ಲೇಖನಗಳು-ಅಧ್ಯಾತ್ಮ

ಚಿಂತನ-ಚೇತನ: ಖಾಲಿಯಾಗದ ಹೊರತು ತುಂಬಿಕೊಳ್ಳಲಾಗದು

ಸಾಂದರ್ಭಿಕ ಚಿತ್ರ (ಕೃಪೆ: ಕನಿಷ್ಕ ಸಿನ್ಹಾ ಲೈವ್ ಜರ್ನಲ್)

ವ್ಯಕ್ತಿಯೊಬ್ಬನು ತನ್ನ ಕಣ್ಣುಗಳಿಗೆ ಕಾಣಿಸುವ, ಕಿವಿಗಳಿಗೆ ಕೇಳಿಸುವ, ಮತ್ತು ಮನಸ್ಸಿಗೆ ನಿಲುಕುವಷ್ಟು ಮಾತ್ರ ಈ ಜಗತ್ತು ವ್ಯಾಪಿಸಿಕೊಂಡಿದೆ ಎಂಬ ಭ್ರಮೆಯಲ್ಲಿದ್ದಾನೆ. ಈ ತರನಾದ ಮಂದಮತಿಯಲ್ಲಿ ಬದುಕುತ್ತಿರುವ ನಾವು ನಮ್ಮ ಮನಸ್ಸನ್ನು ವಿಸ್ತಾರಗೊಳಿಸಬೇಕಾಗಿದೆ. ದೊಡ್ಡವರಾಗಿ ಬೆಳೆಯ ಬೇಕೆಂದರೆ ನಮ್ಮಲ್ಲಿರುವ ಸಣ್ಣತನವನ್ನು ಹೋಗಲಾಡಿಸಬೇಕು. ಒಂದು ಮರವು ದೃಢವಾಗಿ ಮತ್ತು ಬೃಹದಾಕಾರವಾಗಿ ಬೆಳೆದು ನಿಲ್ಲಬೇಕಾದರೆ ಅದರ ಬೇರುಗಳು ಆಳವಾಗಿ ಬೀಡು ಬಿಟ್ಟಿರಬೇಕು. ಮಾನವಕೋಟಿ ನೆಲೆಯಲ್ಲಿ ಇತ್ತ ಗಮನಹರಿಸಿದರೆ, ಯಾವಾತನು ಹಿರಿಯರ ಮುಂದೆ ಅಧ್ಯಯನದಿಂದಲೂ, ಸಹಜವರ್ತನೆಯಿಂದಲೂ ಗೌರವದಿಂದ ವಿಧೇಯನಾಗಿ ಬಾಗುವನೋ, ಆತ ಈ ಜಗತ್ತಿನಲ್ಲಿ ತಲೆ ಎತ್ತಿ ಸದೃಢವಾದ ಬದುಕನ್ನು ನಡೆಸುವುದರಲ್ಲಿ ಸಂಶಯವಿಲ್ಲ.

ಪ್ರಕೃತಿಯು ನೀಡುತ್ತಾ ಬಂದಿರುವುದನ್ನು ಮಾನವನು ಮರೆಯುತ್ತಾ ಬಂದಿದ್ದಾನೆ. ನಮ್ಮಲ್ಲಿ ಅನೇಕ ಕೊರತೆಗಳಿವೆ, ಅದನ್ನು ಗುರುತಿಸಿ, ಪರಿಹರಿಸಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ಬದುಕು ಚೈತನ್ಯಭರಿತವಾಗಬೇಕಾದರೆ ನಮ್ಮ ಮಾತಿನಲ್ಲೊಂದಿಷ್ಟು ಹಿತನುಡಿ, ಇತರರೊಂದಿಗೆ ಪ್ರೀತಿ, ಕಾಳಜಿಯನ್ನು ಹೊಂದಿದ್ದೂ, ಅದರ ಅನುಷ್ಠಾನ ಪರರಾಗಿರಬೇಕಾಗುತ್ತದೆ. ಪ್ರಕೃತಿಯೊಂದಿಗೆ ನಾವು ಎಂಬುವುದನ್ನು ನೆನಪಿಡಬೇಕಾಗಿದೆ. ತಿಳಿದಿದೆ ಅನ್ನುವುದು ಅಳಿವಿನ ಮೂಲವಾಗಲೂಬಹುದು. ವಾಸಿಸುವ ಮನೆ ವಿಶಾಲವಾಗಿರಬೇಕೆನ್ನುವವರು ತಮ್ಮ ಮನಸ್ಸು ಕೂಡಾ ಅಷ್ಟೇ ವಿಶಾಲತೆಯನ್ನು ಹೊಂದಿರಬೇಕು ಎನ್ನುವುದನ್ನು ಹಲವರು ಮರೆತಿರುತ್ತಾರೆ. ಹಾಗಾಗಿ ಪ್ರಕೃತಿಯ ಮುಂದೆ ಸದಾ ವಿಧೇಯನಾಗಿ ಮುನ್ನಡೆಯಬೇಕು.

