ಕಲೆ ಸಂಸ್ಕೃತಿ ಲೇಖನಗಳು

ಪರಂಪರೆಯತ್ತ ನೋಟ: ಭಾರತೀಯರದ್ದು ವೈಜ್ಞಾನಿಕ ಬದುಕು

(ಚಿತ್ರ ಕೃಪೆ: ವಿಕಿ ಹೌ)

ಭಾರತೀಯ ಬದುಕು ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿಯ ಆಧಾರದ ಮೇಲಿದೆ. ಹುಟ್ಟಿನಿಂದ ಸಾವಿನ ತನಕದ ನಿತ್ಯ ಜೀವನದ ಬದುಕು ಹೇಗಿರಬೇಕು? ಹೇಗೆ ಮೌಲ್ಯಯುತವಾಗಿ ಬಾಳಿ ಮುನ್ನಡೆಯಬೇಕು ಎಂಬುದಕ್ಕೆ ತನ್ನದೇ ಆದ ಕಟ್ಟುಪಾಡುಗಳನ್ನು ಹಿರಿಯರು ದೃಢವಾಗಿ ಹಾಕಿಕೊಟ್ಟಿದ್ದಾರೆ. ಅದು ದೃಢ ಮಾತ್ರವಲ್ಲ, ನಿತ್ಯ ಅಮೂಲ್ಯವೂ ಹೌದು. ಹಿರಿಯರು ಹಾಕಿಕೊಟ್ಟಿರುವ ಕಟ್ಟುಪಾಡುಗಳಿಗೆ ಅವರಿಟ್ಟ ಹೆಸರು ಸಂಪ್ರದಾಯ- ಸಂಸ್ಕಾರ. ಎಲ್ಲ ಸಂಪ್ರದಾಯಗಳು ಜೀವನ ಪರ್ಯಂತ ಪಾಲನೆ ಮಾಡಬೇಕು ಎಂಬ ದೃಷ್ಟಿಯಿಂದ ನಂಬಿಕೆ ಎಂಬ ಲೇಪನವನ್ನು ಹಾಕಿದರು. ಎಲ್ಲವನ್ನೂ ಎಲ್ಲರೂ ಕಠಿಣ ಅನುಷ್ಠಾನ ಮಾಡಿ, ಆ ಮೂಲಕ ಬದುಕು ಕಾಣಬೇಕು. ಸದ್ವಿಚಾರದಲ್ಲಿ ಮುನ್ನಡೆಯಬೇಕು ಎಂಬ ಜೀವನ ಪದ್ಧತಿಯನ್ನು ರೂಪಿಸಿದ್ದರು.

ವಿಶ್ವ ಬೆಳೆಯುತ್ತಿದ್ದಂತೆ ಹಿಂದಿನ ಜೀವನ ಪದ್ದತಿ, ಬದುಕಿನ ವ್ಯವಸ್ಥೆಗಳು ಮೂಢನಂಬಿಕೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಆದರೆ ಕೊರೊನಾ ವೈರಸ್ ಹಾವಳಿಯು ಭಾರತೀಯರ ಬದುಕು ವೈಜ್ಞಾನಿಕ ಬದುಕು ಎಂಬುದನ್ನು ಜಗತ್ತಿಗೆ ಸಾರಿದೆ.

