ಕಲೆ ಸಂಸ್ಕೃತಿ ಸಾಧಕರಿಗೆ ನಮನ

ತೆಂಕುತಿಟ್ಟು ಯಕ್ಷಗಾನದ ಪುತ್ತಿಗೆ ಶೈಲಿಯ ಸ್ವರ ಸಾಮ್ಯ ಉಳ್ಳ ಭಾಗವತ ಮಹೇಶ ಜೆ ರಾವ್ ಕನ್ಯಾಡಿ

ತೆಂಕುತಿಟ್ಟು ಯಕ್ಷಗಾನ ಆನೇಕ ಯುವ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಯುವ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ತೆಂಕುತಿಟ್ಟು ಯಕ್ಷಗಾನದ ಪುತ್ತಿಗೆ ಶೈಲಿಯ ಸ್ವರ ಸಾಮ್ಯ ಉಳ್ಳ ಭಾಗವತರು ಶ್ರೀಯುತ ಮಹೇಶ ಜೆ ರಾವ್ ಕನ್ಯಾಡಿ.

ದಿನಾಂಕ 21-04-1978 ರಂದು ಜನಾರ್ದನ ರಾವ್ ಹಾಗೂ ವಿಜಯ ದಂಪತಿಗಳ ಪ್ರೀತಿಯ ಮಗನಾಗಿ ಶ್ರೀಯುತ ಮಹೇಶ ಜೆ ರಾವ್ ಕನ್ಯಾಡಿ ಇವರ ಜನನ.ಎಮ್ ಕಾಂ ಇವರ ವಿದ್ಯಾಭ್ಯಾಸ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎರಡನೆಯ ಮೇಳ ಇತ್ತು.ವೃತ್ತಿ ಕಲಾವಿದರಿಗೆ ಸರಿ ಸಮಾನವಾದ ಹವ್ಯಾಸಿ ಮೇಳ ಇತ್ತು. ಇವರ ತಂದೆಯವರು ಆ ತಂಡದ ಬಣ್ಣದ ವೇಷಧಾರಿಗಳು. ಹಾಗಾಗಿ ಮನೆಯಲ್ಲೂ ಯಕ್ಷಗಾನೀಯ ವಾತಾವರಣ. ಅಲ್ಲದೇ ಅಂದಿನ ಗಜ ಮೇಳ ಎಂದೇ ಪ್ರಸಿದ್ದಿ ಹೊಂದಿದ್ದ ಧರ್ಮಸ್ಥಳ ಮೇಳದ ಆರಂಭದ ಮತ್ತು ಕೊನೆಯ ಸೇವೆ ಆಟಗಳನ್ನು ನಿರಂತರವಾಗಿ ನೋಡುತ್ತಿದ್ದ ಪರಿಣಾಮ ಯಕ್ಷಗಾನ ಇವರ ಮೇಲೆ ತುಂಬಾ ಪ್ರಭಾವ ಬೀರಿತು.

ಯಕ್ಷಗಾನ ಸಂಘಟಕರಾದ ದಿ. ಲಕ್ಕಣ್ಣ ಶೆಟ್ಟಿಯವರ ಪುತ್ರ ಕುಮಾರ ಶೆಟ್ಟಿಯವರು, “ನಿನಗೆ ಯಕ್ಷಗಾನಕ್ಕೆ ಬೇಕಾದ ಸ್ವರ ಇದೆ” ಎಂದು ಹೇಳಿ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿದ್ದ ಪದ್ಮನಾಭ ಉಪಾಧ್ಯಾಯರ ಬಳಿ ಕರೆದುಕೊಂಡು ಹೋಗಿ ಬಿಡುವಿನ ವೇಳೆಯಲ್ಲಿ ಭಾಗವತಿಕೆ ಪಾಠ ಹೇಳಿ ಕೊಡಬಹುದೇ ಎಂದು ಕೇಳಿದಾಗ ಅವರು ಪಾಠ ಹೇಳಿ ಕೊಡಲು ಒಪ್ಪಿದರು. ಇದರಿಂದ ಇವರಿಗೆ ಭಾಗವತಿಕೆ ಅಭ್ಯಸಿಸಲು ಪ್ರೇರಣೆ ಆಯಿತು.

