ಇತರ ಕ್ರೀಡೆಗಳು ಸಾಧಕರಿಗೆ ನಮನ

ಸ್ಕ್ವಾಷ್‌ ಕ್ರೀಡಾ ಸಾಧಕ ಹರೀಂದರ್ ಪಾಲ್ ಸಂಧು

ಕ್ರಿಕೆಟ್ ಪ್ರಿಯ ಭಾರತದಲ್ಲಿ ಇತರ ಕ್ರೀಡೆಗಳಿಗೆ ಮನ್ನಣೆ-ಪ್ರೋತ್ಸಾಹ ಸ್ವಲ್ಪ ಕಡಿಮೆಯೇ. ಕ್ರಿಕೆಟ್ ಅಬ್ಬರದ ನಡುವೆ ಇತರ ಸಾಧಕರ ಸಾಧನೆಗಳು ಮಸುಕಾಗುವುದು ಸಹಜ. ಇಂದಿನ ಸ್ಟಾರ್ ಹರೀಂದರ್ ಪಾಲ್ ಸಂಧು. ಸ್ಕ್ವಾಷ್ ಕ್ರೀಡೆಯಲ್ಲಿ ಈಗ ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಅಗಾಧ ಸಾಧನೆ ಮಾಡಿದ ಸಾಹಸಿ.

ಮೂಲತ ಚಂಡೀಗಡದ ಹರೀಂದರ್ ತಂದೆ ರಾಷ್ಟ್ರೀಯ ಹಾಕಿ ಆಟಗಾರ. ತಂದೆಯ ರಕ್ತವೇ ಮಗನನ್ನು ಕ್ರೀಡೆಗೆ ಸೆಳೆಯಿತು. ಬಾಲ್ಯದಲ್ಲೆ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ಹರೀಂದರ್ ಗೆ ಹೆತ್ತವರು ಸ್ವಾತಂತ್ರ್ಯ ನೀಡಿದರು. ಬಾಲ್ಯದಲ್ಲಿ ಹರೀಂದರ್ ಆಸಕ್ತಿ ಕ್ರಿಕೆಟ್ ಆಗಿತ್ತು. ಶಾಲೆಗೆ ಹೋಗಲು ಆರಂಭಿಸುತ್ತಲೇ ಮಧ್ಯಮ ವೇಗದ ಬೌಲರ್ ಆಗಿ ಗೆಳೆಯರೊಂದಿಗೆ ಆಡುತ್ತಿದ್ದ ಹರೀಂದರ್.

ಮೊಹಾಲಿಯ YPS  ಶಾಲೆಯ ವಿದ್ಯಾರ್ಥಿ ಹರೀಂದರ್ ಶಾಲೆಯಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಮಕ್ಕಳು ಕಡ್ಡಾಯವಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಶಾಲೆಯ ನಿಯಮ ಕೂಡ ಆಗಿತ್ತು. ಆಗ ಸ್ಕ್ವಾಷ್ ಕ್ರೀಡೆ ಮಕ್ಕಳಿಗೆ ಹೊಸದಾಗಿತ್ತು. ಶಾಲೆಯಲ್ಲಿ 2 ಸ್ಕ್ವಾಷ್ ಕೋರ್ಟ್ಗಳಿದ್ದವು. ಹೊಸ ಕೋರ್ಟ್, ನಿಯಮಗಳೆಲ್ಲವೂ ಹರೀಂದರ್ ನನ್ನು ಸೆಳೆದು ಹೊಸ ರೋಮಾಂಚನವನ್ನು ಅವನಲ್ಲಿ ಹುಟ್ಟಿಸಿತು. ಹರೀಂದರ್ ಸ್ಕ್ವಾಷ್ ರಂಗದಲ್ಲಿ ಬೆಳೆಯಲು ಆಗಲೇ ನಿರ್ಧರಿಸಿದ. 11ರ ಹರೆಯದಲ್ಲಿ ಮೊದಲ ಬಾರಿಗೆ ಹರೀಂದರ್ ಸ್ಕ್ವಾಷ್ ಕೋರ್ಟ್ ಗೆ ಇಳಿದ.

