ಆರೋಗ್ಯ ಲೇಖನಗಳು

ಹಲ್ಲು ನೋವು ನಿರ್ಲಕ್ಷಿಸದಿರಿ… ಜೋಕೆ !!

ಮೊನ್ನೆ ದಿನ ಬೆಂಗಳೂರಿನಲ್ಲಿ ದಿನಪತ್ರಿಕೆಯಲ್ಲಿ ದೊಡ್ಡದೊಂದು ಸುದ್ದಿ. ‘ಹಲ್ಲು ನೋವಿನಿಂದ ಬಳಲಿ ಬೆಂಡಾಗಿ ಸಾವಿನಂಚಿಗೆ ತಲುಪಿದ ಯುವತಿ’ ಎಂಬ ಸುದ್ದಿ. ಇದನ್ನು ಕೇಳಿ ಬಹಳಷ್ಟು, ಮಂದಿ ಮೂಗಿನ ಮೇಲೆ ಬೆರಳಿರಿಸಿಕೊಂಡು ಬೆವರಿದ್ದಂತೂ ನಿಜವಾದ ಮಾತು. ಆಕೆ 25ರ ನವ ತರುಣಿ ಹೆಸರು ಗೀತಾ (ಹೆಸರು ಬದಲಾಯಿಸಲಾಗಿದೆ). ದಿನದಲ್ಲಿ 14 ರಿಂದ 15 ಗಂಟೆಗಳ ದುಡಿತ, ಹಲ್ಲುನೋವು ಬಂದಾಗಲೆಲ್ಲಾ ನೋವಿನ ಔಷಧಿ ತೆಗೆದುಕೊಂಡು ನೊವು ಶಮನಗೊಳಿಸುತ್ತಿದ್ದಳು. ಒಂದೆರಡು ಬಾರಿ ಗುಣವಾಗಿತ್ತು. ಮಗದೊಮ್ಮೆ ಬಂದಾಗ ನೋವಿನ ಜೊತೆಗೆ ಕೀವು ಕೂಡಾ ಇತ್ತು. ಮತ್ತದೇ ಗೂಗಲ್ ವೈದ್ಯರ ಸಲಹೆಯಂತೆ ನೋವು ನಿವಾರಣಾ ಔಷಧದ ಜೊತೆಗೆ ಆಂಟಿಬಯೋಟಿಕ್ ಔಷಧಿಯನ್ನು ಸೇವಿಸಿದ್ದಳು. ಒಂದು ಬಾರಿ ಆಕೆ ಹುಷಾರಾಗಿದ್ದಳು. ಮಗದೊಮ್ಮೆ ಬಂದಾಗ ಪುನಃ ಅದೇ ಔಷಧಿಗೆ ಮೊರೆ ಹೋಗಿದ್ದಳು. ಈ ಬಾರಿ ಮಾತ್ರ ಅದೃಷ್ಟ ಚೆನ್ನಾಗಿರಲಿಲ್ಲ. ನೋವು ಶಮನವಾಗಲ್ಲಿಲ್ಲ. ಕೀವು ಕಡಮೆಯಾಗಲೇ ಇಲ್ಲ. ನೋವಿನ ಜೊತೆಗೆ ಮುಖದ ಒಂದು ಭಾಗ ಊದಿಕೊಂಡಿತ್ತು.

