ವಿಜ್ಞಾನ-ತಂತ್ರಜ್ಞಾನ

Appತ ಸಲಹೆ: “ಸ್ತೋತ್ರಮಾಲಾ”- ನಿಮ್ಮ ಮೊಬೈಲ್‌ನಲ್ಲಿ ಈ ಆಪ್ ಇದೆಯಾ?

ಪ್ರತಿದಿನವೂ ಸ್ತೋತ್ರ ಹೇಳುವುದು/ಓದುವುದು ಆರೋಗ್ಯಕ್ಕೆ ಒಳ್ಳೆಯದು. ಅದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ, ಧೈರ್ಯ-ಸ್ಥೈರ್ಯ ತುಂಬುತ್ತದೆ. ದೇವರು ನಮ್ಮನ್ನು ರಕ್ಷಿಸುತ್ತಾನೆ ಎಂಬ ನಂಬಿಕೆಯನ್ನು ದೃಢಪಡಿಸುತ್ತದೆ. ಸಂಸ್ಕೃತದ ‘ಸ್ತು’ ಧಾತುವಿನಿಂದ ಬಂದ (ದೇವರನ್ನು ಸ್ತುತಿಸು, ಪ್ರಶಂಸಿಸು, ಪ್ರಾರ್ಥಿಸು ಎಂಬ ಅರ್ಥಗಳು) ಪದವೇ ಸ್ತೋತ್ರ.

ಆಟಪಾಠಗಳಾದ ಮೇಲೆ ಸಂಜೆಹೊತ್ತು ಕೈಕಾಲು ಮುಖ ತೊಳೆದುಕೊಂಡು ವಾರ-ತಿಥಿ-ನಕ್ಷತ್ರ-ಮಾಸ-ಸಂವತ್ಸರ ಮುಂತಾದುವುಗಳ ಹೆಸರುಗಳನ್ನು ಹೇಳುವ ‘ಬಾಯಿಪಾಠ’, ಹಾಗೆಯೇ ‘ಶ್ರೀ ರಾಮರಕ್ಷಾ ಸ್ತೋತ್ರ’, ‘ಗಣೇಶಪಂಚರತ್ನಮ್’ (ಮುದಾಕರಾತ್ತ ಮೋದಕಂ…), ಮತ್ತಿತರ ಕೆಲವು ಜನಪ್ರಿಯ ಸ್ತೋತ್ರಗಳನ್ನು ಮನೆಮಂದಿಯೆಲ್ಲ ಸೇರಿ ಹೇಳುವ ಕ್ರಮ ಚಿಕ್ಕಂದಿನಲ್ಲಿ ಇತ್ತು. ಮನಸ್ಸನ್ನು ಶುದ್ಧಗೊಳಿಸುವಷ್ಟೇ ಮುಖ್ಯವಾಗಿ ಉಚ್ಚಾರವನ್ನು ಶುದ್ಧಗೊಳಿಸುವ ಕೆಲಸವೂ ಈ ಸ್ತೋತ್ರಪಠಣದಿಂದ ಆಗುತ್ತಿತ್ತು.

ಪ್ರಸ್ತುತ ಕೊರೊನಾ ಭೀತಿ, ಲಾಕ್‌ಡೌನ್‌ನಿಂದಾಗಿ ಮನೆಯೊಳಗೇ ಇರಬೇಕಾದ ಅನಿವಾರ್ಯ, ಅನಿಶ್ಚಿತತೆ ಸಂದರ್ಭದಲ್ಲಿ ಸ್ತೋತ್ರಪಠಣ ಒಂದು ಒಳ್ಳೆಯ ಪರ್ಯಾಯ. ದಿನವಿಡೀ ಸುದ್ದಿವಾಹಿನಿಗಳನ್ನು ನೋಡುತ್ತ ಮನಸ್ಸನ್ನು ಭೀತಿಗೊಳಪಡಿಸುವುದಕ್ಕಿಂತ, ದಿನಕ್ಕೆ ಒಂದೇ ಒಂದು ಗಂಟೆ ಕಾಲ ಸ್ತೋತ್ರಗಳನ್ನು ಪಠಿಸಿದರೂ ಮನಸ್ಸಿನ ಮೇಲೆ ಬಹಳಷ್ಟು ಧನಾತ್ಮಕ ಪರಿಣಾಮ ಆಗುತ್ತದೆ. ಚಿಕ್ಕವರು ದೊಡ್ಡವರೆನ್ನದೆ ಮನೆಮಂದಿಯೆಲ್ಲ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ “stotramaala” App ಒಂದು ಒಳ್ಳೆಯ ಆಕರ. ಗೂಗಲ್ ಪ್ಲೇ‌ ಮತ್ತು ಆಪಲ್ ಸ್ಟೋರ್ – ಇವೆರಡರಲ್ಲೂ ಲಭ್ಯವಿದೆ. ಸುಮಾರು 800ಕ್ಕಿಂತಲೂ ಹೆಚ್ಚು ಸ್ತೋತ್ರಗಳನ್ನು ಅಚ್ಚುಕಟ್ಟಾಗಿ ವಿಂಗಡಿಸಿ ಪ್ರಸ್ತುತಪಡಿಸಿದ್ದಾರೆ. ನಿತ್ಯಪ್ರಾರ್ಥನೆಯ ಚಿಕ್ಕಪುಟ್ಟ ಸ್ತೋತ್ರಗಳಿಂದ ಹಿಡಿದು… ಅಷ್ಟೋತ್ತರಗಳು, ಸಹಸ್ರನಾಮಾವಳಿ, ಏಕಶ್ಲೋಕೀ ರಾಮಾಯಣ, ಮಹಾಭಾರತ, ಭಾಗವತ… ಎಲ್ಲ ಇವೆ. ಭಗವದ್ಗೀತೆಯೂ ಇದೆ, ವೇದಮಂತ್ರಗಳೂ ಇವೆ. ಅಮರಕೋಶ ಮತ್ತು ಕೆಲವು ಸುಭಾಷಿತಗಳೂ ಇವೆ. ಸಂಧ್ಯಾವಂದನೆ, ನಿತ್ಯಪೂಜೆ, ಸತ್ಯನಾರಾಯಣ ವ್ರತ, ಸಂಕಷ್ಟಹರ ಗಣಪತಿ ವ್ರತ, ಪಿತೃತರ್ಪಣವಿಧಿ… ಏನು ಬೇಕೋ ಅದೆಲ್ಲವೂ ಒಂದೇ ಕಡೆ ಸಿಗುವ ಬೃಹತ್ ಸಂಗ್ರಹವಿದು!