ನಿವೃತ್ತ ದೈಹಿಕ ಶಿಕ್ಷಕ ಶ್ರೀ ನರೇಂದ್ರ ಕುಮಾರ್ ಉಜಿರೆ ಹಾಗೂ ತಂದೆ ಜನಾರ್ದನ ರಾವ್ ಆರಂಭದ ನಾಟ್ಯದ ಗುರುಗಳು. ಯೋಗೀಶ ಶರ್ಮ ಅಳದಂಗಡಿ ಇವರ ಬಳಿಯೂ ನಾಟ್ಯ ಅಭ್ಯಾಸ ಮಾಡಿದ್ದಾರೆ.

ಭಾಗವತಿಕೆಯ ಗುರುಗಳಾಗಿ ಆರಂಭದಲ್ಲಿ ಪದ್ಮನಾಭ ಉಪಾಧ್ಯಾಯರು ಹಾಗೂ ಮೋಹನ ಬೈಪಡಿತ್ತಾಯ ಉಜಿರೆ. ರಾಗಗಳ ಅಭ್ಯಾಸವನ್ನು ಮದ್ದಳೆಗಾರರಾದ ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ (ವಯಲಿನ್ ಮತ್ತು ಮೃದಂಗ ವಾದಕರೂ ಹೌದು) ಅವರ ಬಳಿ ಕಲಿತು ಯಕ್ಷಗಾನ ರಂಗದಲ್ಲಿ ಒಬ್ಬ ಒಳ್ಳೆಯ ಕಲಾವಿದನಾಗಿ ಹೊರಹೊಮ್ಮಿದ್ದಾರೆ.

ಧರ್ಮಸ್ಥಳ ಮೇಳದಲ್ಲಿ ಕೆಲವು ಬಾರಿ ಹೊಸನಗರ ಮೇಳದಲ್ಲಿ ಒಮ್ಮೆ ಅತಿಥಿ ಭಾಗವತನಾಗಿ ಹೋಗಿದ್ದಿದೆ. ಅದು ಬಿಟ್ಟರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಡೆಯುವ ಆಯ್ದ ಕಲಾವಿದರ ಯಕ್ಷಗಾನದಲ್ಲಿ, ಹವ್ಯಾಸಿ ತಂಡಗಳ ಯಕ್ಷಗಾನಗಳಲ್ಲಿ, ಮಕ್ಕಳ ಮತ್ತು ಮಹಿಳಾ ತಂಡದ ಯಕ್ಷಗಾನಗಳಲ್ಲಿ, ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸಿದ್ದಾರೆ. ಹತ್ತನೇ ವಯಸ್ಸಿನಲ್ಲಿ ಯಕ್ಷಗಾನದ ನಾಟ್ಯ ಅಭ್ಯಾಸ ಆರಂಭಿಸಿದ ಇವರು ಕಿರೀಟ ವೇಷ ಮತ್ತು ಬಣ್ಣದ ವೇಷ ಮಾಡಿದ್ದೇ ಹೆಚ್ಚು. “ಕಾಲಜಂಘ, ಯಮ, ಶತ್ರುಪ್ರಸೂಧನ, ಶಬರಾಸುರ, ಮಹಿಷಾಸುರ, ಶುಂಭಾಸುರ, ಅರ್ಜುನ,ಶಿಶುಪಾಲ ಶತ್ರುಘ್ನ” ಮುಂತಾದ ಪಾತ್ರಗಳನ್ನು ನಾನು ನಿರ್ವಹಿಸಿದ್ದಾರೆ.