ವಿಪರೀತ ಕೆಲಸದ ಒತ್ತಡ, ವೈದ್ಯರ ಬಳಿ ಹೋಗಲು ಸಮಯವಿಲ್ಲ. ಇದು ಬಿಡಿ, ಸರಿಯಾದ ಆಹಾರ ಸೇವಿಸಲೂ ಸಮಯವಿಲ್ಲ. ನಿದ್ದೆಯಂತೂ ಬರುವುದೇ ಇಲ್ಲ. ಈ ಬಾರಿ ಮಾತ್ರ ಹಲ್ಲು ನೋವು ಜಾಸ್ತಿಯಾಗುತ್ತಲೇ ಹೋಯಿತು. ನೋವಿನ ಜೊತೆ ಜ್ವರ, ನಡುಕ, ಆಯಾಸ, ಬಾಯಿ ತೆರೆಯಲಾಗದ ಪರಿಸ್ಥಿತಿ. ಮೊದಲೇ ಆಹಾರ ಸೇವಿಸಲಾಗದ ಆಕೆಗೆ ಸಂಪೂರ್ಣವಾಗಿ ಆಹಾರ ಸೇವಿಸದಂತಾಗಿ ಸಂದಿಗ್ಧ ಸ್ಥಿತಿ. ನೀರು ಕೂಡಾ ಸೇವಿಸುವುದು ಕಷ್ಟವಾಗಿತ್ತು. ವಿಪರಿತ ಜ್ವರದಿಂದ ಬಳಲಿಕೆ ಜೊತೆಗೆ ನಿರ್ಜಲೀಕರಣ ಕೂಡಾ ಉಂಟಾಗಿತ್ತು. ರಕ್ತದೊತ್ತಡ ಕೂಡಾ ಕಡಮೆಯಾಗುತ್ತಿತ್ತು. ಈ ಬಾರಿ ಡಾ| ಗೂಗಲ್ ಸಕತ್ತಾಗಿ ಕೈ ಕೊಟ್ಟಿದ್ದರು. ಅನಿವಾರ್ಯವಾಗಿ ವೈದ್ಯರ ಬಳಿಗೆ ಬರಬೇಕಾಯಿತು. ದಂತ ವೈದ್ಯರ ಬಳಿ ಕರೆದು ತಂದಾಗ ಗೀತಾ ಎಷ್ಟು ಅಶಕ್ತಳಾಗಿದ್ದಾರೆಂದರೆ ಎದ್ದು ನಿಲ್ಲಲ್ಲೂ ಆಗದ ಪರಿಸ್ಥಿತಿ. ದಂತ ವೈದ್ಯರು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಎಂದು ಎಚ್ಚರಿಕೆ ನೀಡಿದ ಬಳಿಕ ಗೀತಾ ನೇರವಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ICUಗೆ (ತುರ್ತುಚಿಕಿತ್ಸಾ ವಿಭಾಗ) ವರ್ಗಾವಣೆಯಾಗಿದ್ದಳು.

ತಕ್ಷಣವೇ ರಕ್ತ ಪರೀಕ್ಷೆ, ಎದೆಗೂಡಿನ ಕ್ಷಕಿರಣ, ಹಲ್ಲಿನ ದವಡೆಯ ಭಾಗದ ಸಿಟಿಸ್ಕ್ಯಾನ್ ಮಾಡಿಸಲಾಯಿತು. ಗೀತಾ ಎಷ್ಟು ಬಳಲಿದ್ದರೆಂದರೆ ಆಕೆಗೆ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿ. ಗಾಳಿ ನಳಿಕೆಯಾದ ಟ್ರೆಕಿಯಾವನ್ನು ತುರ್ತಾಗಿ ತೂತು ಮಾಡಿ (ಟ್ರೆಕಿಯಾಸ್ಟಮಿ) ಆಕೆಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಯಿತು. ಎಲ್ಲ ಪರೀಕ್ಷೆ ನಡೆದು ಆಕೆಗೆ ‘ನ್ಯೂಮೋನಿಯಾ’ ಉಂಟಾಗಿದೆ ಎಂಬ ರಿರ್ಪೋಟ್‍ನಲ್ಲಿ ಬಂದಿತ್ತು. ಬಾಯಿಯೊಳಗಿನ ಕೀವು ರಕ್ತದ ಮುಖಾಂತರ ದೇಹದೆಲ್ಲೆಡೆ ಪಸರಿಸಿ ‘ಮಲ್ಟಿಪಲ್ ಆರ್ಗಾನ್ ಫೈಲ್ಯಾರ್’ ‘ಅಂದರೆ ಬಹು ಅಂಗಾಗ ವೈಫಲ್ಯಕ್ಕೆ’ ತುತ್ತಾಗಿದ್ದಳು. ಹಲವಾರು ವೈದ್ಯರ ತುರ್ತು ಸ್ಪಂದನದ ಮೇರೆಗೆ ಸಾವಿನಂಚಿಗೆ ತಲುಪಿದ್ದ ಗೀತಾ ಪುರ್ನಜನ್ಮ ಪಡೆದಿದ್ದಳು. ಒಟ್ಟಿನಲ್ಲಿ ಒಂದು ಸಾಮಾನ್ಯ ಹಲ್ಲುನೋವು ಗೀತಾಳಿಗೆ ಮರೆಯಲಾಗದ ಪಾಠ ಕಲಿಸಿತ್ತು. ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳದೆ, ಹಲ್ಲು ನೋವನ್ನು ನಿರ್ಲಕ್ಷಿಸಿ ಸ್ವಯಂ ಔಷಧಿಗಾರಿಕೆ ಮಾಡಿ ಸ್ವರ್ಗದಂಚಿಗೆ ತಲುಪಿ, ಪುನಃ ತಿರುಗಿ ಬಂದಿದ್ದಳು.

