ಸಾಧಕರಿಗೆ ನಮನ

ಭಾರತ ಕಂಡ ಆದರ್ಶ ವ್ಯಕ್ತಿ ಸರ್. ಎಂ. ವಿಶ್ವೇಶ್ವರಯ್ಯರವರ ಜನ್ಮದಿನ ಇಂದು

ಭಾರತ ದೇಶ ಇಂದು ಎಲ್ಲ ಕ್ಷೇತ್ರದಲ್ಲೂ ಮುಂದುವರೆದಿದೆ. ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಸಮನಾಗಿ ನಮ್ಮ ದೇಶವು ನಿಂತಿದೆ. ಕ್ರೀಡೆ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದ ಜೊತೆಗೆ ತಂತ್ರಜ್ಞಾನ ಕ್ಷೇತ್ರವು ಭಾರತ ದೇಶದ ಅಭಿವೃದ್ಧಿಗೆ ಕೈಜೋಡಿಸಿದೆ.

ಭಾರತ ಕಂಡ ಆದರ್ಶ ವ್ಯಕ್ತಿಗಳಲ್ಲಿ ಸರ್ .ಎಂ. ವಿಶ್ವೇಶ್ವರಯ್ಯರವರು ಕೂಡ ಒಬ್ಬರು. ಇವರು ಆಧುನಿಕ ಭಾರತದ ಸಾಮಾಜಿಕ ಹರಿಕಾರರಾಗಿ ತಮ್ಮ ವಾಸ್ತವ ಚಿಂತನೆ, ನಿಸ್ವಾರ್ಥ ಮನೋಭಾವ, ಸರಳವಾದ ನಡತೆ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದವರು.

ಸರ್. ಎಂ. ವಿಶ್ವೇಶ್ವರಯ್ಯನವರು, ವೆಂಕಟಲಕ್ಷ್ಮಮ್ಮ ಹಾಗೂ ಶ್ರೀನಿವಾಸಶಾಸ್ತ್ರಿ ದಂಪತಿಗಳ ಎರಡನೇ ಪುತ್ರನಾಗಿ 1860ನೇ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಇದರ ಜನ್ಮದಿನವನ್ನು ಇಂಜಿನಿಯರಿಂಗ್ ದಿನ ಎಂದು ಆಚರಿಸುತ್ತೇವೆ. ವಿಶ್ವೇಶ್ವರಯ್ಯರವರ ಪೂರ್ಣ ಹೆಸರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಮೋಕ್ಷಗೊಂಡಂ ಎಂಬುದು ಅವರ ಮೂಲ ಸ್ಥಳದ ಹೆಸರು.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ನಡೆಸಿ, ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ವೆಸ್ಲಿಯನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರದಲ್ಲಿ ಅಲ್ಲಿಯೇ ತಮ್ಮ ಮುಂದಿನ ಶಿಕ್ಷಣವನ್ನು ಸೆಂಟ್ರಲ್ ಕಾಲೇಜಿನಲ್ಲಿ ಎರಡು ವರ್ಷದ ಇಂಟರ್ಮೀಡಿಯೇಟ್ ಹಾಗೂ ಮೂರು ವರ್ಷದ ಬಿ.ಎ ಪದವಿ ಶಿಕ್ಷಣವನ್ನು ಪಡೆದು, ಮುಂದಿನ ಹೆಚ್ಚಿನ ಶಿಕ್ಷಣಕ್ಕಾಗಿ ಪುಣೆಯಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆದು ಮೊದಲ ರಾಂಕ್ ನಲ್ಲಿ ಉತ್ತೀರ್ಣರಾದರು. ತಮ್ಮ ಜೀವನದಲ್ಲಿ ಏನಾದರೂ ಒಂದು ಅದ್ಭುತವಾದ ಸಾಧನೆ ಮಾಡಬೇಕು ಎಂದು ಬಹುದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಇವರು ತಾವು ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯನ್ನು ಸಹ ಸಾಧನೆಯ ಮೆಟ್ಟಿಲಾಗಿ ಪರಿವರ್ತಿಸಿ ಬಳಸಿಕೊಂಡು ಬಂದವರು. ಮೊದಲು ಮುಂಬೈ ಪ್ರಾಂತ್ಯದ ಇಲಾಖೆಯೊಂದರಲ್ಲಿ ಸಹಾಯಕ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಪಾಂಜ್ರಾ ನದಿಗೆ ತೂಗು ಸೇತುವೆಯನ್ನು ನಿರ್ಮಿಸಿ ಯಶಸ್ವಿಯಾದರು. ಹಾಗೆ ಮೇಲಧಿಕಾರಿಗಳ ಮತ್ತು ಜನರ ಮೆಚ್ಚುಗೆಗೆ ಪಾತ್ರರಾದರು. ಅಷ್ಟೇ ಅಲ್ಲದೆ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಆಯ್ಕೆಯಾದ ಮೊದಲ ಭಾರತೀಯ ಎಂಬ ಗೌರವಕ್ಕೂ ಸಹ ಪಾತ್ರರಾಗಿದ್ದಾರೆ.

