ದೇಶ-ವಿದೇಶ ಪ್ರಮುಖ

ಲಡಾಖ್‌ನಲ್ಲಿ ಭಾರತದ ನೆಲದ ಮೇಲೆ ಕಣ್ಣುಹಾಕಿದ ದುಷ್ಟಶಕ್ತಿಗೆ ತಕ್ಕ ಉತ್ತರ ನೀಡಿದ್ದೇವೆ: ಪ್ರಧಾನಿ ಮೋದಿ

(ಚಿತ್ರ ಕೃಪೆ: ನ್ಯೂಸ್ ಆನ್ ಎಐಆರ್‌)

ಹೊಸದಿಲ್ಲಿ: ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಯ ಪ್ರಶ್ನೆ ಬಂದಾಗ ಭಾರತದ ಬದ್ಧತೆ ಮತ್ತು ಬಲ ಹೇಗಿದೆ ಎಂಬುದನ್ನು ಜಗತ್ತು ಗಮನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲಡಾಖ್‌ನಲ್ಲಿ ಭಾರತದ ನೆಲದ ಮೇಲೆ ಕಣ್ಣುಹಾಕಿದ ದುಷ್ಟಶಕ್ತಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಅವರು ತಿಳಿಸಿದರು.

ಆಕಾಶವಾಣಿಯ ಮೂಲಕ ತಮ್ಮ ಮಾಸಿಕ ‘ಮನ್‌ಕೀ ಬಾತ್’ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಸ್ನೇಹದ ಬಾಂಧವ್ಯಗಳನ್ನು ಗೌರವಿಸುತ್ತದೆ; ತದ್ವಿರುದ್ಧ ಭಾವನೆಗಳನ್ನು ವ್ಯಕ್ತಪಡಿಸುವವರಿಗೆ ಸೂಕ್ತ ಉತ್ತರವನ್ನೂ ನೀಡಲು ಸಮರ್ಥವಾಗಿದೆ ಎಂದು ಹೇಳಿದರು.

ಭಾರತ ಮಾತೆಯ ಭವ್ಯತೆ ಮತ್ತು ಘನತೆಯ ಮೇಲೆ ಕೆಟ್ಟ ದೃಷ್ಟಿ ಬೀರುವವರನ್ನು ನಮ್ಮ ವೀರ ಯೋಧರು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಲಡಾಖ್‌ನಲ್ಲಿ ವೀರಮರಣವನ್ನಪ್ಪಿದ ಯೋಧರ ಶೌರ್ಯದ ಮುಂದೆ ದೇಶ ತಲೆಬಾಗುತ್ತದೆ ಎಂದು ಪ್ರಧಾನಿ ನುಡಿದರು.

ಅವರ ಕುಟುಂಬ ಸದಸ್ಯರಂತೆ ಪ್ರತಿಯೊಬ್ಬ ಭಾರತೀಯನೂ ಯೋಧರ ಬಲಿದಾನದಿಂದ ನೋವು ಅನುಭವಿಸಿದ್ದಾರೆ. ತಮ್ಮ ವೀರ ಪುತ್ರರ ಬಲಿದಾನದ ಬಗ್ಗೆ ಕುಟುಂಬದ ಸದಸ್ಯರು ವ್ಯಕ್ತಪಡಿಸುವ ಹೆಮ್ಮೆಯ ಭಾವನೆಗಳು ದೇಶದ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದರು.

ಬಿಹಾರದ ಹುತಾತ್ಮ ಯೋಧ ಕುಂದನ್ ಕುಮಾರ್ ಅವರ ತಂದೆಯ ಅಭಿಮಾನದ ನುಡಿಗಳನ್ನು ನೆನಪಿಸಿದ ಪ್ರಧಾನಿ, ಆ ಮಹಾನ್ ತಂದೆ ತಮ್ಮ ಮೊಮ್ಮಕ್ಕಳನ್ನೂ ದೇಶದ ರಕ್ಷಣೆಗಾಗಿ ಕಳುಹಿಸುವ ಮಾತನ್ನಾಡಿದ್ದಾರೆ. ಈ ಉತ್ಸಾಹ ಎಲ್ಲ ಹುತಾತ್ಮ ಯೋಧರ ಕುಟುಂಬಗಳಲ್ಲೂ ಕಾಣಿಸುತ್ತಿದೆ ಎಂದು ಮೋದಿ ನುಡಿದರು.

ಭಾರತ ಮಾತೆಯ ರಕ್ಷಣೆಗಾಗಿ ಸರ್ವೋಚ್ಚ ಬಲಿದಾನ ಮಾಡಿದ ನಿರ್ಧಾರ ನಮ್ಮ ಜೀವನದ ಗುರಿಗೆ ಸ್ಫೂರ್ತಿಯಾಗಬೇಕು; ಜತೆಗೆ ನಮ್ಮ ಗಡಿಗಳ ರಕ್ಷಣೆಯ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು.

