ಇತರ ಕ್ರೀಡೆಗಳು ಕ್ರೀಡೆ ಸಾಧಕರಿಗೆ ನಮನ

ವೇಗದ ನಡಿಗೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಬೆಟ್ಟಂಪಾಡಿಯ ದೀಕ್ಷಿತ್

ಸಮಾಜದಲ್ಲಿ ತನ್ನನ್ನು ಇತರರು ಗುರುತಿಸುವಂತಹ ಸಾಧನೆ ಮಾಡಬೇಕೆಂಬ ಹಂಬಲ ಎಲ್ಲರಲ್ಲೂ ಇದೆ. ಸಾಧನೆಗೆ ಶ್ರಮವೇ ಮುಖ್ಯ ಹೊರತು ಅದೃಷ್ಟ ಅಲ್ಲ ಎಂದು ನಂಬಿ, ಸತತ ಪ್ರಯತ್ನದ ಮೂಲಕವೇ ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಿದವರು ಬಹಳಷ್ಟು ಜನ ನಮ್ಮ ಸಮಾಜದಲ್ಲಿ ಇದ್ದಾರೆ. ಅಂತಹ ಕ್ರೀಡಾ ಸಾಧಕರಲ್ಲಿ ಬೆಟ್ಟಂಪಾಡಿಯ ದೀಕ್ಷಿತ್ ಕೂಡಾ ಒಬ್ಬರು.

ವೇಗವಾಗಿ ನಡೆಯುವುದರ ಮೂಲಕವೂ ರಾಷ್ಟ್ರ ಮಟ್ಟದ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ದೀಕ್ಷಿತ್ ಅವರು ಮೂಲತಃ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ನಿವಾಸಿ ಕಿಟ್ಟಣ್ಣ ಗೌಡ ಮತ್ತು ಚಂದ್ರಾವತಿ ದಂಪತಿಗಳ ಪುತ್ರ.

ಸಾಧನೆಯ ಹಾದಿಯಲ್ಲಿ ದೀಕ್ಷಿತ್:
8ನೇ ತರಗತಿಯಿಂದ ಕ್ರೀಡಾ ಅಭ್ಯಾಸಕ್ಕೆ ತೊಡಗಿದ ಇವರು 2015-16ರಲ್ಲಿ ಸ್ಪರ್ಧಿಯಾಗಿ ಕ್ರೀಡಾ ಕ್ಷೇತ್ರಕ್ಕೆ ತನ್ನನ್ನು ತಾನು ಪರಿಚಯಿಸಿಕೊಂಡರು. 2015-16ರಲ್ಲಿ ಪಟ್ಟೆಯಲ್ಲಿ ನಡೆದ ತಾಲೂಕು ಮಟ್ಟದ 5 ಕಿಲೋ ಮೀಟರ್ ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಜಿಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದ ಇವರು ಆಳ್ವಾಸ್‌ನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಪಡೆದರು.

2016-17ರಲ್ಲಿ ಬೆಂಗಳೂರಿನಲ್ಲಿ ನಡೆದ ಅಮೆಚೂರ್ ಕ್ರೀಡಾ ಕೂಟದಲ್ಲಿ 5 ಕಿಲೋ ಮೀಟರ್ ದೂರದ ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ‌. 2017-18ರಲ್ಲಿ ಆಳ್ವಾಸ್ ನಲ್ಲಿ ನಡೆದ ರಾಜ್ಯ ಮಟ್ಟದ ಅಮೆಚೂರ್ ಕ್ರೀಡಾ ಕೂಟದಲ್ಲಿ 10 ಕಿಲೋ ಮೀಟರ್ ದೂರದ ವೇಗದ ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 2018-19ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ 5 ಕಿಲೋ ಮೀಟರ್ ವೇಗದ ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡರು. ಅಲ್ಲಿಯೂ ಕೂಡ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದ ದೀಕ್ಷಿತ್ ಅವರು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡರು.