ಭಾರತೀಯ ಜೀವನ ಕ್ರಮ ಶ್ರೇಷ್ಠ. ಆಚಾರ-ವಿಚಾರ-ನಂಬಿಕೆ-ಅನುಷ್ಠಾನ-ಮಡಿ-ಮೈಲಿಗೆ-ಸಂಸ್ಕೃತಿ- ಸಂಸ್ಕಾರ – ಧರ್ಮ ಹೀಗೆ ಎಲ್ಲವೂ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಆದರೆ ಅವುಗಳ ವೈಜ್ಞಾನಿಕ ಉದ್ದೇಶವನ್ನು ಅರಿಯಲಿಲ್ಲ. ಹಿರಿಯರು ಹೇಳಿಕೊಡಲಿಲ್ಲವೋ ಅಥವಾ ಅರ್ಥೈಸುವಲ್ಲಿ ನಾವು ವಿಫಲರಾಗಿದ್ದೇವೋ ಗೊತ್ತಿಲ್ಲ. ಪೂರ್ವಜರು ಮಾಡಿಕೊಂಡ ಅನುಷ್ಠಾನ, ಹೇಳಿಕೊಟ್ಟ ಅನುಷ್ಠಾನಗಳನ್ನು ಅರ್ಥೈಸಿಕೊಳ್ಳದೆ ಮತ್ತು ಅನುಷ್ಠಾನಗಳ ಹಿಂದಿನ ಮರ್ಮ ಅರಿಯದೆ ನಮ್ಮ ಬಾಳಿನ ಹಾದಿಯನ್ನು ನಾವೇ ಮಸುಕಾಗಿಸಿದ್ದೇವೆ. ಇನ್ನೊಂದು ದುರಂತ ಎಂದರೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡದೆ ಕೆಲವೊಂದು ಅಪ್ರಬುದ್ಧವಾಗಿವೆ. ಸಮಾಜದ ಕೆಲವೊಂದು ಪಂಗಡ ನಮ್ಮ ನಂಬಿಕೆಯನ್ನು ಮೂಢನಂಬಿಕೆ ಎಂದು ಬಿಂಬಿಸಲು ನಾವೇ ಅನುವು ಮಾಡಿಕೊಟ್ಟಿದ್ದೇವೆ. ನಮ್ಮ ನಂಬಿಕೆಯನ್ನು ಮೂಡನಂಬಿಕೆ ಎಂಬ ಪಟ್ಟ ಸಿಗಲು ನಾವೇ ಕಾರಣ. ಅರಿವಿಲ್ಲದ ಸಮಾಜಕ್ಕೆ ನಮ್ಮ ಬದುಕಿನ ವೈಜ್ಞಾನಿಕತೆಯನ್ನು ವಿವರಿಸುವ ಜ್ಞಾನ ನಮ್ಮಲ್ಲೇ ಇಲ್ಲ.

ಸಮಾಜ ಎಲ್ಲಿ ನಿಷ್ಕೃಷ್ಟವಾಗಿ ಕಾಣುತ್ತದೋ ಎಂಬ ಅಳುಕಿನಿಂದ, ಹಿರಿಯರಿಂದ ಬಳುವಳಿಯಾಗಿ ಬಂದ ನಮ್ಮ ನಾಡಿನ ಶ್ರೀಮಂತ ಹಾಗೂ ವೈಜ್ಞಾನಿಕ ಜೀವನ ಕ್ರಮದ ಅನುಷ್ಠಾನಿಗಳೂ ಸಹ ಅನುಷ್ಠಾನದೆಡೆಗೆ ಹೋಗದೆ ವಿಮುಖರಾಗುತ್ತಿದ್ದಾರೆ.

ಶುಚಿತ್ವ, ಹೈಜೆನಿಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹೀಗೆ ಕೊರೊನಾ ಬಂದ ಬಳಿಕ ಏನೆಲ್ಲಾ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕು ಎಂದು ಜಗತ್ತಿನ ಎಲ್ಲಡೆ ಧ್ವನಿ ಕೇಳುತ್ತಿದ್ದೇವೆ. ಆದರೆ ಅವು ಎಲ್ಲವೂ ನಮಗೆ ಹಿರಿಯರು ಕಲಿಸಿದ ಜೀವನ ಕ್ರಮ. ಅವುಗಳನ್ನು ಅನುಷ್ಠಾನದ ಹೆಸರಿನಲ್ಲಿ ರೂಢಿಸಿಕೊಂಡಿದ್ದರು. ಶುಚಿತ್ವಕ್ಕೆ, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಸ್ಥಾನ -ಮಾನ ನೀಡಿದ್ದರು.

(ಚಿತ್ರ ಕೃಪೆ: ಯೂಟ್ಯೂಬ್)

ಮುಂಜಾನೆ ಸ್ನಾನ ಮಾಡಿದ ಬಳಿಕ ಜಪದ ಹೆಸರಿನಲ್ಲಿ ಪ್ರಾಣಾಯಾಮ, ಏಕಾಗ್ರತೆಗಾಗಿ ಧ್ಯಾನ – ಪೂಜೆ ಪುರಸ್ಕಾರ, ಪೂಜೆಯ ಹೆಸರಿನಲ್ಲಿ ಔಷಧೀಯ ವಸ್ತುಗಳ ಸೇವನೆ, ಶುಚಿತ್ವಕ್ಕಾಗಿ ಹೊರಗಿನಿಂದ ಬಂದ ತಕ್ಷಣ ಸ್ನಾನ, ಬಟ್ಟೆ ಬದಲಾವಣೆ, ಕೈಕಾಲು ತೊಳೆಯುವ ಪದ್ಧತಿ, ಅಪರಕ್ರಿಯೆಯ ಬಳಿಕ ಮೈಶುದ್ಧಿಯೊಂದಿಗೆ ವೈರಾಣುಗಳನ್ನು ಕೊಲ್ಲುವ ಸಾಮರ್ಥ್ಯ ಇರುವ ಅಗ್ನಿ ಮತ್ತು ಎಳ್ಳಿನ ಮೂಲಕ ಶುದ್ಧಿ.