ಹಲ್ಲು ನೋವು ನಿರ್ಲಕ್ಷ ಬೇಡ
ಸಾಮಾನ್ಯವಾಗಿ ಹಲ್ಲುನೋವು ಬಂದಾಗ ನೋವು ನಿವಾರಕ ಔಷಧಿ ತೆಗೆದುಕೊಂಡು ನೋವು ಶಮನ ಮಾಡಿಕೊಳ್ಳುವುದು ಹೆಚ್ಚಿನ ಜನರ ಖಯಾಲಿಯಾಗಿ ಬಿಟ್ಟಿದೆ. ಇದು ಬಹುದೊಡ್ಡ ದುರಂತ. ಯಾವುದೇ ಕಾರಣಕ್ಕೂ ನೀವೇ ವೈದ್ಯರಾಗಿ ಔಷಧಿ ಸೇವಿಸಬೇಡಿ. ದಂತ ವೈದ್ಯರ ಬಳಿ ಪ್ರತಿ ಆರು ತಿಂಗಳಿಗೊಮ್ಮೆ ನಿರಂತರವಾಗಿ ಭೇಟಿ ನೀಡಿ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ. ಹಲ್ಲಿನಲ್ಲಿ ದಂತ ಕ್ಷಯ ಉಂಟಾದಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಪ್ರತಿ 6 ತಿಂಗಳಿಗೊಮ್ಮೆ ಹಲ್ಲನ್ನೂ ಶುಚಿಗೊಳಿಸಿಕೊಳ್ಳಿ, ಹೀಗೆ ಮಾಡುವುದರಿಂದ ಬಾಯಿಯಲ್ಲಿನ ಬ್ಯಾಕ್ಟ್ರೀರಿಯಾಗಳ ಸಂಖ್ಯೆ ಕ್ಷೀಣಿಸುತ್ತದೆ.

ಬಾಯಿಯಲ್ಲಿ ಲಕ್ಷಾಂತರ ಬ್ಯಾಕ್ಟ್ರಿರಿಯಾಗಳಿದ್ದು, ಹೆಚ್ಚಿನವು ನಿರುಪದ್ರವಿಯಾಗಿರುತ್ತದೆ. ಕೆಲವೇ ಕೆಲವೂ ಬ್ಯಾಕ್ಟ್ರೀರಿಯಾಗಳು ತೊಂದರೆ ನೀಡುತ್ತದೆ. ಆದರೆ ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ ಈ ನಿರುಪದ್ರಪಿ ಬ್ಯಾಕ್ರ್ಟಿರಿಯಾಗಳೂ ವಿಜೃಂಭಿಸುತ್ತದೆ. ಈ ಕಾರಣದಿಂದಾಗಿ ಬಾಯಿಯ ಆರೋಗ್ಯವನ್ನು ಯಾವಾತ್ತೂ ನಿರ್ಲಕ್ಷಿಸಬೇಡಿ. ದಿನಕ್ಕೆರಡು ಬಾರಿ ಹಲ್ಲುಜ್ಜಿ, ಹಲ್ಲಿನ ಮೇಲ್ಭಾಗದ ವಸಡಿನ ಮೇಲೆ ದಿನಕ್ಕೊಮ್ಮೆಯಾದರೂ ಬೆರಳಿನಿಂದ ಹಿತವಾಗಿ ಮಸಾಜ್ ಮಾಡಿ. ಹೀಗೆ ಮಾಡಿದಾಗ ರಕ್ತ ಪರಿಚಲನೆ ಜಾಸ್ತಿಯಾಗಿ ವಸಡಿನ ಆರೋಗ್ಯ ವೃದ್ಧಿಸುತ್ತದೆ. ಇನ್ನು ಹಲ್ಲು ನೋವು ಬಂದು ಕೀವು ಉಂಟಾದಾಗ ಅಸಾಧ್ಯ ನೋವು ಇರುತ್ತದೆ. ಯಾವುದೇ ಕಾರಣಕ್ಕೂ ಆಂಟಿಬಯೋಟಿಕ್ ಔಷಧಿಯನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬೇಡಿ. ಕೆಲವೊಮ್ಮೆ ಔಷಧಿಯ ಪ್ರಮಾಣ ಸರಿಯಾಗಿರದೇ ಇರಬಹುದು.

