ಪ್ರಮುಖ ರಾಜ್ಯ ಶಿಕ್ಷಣ

ಗ್ರಾಮೀಣ ಶಾಲೆಗಳ ಸೌಕರ್ಯಕ್ಕೆ ಸುಸ್ಥಿರ ಅಭಿವೃದ್ಧಿ ಆಂದೋಲನ: ಸುರೇಶ್ ಕುಮಾರ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೆರವಿನಲ್ಲಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ|


ಶೌಚಾಲಯ ನಿರ್ಮಾಣ, ಶಾಲಾ ಕಾಂಪೌಂಡ್, ಅಡುಗೆ ಮನೆ ನಿರ್ಮಾಣ |
ಆಟದ ಮೈದಾನ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಜಾರಿ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಶೌಚಾಲಯ ನಿರ್ಮಾಣ, ಶಾಲಾ ಕಾಂಪೌಂಡ್, ಅಡುಗೆ ಮನೆ ನಿರ್ಮಾಣ, ಆಟದ ಮೈದಾನ ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹಲವು ಸೌಕರ್ಯಗಳನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೆರವಿನಲ್ಲಿ ಶಾಲೆಗಳ ಸುಸ್ಥಿರ ಅಭಿವೃದ್ಧಿಗೆ ಬೃಹತ್ ಅಭಿವೃದ್ಧಿಯನ್ನು ಆಂದೋಲನ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುರವಾರ ಸಮಗ್ರ ಶಿಕ್ಷಣ ಕರ್ನಾಟಕ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಶಾಲೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಶಾಲೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 1500ಕ್ಕೂ ಹೆಚ್ಚು ಶಾಲೆಗಳಲ್ಲಿ ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಶುದ್ಧ ನೀರು ಪೂರೈಕೆ ಮಾಡಲು ಗ್ರಾಮದ ನೀರು ಸಂಪರ್ಕ ಮಾರ್ಗದಿಂದ ಶಾಲೆಯ ಸಂಪ್ ಗೆ ನೀರು ಪೂರೈಸಿ ಅಲ್ಲಿಂದ ಶಾಲೆಯ ಮೇಲಿನ ಟ್ಯಾಂಕ್ ಗೆ ನೀರು ಪೂರೈಸಿ ಶಾಲೆಗಳ ಶೌಚಾಲಯ, ಅಡುಗೆ ಮನೆ ಮತ್ತು ಕೈತೊಳೆಯುವ ಸ್ಥಳಕ್ಕೆ ನೀರು ಪೂರೈಕೆ ಮಾಡುವಂತೆ ಪೈಪ್ಲೈನ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರು ಘಟಕಗಳಿಂದ ಶಾಲೆಗಳಿಗೆ ಯಾವುದೇ ಶುಲ್ಕ ಪಡೆಯದೇ ಉಚಿತವಾಗಿ ನೀರು ಪೂರೈಕೆ ಮಾಡಲು ಈಗಾಗಲೇ ಆರ್.ಡಿ.ಪಿ.ಆರ್ ಇಲಾಖೆ ಸೂಚನೆ ನೀಡಿದೆ. ಈ ಕುರಿತು ಕಳೆದ ಡಿ. 09ರಂದು ಆರ್.ಡಿ.ಪಿ.ಆರ್ ಇಲಾಖೆ ಆದೇಶ ನೀಡಿದೆ. ಜಲಜೀವನ್ ಮಿಷನ್ ಅಡಿಯಲ್ಲಿ ನಮ್ಮ 17,700 ಶಾಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಇದೇ ಫೆಬ್ರವರಿ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು. ಶಾಲಾ ವ್ಯಾಪ್ತಿಯಲ್ಲಿ ಸಮುದಾಯ ಕಸದ ಬುಟ್ಟಿಗಳಿಂದ ತ್ಯಾಜ್ಯ ವಿಂಗಡಣೆ ಮಾಡಲಾಗುವುದು. ಇದನ್ನು ಗ್ರಾಮ ಪಂಚಾಯ್ತಿಗಳು ನಿರ್ವಹಿಸಲಿದ್ದು, ಪೈಪ್ ಕಾಂಪೋಸ್ಟಿಂಗ್ ಬಳಸಿ ಶಾಲಾವರಣದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರ ಅಳವಡಿಕೆ:
ಶಾಲೆಗಳಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಲಾಗುವುದು. ಹಿತ್ತಲ ಕೈದೋಟಗಳ ನಿರ್ವಹಣೆ ವ್ಯವಸ್ಥೆ ಕೈಗೊಳ್ಳಲಾಗುವುದು. ಋತುಚಕ್ರ ನೈರ್ಮಲ್ಯ ನಿರ್ವಹಣೆ ಕುರಿತು ಶಾಲಾ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವುದರೊಂದಿಗೆ ಶಾಲೆಗಳ ಸಮೀಪ ಮತ್ತು ಆಯ್ದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಯೋಗಾತ್ಮಕವಾಗಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರಗಳನ್ನು ಆರ್.ಡಿ.ಪಿ.ಆರ್ ಇಲಾಖೆಯ ಸಹಕಾರದ ಮೂಲಕ ಅಳವಡಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶಾಲೆಗಳ ಅಭಿವೃದ್ಧಿಗೆ ಶಾಲಾ ಶೌಚಾಲಯ ನಿರ್ಮಾಣ, ಶಾಲಾ ಅಡುಗೆ ಕೋಣೆ, ಶಾಲಾ ಕಾಂಪೌಂಡ್ ನಿರ್ಮಾಣ, ಶಾಲೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ, ಶಾಲಾ ಆಟದ ಮೈದಾನ ಮತ್ತು ಶಾಲಾ ಪೌಷ್ಠಿಕ ಕೈದೋಟಗಳನ್ನು ನಿರ್ಮಾಣ ಮಾಡಲಾಗುವುದು. ಶಾಲಾ ಪೌಷ್ಠಿಕ ಕೈದೋಟದ ಉತ್ಪನ್ನಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು.