ಅನೇಕರಿಗೆ ಅಧ್ಯಾತ್ಮ ಬದುಕಿನ ಪರಿಚಯವಿಲ್ಲ. ಅನೇಕರು ಭಕ್ತಿ ಎಂದರೆ ತಾವುಗಳು ದೇವರಿಗೆ ಸಲ್ಲಿಸುವ ಹಣ, ಒಡವೆ, ವಸ್ತ್ರ, ಕಟ್ಟಡ, ಜಾಗ ಎಂಬಿತ್ಯಾದಿ ಭಾವಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರಲ್ಲಿ ಜನರು ಗಮನಿಸಿ, ಗುರುತಿಸಲಿ ಎಂಬುವುದಕ್ಕಾಗಿಯೇ ಅವರ ನಡೆವಳಿಕೆಯು ಅಭಿವ್ಯಕ್ತಿಗೊಳ್ಳುತ್ತಿರುತ್ತದೆ. ಅನುಷ್ಠಾನದ ಮತ್ತು ಅಂತರಂಗದ ಹೊರತಾಗಿ, ತಾವು ಉಡುವ ಬಟ್ಟೆಯಿಂದಲೋ, ತೊಡುವ ರುದ್ರಾಕ್ಷಿ-ಒಡವೆಗಳಿಂದಲೋ, ಹಣೆಗೆ, ಮೈ-ಕೈಗೆ ಹಚ್ಚಿಕೊಳ್ಳುವ ನಾಮಾದಿಗಳಿಂದಲೋ, ಆಡುವ ಮಾತುಗಳಿಂದಲೋ, ಆಚಾರ-ವಿಚಾರ, ಪದ್ಧತಿ – ಕ್ರಮಗಳಿಂದಲೋ, ಹಾಗೆಯೇ ವಾಸಿಸುವ ಮನೆಯ ಮುಖಾಂತರವೋ ತಮ್ಮನ್ನು ತಾವು ಆಧ್ಯಾತ್ಮಿಕ ವ್ಯಕ್ತಿ ಎಂಬುದಾಗಿ ತೋರ್ಪಡಿಕೆಯ ಜೀವನ ನಡೆಸುವ ಹಲವರನ್ನು ನಾವು ಪ್ರತಿನಿತ್ಯ ಕಾಣಬಹುದು. ಇದಕ್ಕೆ ಮಾರುಹೋಗುತ್ತಿರುವ ವ್ಯಕ್ತಿಗಳ ಸಂಖ್ಯೆಯೂ ನಮ್ಮ ಸಮಾಜದಲ್ಲಿ ಕಡಿಮೆಯೇನಲ್ಲ. ಕಾರಣ ಸಂಸ್ಕೃತ ಭಾಷೆಯ ತಿರಸ್ಕಾರ, ಶಾಸ್ತ್ರಜ್ಞಾನದ ಕೊರತೆ, ಕೈಗೆಟಕುವ ಭಾಷೆಗಳಲ್ಲಿ ಓದಲು ಸಿಗುತ್ತಿರುವ, ಭಗವಂತನ ಮಾತುಗಳಿರುವ ಭಗವದ್ ಗೀತೆಯನ್ನು ಓದದೇ ಇರುವುದು, ಇದರೊಂದಿಗೆ ಮೂಢನಂಬಿಕೆ ಹಾಗೆಯೇ ಮನಸ್ಸನ್ನು ಸದಾ ದ್ವೇಷ-ಮತ್ಸರದತ್ತ, ಕೆಟ್ಟ ಚಟಗಳತ್ತ, ಕೆಟ್ಟ ಚಿಂತನೆ, ಸಹವಾಸಗಳತ್ತ ಹರಿಯಬಿಟ್ಟು ವಿಕೃತವನ್ನಾಗಿರಿಸುವುದು ವಿಷಾದನೀಯ. ಜನರ ಈ ಅಜ್ಞಾನವನ್ನು ಅಸ್ತ್ರವನ್ನಾಗಿ ಉಪಯೋಗಿಸಿಕೊಂಡು ಹಲವು ವ್ಯಕ್ತಿಗಳು ವ್ಯವಹಾರ ನಡೆಸುವುದಕ್ಕಾಗಿ ಆಧ್ಯಾತ್ಮಿಕ ಸಂಘಟನೆಗಳ ಕೇಂದ್ರವನ್ನು ಸ್ಥಾಪಿಸಿ, ಜನರನ್ನು ಮೋಸಗೊಳಿಸುತ್ತಲೇ ಬಂದಿದೆ.

