ಪ್ರಮುಖ ರಾಜ್ಯ

ಗೋ ಹತ್ಯೆ ನಿಷೇಧ, ತಳಿ ಸಂವರ್ಧನೆಗೆ ಕಾಯ್ದೆ ಜಾರಿಗೆ ರಾಘವೇಶ್ವರ ಶ್ರೀ ಒತ್ತಾಯ

ಜಿಲ್ಲೆಗೊಂದು ಗೋಸ್ವರ್ಗ ಸ್ಥಾಪನೆ; ಗೋಮೂತ್ರ- ಗೋಮಯ ಮೌಲ್ಯವರ್ಧನೆಗೆ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆಯನ್ನು ಸೆ. 21 ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಆಂಗೀಕರಿಸಬೇಕು ಎಂದು ರಾಮಚಂದ್ರಾಪುರಮಠಾಧೀಶರಾದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶ್ರೀರಾಮಚಂದ್ರಾಪುರ ಮಠದಿಂದ ಚಾಲಿತವಾದ ಭಾರತೀಯ ಗೋಪರಿವಾರ ವತಿಯಿಂದ ಈಗಾಗಲೇ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗಿದೆ. ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳ ಕರ್ತವ್ಯ. ಅಭಯಾಕ್ಷರ ಅಭಿಯಾನದಡಿ ಪಕ್ಷಭೇದ, ಧರ್ಮಭೇದ ಮರೆತು ನಾಡಿನ ವಿವಿಧ ಮಠಾಧೀಶರು, ಧರ್ಮಗುರುಗಳು, ಸೆಲೆಬ್ರಿಟಿಗಳು, ಶಿಕ್ಷಣ ತಜ್ಞರು ಸೇರಿದಂತೆ ಸಮಾಜದ ಎಲ್ಲ ಸ್ತರಗಳ ಗಣ್ಯರು ಹಕ್ಕೊತ್ತಾಯ ಮಂಡಿಸಿದ್ದು, ಸರ್ಕಾರ ಇನ್ನು ವಿಳಂಬ ಮಾಡದೇ ಪ್ರಸಕ್ತ ಅಧಿವೇಶನದಲ್ಲೇ ಗೋಹತ್ಯೆ ನಿಷೇಧದ ಮಸೂದೆ ಆಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೋವಿನ ವಿಚಾರದಲ್ಲಿ ರಾಜಕೀಯ ಬೇಡ
ಗೋವು ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದ್ದರಿಂದ ಗೋವಿನ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸಿ ಸರ್ವಾನುಮತದಿಂದ ಆಂಗೀಕರಿಸಿ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಸಲಹೆ ಮಾಡಿದ್ದಾರೆ.

ಕೊರೋನಾ ಸಂಕಷ್ಟದ ಪ್ರಸಕ್ತ ಸಂದರ್ಭದಲ್ಲಿ ಗೋವು ಮತ್ತು ಗೋ ಆಧರಿತ ಕೃಷಿ ಗ್ರಾಮೀಣ ಜನತೆಗೆ ವರದಾನವಾಗಬಲ್ಲದು. ಕೇವಲ ಹಾಲಿಗಾಗಿ ಗೋವು ಎಂಬ ಮನೋಭಾವ ಬದಲಾಗಿ ಗೋಮೂತ್ರ- ಗೋಮಯ ಸದ್ಬಳಕೆ ಮೂಲಕ ಗೋ ಸಾಕಾಣಿಕೆಯನ್ನು ಲಾಭದಾಯಕ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡುವ ಕಾರ್ಯ ಆಗಬೇಕು. ಇದಕ್ಕೆ ಪೂರಕವಾಗಿ ಗೋಮೂತ್ರ, ಗೋಮಯ ಮೌಲ್ಯವರ್ಧನೆಗೆ ಸರ್ಕಾರ ಒತ್ತು ನೀಡಿದಲ್ಲಿ ಗ್ರಾಮೀಣ ಆರ್ಥಿಕ ಪುನಃಶ್ಚೇತನಕ್ಕೆ ಒತ್ತು ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಅಧಿವೇಶನದಲ್ಲೇ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಹಕ್ಕೊತ್ತಾಯ

ವಾರೀಸುದಾರರಿಲ್ಲದ ಗೋವುಗಳು ರಾಜ್ಯಾದ್ಯಂತ ಎಲ್ಲ ನಗರ- ಪಟ್ಟಣಗಳಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಈ ಪೈಕಿ ಬಹಳಷ್ಟು ಗೋವುಗಳು ಕಟುಕರ ಪಾಲಾಗುತ್ತಿವೆ. ಇದನ್ನು ತಪ್ಪಿಸಲು ಮತ್ತು ಆರಂಭದಿಂದಲೂ ಸ್ವಚ್ಛಂದವಾಗಿ ವಿಹರಿಸುತ್ತಾ ಬಂದ ಇಂಥ ಗೋವುಗಳ ಸ್ವಾತಂತ್ರ್ಯವನ್ನು ರಕ್ಷಿಸಲು ಪ್ರತಿ ಜಿಲ್ಲೆಯಲ್ಲಿ ಗೋಸ್ವರ್ಗ ನಿರ್ಮಿಸಬೇಕು. ಈಗಾಗಲೇ ಸಾವಿರಕ್ಕೂ ಹೆಚ್ಚು ಗೋವುಗಳ ಗೋಸ್ವರ್ಗ ನಿರ್ಮಿಸಿ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿರುವ ಶ್ರೀಮಠ ಇದಕ್ಕೆ ಅಗತ್ಯ ತಾಂತ್ರಿಕ ನೆರವು ನೀಡಲು ಸಿದ್ಧವಿದೆ ಎಂದು ವಿವರಿಸಿದ್ದಾರೆ.