ನಮ್ಮ ದೇಹದ ಪ್ರಕೃತಿ, ರೋಗದ ಲಕ್ಷಣಗಳು ಮತ್ತು ದೇಹದ ತೂಕ ಇವೆಲ್ಲವನ್ನು ತಾಳೆ ಹಾಕಿ, ವೈದ್ಯರೇ ನಿಮಗೆ ಬೇಕಾದ ಆಂಟಿಬಯೋಟಿಕ್ ಔಷಧಿ ನೀಡುತ್ತಾರೆ. ಸುಮಾರು ಹತ್ತಿಪ್ಪತ್ತು ಬಗೆಯ ಆಂಟಿಬಯೋಟಿಕ್ ಔಷಧಿ ಲಭ್ಯವಿದ್ದು. ಯಾವುದನ್ನು ಎಷ್ಟು ಬಾರಿ ನೀಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸಲಿ. ಕೆಲವೊಮ್ಮೆ ಹಲ್ಲಿನೊಳಗೆ ಕೀವು ತುಂಬಿ ಕೊಂಡಾಗ ಹಲ್ಲಿನ ಮಧ್ಯಭಾಗದಲ್ಲಿ ತೂತು ಮಾಡಿ ಹಲ್ಲಿನ ಬೇರಿನ ನಾಳಗಳ ಮುಖಾಂತರ ಕೀವು ತೆಗೆಯಲಾಗುತ್ತದೆ. ಕೆಲವೊಮ್ಮೆ ಬಾಯಿಯ ಒಳಭಾಗದಲ್ಲಿ ಗಲ್ಲದ ಭಾಗದಲ್ಲಿ ಅಥವಾ ಗಲ್ಲದ ಹೊರಭಾಗದಲ್ಲಿ ಕೀವನ್ನು ಹೊರತೆಗೆದು ಆ ಬಳಿಕ ಆಂಟಿಬಯೋಟಿಕ್ ನೀಡಲಾಗುತ್ತದೆ. ಕೀವು ತೆಗೆಯದೇ ಬರೀ ಆಂಟಿಬಯೋಟಿಕ್ ಔಷಧಿ ನೀಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾಗಿ ಪರಿಣಾಮ ಬೀರದೆ ಇರಬಹುದು ಮತ್ತು ಮಾರಾಣಾಂತಿಕವಾಗಲೂಬಹುದು.

ಇದರ ಜೊತೆಗೆ ನಿರ್ಜೀಲಿಕರಣವಾಗದಂತೆ ರಕ್ತನಾಳಗಳ ಮುಖಾಂತರ ಈ ಜೀವ ದ್ರವ್ಯ ದ್ರಾವಣ ನೀಡಲಾಗುತ್ತದೆ. ರೋಗಿಗೆ ಜ್ವರ, ಬಳಲಿಕೆ, ಆಯಾಸ, ಉಸಿರಾಟದ ತೊಂದರೆ, ರಕ್ತದೊತ್ತಡ ಕಡಿಮೆಯಾಗಿದ್ದಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಮ್ಮೆ ಆರಂಭದಲ್ಲಿಯೇ ಹಲ್ಲನ್ನು ಕಿತ್ತು ಕೀವು ತೆಗೆಯಬೇಕಾದ ಅನಿವಾರ್ಯತೆ ಇರುತ್ತದೆ. ಒಟ್ಟಿನಲ್ಲಿ ಹತ್ತರಲ್ಲಿ ಒಂಬತ್ತು ಬಾರಿ ಹಲ್ಲು ನೋವು ಒಂದು ಕೀವು ತುಂಬಿದಾಗ ಸಾಮಾನ್ಯವಾಗಿ ಆಂಟಿಬಯೋಟಿಕ್‍ಗಳಿಗೆ ಸಂದ್ಪಿಸಿದರೆ ಒಂದು ಬಾರಿ ತೀವ್ರತರವಾಗಿ ಕಾಡಳುಬಹುದು. ರೋಗಿ ಮದುಮೇಹ ಅಥವಾ ಇನ್ಯಾವುದೋ ರೋಗದಿಂದ ಬಳಲುತ್ತಿದ್ದಲ್ಲಿ ಹಲ್ಲು ನೋವನ್ನು ಯಾವತ್ತೂ ನಿರ್ಲಕ್ಷಿಸಬಾರದು. ತಕ್ಷಣವೇ ದಂತ ವೈದ್ಯರ ಸಲಹೆ, ಚಿಕಿತ್ಸೆ ಮತ್ತು ಮಾರ್ಗದರ್ಶನ ಅತಿ ಅವಶ್ಯಕ.