ಪಂಜಾಬ್ ನಲ್ಲಿ ಸ್ಕ್ವಾಷ್ ಗೆ ಅನುಕೂಲಕರ ವಾತಾವರಣ ಇಲ್ಲದ್ದನ್ನು ಗಮನಿಸಿದ ಹರೀಂದರ್ ಚೆನ್ನೈ ಗೆ ಬರುತ್ತಾನೆ, ಕುಟುಂಬ ಚೆನ್ನೈಗೆ ವಾಸ್ತವ್ಯ ಬದಲಾಯಿಸುತ್ತದೆ. ಮಗನ ಕ್ರೀಡಾ ಆಸಕ್ತಿಯನ್ನು ಹಿಂದೆ ನಿಂತು ಪ್ರೋತ್ಸಾಹಿಸಿದ ಹೆತ್ತವರು ಮಗನಿಗಾಗಿ ಚೆನ್ನೈಗೆ ಬರುತ್ತಾರೆ.

ಭಾರತವನ್ನು ಪ್ರಥಮ ಬಾರಿಗೆ ಹರೀಂದರ್ ಇಸ್ಲಾಮಾಬಾದ್ ನಲ್ಲಿ ನಡೆದ U-19 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪ್ರತಿನಿಧಿಸುತ್ತಾನೆ. ಅಲ್ಲಿಂದಾಚೆಗೆ ಹಿಂದಿರುಗಿ ನೋಡುವುದೇ ಇಲ್ಲ. 2010ರಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕೂಡ ಹರೀಂದರ್ ಭಾರತವನ್ನು ಪ್ರತಿನಿಧಿಸುತ್ತಾನೆ. ಹರೀಂದರ್ ಜೀವನದ ಸುವರ್ಣ ಘಳಿಗೆ 2014ರ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಕಂಡು ಬರುತ್ತದೆ. ಸ್ಕ್ವಾಷ್ ನಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನ ಗೆದ್ದ ಹರೀಂದರ್ ಅಭೂತಪೂರ್ವ ಸಾಧನೆ ಮಾಡುತ್ತಾನೆ. 2015ರಲ್ಲಿ ತನ್ನ ಜೀವಮಾನ ಶ್ರೇಷ್ಠ 56ನೇ ಸ್ಥಾನದ ಸಾಧನೆ ಕೂಡ ದಾಖಲಾಗುತ್ತದೆ. ಆ ಮೂಲಕ ಸ್ಕ್ವಾಷ್ ಕ್ರೀಡೆಯಲ್ಲಿ ವಿಶ್ವ ಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳುತ್ತದೆ.

ಕ್ರೀಡೆಯ ಜೊತೆಗೆ ಓದನ್ನು ಬಿಡದ ಹರೀಂದರ್ ತನ್ನ ಪದವಿ ಕೂಡ ಪೂರ್ಣಗೊಳಿಸುತ್ತಾನೆ. ಸೈರಿಸ್, ಮೇಜರ್ ಮಾನ್ಯಮ್, ಅಶ್ರಫ್ ಕರಗುಲ್ ಗರಡಿಯಲ್ಲಿ ಕಳೆದ 11 ವರ್ಷಗಳಿಂದ ತರಭೇತಿ ಪಡೆಯುತ್ತಿರುವ ಹರೀಂದರ್ ಅಸಾಮಾನ್ಯ ಸಾಧಕ. ಫಿಟ್ನೆಸ್ ಸ್ಕ್ವಾಷ್ ಗೆ ಅತಿ ಅಗತ್ಯ ಎಂಬುದನ್ನು ಅರಿತಿರುವ ಹರೀಂದರ್ ದಿನಕ್ಕೆ 5 ಗಂಟೆ ಅಭ್ಯಾಸ ನಡೆಸುತ್ತಾನೆ. ಖ್ಯಾತ ಸ್ಕ್ವಾಷ್ ಆಟಗಾರ ಡೇವಿಡ್ ಪಾಮರ್ ರನ್ನು ಮಾಡೆಲ್ ಆಗಿ ಸ್ವೀಕರಿಸಿರುವ ಹರೀಂದರ್ ಅವರ ಆಟ ನೋಡುತ್ತಲೇ ಬೆಳೆದವನು.