ಆತ್ಮನಿರ್ಭರ ಭಾರತದ ಕನಸಿನ ಸಾಕಾರವೇ ಹುತಾತ್ಮರ ಶೌರ್ಯಕ್ಕೆ ನಾವು ನೀಡುವ ಗೌರವವಾದೀತು ಎಂದ ಪ್ರಧಾನಿ, ರಕ್ಷಣಾ ವಲಯದ ಸನ್ನದ್ಧತೆಯ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು. ಸ್ವಾತಂತ್ರ್ಯಾನಂತರ ರಕ್ಷಣಾ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರೆ, ಇಂದು ಎದುರಿಸುತ್ತಿರುವ ಹಲವು ಸಮಸ್ಯೆಗಳು ಇರುತ್ತಲೇ ಇರಲಿಲ್ಲ ಎಂದು ಮೋದಿ ಪ್ರತಿಪಾದಿಸಿದರು.

ಜನರ ಸಹಭಾಗಿತ್ವವಿಲ್ಲದೆ ಯಾವ ಅಭಿಯಾನವೂ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಾಧ್ಯವಿಲ್ಲ; ಸ್ವಯಂಪೂರ್ಣವಾದ ಸ್ವಾವಲಂಬಿ ಭಾರತ (ಆತ್ಮನಿರ್ಭರ ಭಾರತ) ಜನರ ಸಮಷ್ಟಿ ನಿರ್ಣಯ, ಬದ್ಧತೆ ಮತ್ತು ಬೆಂಬಲವನ್ನು ಬಯಸುತ್ತದೆ. ಜನರು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುವಾಗ, ಸ್ಥಳೀಯ ಉದ್ಯಮ ವ್ಯವಹಾರಗಳಿಗೆ ಧ್ವನಿಯಾದಾಗ ದೇಶದ ಬಲವರ್ಧನೆಗೆ ಸಕ್ರಿಯ ಸಹಭಾಗಿತ್ವ ನೀಡಿದಂತಾಗುತ್ತದೆ ಎಂದು ಮೋದಿ ಹೇಳಿದರು. ಇದೂ ಸಹ ದೇಶಕ್ಕೆ ಮಾಡುವ ಸೇವೆಯೇ ಆಗುತ್ತದೆ ಎಂದು ಅವರು ತಿಳಿಸಿದರು.

ಆತ್ಮ ನಿರ್ಭರ ಭಾರತವು ವಿಶ್ವಾಸ ಮತ್ತು ಸ್ನೇಹದ ಪರಂಪರೆ ಹಾಗೂ ಭ್ರಾತೃತ್ವದ ಭಾವನೆಯಿಂದ ಬಲಿಷ್ಠವಾಗಿದೆ. ಈ ತತ್ವಗಳಿಗೆ ಬದ್ಧವಾಗಿದ್ದುಕೊಂಡೇ ಭಾರತ ಮುಂದುವರಿಯಬೇಕು ಎಂದು ಪ್ರಧಾನಿ ಹೇಳಿದರು.

ಕೊರೊನಾ ಮಹಾಮಾರಿಯ ವಿರುದ್ಧದ ಸಮರದಲ್ಲಿ ದೇಶವು ಈಗ ಲಾಕ್‌ಡೌನ್‌ ಹಂತದಿಂದ ಮುಂದುವರಿದು ಅನ್‌ಲಾಕ್‌ ಒಂದನೇ ಹಂತದಲ್ಲಿ ಸಾಗುತ್ತಿದೆ. ಅನ್‌ಲಾಕ್ ಅವಧಿಯಲ್ಲಿ ದೇಶದ ಜನತೆ ಎರಡು ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳೆಂದರೆ- ಕೊರೊನಾವನ್ನು ಸೋಲಿಸುವುದು ಮತ್ತು ಆರ್ಥಿಕತೆಯನ್ನು ಬಲಪಡಿಸುವುದು. ಲಾಕ್‌ಡೌನ್ ಅವಧಿಗೆ ಹೋಲಿಸಿದರೆ ಅನ್‌ಲಾಕ್ ಅವಧಿಯಲ್ಲಿ ಜನರು ಮತ್ತಷ್ಟು ಜಾಗರೂಕತೆಯಿಂದ ಇರಬೇಕು. ಮನೆಯೊಳಗೇ ಇದ್ದು ಸುರಕ್ಷಿತರಾಗಿರಬೇಕು; ಅತೀ ತುರ್ತು ಅವಶ್ಯಕತೆ ಇದ್ದಲ್ಲಿ ಮಾತ್ರವೇ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಬರಬಹುದು. ಹಾಗಾದಲ್ಲಿ ಮಾತ್ರ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಪ್ರಧಾನಿ ಹೇಳಿದರು.

