ಕ್ಷೇತ್ರಗಳ ವಿಶೇಷ ನಗರ ಪ್ರಮುಖ ಸ್ಥಳೀಯ

ಪರ್ಯಾಯ ಮಹೋತ್ಸವ 2020ಗೆ ಉಡುಪಿ ಸಜ್ಜು

ಜ.18ರಿಂದ 22: ಉಡುಪಿ ಅದಮಾರು ಮಠದ ಪರ್ಯಾಯ ಮಹೋತ್ಸವ 2020-22

ಉಡುಪಿ: ದೇಗುಲಗಳ ನಗರಿ ಉಡುಪಿ ಶ್ರೀ ಅದಮಾರು ಮಠದ ಪರ್ಯಾಯಕ್ಕೆ ಸಜ್ಜಾಗುತ್ತಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀಕೃಷ್ಣನ ಪೂಜಾ ಮಹೋತ್ಸವದ ಎರಡು ವರ್ಷಗಳ (2020-2022) ಪರ್ಯಾಯದ ಅವಧಿ ಈ ಬಾರಿ ಅದಮಾರು ಮಠಕ್ಕೆ ಒದಗಿ ಬಂದಿದೆ.

ಜನವರಿ 18ರಿಂದ 22ರ ವರೆಗೆ ಅದಮಾರು ಮಠದ ಪರ್ಯಾಯ ಮಹೋತ್ಸವ ಜರಗಲಿದೆ.

ಅದಮಾರು ಮಠದ ಪರ್ಯಾಯ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಕೆ. ರಘುಪತಿ ಭಟ್, ಅಧ್ಯಕ್ಷರಾದ ಎಂ.ಬಿ. ಪುರಾಣಿಕ್‌ ಮತ್ತು ಅದಮಾರು ಮಠದ ದಿವಾನರಾದ ಐ. ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಅವರು ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.

ಜನವರಿ 18ರಂದು ಅಪರಾಹ್ನ 2:30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದ ಶ್ರೀ ನರಹರಿತೀರ್ಥ ವೇದಿಕೆಯಲ್ಲಿ ಪರ್ಯಾಯ ದರ್ಬಾರ್‌ ನಡೆಯಲಿದೆ. ಉಡುಪಿ ಅಷ್ಠಮಠದ ಯತಿವರೇಣ್ಯರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಪರ್ಯಾಯ ದರ್ಬಾರ್‌ನಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖಂಡರು ಮತ್ತು ಕೇಂದ್ರ ಸರಕಾರದ ಸಚಿವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಇತರ ಸಚಿವರು, ಮೈಸೂರಿನ ಮಹಾರಾಜರು ಹಾಗೂ ದೇಶದ ಗಣ್ಯರು, ವಿದ್ವಾಂಸರು ಮತ್ತು ಕಲಾವಿದರುಗಳು ಭಾಗವಹಿಸಲಿದ್ದಾರೆ.

ಬೆಳಗಿನ ಜಾವ 1:20ಕ್ಕೆ ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ, ಬೆಳಗಿನ ಜಾವ 1:50ಕ್ಕೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರ ಪೂಜೆಯ ಬಳಿಕ ಪರ್ಯಾಯ ಮೆರವಣಿಗೆ ಪ್ರಾರಂಭವಾಗಲಿದೆ.

ಪ್ರಾತ:ಕಾಲ 4:50ಕ್ಕೆ ಕನಕನಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ, ಶ್ರೀ ಚಂದ್ರಮೌಳೇಶ್ವರ, ಶ್ರೀ ಅನಂತೇಶ್ವರ ದರ್ಶನ, ಪ್ರಾತ:ಕಾಲ 5:30ಕ್ಕೆ ಶ್ರೀಕೃಷ್ಣ ಮಠ ಪ್ರವೇಶ, 5:57ಕ್ಕೆ ಅಕ್ಷಯಪಾತ್ರೆ ಸ್ವೀಕಾರ ಹಾಗೂ ಪವಿತ್ರ ಸರ್ವಜ್ಞ ಪೀಠಾರೋಹಣ ನಡೆಯಲಿದೆ.