ಮಾನವನು ತಾನು ಒಂದಲ್ಲ ಒಂದು ರೀತಿಯಲ್ಲಿ ಪ್ರಸಿದ್ಧಿಯನ್ನು ಪಡೆಯಬೇಕು ಎಂದು ಸದಾ ಕಾರ್ಯೋನ್ಮುಖನಾಗಿರುತ್ತಾನೆ. ಇದು ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲವರು ಅಡ್ಡ ದಾರಿಗಳನ್ನು ಹಿಡಿದಿರುವುದನ್ನೂ ಕಾಣಬಹುದು. ಹೂದೋಟದಲ್ಲಿನ ಪ್ರತಿಯೊಂದು ಹೂವು ಕೂಡಾ ಸಂಪೂರ್ಣವಾಗಿ ಅರಳಲಿಚ್ಛಿಸುತ್ತದೆ. ತನ್ನ ಸುತ್ತಮುತ್ತಲೂ ಮಧುರವಾದ ಕಂಪನ್ನು ಗಾಳಿಯ ಮೂಲಕ ಹರಡಬೇಕು ಎಂದು ಆಶಿಸುತ್ತದೆ. ಆದರೆ ನಮಗೆ ತಿಳಿದಿರಬೇಕಾದ ಸಂಗತಿಯೇನೆಂದರೆ, ಹೂವು ಸಮಗ್ರತೆಯಿಂದ ಅರಳುವ ಚಿತ್ತವನ್ನು ಹೊಂದಿದೆ. ಇದನ್ನು ಹೀಗೂ ಅರ್ಥೈಸಿಕೊಳ್ಳಬಹುದು, ಒಂದು ಸುಗಂಧ ಭರಿತ ಹೂವು ಅರಳುತ್ತಿರುವಾಗ ಅದರ ಸುವಾಸನೆ ವಾತಾವರಣದಲ್ಲಿ ಹರಡಲೇಬೇಕು, ಹಾಗೆಯೇ ಜ್ಞಾನಿಗಳನ್ನು, ಸದ್ಗುಣವಂತರನ್ನು, ಅನುಷ್ಠಾನ ಪರರಾಗಿರುವಂತ ವ್ಯಕ್ತಿಗಳನ್ನು ಈ ಸಮಾಜವು ಒಂದಲ್ಲ ಒಂದು ದಿನ ಗುರುತಿಸಲೇ ಬೇಕಲ್ಲವೇ?

ಮಲ್ಲಿಗೆ ಹೂವು ಸಂಪಿಗೆ ಹೂವಿನ ಹಾಗೆ ಯಾಕಿಲ್ಲ?! ಎಂದು ಆಲೋಚಿಸಬಾರದು. ಪ್ರತಿಯೊಂದು ಹೂವಿಗೂ ಅದರದ್ದೇ ಆದ ಗುಣ ವೈಶಿಷ್ಟ್ಯಗಳಿವೆ. ಆದರೆ ನಾವುಗಳು ಇನ್ನೊಬ್ಬರ ಅನುಕರಣೆಯಲ್ಲಿಯೇ ನಿರತರಾಗಿದ್ದೇವೆ. ಅಧ್ಯಾತ್ಮ ಅನ್ನುವುದು ಬಾಹ್ಯವಾಗಿಲ್ಲ ಅನ್ನುವುದನ್ನು ಅರ್ಥೈಸಿಕೊಳ್ಳಬೇಕಾಗಿದೆ, ಮತ್ತು ‘ಅಧ್ಯಾತ್ಮ ಜೀವನ’ ಅನ್ನುವುದು ಕೇವಲ ಕಾವಿಧಾರಿಗಳಿಗೆ ಮಾತ್ರ ಅನ್ನುವುದೂ ಮೂರ್ಖತನವಾಗಿದೆ. ಸನ್ಯಾಸಿಯಾಗಿಯೋ ಅಥವಾ ಗೃಹಸ್ಥರಾಗಿಯೋ ಅಧ್ಯಾತ್ಮ ಜೀವನವನ್ನು ಬಲು ಶ್ರದ್ಧೆಯಿಂದ ನಡೆಸಬಹುದಾಗಿದೆ. ಈ ಮಾನವ ಜೀವನದ ಮೂಲಗುರಿ ‘ಸ್ವಾನುಭವವನ್ನು ಪಡೆದು ಸ್ವಯಂ ಜೀವನವನ್ನು ಅರಿಯುವುದು ಅಥವಾ ವಾಸ್ತವಿಕತೆಗೆ ಮರಳುವುದು’.

