ಜೀವನ-ದರ್ಶನ

ಚಿಂತನ: ರೋಗಾರ್ತೋ ಮುಚ್ಯತೇ ರೋಗಾತ್….

ಯಾರು ಈ ಸ್ತೋತ್ರವನ್ನು ನಿತ್ಯ ಭಕ್ತಿಯಿಂದ ಪಠಿಸುತ್ತಾರೋ ಅವರ ಭಯವು ದೂರವಾಗುತ್ತದೆ, ವೀರ್ಯ ತೇಜಸ್ಸು ಹೆಚ್ಚಾಗುತ್ತದೆ, ಬಲ ರೂಪ ಗುಣಗಳು ವೃದ್ಧಿಯಾಗತ್ತವೆ, ಸಕಲ ರೋಗಗಳಿಂದ ಮುಕ್ತಿ ಸಿಗುತ್ತದೆ, ಬಂಧನಗಳು ಇಲ್ಲವಾಗುತ್ತವೆ ಅರ್ಥಾತ್ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಸಾಮಾನ್ಯವಾಗಿ ಎಲ್ಲ ದೇವರ ಸ್ತೋತ್ರಗಳಿಂದ ಬರಬಹುದಾದ ಫಲಶ್ರುತಿ ಈ ರೀತಿಯಲ್ಲೇ ಇರುತ್ತದೆ. ವಿಷ್ಣು ಸಹಸ್ರನಾಮವಿರಬಹುದು, ಲಲಿತಾ ಸಹಸ್ರನಾಮವಿರಬಹುದು, ರಾಮರಕ್ಷ ಸ್ತೋತ್ರವಿರಬಹುದು ಅಥವಾ ಇನ್ಯಾವುದೇ ಸ್ತೋತ್ರಗಳಿರಬಹುದು ಫಲಶ್ರುತಿಯಲ್ಲಿ ಭೇದವಿಲ್ಲ. ಎಲ್ಲವೂ ಶ್ರೇಷ್ಠವೇ. ಓದುವವನ ಶ್ರದ್ಧೆ ಭಕ್ತಿಯ ಮೇಲೆ ಅದರ ಫಲ ನಿರ್ಣಯವಾಗುತ್ತದೆ ಎನ್ನುವುದು ಹಿರಿಯರ ಅನುಭವ. ತಕರಾರಿಲ್ಲ..

ವಾಸ್ತವ ಹಾಗಿದೆಯೇ ಎನ್ನುವುದು ಪ್ರಶ್ನೆ. ಇದೆಲ್ಲ ಅವರವರ ಭಾವಕ್ಕನುಗುಣವಾಗಿದೆ. ಶ್ರದ್ಧಾ ಭಕ್ತಿಯಿಂದ ಅನವರತ ಸ್ತೋತ್ರ, ಭಜನೆ, ಪೂಜೆ ಇತ್ಯಾದಿ ಮಾಡುತ್ತಿರುವವನ ಜೀವನವು ಸುಗಮವಾಗಿದ್ದರೆ ಸಂತೋಷ. ತನ್ನ ಸಾತ್ವಿಕ ಜೀವನ ಶೈಲಿಯೇ ತನ್ನ ಔನ್ನತ್ಯದ ರಹಸ್ಯವೆಂದುಕೊಂಡಲ್ಲಿ ಅದೂ ಸಂತೋಷವೇ. ಆದರೆ ಇದೆಲ್ಲವನ್ನು ಮಾಡಿಯೂ ಯಾವಾತನ ಬಾಳು ಅಧಃಪತನದತ್ತ ಹೋಗುತ್ತಿರುತ್ತದೋ ಆವಾಗ ಈ ಶ್ಲೋಕಗಳ ಫಲಶ್ರುತಿಗಳು ಹಾಸ್ಯಾಸ್ಪದವಾಗುವುದರಲ್ಲಿ ಅನುಮಾನವಿಲ್ಲ.

