ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಗಣನೀಯ ಇಳಿಕೆ; ಈ ವರೆಗೆ 765 ಬಂಧನ

ಸಾಂದರ್ಭಿಕ ಚಿತ್ರ (ಕೃಪೆ: ಹಿಂದೂಸ್ಥಾನ್ ಟೈಮ್ಸ್)

ಹೊಸದಿಲ್ಲಿ:

ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್‌ 5ರಿಂದ ನವೆಂಬರ್ 15ರ ವರೆಗೆ 190 ಕಲ್ಲು ತೂರಾಟ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳು ನಡೆದಿದ್ದು, 765 ಮಂದಿಯನ್ನು ಬಂಧಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಜನವರಿ 1ರಿಂದ ಆಗಸ್ಟ್‌ 4 ವರೆಗಿನ ಅವಧಿಯಲ್ಲಿ 361 ಕಲ್ಲು ತೂರಾಟ ಮತ್ತು ಕಾನೂನುಭಂಗ ಪ್ರಕರಣಗಳು ನಡೆದಿದ್ದು, ಅದಕ್ಕೆ ಹೋಲಿಸಿದರೆ, 370ನೆ ವಿಧಿ ರದ್ದತಿಯ ಬಳಿಕ ಕಲ್ಲು ತೂರಾಟ ಮತ್ತು ಕಾನೂನುಭಂಗ ಚಟುವಟಿಕೆಗಳು ಅರ್ಧಕ್ಕಿಂತಲೂ ಕಡಿಮೆಯಾಗಿವೆ ಎಂದು ಲೋಕಸಭೆಗೆ ತಿಳಿಸಲಾಗಿದೆ. ಗೃಹಖಾತೆ ಕಿರಿಯ ಸಚಿವ ಜಿ ಕಿಶನ್ ರೆಡ್ಡಿ ಈ ವಿಷಯವನ್ನು ಮಂಗಳವಾರ ಸದನಕ್ಕೆ ತಿಳಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ, ಕಳೆದ 6 ತಿಂಗಳಲ್ಲಿ 34 ಲಕ್ಷ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅವರ ಪೈಕಿ 12,394 ಮಂದಿ ವಿದೇಶಿ ಪ್ರವಾಸಿಗರು. ಈ ಅವಧಿಯಲ್ಲಿ ಪ್ರವಾಸೋದ್ಯಮದ ಮೂಲಕ 25 ಕೋಟಿ ರೂ ಆದಾಯ ಬಂದಿದೆ ಎಂದು ತಿಳಿಸಿದರು.

ಆಗಸ್ಟ್ 5ರ ಬಳಿಕ ಕೆಲವು ದಿನಗಳ ಕಾಲ ಮುಚ್ಚಿದ್ದ ಕಣಿವೆಯ ಶಾಲೆಗಳು ಪುನಾರಂಭವಾದ ನಂತರ ಹಾಜರಾತಿ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ನಡೆಯುತ್ತಿರುವ ಪರೀಕ್ಷೆಗಳಲ್ಲಿ ಶೇ 99.7ರಷ್ಟು ಹಾಜರಾತಿ ದಾಖಲಾಗಿದೆ ಎಂದು ಸಚಿವರು ವಿವರಿಸಿದರು.

ತೀವ್ರ ಸ್ವರೂಪದ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಮಾತ್ರವೇ ಎದುರಿಸಲು ಗರಿಷ್ಠ ಎಚ್ಚರಿಕೆಯೊಂದಿಗೆ ಪೆಲೆಟ್ ಗನ್‌ಗಳನ್ನು ಬಳಸಲಾಗುತ್ತಿದೆ. ನಾಗರಿಕರ ಜೀವಹಾನಿ ತಪ್ಪಿಸಲು ಗರಿಷ್ಠ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

370ನೇ ವಿಧಿಯ ರದ್ದತಿ ಬಳಿಕ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ನಿಯಂತ್ರಣ ರೇಖೆಯುದ್ದಕ್ಕೂ 950 ಪ್ರಕರಣಗಳು ದಾಖಲಾಗಿವೆ ಎಂಧು ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ಸಚಿವರು ತಿಳಿಸಿದರು.

Related posts

ಮಹಾರಾಷ್ಟ್ರದಲ್ಲಿ ಕೋವಿಡ್​​ 2ನೇ ಅಲೆ: ಗಡಿಯಲ್ಲಿ ಮತ್ತೆ ಕಟ್ಟೆಚ್ಚರ

Sushmitha Jain

ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಕಪಿಲ್ ದೇವ್

Harshitha Harish

ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ನೂತನ ವಿಧೇಯಕ

Upayuktha