ಭಾವನಾ ಲೇಖನಗಳು

ಮೋಸದ ಜಾಲ… ನೆನಪಿರಲಿ, ಎಲ್ಲರಿಗೂ ಬರುವುದು ಒಂದೊಂದು ಕಾಲ…

ಜೀವನವೆಂಬ ಪಯಣದಲ್ಲಿ ಎದುರಾಗುವ ಪ್ರತಿ ಸನ್ನಿವೇಶಕ್ಕೂ ನಮ್ಮ ಬದುಕಿಗೆ ಹೊಸದೊಂದು ತಿರುವು ನೀಡುವ ಸಾಮರ್ಥ್ಯವಿದೆ. ಇಲ್ಲಿ ಎದುರಾಗುವ ಸಮಸ್ಯೆಗಳನ್ನು ಲೆಕ್ಕಿಸದೆ ಧೈರ್ಯದಿಂದ ಎದುರಿಸಲು ನಮ್ಮಲ್ಲಿ ತಾಳ್ಮೆ, ಧೈರ್ಯ ಎಂಬ ಆಯುಧಗಳು ಇರಲೇಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಎದುರಿಸುವ ಸಾಮಾನ್ಯ, ನಮ್ಮನ್ನು ಪರೀಕ್ಷಿಸುವ ಸಮಸ್ಯೆಯೆಂದರೆ ‘ಮೋಸದ ಜಾಲ’!

ಮೋಸದ ಜಾಲಕ್ಕೆ ಬಿದ್ದು ಜೀವನದಲ್ಲಿ ಕಳೆದುಕೊಂಡವರೇ ಹೆಚ್ಚು. ಮೋಸದ ಮಾಯೆ ತಿಳಿದವರಾರು? ಅರಿತೋ ಅರಿಯದೆಯೋ ಜಾಲಕ್ಕೆ ಬಿದ್ದು ನರಳುವವರು ಅದೆಷ್ಟು ಮಂದಿ… ಮೋಸ ಎಂದರೆ ಒಬ್ಬರನ್ನು ಏಮಾರಿಸುವುದು ಮಾತ್ರವಲ್ಲದೆ ಅವರ ನಂಬಿಕೆ ವಿಶ್ವಾಸಗಳಿಗೆ ಮಣ್ಣೆರಚುವುದು. ಮೋಸದ ಜಾಲಕ್ಕೆ ಬೀಳುವವರು ಕಳೆದುಕೊಳ್ಳುವುದು ಬರೀ ವಸ್ತುಗಳನ್ನಲ್ಲ, ನಂಬಿಕೆಯನ್ನು, ಮನುಷ್ಯ ಪ್ರೀತಿಯನ್ನು.

ಅದು ಅವಳ ಜೀವನದಲ್ಲೊಂದು ಮಹತ್ವದ ಬದಲಾವಣೆಯ ಕಾಲ. ಕಲಿಕೆ ಮುಗಿದು ಕೆಲಸಕ್ಕೆ ಹೋಗಬೇಕೆಂಬ ಯೋಚನೆ-ಯೋಜನೆಯಿತ್ತು. ಕಲಿಕೆಯಲ್ಲೂ ಜಾಣೆ. ಏನೇ ಸಮಸ್ಯೆ ಎದುರಾದರೂ ಕುಗ್ಗದೆ ಮುಂದೆ ನಡೆಯುವಳು ಆಕೆ. ಉದ್ಯೋಗ ಹುಡುಕುವ ಸಲುವಾಗಿ ಓಡಾಟ ನಡೆದೇ ಇತ್ತು. ಹೀಗೇ ಯುವಕನೊಬ್ಬನ ಪರಿಚಯವಾಗುತ್ತದೆ. ಪರಿಚಯ ಮಾತಿಗೆ ತಿರುಗಿ, ಮಾತು ಸ್ನೇಹಕ್ಕೆ ತಿರುಗಿ, ಪ್ರೀತಿಗೆ ಬೀಳುವಂತೆ ಮಾಡುತ್ತದೆ. ಆಕೆಯೋ ಕಳೆದೇ ಹೋಗುತ್ತಾಳೆ. ಅನುದಿನ ತನ್ನ ಪ್ರಿಯತಮನ ಜೊತೆಯಲ್ಲೇ ಕಳೆಯಬೇಕೆಂದು ಬಯಸುತ್ತಾಳೆ. ಅದರಂತೆ ನಡೆದುಕೊಳ್ಳುತ್ತಾಳೆ ಕೂಡ. ಮನೆಯವರ ಗಮನಕ್ಕೇ ತರದೆ ಆತನ ಜೊತೆ ಹೋಗುತ್ತಾಳೆ. ಹೋದವಳು ಕೈಲಾದಷ್ಟು ಹಣ, ಚಿನ್ನವನ್ನು ತೆಗೆದುಕೊಂಡೇ ಹೋಗುತ್ತಾಳೆ!

