ದೇಶ-ವಿದೇಶ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳಲ್ಲಿ ಪಿಓಕೆ ನಗರಗಳ ಸೇರ್ಪಡೆ: ಬದಲಾಗ್ತಿದೆ ‘ಹವಾಮಾನ’

ಭಾರತದ ಅವಿಭಾಜ್ಯ ಅಂಗವಾಗಿರುವ ಪಿಓಕೆಯಲ್ಲಿ ಚುನಾವಣೆ ನಡೆಸಲು ಹೊರಟ ಪಾಕ್‌ಗೆ ಸಂದೇಶ?

ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಅಟ್ಟಾಬಾದ್ ಸರೋವರ (ಚಿತ್ರ ಕೃಪೆ: ದಿ ವೀಕ್)

ಶ್ರೀನಗರ: ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ತನ್ನ ಹವಾಮಾನ ಮುನ್ಸೂಚನೆ ಬುಲೆಟಿನ್‌ಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಮಾಹಿತಿಯನ್ನೂ ನೀಡಲಾರಂಭಿಸಿದೆ. ಈ ಹಿಂದಿನ ಮಾದರಿಯನ್ನು ಪರಿಷ್ಕರಿಸಿ ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ ನಗರಗಳ ಹವಾಮಾನ ಮುನ್ಸೂಚನೆಯನ್ನು ಐಎಂಡಿ ನೀಡಲಾರಂಭಿಸಿದೆ.

ಜಮ್ಮು-ಕಾಶ್ಮೀರ ಹವಾಮಾನ ಇಲಾಖೆಯ ಉಪ ವಿಭಾಗದ ಅಡಿಯಲ್ಲಿ ಪಿಓಕೆ ನಗರಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಕಚೇರಿ ಮುಖ್ಯಸ್ಥ ಕುಲ್‌ದೀಪ್ ಶ್ರೀವಾಸ್ತವ ತಿಳಿಸಿದರು.

ಕಳೆದ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪುನಾರಚನೆ ಮಾಡಿದ ಬಳಿಕ ಹವಾಮಾನ ಇಲಾಖೆ ತನ್ನ ಪ್ರತಿದಿನದ ಬುಲೆಟಿನ್‌ನಲ್ಲಿ ಪಿಓಕೆಯ ಭಾಗಗಳನ್ನು ಉಲ್ಲೇಖಿಸುತ್ತಿದೆ ಎಂದು ಐಎಂಡಿ ಮಹಾ ನಿರ್ದೇಶಕ ಎಂ. ಮೊಹಾಪಾತ್ರ ಹೇಳಿದರು.

ಆದರೆ ಇದೀಗ ಜಮ್ಮು-ಕಾಶ್ಮೀರ ಉಪ ವಿಭಾಗದ ಅಡಿಯಲ್ಲಿ ಆ ಪ್ರದೇಶಗಳನ್ನು ವಿಸ್ತೃತವಾಗಿ ಉಲ್ಲೇಖಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಾಯುವ್ಯ ವಿಭಾಗದ ಒಟ್ಟಾರೆ ಹವಾಮಾನ ಮುನ್ಸೂಚನೆಯಲ್ಲೂ ಪಿಓಕೆ ನಗರಗಳನ್ನು ಉಲ್ಲೇಖಿಸಲಾಗುತ್ತಿದೆ. ವಾಯುವ್ಯ ವಿಭಾಗದ ಅಡಿಯಲ್ಲಿ 9 ಉಪ ವಿಭಾಗಗಳಿವೆ.

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಗಳಲ್ಲಿ ಮಾಡಲಾದ ಈ ಬದಲಾವಣೆ ಮಹತ್ವದ್ದೆನಿಸಿದೆ.

ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದಕ್ಕೆ ಭಾರತ ಈಗಾಗಲೇ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ.

ಗಂಭೀರ ಹವಾಮಾನ ಬದಲಾವಣೆಗಳಿದ್ದಾಗ ಪಾಕಿಸ್ತಾನ, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್‌ಗಳಿಗೆ ವಿಸ್ತೃತವಾದ ಹವಾಮಾನ ಮುನ್ಸೂಚನೆ ನೀಡಲು ಭಾರತೀಯ ಹವಾಮಾನ ಇಲಾಖೆಯನ್ನು ಅಧಿಕೃತ ಏಜೆನ್ಸಿಯಾಗಿ ವಿಶ್ವ ಹವಾಮಾನ ಇಲಾಖೆ ನಿಯುಕ್ತಿಗೊಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೋನ ಲಸಿಕೆ: ಕೇಂದ್ರ ಸರ್ಕಾರ ಆದೇಶ

Sushmitha Jain

ಉ.ಪ್ರದೇಶ: ಮನೆಯೊಂದರಲ್ಲಿ ಅಗ್ನಿ ಅವಘಡ; ನಾಲ್ವರು ಸಜೀವ ದಹನ

Harshitha Harish

ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ: ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ

Upayuktha