ಹೇಳಬಹುದು ಪ್ರಾರಬ್ಧ ಕರ್ಮ, ಜನ್ಮಾಂತರದ ಪಾಪ ಪುಣ್ಯದ ಫಲ… ಅಥವಾ ಇನ್ನೇನೋ. ಆದರೆ ಕನಸಿನಲ್ಲಿ ಕೂಡ ಇನ್ನೊಬ್ಬರಿಗೆ ಕೇಡು ಬಯಸದೆ ಸಾತ್ವಿಕ ಬದುಕನ್ನು ಬದುಕುತ್ತಿರುವಾತನಿಗೆ ಇನ್ನಿಲ್ಲದ ರೋಗ ರುಜಿನಗಳು ವ್ಯವಹಾರದಲ್ಲಿ ಹಿನ್ನಡೆಗಳು ಬಂದರೆ ಅಂಥವನಿಗೆ ತಾನು ಮಾಡಿದ ಸತ್ಕರ್ಮದಲ್ಲಿ ಜಿಗುಪ್ಸೆ ಬಂದರೆ ವಿಶೇಷವೇನಲ್ಲ. ನಾವು ಪುನರ್ಜನ್ಮವೆಂಬ ನಂಬಿಕೆ ಅಥವಾ ವಾಸ್ತವದಲ್ಲಿ ಬದುಕುವವರು.

ಆದ್ದರಿಂದ ಜನ್ಮಾಂತರದ ಕರ್ಮಾನುಬಂಧಕ್ಕನುಗುಣವಾಗಿ ನಮ್ಮ ಕಷ್ಟ ಸುಖಗಳು ನಮ್ಮೊಡನೆ ಬರುವವೆಂದು ನಂಬಿದವರು. ಅಷ್ಟರ ಮಟ್ಟಿಗೆ ಕಷ್ಟಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಪಡಕೊಂಡಿರುವುದು ನಮ್ಮ ಭಾಗ್ಯವೇ.

ಪ್ರತಿಯೊಬ್ಬನೂ ಈ ಭೂಮಿಗೆ ಬರುವ ಮುಂಚೆಯೇ ಆತನ ಮುಂದಿನ ಭವಿಷ್ಯವು ನಿರ್ಧಾರವಾಗಿರುವುದೆಂದು ಅಂದುಕೊಳ್ಳಬೇಕಾದ ಅನಿವಾರ್ಯತೆ ಇರುವಾಗ ನಮ್ಮ ಇಂದಿನ ಸಾಧನೆಗಳೋ, ಕರ್ಮಗಳೋ ಮುಂದಿನ ದಿನಗಳಿಗೆ ಫಲದಾಯಕವಾಗಬಹುದಲ್ಲದೆ, ಈ ಕ್ಷಣಕ್ಕೆ ಅದರ ಫಲವು ಶೂನ್ಯವೆಂದೇ ಕಾಣುವುದು.

ಹಾಗಾದರೆ ಈ ಸ್ತೋತ್ರಾದಿ ಭಕ್ತಿ ಮಾರ್ಗಗಳು ಹೇಳಿದಂಥ ಫಲಶ್ರುತಿಗಳು ನಮಗೆ ದೊರಕುವವು ಎನ್ನುವುದಕ್ಕೆ ಜನ್ಮಾಂತರದ ಬದುಕೇ ಸಾಕ್ಷಿಯಾಗಬೇಕಾದರೆ, ಅಥವಾ ಪ್ರತ್ಯಕ್ಷ ಪ್ರಮಾಣ ಕಾಣದಾದರೆ ಅದರಲ್ಲಿ ನಂಬಿಕೆ ಬರುವುದು ಸಾಮಾನ್ಯರಿಗೆ ಸಾಧ್ಯವೇ?

ಸಾತ್ವಿಕರ ಬದುಕು ಸುಗಮವಾಗಿರಲೂಬಹುದು ದುರ್ಗಮವಾಗಿರಲೂಬಹುದು. ಇದಮಿತ್ಥಂ ಎಂದು ಹೇಳಬೇಕಾದರೆ ಬಹಳ ಜ್ಞಾನಿಯೇ ಆಗಬೇಕು. ದೇವರು ಒಳ್ಳೆಯದನ್ನೇ ಮಾಡುತ್ತಾನೆ ಎಂದಾಗ ಸುಖದಲ್ಲಿದ್ದವನಿಗೆ ಹಿತವಾದರೆ, ಅತಿಯಾದ ಕಷ್ಟದಲ್ಲಿದ್ದವನಿಗೆ ಇದು ಸಹ್ಯವಾದೀತೇ.. ಆತನೆದುರು ಈ ವಾಕ್ಯಕ್ಕೆ ಅರ್ಥವುಂಟೇ..? ಹಾಗೆಂದು ಆತನು ದೇವರನ್ನು ನಂಬದವನಲ್ಲ. ಆದರೂ ಪರಿಸ್ಥಿತಿ ಆತನಿಗೆ ದೇವರ ಮೇಲೂ ಜಿಗುಪ್ಸೆ ಬರುವಂತೆ ಮಾಡಿದರೆ ತಪ್ಪೆಂದೆನಿಸದು.