ತನ್ನ 25ನೇ ವಯಸ್ಸಿನವರೆಗೆ ವೇಷ ಮಾಡಿದ್ದಾರೆ. ಕಾಲೇಜಿನಲ್ಲಿ, ವಿವಿಧ ಸಂಘಗಳ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಮೂರೂ ಬಾರಿ ಬಣ್ಣದ ವೇಷಕ್ಕೆ ಪ್ರಥಮ ಸ್ಥಾನ ಬಂದಿದೆ. ಉಚಿತವಾಗಿ ಮಕ್ಕಳಿಗೆ ನಾಟ್ಯ ತರಬೇತಿಯನ್ನೂ ನೀಡುತ್ತಿದ್ದರು. ಬಳಿಕ ತನ್ನ 25ನೇ ವಯಸ್ಸಿನಲ್ಲಿ ಭಾಗವತಿಕೆ ಅಭ್ಯಾಸ.ಯಕ್ಷಗಾನ ಕ್ಷೇತ್ರದಲ್ಲಿ 25 ವರ್ಷಗಳಿಂದಲೂ ಹೆಚ್ಚು ಕಾಲ ಕಲಾ ಸೇವೆಯನ್ನು ಮಾಡುತ್ತಿದ್ದಾರೆ.

ಕಳೆದ 16 ವರ್ಷಗಳಿಂದ “ಸೇವಾಭಾರತಿ ರಿ. ಕನ್ಯಾಡಿ ಬೆಳ್ತಂಗಡಿ” ಎಂಬ ಸ್ವಯಂ ಸೇವಾ ಸಂಸ್ಥೆ ವಿವಿಧ ವಿಭಾಗಗಳಲ್ಲಿ (ಆರೋಗ್ಯ, ಶಿಕ್ಷಣ, ವಿಕಲಚೇತನರಿಗಾಗಿನ ಸೇವೆ, ಬೆನ್ನು ಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ ಸೇವಾ ಧಾಮ, ಮಹಿಳಾ ಸಬಲೀಕರಣ, ಸಂಸ್ಕಾರ, ಕೃಷಿ, ಸಾಂಸ್ಕೃತಿಕ) ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯ ಆರಂಭದಿಂದಲೂ ಸ್ವಯಂ ಸೇವಕನಾಗಿ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಂಸ್ಥೆಯ ಖಜಾಂಚಿ.

ಈ ಸಂಸ್ಥೆಯಲ್ಲಿ ಯಕ್ಷಗಾನ ಚಟುವಟಿಕೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.  ಆರಂಭದಲ್ಲಿ ಸಂಸ್ಕಾರ ವಿಭಾಗದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿತ್ತು.  ಮಕ್ಕಳ ಯಕ್ಷಗಾನ, ಮನೆ ಮನೆ ತಾಳಮದ್ದಳೆ,  ಪ್ರಸಿದ್ದರ ಯಕ್ಷಗಾನ, ತಾಳಮದ್ದಳೆ,  ಹಿರಿಯ ಕಲಾವಿದರಿಗೆ ಗೌರವಾರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಆರು ವರ್ಷದ ಹಿಂದೆ ಇದಕ್ಕೆ ಪ್ರತ್ಯೇಕ ಸಾಂಸ್ಥಿಕ ಸ್ವರೂಪ ನೀಡಿ ಸೇವಾಭಾರತಿ ಯ ಸಹ ಸಂಸ್ಥೆಯಾಗಿ ತಾಲೂಕಿನ ಹವ್ಯಾಸಿ, ವೃತ್ತಿ ಕಲಾವಿದರು ಹಾಗೂ ಕಲಾಪೋಷಕರನ್ನು ಒಳಗೊಂಡ ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ತಾಲೂಕು ರಚಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಸದ್ಯ ಈ ಸಂಸ್ಥೆಯ ಸಂಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಕ್ಷಭಾರತಿ ಸಂಸ್ಥೆಯಲ್ಲಿ ಹಿರಿಯ ಕಲಾವಿದ, ಕಲಾಪೋಷಕರಿಗೆ ಗೌರವಾರ್ಪಣೆ, ಯಕ್ಷಗಾನಾಸಕ್ತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರಸಂಗ ಸಾಹಿತ್ಯ ಸಂಗ್ರಹ, ಉಚಿತ ನಾಟ್ಯ ತರಬೇತಿ, ಯಕ್ಷಗಾನ ತಾಳಮದ್ದಳೆ ಆಯೋಜನೆ (ಹಿರಿಯರು, ಮಹಿಳೆಯರು, ಮಕ್ಕಳ ತಂಡ ಇದೆ) ಯಕ್ಷಗಾನ ಬಯಲಾಟ ಆಯೋಜನೆ, ಉಚಿತ ಬಣ್ಣಗಾರಿಕೆ ಶಿಬಿರ ಮುಂತಾದ ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಿದ್ದು ಸಂಸ್ಥೆಯ ನೇತೃತ್ವ ವಹಿಸುತ್ತಿದ್ದಾರೆ. ಕರೋನ ಸಂದರ್ಭದಲ್ಲಿ ವೃತ್ತಿ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಬೆಳ್ತಂಗಡಿ ತಾಲೂಕಿನ ವೃತ್ತಿ ಕಲಾವಿದರಿಂದ ಮೂರು ದಿನದ ಅಂತರ್ಜಾಲದ ಮೂಲಕ ಯಕ್ಷಗಾನ ಪ್ರದರ್ಶನವನ್ನು ಸಂಸ್ಥೆಯ ಸಂಯೋಜನೆಯಲ್ಲಿ ನೀಡಿದೆ.