ಆಂಟಿಬಯೋಟಿಕ್ ಜೀವ ರಕ್ಷಕ ಔಷಧಿ. ಅದರೆ ಅನಗತ್ಯವಾಗಿ ಆಂಟಿಬಯೋಟಿಕ್ ದುರ್ಬಳಕೆ ಮಾಡಿದಲ್ಲಿ ರೋಗಾಣುಗಳು ಈ ಆಂಟಿಬಯೋಟಿಕ್‍ಗಳಿಗೆ ಪ್ರತಿರೋಧತೆ ಬೆಳೆಸಿಕೊಳ್ಳುತ್ತದೆ. ಒಂದೆರಡು ಬಾರಿ ಆಂಟಿಬಯೋಟಿಕ್ ಪರಿಣಾಮಕಾರಿಯಾಗಬಹುದು. ಆದರೆ ಸರಿಯಾದ ಡೊಸೇಜ್ ಇಲ್ಲದೆ ಅಥವಾ ಎರಾಬಿರ್ರಿಯಾಗಿ ಆಂಟಿಬಯೋಟಿಕ್ ಸೇವನೆ ಬಹಳ ಅಪಾಯಕಾರಿ. ಅದೇ ಜೀವ ರಕ್ಷಕ ಆಂಟಿಬಯೋಟಿಕ್ ಔಷÀಧಿ ಜೀವ ಭಕ್ಷಕ ಔಷಧಿಯಾಗಿ ಕಾಡಲೂಬಹುದು. ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಮಾರ್ಗದರ್ಶನ ಇಲ್ಲದೆ ಆಂಟಿಬಯೋಟಿಕ್ ಔಷಧಿ ಸೇವನೆ ಸರ್ವತಾ ಒಳ್ಳೆಯದಲ್ಲ. ಅತೀ ಅಗತ್ಯವಿದ್ದಲ್ಲಿ ಮಾತ್ರ, ವೈದ್ಯರು ರೋಗಿಯ ದೇಹದ ಪ್ರಕೃತಿ, ರೋಗಾಣುಗಳ ತೀವ್ರತೆ ಮತ್ತು ರೋಗದ ಲಕ್ಷಣಗಳಿಗನುಗುಣವಾಗಿ ಆಂಟಿಬಯೋಟಿಕ್ ಸೇವನೆಗೆ ಅನುಮತಿ ನೀಡುತ್ತಾರೆ ಎಂಬ ವಿಷಯವನ್ನು ರೋಗಿಗಳು ಅರ್ಥ ಮಾಡಿಕೊಳ್ಳಬೇಕು.