ಸ್ನಾನದ ಮೂಲಕ ಬಾಹ್ಯ ಶುದ್ಧಿಯನ್ನು ಮಾಡಿದರೆ, ಆಂತರಿಕ ಶುದ್ಧಿಗಾಗಿ ಹಾಗೂ ಆರೋಗ್ಯವೂ ವೃದ್ಧಿಯಾಗಬೇಕು ಎಂಬುದಕ್ಕೆ ಪುಣ್ಯಾಹದ ಹೆಸರಿನಲ್ಲಿ ಗೋಮೂತ್ರ, ಗೋಮಯ, ತುಪ್ಪ, ಮೊಸರು, ಹಾಲು ಹೀಗೆ ನಾನಾ ಔಷಧೀಯ ಗುಣದ ಪಂಚಗಹ್ಯವನ್ನು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಸಿಟಿವ್ ಶಕ್ತಿಯುಳ್ಳ ಚಿನ್ನ, ಬೆಳ್ಳಿ, ಕಂಚು ಗಿಂಡಿಗಳಲ್ಲಿ ಹಾಕಿ, ಓಂ ಕಾರದಿಂದ ಆರಂಭಗೊಂಡು ನನಾ ಮಂತ್ರಮುಖೇನ ನಾನಾ ಮುದ್ರೆಗಳ ಮೂಲಕ ಇನ್ನಷ್ಟು ಪಾಸಿಟಿವ್ ಶಕ್ತಿಗಳನ್ನು ಕ್ರೋಢೀಕರಿಸಿ, ಹಲಸಿನ ಎಲೆಯ ಮೂಲಕ ಸೇವನೆ. ನಿಜಕ್ಕೂ ಅದ್ಬುತ ಪರಿಕಲ್ಪನೆ.

ಕೆಲವೊಂದು ವೈರಸ್‍ಗಳು ಸಾಮಾನ್ಯ ಸ್ನಾನದಿಂದ ಹೋಗುವುದಿಲ್ಲ ಎಂಬುದಕ್ಕೆ ನಮ್ಮಲ್ಲಿ ಕಲಶ ಸ್ನಾನ ಎಂಬ ವಿಶಿಷ್ಟ ಪರಿಕಲ್ಪನೆ ಇದೆ. ಕಲಶಸ್ನಾನ ಎಂದರೆ ನಾನಾ ದ್ರವ್ಯಗಳಿಂದ ಶ್ವೇತಾರ್ಕ, ಪಾಲಾಶ, ಖದಿರೆ, ಅಪಾಮಾರ್ಗ, ಅಶ್ವತ್ಥ, ಔದುಂಬರ, ಶರ್ಮಿ, ದೂರ್ವಂ, ದರ್ಭೆ- ಹೀಗೆ ಒಂಬತ್ತು ಔಷಧೀಯ ಸಸ್ಯಗಳನ್ನು ಹಾಕಿ, ಸಮಪ್ರಮಾಣದಲ್ಲಿ ಬಿಸಿ ಮಾಡಿ, ನಾನಾ ಮುದ್ರೆ, ಮಂತ್ರಗಳ ಮೂಲಕ ಇನ್ನಷ್ಟು ಪಾಸಿಟಿವ್ ಶಕ್ತಿಯನ್ನು ತುಂಬಿ ಸ್ನಾನ ಮಾಡಿಸುವುದು.