ಕುಮಾರ ವಿಜಯ, ಮಹಾಕಲಿ ಮಗಧೇಂದ್ರ, ಪಂಚವಟಿ, ಇಂದ್ರಜಿತು, ದುಶ್ಯಾಸನ ವಧೆ, ಗದಾಯುದ್ಧ, ಮೈರಾವಣ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.#ಮೋಹನ, ಅರಭಿ, ಭೂಪಾಳಿ ಇವರ ನೆಚ್ಚಿನ ರಾಗಗಳು.

ಕಡತೋಕ ಮಂಜುನಾಥ ಭಾಗವತರು, ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ ಇವರ ನೆಚ್ಚಿನ ಭಾಗವತರು. ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ,ಕೆ.ಗೋವಿಂದ ಭಟ್, ಪುತ್ತೂರು ಶ್ರೀಧರ ಭಂಡಾರಿ ಇವರ ನೆಚ್ಚಿನ ವೇಷಧಾರಿಗಳು ಹಾಗೂ ಅರ್ಥಗಾರಿಕೆಯಲ್ಲಿ ಕುಂಬ್ಳೆ ಸುಂದರ ರಾವ್ ಬಹಳ ಮೆಚ್ಚಿಕೊಂಡಿದ್ದಾರೆ.

ಯಕ್ಷಗಾನದ ಹಳೆ ಹಾಡುಗಳನ್ನು ಕೇಳುವುದು, ಸಾಮಾಜಿಕ ಸೇವಾಕಾರ್ಯ, ಯಕ್ಷಗಾನ ಸಂಘಟನೆ, ಹಿರಿಯರ ಅನುಭವಗಳನ್ನು ಸವಿಯುವುದು ಇವರ ಹವ್ಯಾಸ.

ಯಕ್ಷಗಾನದ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
ಇಂದು ಯಕ್ಷಗಾನಕ್ಕೆ ಪ್ರಚಾರ ಹೆಚ್ಚು ಸಿಗುತ್ತದೆ. ಕಾರಣ ಜಾಲತಾಣ. ಮೊದಲು ಒಂದೊಂದು ಊರಲ್ಲಿ ತಾಳಮದ್ದಳೆ ತಂಡ ಇತ್ತು.ಈಗ ಅದು ಇಲ್ಲ. ತಾಳಮದ್ದಳೆ ಸಂಖ್ಯೆ ಕಡಿಮೆ ಆಗಿದೆ. ಪ್ರೇಕ್ಷಕರೂ ಕಡಿಮೆ. ಕಲಾವಿದರೂ ಕಡಿಮೆ. ತಾಳಮದ್ದಳೆ ಕೇಳುವ ಆಸಕ್ತರು ಬಹಳ ಕಡಿಮೆ. ಇಂದು ಮಹಿಳೆಯರು ಆಸಕ್ತಿಯಿಂದ ತೊಡಗಿಸಿಕೊಂಡ ಕಾರಣ ತಮ್ಮ ಮಕ್ಕಳಿಗೆ ಯಕ್ಷಗಾನದ ಒಲವು ಮೂಡಿಸುತ್ತಿದ್ದಾರೆ.

ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ: ಪರಿಪೂರ್ಣವಾಗಿ ಯಕ್ಷಗಾನ ಸವಿಯುವ ಪ್ರೇಕ್ಷಕರು ಕಡಿಮೆ ಆಗಿದ್ದಾರೆ. ಒಂದು ಅಂಗವನ್ನು ಮಾತ್ರ ಆಸ್ವಾದಿಸುವ ಪ್ರೇಕ್ಷಕರು ಹೆಚ್ಚು. ಮೊದಲು ವಿದ್ಯಾಭ್ಯಾಸ ಕಡಿಮೆ ಇದ್ದರೂ ಪ್ರಬುದ್ಧ ಪ್ರೇಕ್ಷಕರು ಇದ್ದರು. ಸಣ್ಣ ಲೋಪ ಆದರೂ ಕಂಡುಹಿಡಿಯುತ್ತಿದ್ದರು. ಅಧ್ಯಯನ, ಭಾಗವಹಿಸುವಿಕೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದು ಇವರ ಮುಂದಿನ ಯೋಜನೆಗಳು.

ತನ್ನ ಯಕ್ಷಗಾನ ಯಾನದ ಬೆಳವಣಿಗೆಯಲ್ಲಿ ಸಹಕಾರಿಯಾದ ಚಂದ್ರಶೇಖರ್ ಭಟ್ ಕೊಂಕಣಾಜೆ, ಸುರೇಶ್ ಕುದ್ರೆಂತಾಯ ಉಜಿರೆ, ಹರಿದಾಸ ಗಾಂಭೀರ ಧರ್ಮಸ್ಥಳ ಹಾಗೂ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದ ಶಿತಿಕಂಠ ಭಟ್ ಉಜಿರೆಯವರನ್ನು ನೆನೆಯುತ್ತಾರೆ.

ಅದರಂತೆ ಸಂಘಟಕ ಮಹಾವೀರ ಪಾಂಡಿ ಕಾಂತಾವರ ಹಾಗೂ ಪೂರ್ಣಿಮಾ ರೈ ಸುರತ್ಕಲ್ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿದ್ದಾರೆ. ಸೇವಾಭಾರತಿ ಸಂಸ್ಥೆ ಮತ್ತು ಯಕ್ಷಭಾರತಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಊರವರು, ಅನೇಕ ಹಿರಿಯ, ಕಿರಿಯರು ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಸಾಂಸಾರಿಕವಾಗಿ ಕೃಪಾ ಎಂ  ರಾವ್ ರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಶ್ರೀ ಮಂಜುನಾಥ ಸ್ವಾಮಿ ಹಾಗೂ ಕಲಾಮಾತೆ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ,  ಅವರಿಗೆ ಶುಭವನ್ನು ಕರುಣಿಸಲಿ ಎಂದು ಹಾರೈಸೋಣ.

– ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು

Related posts

ಬೆಂಗಳೂರು ಪುತ್ತಿಗೆ ಮಠದಲ್ಲಿ ಇಂದು ‘ಭಾನುಮತಿ- ಪುರುಷಾಮೃಗ’ ಯಕ್ಷಗಾನ

Upayuktha

ಕನ್ನಡ ಚಿತ್ರರಂಗದ “ಅಶ್ವತ್ಥ ವೃಕ್ಷ”: ನಿಮಗಿದೋ ಮತ್ತೊಮ್ಮೆ ಭಾವಪೂರ್ಣ ನಮನ

Upayuktha

ಇಂದಿನ ಐಕಾನ್- ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ

Upayuktha

Leave a Comment

error: Copying Content is Prohibited !!