ನಂತರ ಅವರು ಮೂರು ವರ್ಷಗಳ ಕಾಲ ಮೈಸೂರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಇವರ ಈ ಸೇವಾ ಅವಧಿಯಲ್ಲಿ ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯವನ್ನು ನಿರ್ಮಾಣ ಮಾಡುವುದರ ಮೂಲಕ ಒಂದು ಹೊಸ ಮನ್ವಂತರದ ಉದಯಕ್ಕೆ ಅಡಿಪಾಯ ಹಾಕಿದರು. ಹಾಗೆ ಅನೇಕ ಕೆಲಸಕಾರ್ಯಗಳಲ್ಲಿ ಅತೀವ ಸುಧಾರಣೆಯನ್ನು ತರುವುದರ ಮೂಲಕ ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಚಿರಪರಿಚಿತರಾದರು.

ಇವರು ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದರ ಮೂಲಕ ಅನೇಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವ ಮತ್ತು ಅರಿವನ್ನು ಮೂಡಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ಯಶಸ್ವಿಯಾದರು. ವೃತ್ತಿಯಲ್ಲಿ ಇವರಿಗಿರುವ ನಿಷ್ಠೆ ಮತ್ತು ಶ್ರದ್ಧೆಯ ಬಗ್ಗೆ ಅರಿತಿದ್ದ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರು ಇವರನ್ನು ಮೈಸೂರಿನ ದಿವಾನರನ್ನಾಗಿ ನೇಮಿಸಿಕೊಂಡರು.

ಮೈಸೂರು ಸಂಸ್ಥಾನವನ್ನು ಮಾದರಿ ಮೈಸೂರನ್ನಾಗಿ ಮಾಡುವುದರಲ್ಲಿ ಬೆನ್ನೆಲುಬಾಗಿ ನಿಂತವರು ವಿಶ್ವೇಶ್ವರಯ್ಯ, ಇವರ ಆಡಳಿತ ಸಮಯದಲ್ಲಿ ಬ್ಯಾಂಕ್ ಹಾಗೆ ಹಲವಾರು ಕೈಗಾರಿಕೆಗಳುಆರಂಭಗೊಂಡವು. ಸಾಧನೆಯ ಶಿಖರದ ತುದಿಯನ್ನು ಏರಿದ ಇವರಿಗೆ ಭಾರತ ಸರ್ಕಾರದಿಂದ ಕೊಡಲ್ಪಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೆ ಬ್ರಿಟಿಷ್ ಸರ್ಕಾರ ‘ಸರ್’ ಪದವಿಯನ್ನು ನೀಡಿ ಸನ್ಮಾನಿಸಿತು. ಇವರು ತಮ್ಮ ಪರಿಪಕ್ವವಾದ ಅನುಭವದಿಂದ ‘ ಮೆಮೊರಿಸ್ ಆಫ್ ವರ್ಕಿಂಗ್ ಲೈಫ್’ ಮತ್ತು ‘ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’ ಹೀಗೆ ಹಲವು ಕೃತಿಗಳನ್ನು ರಚಿಸಿದರು. ಸುಮಾರು 102 ವರ್ಷಗಳ ತುಂಬು ಜೀವನವನ್ನು ನಡೆಸಿದ ಇವರು 1962 ರಲ್ಲಿ ಇಹಲೋಕ ತ್ಯಜಿಸಿದರು.

ಸಂದೀಪ್. ಎಸ್.ಮಂಚಿಕಟ್ಟೆ
ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕ್ರೀಡಾಲೋಕ: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತಂದ ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್

Upayuktha

ಮಾನವೀಯತೆಯ ಸಾಕಾರಮೂರ್ತಿ ಸೋನು ಸೂದ್

Upayuktha

ಬಾಲಿವುಡ್ ಸಾರ್ವಕಾಲಿಕ ಗಾಯಕ ಪಂಕಜ್ ಕುಮಾರ್ ಮಲ್ಲಿಕ್

Upayuktha