ಕೊರೊನಾ ಸಾಂಕ್ರಾಮಿಕ ಹಬ್ಬುತ್ತಿರುವ ಈ ಅವಧಿಯಲ್ಲಿ ಜನರು ಬರೇ ಕೊರೊನಾದಿಂದಷ್ಟೇ ಅಲ್ಲ, ಇತರ ಕಾಯಿಲೆಗಳಿಂದಲೂ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಆಯುರ್ವೇದ ಔಷಧಗಳು, ಗಿಡಮೂಲಿಕೆ ಕಷಾಯಗಳು ಮತ್ತು ಬಿಸಿ ನೀಡು ಕುಡಿಯುವುದರಿಂದ ಆರೋಗ್ಯವಾಗಿ ಇರಬಹುದು ಎಂದು ಪ್ರಧಾನಿ ಸಲಹೆ ನೀಡಿದರು.

ಅನ್‌ಲಾಕ್‌ನ ಈ ಹಂತದಲ್ಲಿ ಈ ವರೆಗೆ ನಿರ್ಬಂಧಿಸಲಾಗಿದ್ದ ಹಲವು ಚಟುವಟಿಕೆಗಳನ್ನು ಮುಕ್ತಗೊಳಿಸಲಾಗಿದೆ. ಈ ವರೆಗೆ ವಿಧಿಸಲಾದ ನಿರ್ಬಂಧಗಳಿಂದ ದೇಶ ದಶಕಗಳಷ್ಟು ಹಿಂದಕ್ಕೆ ಸಾಗಿದೆ. ಗಣಿಗಾರಿಕೆ ವಲಯ, ಬಾಹ್ಯಾಕಾಶ ಮತ್ತು ಕೃಷಿ ವಲಯಗಳು ಹಲವಾರು ವರ್ಷಗಳ ಕಾಲ ಲಾಕ್‌ಡೌನ್ ಸ್ಥಿತಿಯಲ್ಲಿ ಇದ್ದವು. ಈಗ ಸರಕಾರ ಕೈಗೊಂಡಿರುವ ಹಲವು ಕ್ರಮಗಳಿಂದಾಗಿ ಈ ವಲಯಗಳ ಪ್ರಗತಿಗೆ ವೇಗ ದೊರೆತಿದೆ. ಇದರಿಂದಾಗಿ ಪ್ರಸ್ತುತ ಲಾಕ್‌ಡೌನ್ ಅವಧಿಯಲ್ಲೂ ಹಲವು ಸೇವೆಗಳು, ಚಟುವಟಿಕೆಗಳು ಅಬಾಧಿತವಾಗಿ ನಡೆಯುವಂತಾಗಿದೆ ಎಂದು ಮೋದಿ ನುಡಿದರು.

ಕೊರೊನಾ ಸಾಂಕ್ರಾಮಿಕ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಶುಂಠಿ, ಅರಶಿಣ ಮತ್ತು ಇತರ ಸಾಂಬಾರ ಪದಾರ್ಥಗಳ ಬಳಕೆ ಏಷ್ಯಾ ದೇಶಗಳಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ಹೆಚ್ಚಾಗಿದೆ. ಇಡೀ ಜಗತ್ತು ಈಗ ತನ್ನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಎಲ್ಲ ಉಪಾಯಗಳು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿವೆ. ಅವೆಲ್ಲವೂ ಈಗ ಜಾಗತಿಕ ಮಹತ್ವ ಪಡೆದುಕೊಳ್ಳುತ್ತಿವೆ ಎಂದು ಮೋದಿ ಹೇಳಿದರು.

ಮುಂಗಾರು ಸಮೃದ್ಧಿ:
ಮುಂಗಾರು ಈಗ ದೇಶದ ಬಹುತೇಕ ಭಾಗಗಳಿಗೆ ವ್ಯಾಪಿಸಿದೆ. ಹವಾಮಾನ ತಜ್ಞರು ಈ ವರ್ಷ ಉತ್ತಮ ಮಳೆಯನ್ನು ನಿರೀಕ್ಷಿಸಿದ್ದು, ರೈತರು ಸಮೃದ್ಧ ಬೆಳೆಯನ್ನು ನಿರೀಕ್ಷಿಸಬಹುದು. ಅಲ್ಲದೆ ಭೂಮಿ ಸಸ್ಯಶ್ಯಾಮಲೆಯಾಗಿ ಕಂಗೊಳಿಸಲು ಹವಾಮಾನ ಪೂರಕವಾಗಿದೆ ಎಂದು ಪ್ರಧಾನಿ ಹೇಳಿದರು.