ಗವ್ಯೋತ್ಪನ್ನಗಳ ಔಷಧೀಯ ಗುಣಗಳ ಬಗ್ಗೆ ಆಳವಾದ ಸಂಶೋಧನೆಗೆ ಒತ್ತು ನೀಡಬೇಕು ಮತ್ತು ಗವ್ಯೋತ್ಪನ್ನಗಳನ್ನು ಜನಪ್ರಿಯಗೊಳಿಸಲು ಅಗತ್ಯ ಕಾರ್ಯಯೋಜನೆ ರೂಪಿಸಬೇಕು. ಇದಕ್ಕಾಗಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಸರ್ಕಾರವೇ ಗವ್ಯೋತ್ಪನ್ನ ಮಾರಾಟ ಘಟಕಗಳನ್ನು ಸ್ಥಾಪಿಸಬೇಕು ಎಂದು ಹೇಳಿದ್ದಾರೆ.

ಗವ್ಯೋತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಒತ್ತು ನೀಡಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿ, ಜನ ವಲಸೆ ಹೋಗುವುದು ತಪ್ಪುತ್ತದೆ. ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಪೂರಕವಾಗಿ ಸರ್ಕಾರ ಹಾಲು ಸಂಗ್ರಹ ಕೇಂದ್ರಗಳಲ್ಲಿ ನಿಗದಿತ ದರಕ್ಕೆ ಗೋಮೂತ್ರ ಹಾಗೂ ಗೋಮಯ ಖರೀದಿಗೆ ವ್ಯವಸ್ಥೆ ಮಾಡಬೇಕು. ಛತ್ತೀಸ್‍ಗಢ ಸರ್ಕಾರ ಆರಂಭಿಸಿದ ಈ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಎಲ್ಲ ತಾಲೂಕುಗಳಲ್ಲಿ ಗವ್ಯೋತ್ಪನ್ನ ಘಟಕಗಳನ್ನು ಸ್ಥಾಪಿಸಿ, ಹೀಗೆ ಖರೀದಿಸಿದ ಗೋಮೂತ್ರ, ಗೋಮಯದ ಸಮರ್ಪಕ ಬಳಕೆಗೆ ಕಾರ್ಯಯೋಜನೆ ರೂಪಿಸಬೇಕು. ಉತ್ತರ ಪ್ರದೇಶ ಹಾಗೂ ಇತರ ಹಲವು ರಾಜ್ಯಗಳು ರಚಿಸಿರುವ ಗೋಸೇವಾ ಆಯೋಗಗಳು ಗೋಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಇದು ಕರ್ನಾಟಕಕ್ಕೂ ಮಾದರಿಯಾಗಬೇಕು ಎಂದು ಸಲಹೆ ಮಾಡಿದ್ದಾರೆ.

ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ನಾಡಿನ ಹಲವು ಮಠಮಾನ್ಯಗಳ ಮಠಾಧೀಶರು, ವಿಶ್ವ ಹಿಂದೂ ಪರಿಷತ್‍ನಂಥ ಸಂಘಟನೆಗಳು ಕೂಡಾ ಸಂಪೂರ್ಣ ಗೋವಧೆ ನಿಷೇಧಕ್ಕೆ ಆಗ್ರಹಿಸಿದ್ದಾರೆ. ಸಂಪೂರ್ಣ ಗೋವಧೆ ನಿಷೇಧ ಇಡೀ ಸಮಾಜದ ಒಕ್ಕೊರಲ ಹಕ್ಕೊತ್ತಾಯ. ಇದನ್ನು ಸರ್ಕಾರ ಮಾನ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋಹತ್ಯೆ ತಡೆಗೆ ಪ್ರಬಲ ಕಾನೂನು: ಈ ಅಧಿವೇಶನದಲ್ಲೇ ಅಂಗೀಕಾರಕ್ಕೆ ಒತ್ತಾಯಿಸಿ ಸರಕಾರಕ್ಕೆ ಪೇಜಾವರ ಶ್ರೀಪಾದರ ಪತ್ರ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪ್ರಧಾನಿ ನಿವಾಸದ ಎಸ್‌ಪಿಜಿ ಕಚೇರಿಯಲ್ಲಿ ಲಘು ಬೆಂಕಿ ಆಕಸ್ಮಿಕ

Upayuktha

ಚೊಕ್ಕಾಡಿ 80: ಕವಿ ಸುಬ್ರಾಯ ಚೊಕ್ಕಾಡಿ ಬದುಕು ಬರಹ- ಅವಲೋಕನ ಇಂದು ಸಂಜೆ 5ಕ್ಕೆ

Upayuktha

ಡಾ. ಯು.ಬಿ ರಾಜಲಕ್ಷ್ಮಿ ಅವರಿಗೆ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿ

Upayuktha

Leave a Comment