ಕ್ಯಾಂಪಸ್ ಸುದ್ದಿ ಲೇಖನಗಳು

ಸಮಾಜ ಸೇವೆಗೆ ಹೆಸರುವಾಸಿ ಕುದ್ಮಾರಿನ ತಿರಂಗಾ ವಾರಿಯರ್ಸ್ ತಂಡ

ಇಂದು ಇಡೀ ದೇಶದ ರಕ್ಷಣೆ ಯೋಧರು ಕೈಯಲ್ಲಿದೆ. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಆ ನೆಮ್ಮದಿಯ ಹಿಂದೆ ಯೋಧರ ಬಲಿದಾನ ಇದೆ. ಬ್ರಿಟಿಷರ ಕೈಯಲ್ಲಿ ಸಿಲುಕಿದ್ದ ಭಾರತ ದೇಶವನ್ನು ದೇಶಪ್ರೇಮಿಗಳು ಅಂದು ಬಿಡುಗಡೆಗೊಳಿಸಿದರು. ಅಂದು ಸ್ವತಂತ್ರಗೊಂಡ ಭಾರತ ದೇಶವನ್ನು ಪುನಃ ಪರಕೀಯರ ಪಾಲಾಗದಂತೆ ರಕ್ಷಣೆ ಮಾಡುತ್ತಿರುವವರು ಭಾರತೀಯ ವೀರಯೋಧರು.

ತಮ್ಮ ಕುಟುಂಬವನ್ನು ಬಿಟ್ಟು ದೇಶರಕ್ಷಣೆಯ ಪಣತೊಟ್ಟು ತಮ್ಮ ಜೀವವನ್ನೂ ಲೆಕ್ಕಿಸದೆ ದೇಶವಿರೋಧಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಎಷ್ಟೋ ಜನ ಯೋಧರು ತಾಯಿ ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ್ದಾರೆ. ಇಂತಹ ವೀರಯೋಧರಿಗೆ ಗೌರವ ಸಲ್ಲಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಸುಮಾರು 500ಕ್ಕಿಂತಲೂ ಹೆಚ್ಚು ಜನ ಇಂದು ಒಂದು ಸಂಘಟನೆಯ ಮೂಲಕ ವೀರಯೋಧರಿಗೆ ಗೌರವವನ್ನು ಸಲ್ಲಿಸುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿರಪರಿಚಿತವಾದ ಈ ಸಂಘಟನೆಯೇ “ತಿರಂಗಾ ವಾರಿಯರ್ಸ್”.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಎಂಬ ಗ್ರಾಮದಲ್ಲಿ ಯುವ ತರುಣರಲ್ಲಿ ರಾಷ್ಟ್ರ ಪ್ರೇಮವನ್ನು ಮೂಡಿಸಲು ಊರಿನ ಎಲ್ಲಾ ಹಿರಿಯರ ಮಾರ್ಗದರ್ಶನದೊಂದಿಗೆ ಲೋಕೇಶ್‌ ಬಿ.ಎನ್ ಮತ್ತು ಲೋಹಿತಾಕ್ಷ.ಕೆ ಇವರ ಸಾರಥ್ಯದಲ್ಲಿ “ತಿರಂಗಾ ವಾರಿಯರ್ಸ್” ಸಂಘಟನೆ ಹುಟ್ಟಿಕೊಂಡಿತು. ಕಳೆದ ಮೂರು ವರ್ಷಗಳಿಂದ ಸೈನಿಕರ ದಿನಾಚರಣೆಯನ್ನು ಈ ಸಂಘಟನೆಯ ಎಲ್ಲಾ ಕಾರ್ಯಕರ್ತರು ಸೇರಿ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಾರೆ.

ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಸಂಘಟನೆಗಳ ಹೆಸರೂ ದೇವರ ಹೆಸರುಗಳಾಗಿವೆ. ಆದರೆ, “ತಿರಂಗಾ ವಾರಿಯರ್ಸ್” ದೇಶದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಹುಟ್ಟಿಕೊಂಡ ಸಂಘಟನೆ. ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಈ ಸಂಘಟನೆ ಅಲ್ಪಾವಧಿಯ ಲ್ಲಿ ಸುಮಾರು 500ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಜಿಲ್ಲೆಯ ಅತ್ಯಂತ ಹೆಮ್ಮೆಯ ಸಂಘಟನೆಯಾಗಿದೆ.