ನಮ್ಮ ಪೂರ್ವಜರ ಕಾಲದಲ್ಲಿ ಶುದ್ಧದ ಹೆಸರಿನಲ್ಲಿ ಸ್ಥಾಪಿತವಾದ ನಿಯಮಗಳಾದ ಯಾವುದೇ ಆಹಾರ ಮುಟ್ಟಿದ ಕೂಡಲೇ ಕೈ ತೊಳೆಯುವುದು, ಆಹಾರ ಸೇವನೆಯ ಬಳಿಕ ಆ ಜಾಗದಲ್ಲಿ ಸ್ವಚ್ಛತೆಗಾಗಿ ಸೆಗಣಿ ಹಾಕಿ ಸಾರಿಸುವುದು, ಕೂದಲು ಕತ್ತರಿಸಿದ ಬಳಿಕ, ಅಂತ್ಯ ಸಂಸ್ಕಾರ – ಅಪರ ಕ್ರಿಯೆಯ ಬಳಿಕ ಯಾವುದನ್ನೂ ಮುಟ್ಟದೆ ಸ್ನಾನ ಮಾಡುವುದು, ಕೆಲಸದ ನಿಮಿತ್ತ ಊರು ಸುತ್ತಾಟ ಮಾಡಿದ ಬಳಿಕ ಮನೆಗೆ ಪ್ರವೇಶಿಸದೆ ಪಾದರಕ್ಷೆಯನ್ನು ಹೊರಗಿಟ್ಟು ಸ್ನಾನ ಮಾಡುವುದು ಅಥವಾ ಹೊರಗಡೆ ಸುತ್ತಾಡಿ ಬಂದ ತಕ್ಷಣ ಮನೆಯಂಗಳದಲ್ಲಿದ್ದ ನೀರಿನಲ್ಲಿ ಕೈಕಾಲು-ಮುಖ ತೊಳೆಯುವುದು ಹೀಗೆ ಸ್ವಚ್ಛತೆಗೆ ಮತ್ತು ವೈರಾಣುಗಳ ವಿರುದ್ಧ ಹೋರಾಡಲು ರೂಪಿಸಿದ ವೈಜ್ಞಾನಿಕ ಪದ್ಧತಿಗಳು ನಿತ್ಯಕ್ರಮದಲ್ಲೇ ಇದೆ.

ಇದಕ್ಕಾಗಿಯೇ ಹಿರಿಯರು ಸ್ನಾನ ಗೃಹವನ್ನು ಮನೆಯಿಂದ ಹೊರಕ್ಕೆ ನಿರ್ಮಿಸುತ್ತಿದ್ದರು. ಆದರೆ ಇಂದು ಆಧುನಿಕತೆಯಿಂದಾಗಿ ಅದು ಸಾಧ್ಯವಿಲ್ಲ. ಭಾರತೀಯ ಸಾಂಪ್ರದಾಯಿಕ ಮನೆಗಳಿಗೆ ನೀವು ಭೇಟಿ ನೀಡಿದರೆ ಮನೆಯಂಗಳದಲ್ಲಿ ನೀರನ್ನು ಇಡುವುದನ್ನು ನಾವು ಗಮನಿಸಬಹುದಾಗಿದೆ.

ಜನನ ಅಥವಾ ಮರಣದ ಮನೆಯಲ್ಲಿ 10ರಿಂದ 13 ದಿನಗಳ ಕಾಲ ಸಾಮಾಜಿಕ ಕಾರ್ಯಗಳಿಂದ ದೂರ (ಇಂದಿನ ಕ್ವಾರಂಟೈನ್), ಅಡುಗೆ ಮೊದಲು ಸ್ನಾನ ಕಡ್ಡಾಯ, ಸ್ನಾನದ ಬಳಿಕ ಸ್ನಾನ ಮಾಡಬೇಕಾದ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಹೀಗೆ ಎಲ್ಲದರ ಹಿಂದೆಯೂ ವೈಜ್ಞಾನಿಕ ಕಾರಣ ಇದೆ. ಇಲ್ಲಿ ಅಶುದ್ಧ ಎಂಬುದು ಅಂತರ ಕಾಯ್ದುಕೊಳ್ಳಲು ಬಳಸುವ ಪದವಾಗಿದೆ. ವೈರಾಣು ಪರಸ್ಪರ ಹರಡಬಾರದು ಎಂಬ ದೃಷ್ಟಿಯಿಂದ ಈ ಪದ ಬಳಕೆ ಮಾಡಲಾಗಿದೆ. ಇಲ್ಲಿ ಶುದ್ಧ ಯಾರು, ಅಶುದ್ಧ ಯಾರು ಎಂಬುದರ ಬಗ್ಗೆ ಉಲ್ಲೇಖ ಇಲ್ಲ.