2019-20ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ 5 ಕಿಲೋ ಮೀಟರ್ ವೇಗದ ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದು ಪುನಃ ಉಡುಪಿಯಲ್ಲೇ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಪ್ರಾರಂಭದಿಂದಲ್ಲೇ ಕದಂಬ ಪ್ರಶಸ್ತಿ ವಿಜೇತರಾದ ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ಇವರಿಂದ ತರಬೇತಿ ಪಡೆಯುತ್ತಿದ್ದ ದೀಕ್ಷಿತ್ ಅವರು ಮುಂದೆ ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರಕಾಶ್ ಅವರಿಂದಲೂ ತರಬೇತಿ ಪಡೆದು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ದೀಕ್ಷಿತ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಮಿತ್ತಡ್ಕ ಸರ್ಕಾರಿ ಶಾಲೆಯಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯಲ್ಲಿ ಪಡೆದರು. ತನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದ ದೀಕ್ಷಿತ್ ಪ್ರಸ್ತುತ ತನ್ನ ಪದವಿ ಶಿಕ್ಷಣವನ್ನು ದಭೆ೯ಯ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಸುತ್ತಿದ್ದಾರೆ.

ತನ್ನ ಸಾಧನೆಯ ಮೂಲಕ ತನ್ನ ಊರಿಗೆ, ಜಿಲ್ಲೆಗೆ ಕೀರ್ತಿಯನ್ನು ತಂದು ಕೊಟ್ಟ ದೀಕ್ಷಿತ್ ಅವರು ‘ತನ್ನ ಸಾಧನೆಗೆ ಮನೆಯವರ, ಊರಿನವರ ಮತ್ತು ತನ್ನ ಎಲ್ಲಾ ಗುರುಗಳ ಪ್ರೋತ್ಸಾಹವೇ ಕಾರಣ’ ಎಂದು ಹೇಳುತ್ತಾರೆ. “ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ವಿದ್ಯಾರ್ಥಿ ಸರ್ಕಾರಿ ಶಾಲೆಯಲ್ಲಿ ಕಲಿಯಿತ್ತಾ ತನ್ನ ಪ್ರತಿಭೆಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗುತಾನೆಂದರೆ ಅದು ಅವನ ಬೆವರಿನ ಫಲ… ಅವನಿಗೆ ಯಶಸ್ಸು ಒಲಿದು ಬರಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರಕಾಶ್ ಇವರು ತನ್ನ ವಿದ್ಯಾರ್ಥಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕ್ರೀಡಾ ಜಗತ್ತಿನಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ಹಂಬಲ ಹೊಂದಿರುವ ದೀಕ್ಷಿತ್ ಅವರು ಭವಿಷ್ಯದಲ್ಲಿ ತಾನೊಬ್ಬ ಉತ್ತಮ ಪೊಲೀಸ್ ಆಫಿಸರ್ ಆಗಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾರೆ‌. ಇವರ ಸಾಧನೆಯ ಕೀರ್ತಿ ಇನ್ನಷ್ಟು ಎತ್ತರಕ್ಕೆ ಹಾರಲಿ, ಉತ್ತಮ ಪೊಲೀಸ್ ಆಗಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲಿ ಎಂದು ನಾವೆಲ್ಲ ಆಶಿಸೋಣ.

– ಸರೋಜ.ಪಿ‌.ಜೆ ದೋಳ್ಪಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಅಂತಾರಾಷ್ಟ್ರೀಯ ಶೂಟರ್ ವರ್ಲ್ಡ್ ನಂ.1 ಹೀನಾ ಸಿಧು

Upayuktha

ಇಂದಿನ ಐಕಾನ್- ಭಾರತೀಯ ರಾಜಕಾರಣದ ಅಜಾತಶತ್ರು, ಭಾರತ ರತ್ನ ವಾಜಪೇಯಿಜಿ

Upayuktha

ಸಾಧಕರಿಗೆ ನಮನ: ಭಾರತದ ಮಿಲ್ಕ್‌ ಮ್ಯಾನ್ ಡಾ. ವರ್ಗಿಸ್ ಕುರಿಯನ್

Upayuktha