ಪ್ರತೀ ವರ್ಷ ನಡೆಯುವ ಸೈನಿಕರ ದಿನಾಚರಣೆಯ ಸಂದರ್ಭದಲ್ಲಿ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೇ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಾರೆ. ಆ ದಿನ ಕಬಡ್ಡಿ, ಕ್ರಿಕೆಟ್ ಹೀಗೆ ಯಾವುದಾದರೊಂದು ಕ್ರೀಡೆಯನ್ನು ಏರ್ಪಡಿಸುವುದಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ.

ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ತಿರಂಗಾ ವಾರಿಯರ್ಸ್ ತಂಡದ ಸದಸ್ಯರು ಬೆಳಕಿನೆಡೆಗೆ ಅಂಧರ ಬದುಕನ್ನೂ ಸಾಗಿಸಬೇಕು ಎಂಬ ಮಹತ್ತರ ಯೋಚನೆಯಿಂದ ಸುಮಾರು 300 ಮಂದಿ ಯುವಕ ಯುವತಿಯರು ನೇತ್ರದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶೇಷ ಕಾಳಜಿ ವಹಿಸಿರುವ ಈ ತಂಡದ ಸದಸ್ಯರು ತಮ್ಮ ಊರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ನೀಡುತ್ತಿದ್ದಾರೆ.

ಯುವಕ ಮಂಡಲದ ಕಾರ್ಯಗಳೆಲ್ಲವೂ ಸಮಾಜೋಪಯೋಗಿಯಾಗಿದ್ದು, ಹಗಲಿರುಳೆನ್ನದೆ ದುಡಿಯುವ ಯುವ ಪಡೆಯು ತಮ್ಮ ಬಿಡುವಿನ ವೇಳೆ ಹಾಗೂ ರಜಾದಿನಗಳನ್ನು ಬಳಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿರುವುದು ಗಮನಾರ್ಹ ಸಂಗತಿ.

ನರೇಗಾ ಯೋಜನೆಯಡಿಯಲ್ಲಿ ಸುಮಾರು 5000 ಇಂಗು ಗುಂಡಿಗಳನ್ನು ನಿರ್ಮಿಸಿ ಊರಿನಲ್ಲಿ ನೀರಿನ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕುದ್ಮಾರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉನ್ನತ ಮಟ್ಟದ ಕ್ರೀಡಾಂಗಣವನ್ನು ನಿಮಿ೯ಸಿ, ಮಕ್ಕಳ ಕ್ರೀಡಾ ಬೆಳವಣಿಗೆಯ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿರುವ ಈ ತಂಡ ತಮ್ಮ ಊರಿನಲ್ಲಿ ಸಾವ೯ಜನಿಕ ಕ್ರೀಡಾಂಗಣಕ್ಕೂ ಆಥಿ೯ಕ ನೆರವು ನೀಡಿ ಸಹಕರಿಸಿದೆ.

ಆಯುಷ್ಮಾನ್ ನಂತಹ ಸರಕಾರಿ ಯೋಜನೆಗಳನ್ನು ಊರಿನ ಎಲ್ಲಾ ನಾಗರಿಕರಿಗೂ ತಲುಪಿಸುವಲ್ಲಿ ವಿಶೇಷ ಕಾಳಜಿ ವಹಿಸಿದೆ. ಊರಿನಲ್ಲಿ ನಡೆಯುವ ಪ್ರತಿಯೊಂದು ಕಾಯ೯ಕ್ರಮಗಳಿಗೂ ನೆರವು ನೀಡಿ ಕಾಯ೯ಕ್ರಮದ ಯಶಸ್ವಿಗೆ ಕಾರಣವಾಗಿರುವ ತಿರಂಗಾ ವಾರಿಯರ್ಸ್ ತಂಡ ಕುದ್ಮಾರು ಗ್ರಾಮದ ಆಧಾರ ಸ್ತಂಭವಾಗಿದೆ.