ಇನ್ನೂ ಕೆಲವೊಂದು ವಿಚಾರಗಳಲ್ಲಿ ಜನನದ ಬಳಿಕ ಮಹಿಳೆ ಮತ್ತು ಮಗುವಿನ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಮುಟ್ಟಬಾರದು, ಮರಣದ ಬಳಿಕ ಆ ಮನೆ ಮತ್ತು ಸುಟ್ಟ ಆಸುಪಾಸಿನಲ್ಲಿ ಕೆಲವೊಂದು ವೈರಾಣು ಸೃಷ್ಟಿಯಾಗಿರಬಹುದು ಅಥವಾ ನಿಧನವಾದ ವ್ಯಕ್ತಿ ರೋಗದಿಂದ ನಿಧನರಾಗಿದ್ದರೆ ವೈರಾಣು ಇರಬಹುದು ಎಂಬ ದೃಷ್ಟಿಯಿಂದ ಹೋಗಬಾರದು ಎಂಬ ಶಾಸ್ತ್ರ ಇದ್ದರೆ, ಇಲ್ಲಿ ಅಪರಕ್ರಿಯೆಯ ಬಳಿಕ ಮನೆಯವರು ಅಗ್ನಿ, ಜಲ, ದಾನ್ಯ ಹೀಗೆ ನಾನಾ ಪ್ರಕಾರಗಳಲ್ಲಿ ದೇಹ ಮತ್ತು ಆರೋಗ್ಯ ಶುದ್ಧ ಮಾಡುವ ಕ್ರಮ ಇದೆ.

ಬಹುತೇಕ ಸಂಪ್ರದಾಯ, ಬದುಕಿನ ಅವಿಭಾಜ್ಯ ಅಂಗವನ್ನು ಬಿಟ್ಟು ಇತರ ಆಕರ್ಷಕ ಪ್ರಪಂಚದ ಅನಾರೋಗ್ಯಕರ ವಿಚಾರಗಳನ್ನು ನಾವು ಬೆನ್ನು ಹತ್ತಿ ಹೋಗುತ್ತೇವೆ. ಭಾರತೀಯ ಆಹಾರ ಪದ್ಧತಿಗಳು, ಆಚಾರ, ವಿಚಾರಗಳು ಹಬ್ಬ ಹರಿದಿನಗಳಿಗೆ ಮಾತ್ರ ಸೀಮಿತಗೊಳಿಸುತ್ತೇವೆ.

ಕೊರೋನಾ ವೈರಸ್‍ನ್ನು ಹೋಗಲಾಡಿಸಬೇಕಾದರೆ ಮೊದಲ ಮತ್ತು ಅಂತಿಮ ಪರಿಹಾವೇ ಭಾರತೀಯ ಜೀವನ ಶೈಲಿ ಆಳವಡಿಸಿಕೊಳ್ಳುವುದರೊಂದಿಗೆ ಮನೆಯೊಳಗೆ ಇರುವುದಾಗಿದೆ.

ಭಾರತೀಯರ ಎಷ್ಟೊ ಆಚಾರ-ವಿಚಾರಗಳು ವೈಜ್ಞಾನಿಕವಾಗಿದೆ. ಆದರೆ ಪ್ರಚಾರ ಆಸೆಯಿಂದ, ಕ್ರಾಂತಿಕಾರಿ ಎಂಬ ಪಟ್ಟ ಕಟ್ಟಿಕೊಳ್ಳಬೇಕು ಎಂಬ ಆಸೆಯಿಂದ ದೂಷಣೆ ಮಾಡುತ್ತಿದ್ದಾರೆ. ನಮ್ಮ ಬದುಕಿನ ಮೂಲ ತತ್ವದ ಅರಿವು, ಅದರೊಳಗಿನ ವೈಜ್ಞಾನಿಕ ತಳಹದಿಯನ್ನು ಇಂದು ವಿಶ್ವ ಪಾಲಿಸುತ್ತಿದೆ. ಆದರೆ ಹೆಸರು ಮಾತ್ರ ಬದಲಾಗಿದೆ. ಹಿಂದುತ್ವದ ನಮಸ್ಕಾರ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಆಲಿಂಗನ, ಶೇಖ್ ಹ್ಯಾಂಡ್ ನಮ್ಮ ಬದುಕಿಗೆ ಸುರಕ್ಷಿತವಲ್ಲ, ಏನಿದ್ದರೂ ಭಾರತೀಯ ಜೀವಾಳವಾಗಿರುವ ಕರಮುಗಿದು ನಮಸ್ಕಾರವೇ ಶ್ರೇಷ್ಠ ಹಾಗೂ ಸುರಕ್ಷಿತ ಎಂದು ಸಾಬೀತಾಗಿದೆ.