ಪ್ರಿಯತಮನನ್ನು ಸೇರಿದಾಕ್ಷಣ ಸಂತೋಷವಾಗಿ ಒಂದು ಕ್ಷಣವೂ ಇರಲಿಲ್ಲ. ಆತ ಇವಳು ತಂದ ಸಂಪತ್ತನ್ನು ಕಿತ್ತುಕೊಂಡ. ಮದುವೆಯಾಗುತ್ತೇನೆ ಎಂದು ಹೇಳಿ ಮೋಸ ಮಾಡಿಬಿಟ್ಟ. ಆ ಪಾಪಿಗೆ ಇವಳ ಮುಗ್ಧ ಪ್ರೀತಿ ಬೇಕಾಗಲಿಲ್ಲ. ಅದರ ಬೆಲೆಯೂ ಅವನಿಗೆ ತಿಳಿಯಲಿಲ್ಲ. ಬದಲಾಗಿ ಅವಳಲ್ಲಿದ್ದ ಹಣ, ಚಿನ್ನದ ಸಂಪತ್ತಿನ ರಾಶಿಯ ಮೋಹ. ಯುವತಿಗೆ ದಾರಿಕಾಣದಾಯಿತು. ಬದುಕೇ ಕತ್ತಲಾಯಿತಲ್ಲ ಎಂದು ವ್ಯಥೆಪಟ್ಟಳು. ಆಚೆ ತವರಿಗೂ ಹೋಗದ ಸ್ಥಿತಿ. ಈ ಕಡೆ ಮೋಸದ ಜಾಲಕ್ಕೆ ಬಿದ್ದು ಹಾಳಾದ ಜೀವನ. ದಿಕ್ಕು ತೋಚದೆ ಯಾರಿಗೂ ಹೇಳದೆ ದೂರ, ಬಲುದೂರ ಹೋದಳು. ಮರಳಿ ಬಾರಲೇ ಇಲ್ಲ…

ನಾನು ಎಷ್ಟೋ ಬಾರಿ ಎಂದುಕೊಂಡಿದ್ದೆ, ಇವಳಿಗೆ ಯಾಕೀ ಬುದ್ಧಿ ಬಂತು ಎಂದು. ಒಂದು ಬಾರಿ ಅವಳು ತನ್ನನ್ನು ಕಷ್ಟಪಟ್ಟು ಓದಿಸಿದ, ಎರಡಕ್ಷರ ಹೇಳಿಕೊಟ್ಟ, ಪ್ರೀತಿಯ ಅಪ್ಪುಗೆಯಿಂದ ಸಲಹಿದ ತಂದೆ-ತಾಯಿಯ ಮುಖ ನೋಡದೆ ನಿನ್ನೆ ಮೊನ್ನೆ ಪರಿಚಯವಾದ ʼಅವನʼ ಹಿಂದೆ ಹೋಗಿ ಬಾಳು ಹೀಗಾಯ್ತಲ್ಲ ಎಂದು. ಆತ ಏನು ಮೋಡಿ ಮಾಡಿದ್ದಾನೋ, ಆ ದುಷ್ಟನ ವಂಚನೆಯ ಜಾಲ ಅರಿತಿದ್ದರೆ ಹೀಗೆ ಆಗುತ್ತಿರಲಿಲ್ಲ. ʼಪ್ರೀತಿʼ ಎಂಬ ಮಾಯೆ ಅವಳ ತಲೆ ಕೆಡಿಸಿ ಮೋಸಕ್ಕೆ ಬಲಿಯಾಗುವಂತೆ ಮಾಡಿತಲ್ಲಾ…

ಮೋಸ ಎಂಬುದು ಸೀಮಿತ ಸಮಯದವರೆಗೆ ಖುಷಿ ಕೊಡಬಹುದೇನೋ. ಆದರೆ ಅದಕ್ಕಾಗಿ ಮತ್ತೊಬ್ಬರ ಜೀವನ ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಆದುದರಿಂದ ಯಾರಿಗೂ ಮೋಸ ಮಾಡಬೇಡಿ, ಯಾರಿಂದಲೂ ಮೋಸ ಹೋಗಬೇಡಿ. ಅಮೂಲ್ಯವಾದ ಪ್ರೀತಿಯ ಹೆಸರನ್ನು ಎಂದೂ ಕೆಡಿಸಬೇಡಿ…

-ಗಿರೀಶ್ ಪಿ.ಎಂ
ದ್ವಿತೀಯ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮುಜಂಟಿ ಜೇನ್ನೊಣ ತುಂಬ ಇಷ್ಟಪಡುವ ಅಲಂಕಾರಿಕ ಬಾಳೆ

Upayuktha

ಎಲ್ಲಾ ಓಕೆ, ಜಂಕ್ ಪುಡ್ ಯಾಕೆ? ರಾತ್ರಿ ಕಂಡ ಬಾವಿಗೆ ಹಗಲು ಹಾರಬೇಕೆ…?

Upayuktha

CD ಮಾನಭಂಗ (ಕಾಲ್ಪನಿಕ ನಾಟಕ)

Upayuktha