ಕನ್ನಡ, ತೆಲುಗು, ಮತ್ತು ದೇವನಾಗರಿ ಲಿಪಿಗಳ ಆಯ್ಕೆ ಇದೆ. ಬಹಳಷ್ಟು ಸ್ತೋತ್ರಗಳ ಆಡಿಯೊ/ವಿಡಿಯೊ ಸಹ ಇವೆ. ಕಪ್ಪು ಬ್ಯಾಕ್‌ಗ್ರೌಂಡ್‌ನಲ್ಲಿ ಬಿಳಿ ಅಕ್ಷರಗಳ ಡಿಸ್ಪ್ಲೇ ಆದ್ದರಿಂದ ಕಣ್ಣುಗಳಿಗೆ ಹಿತಕರವಾಗಿ, ಬ್ಯಾಟರಿಯ ಸೀಮಿತ ಬಳಕೆ ಆಗುವಂತೆಯೂ ಇದೆ. ಅಕ್ಷರಗಳ ಗಾತ್ರ ದೊಡ್ಡದು/ಚಿಕ್ಕದು ಮಾಡುವ ಸೌಕರ್ಯವಿದೆ. ನಮಗೆ ಬೇಕಾದ ಸ್ತೋತ್ರವನ್ನು ಹುಡುಕುವ, ಫೇವರಿಟ್‌ಗೆ ಸೇರಿಸಿಕೊಳ್ಳುವ, ಆಫ್‌ಲೈನ್‌ನಲ್ಲಿ ಓದಿಕೊಳ್ಳಲಿಕ್ಕಾಗುವ, ಸೌಕರ್ಯವೂ ಇದೆ.

ಮಿಥುನ್ ಗುಡ್ಡೆತೋಟ ಎಂಬುವವರು ಆಂಡ್ರಾಯ್ಡ್ ಫೋನ್‌ಗಳಿಗೆ ಸಿದ್ಧಪಡಿಸಿದ ಈ App ಅನ್ನು ನರೇಂದ್ರ ಕಿವಾಂಡ ಅವರು iOS (ಐಫೋನ್ ಮತ್ತು ಐ‌ಪ್ಯಾಡ್)ಗೆ ಆಗುವಂತೆ ಮಾಡಿದ್ದಾರೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅವಶ್ಯವಾಗಿ ಇರಬೇಕಾದ, ನೀವು ಪ್ರಯೋಜನ ಪಡೆದುಕೊಳ್ಳಬೇಕಾದ App ಇದು ಎಂದು ನಿಮಗೊಂದು Appತ ಸಲಹೆ.

-ಶ್ರೀವತ್ಸ ಜೋಷಿ, ವಾಷಿಂಗ್ಟನ್

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಆಕಾಶ ವೀಕ್ಷಣೆ: ಮೇ ತಿಂಗಳಲ್ಲೇನು ವಿಶೇಷ…?

Upayuktha

ಖಗೋಳ ವಿಸ್ಮಯ: ಇಂದು ಖಗ್ರಾಸ ಚಂದ್ರಗ್ರಹಣ ರಾತ್ರಿ 10:37ರಿಂದ 2:30ರ ನಡುವೆ

Upayuktha

ಬಾನಂಗಳದಲ್ಲಿ ಚಮತ್ಕಾರ: ನೋಡಲು ಮರೆಯದಿರಿ, ಗುರು ಹಾಗೂ ಶನಿ ಗ್ರಹಗಳ ಸಮಾಗಮ- ಡಿಸೆಂಬರ್ 21

Upayuktha