ಪ್ರತಿಭೆ-ಪರಿಚಯ

ಪ್ರತಿಭೆ: ಮದ್ದಳೆ ಮಾಂತ್ರಿಕ ರಾಘವೇಂದ್ರ ಪರಮೇಶ್ವರ ಹೆಗಡೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಮದ್ದಳೆ ಮಾಂತ್ರಿಕ ರಾಘವೇಂದ್ರ ಪರಮೇಶ್ವರ ಹೆಗಡೆ.

ಶ್ರೀಮತಿ ಕುಶಲಾವತಿ ಹೆಗಡೆ ಹಾಗೂ ಪರಮೇಶ್ವರ ಹೆಗಡೆ ಇವರ ಪ್ರೀತಿಯ ಮಗನಾಗಿ 11.04.1988ರಂದು ಯಲ್ಲಾಪುರ ಜಿಲ್ಲೆಯ ತೂಕದಬೈಲು ಗ್ರಾಮದ ಮಂಚಿಕೇರಿ ಎಂಬಲ್ಲಿ ಇವರ ಜನನ. ಎಸ್‌ಎಸ್‌ಎಲ್‌ಸಿ ಇವರ ವಿಧ್ಯಾಭ್ಯಾಸ. ಇವರು ಯಕ್ಷಗಾನಕ್ಕೆ ಬರಲು ಇವರ ಭಾವ ಸುಬ್ರಮಣ್ಯ ಹೆಗಡೆ ಸುತ್ಮನೆ ಪ್ರೇರಣೆ ಎಂದು ಇವರು ಹೇಳುತ್ತಾರೆ. ನಗರ ಸುಬ್ರಮಣ್ಯ ಆಚಾರ್, ಹೆರಂಜಾಲು ವೆಂಕಟರಮಣ ಗಾಣಿಗರು, ಗಜಾನನ ಹೆಗಡೆ ಮೂರೂರು ಇವರ ಯಕ್ಷಗಾನದ ಗುರುಗಳು ಹಾಗೂ ಶ್ರೀಮಯ ಕಲಾಕೇಂದ್ರ ಗುಣವಂತೆಯಲ್ಲಿ 2 ವರ್ಷ ಅಭ್ಯಾಸವನ್ನು ಮಾಡಿದ್ದಾರೆ ಇವರು.

ಸೌಕೂರು ಮೇಳದಲ್ಲಿ 6 ವರ್ಷಗಳ ತಿರುಗಾಟ ಮಾಡಿ ಪ್ರಸ್ತುತ ಅಮೃತೇಶ್ವರೀ ಮೇಳದಲ್ಲಿ 9 ವರ್ಷಗಳಿಂದ ತಿರುಗಾಟವನ್ನು ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 15 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. ಶಂಕರ ಭಾಗವತರು ಇವರ ನೆಚ್ಚಿನ ಮದ್ದಳೆ ವಾದಕರು ಹಾಗೂ ಮಂದಾರ್ತಿ ರಾಮಣ್ಣ ಇವರ ನೆಚ್ಚಿನ ಚೆಂಡೆವಾದಕರು. ಕಾಳಿಂಗ ನಾವುಡರು, ಪ್ರಸ್ತುತ ಗೋಪಾಲ ಗಾಣಿಗರು, ಗುರುಗಳಾದ ನಗರ ಸುಬ್ರಮಣ್ಯ ಆಚಾರ್ರು, ಕೆ.ಪಿ.ಹೆಗಡೆಯವರು, ವಿದ್ವಾನ್ ಗಣಪತಿ ಭಟ್,  ರಾಘವೇಂದ್ರ ಮಯ್ಯರು, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಆತ್ಮೀಯರಾದ ಪ್ರಸನ್ನ ಭಟ್ ಬಾಳ್ಕಲ್, ಸುರೇಶ್ ಶೆಟ್ಟಿ ಇವರ ನೆಚ್ಚಿನ ಭಾಗವತರು. ರಾಮಾಯಣಕ್ಕೆ ಸಂಬಂಧಪಟ್ಟ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.ಪುಸ್ತಕ ಓದುವುದು,ಕವನ ಬರೆಯುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳು. ಅನೇಕ ಪುರಸ್ಕಾರಗಳು ಇವರಿಗೆ ದೊರೆತಿವೆ. ಇವರಿಗೆ 2019ರಲ್ಲಿ ಅಮೃತ ಯುವ ಸಂಘ ಕೋಟ ಇವರಿಂದ ಸನ್ಮಾನ ದೊರೆತಿದೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಹಳೆ ಬೇರು ಹೊಸ ಚಿಗುರು ಅಂತ ಇರಬೇಕಾಗಿತ್ತು. ಆದರೆ ಈಗ ಹಳೆ ಬೇರನ್ನೇ ಮರೆತಹಾಗಿದೆ, ಹೊಸತನದ ಧಾವಂತದಲ್ಲಿ ಯಕ್ಷಗಾನ ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿದೆ. ಹಣ ಗಳಿಕೆಯ ಮಾಧ್ಯಮವಾಗಿ ಪರಿವರ್ತನೆ ಆಗುತ್ತಿದೆ, ಪ್ರಚಾರದ ಮಾಧ್ಯಮವಾಗಿ ಪರಿವರ್ತನೆ ಆಗುತ್ತಿದೆ, ಪ್ರಚಾರದ ಭರದಲ್ಲಿ ಏನೇನನ್ನೋ ಮಾಡುವ ತವಕದಲ್ಲಿ ಕಲಾವಿದರು ಮುಂದುವರಿಯುತ್ತಿದ್ದಾರೆ, ಅಪಬ್ರಂಶುಗಳ ಸಂಖ್ಯೆ ಹೆಚ್ಚುತ್ತಿದೆ, ಹೀಗೆಯೇ  ಮುಂದುವರಿದರೆ ಯಕ್ಷಗಾನ ತನ್ನ ನೈಜತೆಯನ್ನು ಕಳೆದುಕೊಳ್ಳುವಲ್ಲಿ ಯಾವ ಅನುಮಾನವೂ ಇಲ್ಲ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಇಂದಿನ ಪ್ರೇಕ್ಷಕರು ವ್ಯಕ್ತಿ ನಿಷ್ಟವಾಗಿ ಕಲೆಯನ್ನು ನೋಡದೇ ವಸ್ತು ನಿಷ್ಟವಾಗಿ ಸ್ವೀಕರಿಸಬೇಕು, ತಮ್ಮ ಅನಿಸಿಕೆಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವ ಮುನ್ನ ಕಲಾವಿದರಲ್ಲಿ ಚರ್ಚಿಸಿ ತಮ್ಮ ಅಭಿಪ್ರಾಯ ಹೇಳುವುದು ಸೂಕ್ತ ಅಂತ ಅನ್ನಿಸುತ್ತದೆ. ಯಾವುದೇ ಪ್ರದೇಶ ನೋಡುವಾಗ ಯಾವ ಪೂರ್ವಾಗ್ರಹವೂ ಇಲ್ಲದೇ ನೋಡುವುದು ಒಳ್ಳಿತು, ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ತಿದ್ದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ, ಪ್ರದರ್ಶನವನ್ನು ಕೊನೆಯವರೆಗೆ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತ.