ತಾಮ್ರದ ಕೊಡ ಬಾವಿಗೆ ಇಳಿಸಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಸಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ ನೀರು ತುಂಬಿಸಲು ಪ್ರಯಾಸ ಪಡಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ.

ಯಾವುದು ಬಾಗುತ್ತದೆಯೋ ಅದು ಪೂರ್ಣತೆಯ ಸಂಕೇತ. ಯಾವುದು ಬಾಗುವುದಿಲ್ಲವೋ ಅದು ಅಪೂರ್ಣ. ಇದು ಬದುಕಿನ ಸತ್ಯ. ಇದರ ಅರ್ಥ ಇಷ್ಟೇ. ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ, ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವುದನ್ನು ನಾವು ಕಲಿಯಬೇಕು. ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುತ್ತದೆ. ಅಹಂಕಾರ, ಅಧಿಕಾರ, ಶಾಶ್ವತವಲ್ಲ, ನಾನು ಎಂಬ ಗರ್ವ ತನ್ನೊಡಲನ್ನೇ ಸುಡುತ್ತದೆ.

ಗುರು ಕಲಿಸಿದ ವಿದ್ಯೆ, ತಾಯಿ ನೀಡಿದ ಮಮತೆ, ತಂದೆ ಹೇಳಿದ ಸಲಹೆ, ಕಿರಿಯರು ನೀಡಿದ ಪ್ರೀತಿ, ರೈತ ಕೊಟ್ಟ ಅನ್ನ, ಯೋಧ ನೀಡಿದ ರಕ್ಷಣೆ, ಹೊತ್ತ ಸಲಹಿದ ಭೂ ತಾಯಿ, ಭಾಷೆ, ಸಂಸ್ಕೃತಿ, ಕಲಿಸಿದ ನಾಡು, ನಮ್ಮ ಸಂಸ್ಕೃತಿ, ಸಂಪ್ರದಾಯ ಹೀಗೆ ಎಲ್ಲವೂ ಶ್ರೇಷ್ಠ. ಬದುಕಿನಲ್ಲಿ ಬಾಗುವುದನ್ನು ಕಲಿಸಿದ ಸಂಸ್ಕೃತಿ ನಮ್ಮದು.

ಕೊರೊನಾ ಎಂಬುದು ನರಕ ಸದೃಶ ವೈರಸ್. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆತದ್ದರ ಪರಿಣಾಮ ಎಲ್ಲಕ್ಕಿಂತಲೂ ಮಿಗಿಲಾಗಿ ಪರಿಸರದ ಮೇಲಿನ ಮಾನವನ ಅತ್ಯಾಚಾರ, ಅನಾಚಾರ ಅಧಿಕಗೊಂಡದ್ದರ ಫಲಿತಾಂಶ ಇದಾಗಿದೆ. ಮಾನವೀಯತೆಯನ್ನು ಮರೆತು, ನಿಸರ್ಗದೊಂದಿಗಿನ ಸಂಬಂಧದಿಂದ ಕಳಚಿಕೊಂಡು ಅವೈಜ್ಞಾನಿಕವಾಗಿ ಬದುಕುವ ಬದಲು, ಪ್ರಕೃತಿಯಲ್ಲೂ ದೇವರನ್ನು ಕಾಣುವ ಭಾರತೀಯ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯದಲ್ಲಿ ಬದುಕೋಣ.

– ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ,
ಅಂತಾರಾಷ್ಟ್ರೀಯ ವಾಸ್ತು ತಜ್ಞ, ಧಾರ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ
ಆರ್.ಟಿ. ನಗರ, ಬೆಂಗಳೂರು

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನ. 8 ರಿಂದ ‘ರಾಗ ಸುಧಾ ರಸ’ ರಾಷ್ಟ್ರೀಯ ಸಂಗೀತೋತ್ಸವ

Upayuktha

ಚಿಪ್ಪಗಿರಿಯ ತಪೋಮೂರ್ತಿ ಶ್ರೀ ವಿಜಯದಾಸರು

Upayuktha

ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಹೊಸ ರಂಗಪ್ರಯೋಗ- ‘ರಸನಿಷ್ಪತ್ತಿ’ ನಾಳೆ

Upayuktha

Leave a Comment