ಊರಿನ ಎಲ್ಲಾ ಯುವಕರು ಸಕ್ರಿಯವಾಗಿ ಭೇದ ಭಾವವಿಲ್ಲದೆ ಒಡನಾಡಿಗಳಂತೆ, ಸಹೋದರರಂತೆ ಪರಸ್ಪರ ಕೈ ಜೋಡಿಸಿ ಸೇವಾ ಕಾರ್ಯಗಳಲ್ಲಿ ತೊಡಗಿದ್ದಾರೆ. ರಾಷ್ಟ್ರಪತಿ ಮಹಾತ್ಮ ಗಾಂಧಿಜಿಯವರ ಕನಸಿನ ರಾಮರಾಜ್ಯದ ಚಿಂತನೆಯು ಪರಿಪೂರ್ಣಗೊಳ್ಳುವಿಕೆಯಲ್ಲಿ ಯುವಕರು ಮಹತ್ವದ ಪಾತ್ರವನ್ನು ನಿರ್ವಹಿಸಬಲ್ಲರು ಎಂಬುದಕ್ಕೆ ಈ ಸಂಘಟನೆ ಸಾಕ್ಷಿಯಾಗಿದೆ.

ಪ್ರಸ್ತುತ ದಿನಗಳಲ್ಲಿ ಕೊರೋನಾದ ಅಟ್ಟಹಾಸ ಹೆಚ್ಚುತ್ತಿದೆ. ಅದೆಷ್ಟೋ ಜನ ಬಡವರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ದಾನಿಗಳು ನೀಡಿದ ಅಗತ್ಯ ವಸ್ತುಗಳನ್ನು ಈ ತಂಡದ ಸದಸ್ಯರು ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ. ತಮ್ಮ ಸೇವೆಯನ್ನು ಯಾವುದೇ ಪ್ರಚಾರಕ್ಕಾಗಿ ಮಾಡದೆ, ತೊಂದರೆಗೊಳಗಾದವರಿಗೆ ಸರಿಯಾದ ಸಮಯದಲ್ಲಿ ನೆರವು ನೀಡುತ್ತಿದ್ದಾರೆ.

ಸಮಾಜದ ಸವ೯ತೋಮುಖ ಅಭಿವೃದ್ಧಿಗಾಗಿ ಶ್ರದ್ಧೆಯಿಂದ ಸಮಾಜಸೇವೆ ಮಾಡುವ ನೂರಾರು ಯುವಕರನ್ನೊಳಗೊಂಡ ಈ ತಂಡ ಎಂತಹ ಸನ್ನಿವೇಶದಲ್ಲೂ ಧೃತಿಗೆಡದೆ, ದು:ಖದಲ್ಲಿದ್ದವರಿಗೆ, ಅಶಕ್ತರಿಗೆ ತಮ್ಮಿಂದಾದ ಸೇವೆ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಮನೋಭಾವ ಹೊಂದಿದೆ.

“ಯುವಕರೇ ಜೀವಂತ ಸಂಪನ್ಮೂಲಗಳು” ಎನ್ನುತ್ತಾ ಸ್ವಾಮಿ ವಿವೇಕಾನಂದರು ನನಗೆ ನೂರು ಜನ ಸಿಂಹದ ಬಲವಿರುವ, ಧೈರ್ಯವಂತ ಸಾಹಸಿ ಯುವಕರನ್ನು ನೀಡಿ ನಾನು ಇಡೀ ದೇಶದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ಹಾಗೆಯೇ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ತಮ್ಮ”ವಿಷನ್ 2020″ ಕೃತಿಯಲ್ಲಿ ವಿವರಿಸಿರುವಂತೆ, ಭಾರತ ದೇಶದ ಬದಲಾವಣೆಯಲ್ಲಿ ಯುವಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಕನಸನ್ನು ಹೊತ್ತಿದ್ದಾರೆ. ತಿರಂಗಾ ವಾರಿಯರ್ಸ್ ತಂಡದ ಯುವಕರು ಮಹಾತ್ಮರು ನಿರೀಕ್ಷಿಸಿದ ಬದಲಾವಣೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

– ಸರೋಜ.ಪಿ‌.ಜೆ, ದೋಳ್ಪಾಡಿ
ದ್ವಿತೀಯ ಪತ್ರಿಕೋದ್ಯಮ,
ವಿವೇಕಾನಂದ ಪದವಿ ಕಾಲೇಜು ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಮಂಗಳೂರು ವಿವಿಯ 39ನೇ ಘಟಿಕೋತ್ಸವ ಮಾರ್ಚ್‌ನಲ್ಲಿ

Upayuktha

‘ರಕ್ತದಾನ ಜೀವದಾನ’: ಇಂದು ವಿಶ್ವ ರಕ್ತದಾನಿಗಳ ದಿನ

Upayuktha

ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರೈಡ್ ಆಫ್ ಪಿಪಿಸಿ, ವಿದ್ಯಾರ್ಥಿ ವೇತನ ವಿತರಣೆ

Upayuktha