ಯಕ್ಷಗಾನದ ಮುಂದಿನ ಯೋಜನೆಗಳನ್ನು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಸುಮಾರು ಎರಡು ವರ್ಷಗಳಿಂದ ಮಕ್ಕಳಿಗೆ ಉಚಿತವಾಗಿ ಮದ್ದಲೆಯನ್ನು ಹೇಳಿಕೊಡುತ್ತಿದ್ದೇನೆ, ಮುಂದಿನ ಪೀಳಿಗೆಗೆ ಒಳ್ಳೆಯ ಕಲಾವಿದರನ್ನು ಅಲ್ಲದಿದ್ದರೂ ಒಳ್ಳೆಯ ಪ್ರೇಕ್ಷಕರನ್ನಾದರೂ ತಯಾರು ಮಾಡುವ ಉದ್ದೇಶ ಹೊಂದಿದ್ದೇನೆ.

2019ರಲ್ಲಿ ಪಟ್ಲ ಸತೀಶ್ ಶೆಟ್ಟಿ ಹಾಗೂ ರಾಘವೇಂದ್ರ ಮಯ್ಯ ಜೊತೆಗೆ ಬೆಹ್ರೈನ್ ರಾಷ್ಟ್ರಕ್ಕೆ ಕಾರ್ಯಕ್ರಮ ನೀಡಲು ಹೋದದ್ದು ನನ್ನ ಜೀವನದಲ್ಲಿ ಮರೆಯಲಾಗದ  ನೆನಪು ಎಂದು ಹೇಳುತ್ತಾರೆ.

09.02.2018ರಂದು ನಮನಾ ಹೊಳ್ಳ ಅವರನ್ನು ವಿವಾಹವಾದ ರಾಘವೇಂದ್ರ ಪರಮೇಶ್ವರ ಹೆಗಡೆ ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ  ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಪರಿಚಯ: ಸಾತ್ವಿಕ ಸಾಹಿತ್ಯ ವಕ್ತಾರ- ಡಾ. ಗುರುರಾಜ ಪೋಶೆಟ್ಟಿಹಳ್ಳಿ

Upayuktha

ಚಿತ್ರ ಸಂದೇಶ

Harshitha Harish

ಜಯ ಜಯ ಮಹಾವೀರ… ಈ ವೈರಲ್ ಹಾಡನ್ನು ಹಾಡಿದ ಗಾಯಕಿ ಯಾರು ಗೊತ್ತಾ…?

Upayuktha