ಕೊನೆ ಮಾತು
ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಒಮ್ಮೆಯಾದರೂ ಹಲ್ಲು ನೋವಿಗೆ ತುತ್ತಾಗುತ್ತಾನೆ. ಹೇಗೆ ತಲೆಯಿರುವ ವರೆಗೆ ತಲೆನೋವು ಶಾಶ್ವತವೋ ಹಾಗೇ ಹಲ್ಲಿರುವವರೆಗೆ ಹಲ್ಲು ನೋವು ತಪ್ಪಿದ್ದಲ್ಲ ಎಂದರೂ ಅತಿಶಯೋಕ್ತಿಯಾಗಲಾರದು. ನಮ್ಮ ಈ ಕತೆಯ ಕಥಾನಾಯಕಿ ಗೀತಾಳಿಗೂ ಬಂದಿದ್ದು ಅದೇ ಹಲ್ಲುನೋವು. ಸಾಮಾನ್ಯರಲ್ಲಿ ಸಾಮಾನ್ಯರಿಗೆ ಬರುವ ಸಹಜವಾದ ಸಾಮಾನ್ಯ ಹಲ್ಲು ನೋವು. ಆದರೆ ಆಕೆ ಮಾಡಿದ ಒಂದು ಸಣ್ಣ ನಿರ್ಲಕ್ಷಕ್ಕೆ ಬಹುದೊಡ್ಡ ಬೆಲೆ ತೆರಬೇಕಾಗಿ ಬಂದಿತ್ತು. ಹಲ್ಲು ನೋವಿನಿಂದ ಆರಂಭವಾದ ಆಕೆಯ ಕಥೆ ಬಹು ಅಂಗಾಂಗ ವೈಫಲ್ಯಕ್ಕೆ ಬಂದು ತಲುಪಿತ್ತು. ಮೂರು ತಿಂಗಳುಗಳ ಕಾಲ ತುರ್ತು ಚಿಕಿತ್ಸೆ ವಿಭಾಗದಲ್ಲಿ ಮಲಗಿದ್ದಳು. ಮೂರು ಬಾರಿ ICUನಲ್ಲಿ ಹೃದಯಾಘಾತವಾಗಿದ್ದರೂ ನುರಿತ ವೈದ್ಯರ ಸಕಾಲಿಕ ಚಿಕಿತ್ಸೆಯಿಂದಾಗಿ ಯಮನನ್ನು ಆಕೆ ಗೆದ್ದು ಬಂದಿದ್ದಳು.

ಆದರೆ ಎಲ್ಲರಿಗೂ ಈ ರೀತಿಯ ಚಿಕಿತ್ಸೆ ಸೌಲಭ್ಯ ಸಿಗದೇ ಇರಬಹುದು. ಆಕೆಯ ಬಾಯಿಯೊಳಗಿನ ಕಣ್ಣಿಗೆ ಕಾಣಿಸದ ನಿರುಪದ್ರವಿ  ‘ಫ್ಯುಸೋಬ್ಯಾಕ್ಟ್ರೀಯಮ್ ನೆಕ್ರೋಪೋರಮ್’ ಎಂಬ ಬ್ಯಾಕ್ಟ್ರೀರಿಯಾ ಆಕೆಗೆ ಸಾಕಷ್ಟು ಬುದ್ಧಿ ಕಲಿಸಿ, ನೀರು ಕುಡಿಸಿ ಮರೆಯಾಲಾಗದ ಪಾಠ ಕಲಿಸಿ ಪುರ್ನಜನ್ಮ ನೀಡಿತ್ತು. ಆದರೆ ಎಲ್ಲರೂ ಗೀತಾಳಷ್ಟೇ ಅದೃಷ್ಟವಂತರಾಗಿರುವುದಿಲ್ಲ ಎಂಬುದನ್ನು ಎಲ್ಲರೂ ಅರಿತು, ತಮ್ಮ ಹಲ್ಲಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಸಾಮಾನ್ಯ ಹಲ್ಲು ನೋವನ್ನು ನಿರ್ಲಕ್ಷಿಸದೇ ಇದ್ದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳನ್ನು ತಡೆಗಟ್ಟಬಹುದು ಎಂಬ ಸತ್ಯವನ್ನು ಅರಿತು ಪಾಲಿಸಿದಲ್ಲಿ, ನೂರುಕಾಲ ಹಲ್ಲು ನೋವು ರಹಿತ ಜೀವನ ನಡೆಸಬಹುದು ಎಂಬುದಂತೂ ಸಾರ್ವಕಾಲಿಕ ಸತ್ಯ.

– ಡಾ| ಮುರಲೀ ಮೋಹನ್ ಚೂಂತಾರು

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಪರೀಕ್ಷೆಗಾಗಿ ಪೂರ್ವ ಸಿದ್ಧತೆ ಹೇಗೆ ಮತ್ತು ಯಾಕೆ?: ಮಕ್ಕಳು ಮತ್ತು ಪೋಷಕರಿಗೆ ಕಿವಿಮಾತು

Upayuktha

ಸಹನೆ, ತಪನೆಗೆ ಇನ್ನೊಂದು ಹೆಸರು ಲಕ್ಷ್ಮಣನ ಊರ್ಮಿಳೆ

Upayuktha

ದಿನದ 24 ಗಂಟೆಯೂ ರೋಗಿಗಳ ಸೇವೆ ಮಾಡುತ್ತಿರುವ ದಾದಿಯರಿಗೊಂದು ನಮನ

Upayuktha