ಪರಿಸರದ ರಕ್ಷಣೆಗಾಗಿ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಕೊಯ್ಲನ್ನು ಆಶ್ರಯಿಸಬೇಕಾಗಿದೆ ಎಂದ ಪ್ರಧಾನಿ, ಕರ್ನಾಟಕದ ಮಂಡವಳ್ಳಿಯ 80 ವರ್ಷ ಮೀರಿದ ಹಿರಿಯ ರೈತ ಕೆಂಪೇಗೌಡರು ತಮ್ಮ ಜಮೀನಿನಲ್ಲಿ ನೂತನ ಕೆರೆಗಳನ್ನು ನಿರ್ಮಿಸುತ್ತಿರುವುದನ್ನು ಉಲ್ಲೇಖಿಸಿದರು. ಇದುವರೆಗೆ ಕೆಂಪೇಗೌಡರು ತಮ್ಮ ಕಠಿಣ ಪರಿಶ್ರಮದಿಂದಲೇ 16 ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಮೋದಿ ತಿಳಿಸಿದರು.

ವಡೋದರಾ ಜಿಲ್ಲಾಡಳಿತ ಮತ್ತು ಸ್ಥಳೀಯ ನಿವಾಸಿಗಳು ಕೈಜೋಡಿಸಿ 1,000 ಶಾಲೆಗಳಲ್ಲಿ ಮಳೆ ನೀರು ಕೊಯ್ಲಿನ ವ್ಯವಸ್ಥೆ ರೂಪಿಸಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಗಣೇಶ ಚತುರ್ಥಿಗಾಗಿ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ತಯಾರಿಸುವಂತೆ ಜನತೆಗೆ ಪ್ರಧಾನಿ ಆಗ್ರಹಿಸಿದರು. ಕುಟುಂಬದ ಹಿರಿಯರು ಮಕ್ಕಳಿಗೆ ಹಳೆಯ ಸಾಂಪ್ರದಾಯಿಕ ಆಟಗಳನ್ನು ಕಲಿಸಿಕೊಡಬೇಕು. ಆ ಮೂಲಕ ಮಕ್ಕಳು ಆನ್‌ಲೈನ್ ಗೇಮ್‌ಗಳಿಂದ ಸ್ವಲ್ಪ ಕಾಲವಾದರೂ ದೂರವಿರುವಂತೆ ಮಾಡಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

ಪಿವಿಎನ್‌ ಜನ್ಮಶತಮಾನೋತ್ಸವ, ಶ್ರದ್ಧಾಂಜಲಿ:
ಮಾಜಿ ಪ್ರಧಾನಿ ದಿವಂಗತ ಪಿ.ವಿ ನರಸಿಂಹ ರಾವ್ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶ ಅತ್ಯಂತ ಸಂಕಟದ ಸನ್ನಿವೇಶದಲ್ಲಿದ್ದಾಗ ಮುನ್ನಡೆಸಿದ ಕೀರ್ತಿ ಅವರದ್ದು ಎಂದು ಮೋದಿ ಸ್ಮರಿಸಿದರು.

ಭಾರತದ ಅಂತಸ್ಸತ್ವ ಬಲಿಷ್ಠವಾಗಿದೆ. ಪ್ರತಿಯೊಂದು ಸಂಕಟ ಎದುರಾದಾಗಲೂ ಅದನ್ನು ಯಶಸ್ವಿಯಾಗಿ ಭೇದಿಸಿ ಮುನ್ನಡೆದ ಇತಿಹಾಸ ನಮ್ಮದು. 2020ರ ಸಾಲಿನಲ್ಲಿ ಭಾರತ ಸವಾಲುಗಳನ್ನು ಗೆಲ್ಲುವುದಷ್ಟೇ ಅಲ್ಲದೆ, ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲಿದೆ. ಈ ದಶಕದಲ್ಲಿ ಭಾರತ ಜಗತ್ತಿಗೆ ಹೊಸ ದಿಕ್ಕನ್ನು ತೋರಲಿದೆ ಎಂದು ಪ್ರಧಾನಿ ನುಡಿದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಪರ್ಯಾಯ ಮಹೋತ್ಸವ 2020ಗೆ ಉಡುಪಿ ಸಜ್ಜು

Upayuktha

ಬರಹಗಾರ, ಹಿರಿಯ ಸಂಶೋಧಕ ಡಾ. ಎಂ ಚಿದಾನಂದ ಮೂರ್ತಿ ನಿಧನ

Upayuktha

ಆರೋಗ್ಯ ಚೇತರಿಸಿಕೊಂಡ ಕಪಿಲ್ ದೇವ್

Harshitha Harish