1830ರಲ್ಲಿ ಇಂಗ್ಲೆಂಡಲ್ಲಿ ಮೊದಲಿಗೆ ಆಡಿದ ಸ್ಕ್ವಾಷ್ ಇನ್ನೂ ಕೂಡ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಿಲ್ಲ. ಮುಂದಿನ ಟೋಕಿಯೋ ಒಲಿಂಪಿಕ್ಸ್ ಗೆ ಸ್ಕ್ವಾಷ್ ಸೇರ್ಪಡೆಯಾಗಬಹುದೆಂಬ ಆಶಾವಾದದಲ್ಲಿರುವ ಹರೀಂದರ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾನೆ. ವಿಶ್ವ ಮಟ್ಟದಲ್ಲಿ ಟಾಪ್ 10 ಆಟಗಾರನಾಗುವ ಹಂಬಲಿಕೆಯ ಹರೀಂದರ್ ಗುರಿ ಈಗ ವಿಶ್ವ ಚಾಂಪಿಯನ್ ಆಗುವುದು. ತನ್ನ ಫಿಟ್ನೆಸ್ ಗಾಗಿ ಪ್ರಸಿದ್ಧ ಹರೀಂದರ್ ಮಹದಾಸೆ ಈಡೇರಬಹುದು ಎಂಬ ಆಶಾವಾದ ಎಲ್ಲರದು.

ಹರೀಂದರ್ ಸಾಧನೆಗೆ ನೆರವಾಗುವ ಉದ್ದೇಶದಿಂದಲೇ ಮೊಹಾಲಿಯಿಂದ ಚೆನ್ನೈಗೆ ವಾಸ್ತವ್ಯ ಬದಲಿಸಿದ ಕುಟುಂಬ ಅವನ ಸಾಧನೆಗೆ ಬೆಂಗಾವಲಾಗಿ ನಿಂತಿತು. ಕುಟುಂಬದ ಕ್ರೀಡಾ ಹಿನ್ನೆಲೆ ಹರೀಂದರ್ ಸಾಧನೆಗೆ ಪೂರಕವಾಯಿತು. ಭವಿಷ್ಯದ ವಿಶ್ವ ಚಾಂಪಿಯನ್ ಆಗುವ ಕನಸಿನ ಹಾದಿಯಲ್ಲಿರುವ ಹರೀಂದರ್ ಪಾಲ್ ಸಂಧುಗೆ ಆಲ್ ದ ಬೆಸ್ಟ್.

– ತೇಜಸ್ವಿ ಕೆ, ಪೈಲಾರು, ಸುಳ್ಯ

Related posts

ಐತಿಹಾಸಿಕ ಸೀರಿಯಲ್ ಗಳ ಮೂಲಕ ಭಾರತೀಯರ ಮನಗೆದ್ದ ರಮಾನಂದ ಸಾಗರ್

Upayuktha

ರಾಜೀವ್ ಖೇಲ್ ರತ್ನ ಮರಿಯಪ್ಪನ್ ತಂಗವೇಲು

Upayuktha

ಸಕ್ಸಸ್‌ ಸ್ಟೋರಿ: ಸಂಗೀತಾ ಮೊಬೈಲ್ಸ್ ಎಂಡಿ ಸುಭಾಶ್ಚಂದ್ರ ರೆಡ್ಡಿ

Upayuktha