ಬೆಳಗ್ಗೆ 10:00 ಗಂಟೆಗೆ ಮಹಾಪೂಜೆ ನೆರವೇರಲಿದ್ದು, 10:30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 2:30ಕ್ಕೆ ರಾಜಾಂಗಣದ ಶ್ರೀ ನರಸಿಂಹ ತೀರ್ಥ ವೇದಿಕೆಯಲ್ಲಿ ಪರ್ಯಾಯ ದರ್ಬಾರ್‌ ಆರಂಭವಾಗಲಿದೆ. ಸಂಜೆ 7:00 ಗಂಟೆಗೆ ರಥೋತ್ಸವ ನಡೆಯಲಿದೆ.

ಜನವರಿ 18ರಂದು ಮಧ್ಯಾಹ್ನ 12:00ರಿಂದ 2:30ರ ವರೆಗೆ ಲಿಂಗಪ್ಪ ಕಟೀಲು ಮತ್ತು ಬಳಗದವರಿಂದ ‘ನಾಗಸ್ವರ ವಾದನ’ವಿದೆ.

ಜನವರಿ 17ರಂದು ರಾತ್ರಿ 7 ಗಂಟೆಗೆ ಉಡುಪಿ ರಥಬೀದಿಯ ಶ್ರೀ ಪೂರ್ಣಪ್ರಜ್ಞ ಮಂಟಪದಲ್ಲಿ ಈ ವರೆಗೆ ಶ್ರೀಕೃಷ್ಣ ಪೂಜಾ ಪರ್ಯಾಯವನ್ನು ಅಭೂತಪೂರ್ವವಾಗಿ ಪೂರೈಸಿದ ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಸಾರ್ವಜನಿಕ ಅಭಿನಂದನೆ ನಡೆಯಲಿದೆ.

ಈ ಸಮಾರಂಭದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ/ ಶ್ರೀ ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದಾರೆ. ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿ ಇರಲಿದೆ. ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರಿನ ಪ್ರಾಂಶುಪಾಲರಾದ ಸತ್ಯನಾರಾಯಣ ಆಚಾರ್ಯ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ.

ಸಂಜೆ 5ರಿಂದ 7ರ ವರೆಗೆ ಕಲ್ಲಡ್ಕದ ವಿಠ್ಠಲ್ ನಾಯಕ್ ಮತ್ತು ಬಳಗದಿಂದ ಗೀತಾ-ಸಾಹಿತ್ಯ-ಸಂಭ್ರಮ’ವಿದೆ. ರಾತ್ರಿ 10ರಿಂದ 12ರವರೆಗೆ ಕಟೀಲು ಶ್ರೀದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ‘ಚಕ್ರವ್ಯೂಹ’ ಪ್ರದರ್ಶನವಿದೆ. ಬಳಿಕ 12:30ರಿಂದ 3:00ರ ವರೆಗೆ ಯಕ್ಷಗಾನ ಕೇಂದ್ರ ಉಡುಪಿ ಇದರ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಇವರ ಶಿಷ್ಯರಿಂದ ಯಕ್ಷಗಾನ  ‘ಜಟಾಯು ಮೋಕ್ಷ’ ಪ್ರದರ್ಶನ ಏರ್ಪಡಿಸಲಾಗಿದೆ.

ಯತಿ ಪರಂಪರೆ:

ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಅದಮಾರು ಮಠದ ಮೂಲಪುರುಷರಾದ ಶ್ರೀ ಶ್ರೀ ನರಹರಿ ತೀರ್ಥರ ಪರಂಪರೆಯಿಂದ ಬಂದ ಯತಿಗಳು ಪರಮಪೂಜ್ಯ ಶ್ರೀ ಶ್ರೀ ವಿಭುದೇಶ ತೀರ್ಥ ಶ್ರೀಪಾದರು. ಶೈಕ್ಷಣಿಕ ರಂಗದಲ್ಲಿ ಅಪಾರ ಪ್ರಗತಿಯನ್ನು ಸಾಧಿಸಿದವರು. ತಮ್ಮ ಕಾಲದಲ್ಲಿ ಶಿಷ್ಯರಿಂದ ಪರ್ಯಾಯ ಮಾಡಿಸಿ ಶ್ರೀ ವಾದಿರಾಜ ಗುರು ಸಾರ್ವಭೌಮರ ಸಂಪ್ರದಾಯಕ್ಕೆ ಬೆಲೆ ತುಂಬಿದವರು. ಇವರ ಕರಕಮಲ ಸಂಜಾತರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಿದ್ಧಾಂತ ದೀಕ್ಷೆ, ಗುರು ನಿಷ್ಠೆ ಉಳ್ಳವರು. ಶ್ರೇಷ್ಠ ವಾಗ್ಮಿಗಳು. ಇವರ ಪ್ರಾರ್ಥನೆಯಿಂದ ಪ್ರಸನ್ನನಾದ ಶ್ರೀ ಅನಂತಾಸನ ದೇವರು ಕರುಣಿಸಿದ ಪ್ರಿಯ ಶಿಷ್ಯ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:
ಜನವರಿ 18ರಿಂದ 22ರ ವರೆಗೆ ಪ್ರತಿದಿನ ಸಂಜೆ ರಾಜಾಂಗಣದ ಶ್ರೀ ನರಹರಿ ತೀರ್ಥ ವೇದಿಕೆಯಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

18ರಂದು ರಾತ್ರಿ 7:05ಕ್ಕೆ ಅಷ್ಟಮಠದ ಯತಿವರೇಣ್ಯರಿಂದ ಪರ್ಯಾಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಅದಮಾರು ಮಠಾಧೀಶ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದಾರೆ.

ರಾತ್ರಿ 8ರಿಂದ 10:30ರ ವರೆಗೆ 3 ಜನರೇಶನ್ ವಯಲಿನ್ ಕಚೇರಿ ನಡೆಯಲಿದೆ. ಪದ್ಮಭೂಷಣ ಡಾ. ಎನ್‌ ರಾಜಮ್, ಡಾ. ಸಂಗೀತ ಶಂಕರ್, ಕುಮಾರಿ ರಾಗಿಣಿ ಶಂಕರ್, ಕುಮಾರಿ ನಂದಿನಿ ಶಂಕರ್ ಮತ್ತು ಬಳಗ ಮುಂಬೈ ಇವರು ಈ ವಯಲಿನ್ ಕಚೇರಿ ನಡೆಸಿಕೊಡಲಿದ್ದಾರೆ.

19ರಂದು ರಾತ್ರಿ 8ರಿಂದ 10:30ರ ವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಮತ್ತು ತಂಡದವರಿಂದ ಗಾಯನವಿದೆ.

20ರಂದು ರಾತ್ರಿ 8ರಿಂದ 10:30ರ ವರೆಗೆ ಮಹೇಶ್ ಕಾಳೆ ಪುಣೆ ಮತ್ತು ತಂಡದವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವಿದೆ.

21ರಂದು ಸಂಜೆ 7:30ರಿಂದ ಅದಮಾರು ಮಠದ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪೂರ್ಣಪ್ರಜ್ಞ ಸಾಂಸ್ಕೃತಿಕ ವೈಭವ ನಡೆಯಲಿದೆ.

22ರಂದು ರಾತ್ರಿ 8ರಿಂದ ‘ಹರಿಕಥಾಮೃತಸಾರ’ ಯಕ್ಷಗಾನ ಕೂಡಾಟವಿದೆ. ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮತ್ತು ಬಡಗು-ತೆಂಕು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಈ ಪ್ರದರ್ಶನವಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ವಿನೂತನ ಅವಕಾಶಗಳನ್ನು ಗುರುತಿಸಿ ಮುನ್ನಡೆಯಬೇಕಾಗಿದೆ: ಪ್ರೊ.ರವೀಂದ್ರ ಕುಮಾರ್

Upayuktha

ಸಾಧನೆಯ ಪರೀಕ್ಷೆಯಲ್ಲಿ ಆಗುವ ಸೋಲು ಬದುಕಿನ ಸೋಲಲ್ಲ: ಯೋಗೀಶ್ ಕೈರೋಡಿ

Sushmitha Jain

ತುಳು ಲಿಪಿ ಪರೀಕ್ಷೆಯಲ್ಲಿ ರಿಶಿಕ್ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ: ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ

Sushmitha Jain