ಅನಾದಿಯಿಂದ ಅನಂತದವರೇಗೂ ಇರುವ ಜೀವಿಯ ಪಯಣದಲ್ಲಿ ಸಿಗುವುದೇ ಜನುಮಗಳೆಂಬ ನಿಲ್ದಾಣಗಳು. ಯಾವ್ಯಾವ ನಿಲ್ದಾಣಗಳಲಿ ಯಾವ್ಯಾವ ವ್ಯವಹಾರವೋ, ಯಾವ್ಯಾವ ಲಾಭ ನಷ್ಟಗಳೋ ಯಾರು ಬಲ್ಲವರು..? ಜನ್ಮಾಂತರದ (ನಿಲ್ದಾಣಗಳ) ನೆನಪಿಲ್ಲ, ವರ್ತಮಾನದ ಮಾತ್ರ ಅರಿವಿರಲು ಲೆಕ್ಕಾಚಾರ ಸಿಗುತ್ತಿಲ್ಲ. ಲೆಕ್ಕ ಕೊಟ್ಟವನೇ ಲೆಕ್ಕ ತಿದ್ದುವವನು.

ಯಾವ ಶೇಷವೂ ಉಳಿಯದ ಉತ್ತರ ಬರುವಂತೆ ಸವಾಲಿನ ಲೆಕ್ಕವನ್ನೀವ ಜಾಣನವನು. ಕೆಲವರಿಗೆ ಕೂಡುವ, ಕೆಲವರಿಗೆ ಕಳೆವ, ಕೆಲವರಿಗೆ ಗುಣಿಸುವ ಇನ್ನು ಕೆಲವರಿಗೆ ಭಾಗಿಸುವ ಲೆಕ್ಕ ಕೊಟ್ಟು ಅವರವರ ರೀತಿಗೆ, ಅವರವರ ಉತ್ತರಕೆ, ಅವರವರಿಗಷ್ಟೆ ಕೊಟ್ಟಂಥ ಫಲಿತಾಂಶವನು ಸ್ವೀಕರಿಸುವುದಷ್ಟೆ ಅವರವರ ಪಾಲಿನ ಧರ್ಮ ಎಂದುಕೊಂಡು ಕಾಣದಂತೆ ಸಾಕ್ಷಿಯಾಗಿರುವನೀತ. ಎಲ್ಲ ಲೆಕ್ಕಾಚಾರವಾಗಿ ಕೊನೆಗೆ ಶೂನ್ಯ ಬಂದಾಗಲೇ ಈತನಿಗೆ ತೃಪ್ತಿ. ಸಾಧಕರಲ್ಲದೆ ಇದರ ಮರ್ಮವೇನೆಂದು ಅರಿತವರುಂಟೇ..??

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬಾಳಿಗೆ ಬೆಳಕು: ಇಲ್ಲಿ ನಿಷ್ಪ್ರಯೋಜಕ ಎನ್ನುವ ವಸ್ತು ಇಲ್ಲವೇ ಇಲ್ಲ

Upayuktha

ಬಾಳಿಗೆ ಬೆಳಕು: ಸಾರ್ವಕಾಲಿಕ ಸತ್ಯ, ತಿಳಿದರೆ ಆಗುವೆವು ಸತ್ವ-ಶಕ್ತಿಯುತ

Upayuktha

ಆಕರ್ಷಣ: ಆರಂಭದಿಂದ ಅಂತ್ಯದ ವರೆಗೂ…

Upayuktha

Leave a Comment