ಶೌಚಾಲಯ- ಮೂತ್ರಾಲಯ ನಿರ್ಮಾಣ:
ಪ್ರತಿ ಶಾಲೆಗಳಲ್ಲಿ ಅಂದಾಜು 4.30 ಲಕ್ಷ ರೂ. ವೆಚ್ಚದಲ್ಲಿ 270 ಚದುರ ಅಡಿಗಳಲ್ಲಿ ವಿದ್ಯಾರ್ಥಿನಿಯರಿಗೆ ಮೂರು ಶೌಚಾಲಯ, ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಮತ್ತು ಎರಡು ಮೂತ್ರಾಲಯಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ಒಂದು ಸೆಪ್ಟಿಕ್ ಟ್ಯಾಂಕ್, 1000 ಲೀಟರ್ ನ ಓವರ್ ಹೆಡ್ ಟ್ಯಾಂಕ್ ನ್ನು ಒಳಗೊಳ್ಳಲಿದೆ ಎಂದರು.

ಶಾಲಾ ಅಡುಗೆ ಕೋಣೆ ಕಾಂಪೌಂಡ್ ನಿರ್ಮಾಣ:
500 ಮಕ್ಕಳಿರುವ ಶಾಲೆಗಳಿಗೆ ಅಂದಾಜು 6.20 ಲಕ್ಷ ರೂ. ವೆಚ್ಚದಲ್ಲಿ 390 ಚದುರ ಅಡಿ ವಿಸ್ತೀರ್ಣದಲ್ಲಿ ಶಾಲಾ ಅಡುಗೆ ಕೋಣೆ ನಿರ್ಮಿಸಲಾಗುವುದು. ಇದರ ಪೂರ್ಣ ಮೊತ್ತ ಭರಿಸಲು ನರೇಗಾದಲ್ಲಿ ಅವಕಾಶವಿಲ್ಲವಾದ್ದರಿಂದ 15ನೇ ಹಣಕಾಸು ಯೋಜನೆ ಮೂಲಕ ಆರ್.ಡಿ.ಪಿ.ಆರ್ ಇಲಾಖೆ ಅನುದಾನ ಒಗ್ಗೂಡಿಸಲಿದೆ ಎಂದು ಸಚಿವರು ವಿವರಿಸಿದರು. 2020-21ನೇ ಸಾಲಿನಲ್ಲಿ 29 ಜಿಲ್ಲೆಗಳ 1222 ಶಾಲೆಗಳಿಗೆ 2700.36 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಶಾಲೆಗಳಿಗೆ ಖೋಖೋ, ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ರನ್ನಿಂಗ್ ಟ್ರ್ಯಾಕ್ ಸೇರಿದಂತೆ ಶಾಲಾ ಆಟದ ಮೈದಾನಗಳನ್ನು ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.

ಮಳೆ ಕೊಯ್ಲು ಘಟಕ- ಪೌಷ್ಠಿಕ ಕೈದೋಟ ನಿರ್ಮಾಣ:
ಶಾಲೆಗಳಲ್ಲಿ 1.40 ಲಕ್ಷ ರೂ. ವೆಚ್ಚದಲ್ಲಿ 25,000 ಲೀಟರ್ ಮಳೆ ನೀರು ಸಂಗ್ರಹಿಸಲು ಮಳೆಕೊಯ್ಲು ಘಟಕ ನಿರ್ಮಾಣ ಮಾಡಲಾಗುವುದು. ಮಳೆ ಪ್ರಮಾಣ ಮತ್ತು ಕಟ್ಟಡದ ವಿಸ್ತೀರ್ಣದ ಮೇರೆಗೆ ವಿನ್ಯಾಸ ಬದಲಾಯಿಸಿಕೊಳ್ಳಲು ಅವಕಾಶವಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.

