾಡಿದ ವೀಡಿಯೋ ವೈರಲ್ ಆಯಿತು. ಪರಿಣಾಮ ಅಲ್ಲಿನ ಸಿಬ್ಬಂದಿ ಸಿಸಿಬಿಯಿಂದ ಕಳಚಿಕೊಂಡರು.
ಆ ಆಕ್ರೋಶ ಸ್ಪೋಟಗೊಂಡ ಪರಿಣಾಮ ಸಿಸಿಬಿಯಲ್ಲಿದ್ದ ಸಿಬ್ಬಂದಿಗಳೇ ಕಾರು ಮಾರಾಟವಾದ ವಿಚಾರವನ್ನು ಹೊರಗೆ ಹಾಕಿದರು.
ಆದದ್ದೆಲ್ಲ ಒಳ್ಳೆಯದೇ. ಇಂಥ ಅನೇಕ ಪ್ರಕರಣಗಳು ಹೊರಗೆ ಬರಲಿ. ಅದೆಲ್ಲ ನೋಡಿದರೆ ಹಣ ಕೊಟ್ಟು ಕಾರುತೆಗೆದುಕೊಂಡ ಪ್ರಕರಣ ದೊಡ್ಡ ವಿಷಯವೇ ಅಲ್ಲ. ಇಲ್ಲಿ ಪ್ರಭಾವ ಬೀರಿದ್ದು ತಪ್ಪು. ಡ್ರಗ್ಸ್ ಜಾಲದಿಂದ 64 ಲಕ್ಷ ಕಲೆಕ್ಷನ್ ಮಾಡಿದ ಆರೋಪ ಅದು ಹೀನ, ನೀಚ ಅಪರಾಧ. ಕ್ರಿಮಿನಲ್ ಗಳಿಗೆ ಯರ್ಯಾರ ಸಿಡಿಆರ್ ಮಾರಾಟ ಮಾಡಿದ ಆರೋಪಗಳಿವೆ, ಚಿನ್ನದ ವ್ಯಾಪಾರಿಗಳಿಂದ ಚಿನ್ನ ದೋಚಿದ ಪ್ರಕರಣಗಳು ಆಗಾಗ ನಡೆಯುತ್ತಿವೆ.
ಯಾವುದೂ ತನಿಖೆಯೂ ಆಗಿಲ್ಲ. ಅಮಾನತು ಆಗಿಲ್ಲ. ಹಗರಣಗಳೂ ಹೊರ ಬರಲಿ. ಪೊಲೀಸ್ ಇಲಾಖೆಯಲ್ಲಿನ ಕೊಳೆ ಹೋಗಲಿ. ಆದರೆ ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕೇ ಹೊರತು ಅಮಾಯಕರಿಗಲ್ಲ.
ಸಿಸಿಬಿ ಬಲಿ, ಅಮಾನತು
ತನಿಖಾಧಿಕಾರಿಯೂ ಆಗಿದ್ದ ರಾಮಕೃಷ್ಣ ಅವರ ತಪ್ಪು ಏನೆಂದರೆ ಆ ಕಾರುಗಳ ಕೀಯನ್ನು ತನಿಖೆಗಾಗಿ ಸಿಸಿಬಿಯವರಿಂದ ಕೇಳಿ ಪಡೆದುಕೊಳ್ಳದಿರುವುದು. ಕೀ ಕೊಟ್ಟರೆ ತಾನೇ ಪಡೆಯುವುದು. ಇಂಥ ಕ್ಷುಲ್ಲಕ ತಪ್ಪಿಗೆ ಸಿಕ್ಕ ಶಿಕ್ಷೆ ಅಮಾನತು! ಯಾರದೋ ದ್ವೇಷಕ್ಕೆ, ಯಾರೋ ಮಾಡಿದ ತಪ್ಪಿಗೆ ಬಲಿಯಾಗುವುದೆಂದರೆ ಹೀಗೆಯೇ ಇರಬೇಕು…!
ಕಾರು ಬಳಸಿದ್ದು ಯಾರು?
ಇನ್ನೆರಡು ಕಾರುಗಳು ಧೂಳು ಹೊಡೆದು ಕೊಂಡು ಬಿದ್ದಿದ್ದವು.
ಒಂದು ವೇಳೆ ಕಾರುಗಳನ್ನು ಬಳಸಿದ್ದೇ ಆದರೆ ನಗರದ ಯಾವುದೇ ಸಿಸಿ ಕ್ಯಾಮರಾಗಳಲ್ಲಿ ನೋಡಿ ಸುಲಭದಲ್ಲಿ ಖಚಿತಪಡಿಸಿಕೊಳ್ಳಬಹುದು_
ಆದರೆ ಆ ಕೆಲಸ ಮಾಡದೆ ವಿಚಾರಣೆ ಶಾಸ್ತ್ರ ಮಾಡಿ ಕಾರನ್ನು ಪೊಲೀಸ್ ಸಿಬ್ಬಂದಿ ಬಳಸುತ್ತಿದ್ದರು ಎಂದು ಷರಾ ಬರೆದು ಬಿಟ್ಟರು. ನಿಜವಾಗಿ ಬಳಸಿದ್ದರೆ ಬೇರೆ ಮಾತು.
ನಿಜವಾಗಿಯೂ ಜಾಗ್ವಾರ್ ಕಾರು ಬಳಸುತ್ತಿದ್ದ ಹಿರಿಯ ಪ್ರಭಾವಿ ಅಧಿಕಾರಿ ಮಾತ್ರ ಆರಾಮವಾಗಿದ್ದಾರೆ.. ಇದೆ ವಿಪರ್ಯಾಸ!
ಪ್ರಭಾವಿಗಳ ಕೈವಾಡ
ಡಿಸಿಪಿ ತನಿಖೆ ನಡೆಸಿದ ಬಳಿಕ ಪೊಲೀಸ್ ಕಮಿಷನರ್ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿ¸ಸುವುದು ಮಾಮೂಲು ಪ್ರಕ್ರಿಯೆ. ಆದರೆ ನೇರವಾಗಿ ರಾಜ್ಯ ರಾಜಧಾನಿಯಿಂದ ಪೊಲೀಸ್ ಮಹಾನಿರ್ದೇಶಕರೇ ಅಮಾನತು ಆದೇಶ ಹೊರಡಿಸಿದ್ದಾರೆ.
ಅಂದರೆ ರಾಜಧಾನಿಯಿಂದಲೇ ಪ್ರಭಾವ ಬೀರಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇದರ ಹಿಂದೆ ಕರಾವಳಿಯ ರಾಜ್ಯ ಮಟ್ಟದ ಪ್ರಭಾವ ಇರುವ ರಾಜಕಾರಣವೂ ಸೇರಿಕೊಂಡಿದೆ ಎನ್ನುವುದು ಸ್ಪಷ್ಟ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