ಲೌಕಿಕ ಆಸಕ್ತಿಯಿಂದಾಗಿ ನಡೆಸುವ ಅತಿಯಾದ ಪ್ರತಿಕ್ರಿಯೆಗಳು ನಮ್ಮನ್ನು ಆಧ್ಯಾತ್ಮಿಕತೆಯಿಂದ ದೂರವಿಡುತ್ತದೆ. ಕೈ ಮೇಲೇಳುವ ಮುನ್ನ ಚೇತನ ಮೇಲೇಳಬೇಕಲ್ಲವೇ? ಹೆಸರು, ಕೀರ್ತಿ, ಪ್ರತಿಷ್ಠೆಗಳ ಹಿಂದೆ ಓಡುವವರು ಅಥವಾ ಅವುಗಳಿಗೆ ತಮ್ಮಲ್ಲಿ ಮಣೆಹಾಕುವವರ ಜೇವನವು ಆಧ್ಯಾತ್ಮಿಕತೆಯಿಂದ ದೂರ ಉಳಿದುಬಿಡುವ ಸಾಧ್ಯತೆಯೇ ಹೆಚ್ಚು. ಇದೆಲ್ಲದರ ಬದಲಾಗಿ ನಮ್ಮ ಕಾರ್ಯಗಳನ್ನು ಭಗವಂತನಿಗೆ ಸಂಪೂರ್ಣವಾಗಿ ಸಮರ್ಪಿಸಬೇಕು.

ಭಗವದ್ ಗೀತೆಯ ಅತ್ಯಂತ ಶ್ರೇಷ್ಠವಾದ ಮಾತು ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ – ಅರ್ಥಾತ್, ಕೆಲಸ ಕಾರ್ಯಗಳನ್ನು ಮಾಡುತ್ತಲಿರು, ಫಲಿತಾಂಶದ ನಿರೀಕ್ಷೆ ಮಾತ್ರ ಇಟ್ಟುಕೊಳ್ಳದಿರು ಎಂದು. ಖಾಲಿಯಾಗದ ಹೊರತು ಏನನ್ನೂ ತುಂಬಿಕೊಳ್ಳಲಾರೆವು. ಖಾಲಿಯಾಗಬೇಕಿರುವುದು ದ್ವೇಷ, ಮತ್ಸರ, ಸ್ವಾರ್ಥ, ಕೆಟ್ಟ ಚಿಂತನೆಗಳು. ತುಂಬಿಕೊಳ್ಳಬೇಕಾಗಿರುವುದು ಸದ್ವಿಚಾರಗಳು, ಭಕ್ತಿ, ಶ್ರದ್ಧೆ ಮತ್ತು ಪ್ರೀತಿ- ವಿಶ್ವಾಸ. ಶ್ರೀಮದ್ ಭಗವದ್ ಗೀತೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಿರಾದರೆ, ವಾಸ್ತವದಲ್ಲಿ ಆಧ್ಯಾತ್ಮಿಕ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.

– ದುರ್ಗಾಪರಮೇಶ್ವರ ಭಟ್, ಪುತ್ತೂರು.
ಶಿಕ್ಷಕರು ಹಾಗೂ ವಿಭಾಗ ಮುಖ್ಯಸ್ಥರು,
ಶುಭಂ ಕರೋತಿ ಮೈತ್ರೆಯೀ ಗುರುಕುಲ, ಬೆಂಗಳೂರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಓಂಕಾರದಿಂದ ಹೆಚ್ಚಿಸಿಕೊಳ್ಳಿ ಆರೋಗ್ಯ

Upayuktha

ಸಂಸ್ಕೃತಿ ಚಿಂತನೆ: ಪಿತೃಪಕ್ಷದಲ್ಲಿ ಶ್ರಾದ್ಧದ ಮಹಿಮೆ

Upayuktha

‘ಮಾಧ್ವ ಇತಿಹಾಸದಲ್ಲಿ ಶ್ರೀಮದಕ್ಷೋಭ್ಯತೀರ್ಥರ ಕೀರ್ತಿ ಅಮರವಾದುದು!!‘

Upayuktha