ಶಾಲಾ ಪೌಷ್ಠಿಕ ಕೈತೋಟಗಳ ನಿರ್ಮಾಣ ಸ್ಕೀಂನಡಿ 1000 ಚದುರ ಮೀಟರ್ ವಿಸ್ತೀರ್ಣಕ್ಕೆ 0.37 ಲಕ್ಷ ರೂ., 500 ಚಮೀಗೆ 0.25 ಲಕ್ಷ ರೂ., 250 ಚಮೀಗೆ 0.19 ಲಕ್ಷ ರೂ. ಮತ್ತು 100 ಚಮೀ ವಿಸ್ತೀರ್ಣದ ಕೈತೋಟ ನಿರ್ಮಾಣಕ್ಕೆ 0.13 ಲಕ್ಷ ರೂ. ವೆಚ್ಚ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

ಆರ್‌ಡಿಪಿಆರ್ ನೆರವು ಶ್ಲಾಘನೀಯ, ಈಶ್ವರಪ್ಪನವರಿಗೆ ಕೃತಜ್ಞತೆ:
ರಾಜ್ಯದ ಇಂದಿನ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಮ್ಮ ಶಾಲೆಗಳ ಸಮಗ್ರ ಕಾಯಕಲ್ಪಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚಿನ ಸಹಕಾರವನ್ನು ಪಡೆಯಲು ನಾವು ಉದ್ದೇಶಿಸಿದ್ದೇವೆ. ಅವಶ್ಯವಿರುವ ಹೆಚ್ಚಿನ ಸಂಖ್ಯೆಯ ಶಾಲಾ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಅವರ ಹೆಚ್ಚಿನ ಸಹಕಾರ ಯಾಚಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ನೆರವಿನ ಹಸ್ತ ಚಾಚಿದ ಆರ್.ಡಿ.ಪಿ.ಆರ್ ಇಲಾಖೆಯ ನೆರವು ಶ್ಲಾಘನೀಯವಾಗಿದೆ ಎಂದು ತಿಳಿಸಿರುವ ಸಚಿವ ಸುರೇಶ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಕೃತಜ್ಞತೆ ಸಲ್ಲಿಸಿದರು.

ಸಿಇಒಗಳೊಂದಿಗೆ ಶೀಘ್ರವೇ ವಿಡಿಯೋ ಕಾನ್ಫೆರೆನ್ಸ್:
ಈ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಸೂಕ್ತ ಮಾರ್ಗದರ್ಶನ ನೀಡಲು ಎಲ್ಲ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆ ಮತ್ತು ಆರ್.ಡಿ.ಪಿ.ಆರ್ ಇಲಾಖೆಯ ಹಿರಿಯ ಅಧಿಕಾರಿಗಳು ಶೀಘ್ರದಲ್ಲೇ ವಿಡಿಯೋ ಕಾನ್ಪೆರೆನ್ಸ್ ನಡೆಸಿ ಆರ್.ಡಿ.ಪಿ.ಆರ್ ಸಚಿವ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಶಾಲೆಗಳ ಅಭಿವೃದ್ಧಿಗೆ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಅಧಿಕಾರಿಗಳು ವಿವರಿಸಿದರು. ಸಭೆಯಲ್ಲಿ ರಾಜ್ಯ ಸರ್ಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿ, ಆರ್.ಡಿ.ಪಿ.ಆರ್ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಆರ್. ವಿಶಾಲ್, ನರೇಗಾ ಆಯುಕ್ತ ಅನಿರುದ್ಧ ಶ್ರವಣ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ಶ್ರೀಮತಿ ದೀಪಾ ಚೋಳನ್, ಪಿಯು ನಿರ್ದೇಶಕಿ ಶ್ರೀಮತಿ ಸ್ನೇಹಲ್ ಸೇರಿದಂತೆ ಆರ್.ಡಿ.ಪಿ.ಆರ್ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

 

Related posts

ನಾಳೆ (ಡಿ.19) ಮಂಗಳೂರು ವಿವಿ ಸಂಸ್ಥಾಪನಾ ದಿನಾಚರಣೆ

Upayuktha

ನಾಳಿನ ಭಾನುವಾರದ ಕರ್ಫ್ಯೂ ಸಡಿಲಿಕೆ: ರಾಜ್ಯ ಸರಕಾರದಿಂದ ಮಹತ್ವದ ಪ್ರಕಟಣೆ

Upayuktha

ಕೋವಿಡ್ 19 ಸಂಜೆಯ ಬುಲೆಟಿನ್‌: ರಾಜ್ಯದಲ್ಲಿಂದು 143 ಕೊರೊನಾ ಸೋಂಕು

Upayuktha