ನಿಧನ ಸುದ್ದಿ

ನುಡಿನಮನ: ಕಲೆ, ಸಂಸ್ಕೃತಿ, ಸಾಹಿತ್ಯದ ಮೂಲಕ ಬಹು ಮಾನ್ಯತೆ ಪಡೆದಿದ್ದ ಕೀರಿಕ್ಕಾಡು ವನಮಾಲ ಕೇಶವ ಭಟ್

ಈ ಸುದ್ದಿಯನ್ನಿಂದು ನೋಡುತ್ತಿದ್ದಂತೆಯೇ ದೇಲಂಪಾಡಿಯ ಬನಾರಿ ಯಕ್ಷಗಾನ ಕೇಂದ್ರದ ಚಿತ್ರ ಕಣ್ಣೆದುರು ಮೂಡಿತು. ಅಲ್ಲಿ ನಡೆದ.., ನಾನು ಪಾಲ್ಗೊಂಡ ಹತ್ತು ಹಲವು ಸಮಾರಂಭಗಳ ನೆನಪುಗಳು ವಿಷಾದದ ಛಾಯೆಯೊಂದಿಗೆ ಮತ್ತೆ ಮತ್ತೆ ಕಾಡಿತು.

ಹೌದು… ಓದಿ ಮೆಚ್ಚಿಕೊಂಡದ್ದಕ್ಕೊಂದು ನೆನಪುಗಳ ಆತ್ಮೀಯ ಪತ್ರ ಬರೆಯುವ, ಸೃಜನಶೀಲ ಅಭ್ಯಾಸ ರೂಢಿಸಿಕೊಂಡಿದ್ದ ಬನಾರಿಯ ಶಿಲ್ಪಿ ಕೀರಿಕ್ಕಾಡು ವನಮಾಲ ಕೇಶವ ಭಟ್ ಇನ್ನಿಲ್ಲ..! ಈ ಕೋವಿಡ್ ಕಾಲದಲ್ಲಿ ಇಂದು ಮುಂಜಾನೆಗೆ ಅವರು 83 ವರ್ಷಗಳ ಕ್ರಿಯಾಶೀಲ ಬದುಕಿಗೆ ವಿದಾಯ ಹೇಳಿದ್ದಾರೆ.

ಕಲೆ, ಸಂಸ್ಕೃತಿ, ಸಾಹಿತ್ಯದ ಮೂಲಕ ಸ್ಪಂದನಶೀಲ ಬದುಕನ್ನು ಕಟ್ಟಿದ ವನಮಾಲ ಕೇಶವ ಭಟ್ಟರ ಬದುಕು, ಸಾಧನೆ, ಕೊಡುಗೆ ಖಂಡಿತಾ ಚಿಕ್ಕದೇನೂ ಅಲ್ಲ.

ಏತಡ್ಕದ ಕೀರಿಕ್ಕಾಡಿನಿಂದ ದೇಲಂಪಾಡಿಯ ಬನಾರಿಯ ಕಾನನಗರ್ಭಕ್ಕೆ ತೆರಳಿ ಅಲ್ಲೊಂದು ಕಲಾ ಸಂಸ್ಕೃತಿ ಆರಾಧನೆಯ ನಾಡು ಕಟ್ಟಿದ ಯಕ್ಷಗಾನ ಮೇಧಾವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಹಿರಿಯ ಪುತ್ರನಾದ ಇವರು ಬನಾರಿಯಲ್ಲಿ ಸಾಂಸ್ಕೃತಿಕ ನಾಡು ನಿರ್ಮಿಸಿದ ಸಾರಥಿ.

ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಬಡತನದ ನಡುವೆಯೂ ಕಾಡನ್ನು ನಾಡಾಗಿಸಿದವರು. ನಾಡಲ್ಲಿ ಕೃಷಿ ನಡೆಸಿ ಚಿನ್ನದಂಥ ಬೆಳೆ ತೆಗೆದವರು. ಅದರ ಜೊತೆಯಲ್ಲೇ ನೂರಕ್ಕೂ ಅಧಿಕ ಯಕ್ಷಗಾನ ಪ್ರಸಂಗ ಬರೆದವರು. ಶೇಣಿಯಂತಹಾ ಮೇಧಾವಿ ಶಿಷ್ಯರನ್ನು ರೂಪಿಸಿದವರು. ಕೇರಳ ಕರ್ನಾಟಕ ಗಡಿಯ ಕುಗ್ರಾಮ ದೇಲಂಪಾಡಿಯ ಬನಾರಿಯಲ್ಲಿ 80ವರ್ಷಗಳ ಹಿಂದೆಯೇ ಯಕ್ಷಗಾನ ಕೇಂದ್ರ ಸ್ಥಾಪಿಸಿದವರು. ಹಳ್ಳಿಯ ಶ್ರಮಿಕರೆಲ್ಲರಿಗೆ ಕಲೆಯ ರುಚಿ ಹತ್ತಿಸಿದವರು. ಅವರ ನಡುವಿಂದಲೇ ಅಮೂಲ್ಯ ಕಲಾವಿದರನ್ನು ಸೃಷ್ಟಿಸಿದವರು. ಮನೆಯನ್ನೇ ಕಲಾಶಾಲೆಯನ್ನಾಗಿಸಿದವರು.

ಇದೆಲ್ಲ ಕಂಡು.., ಅಪ್ಪನ ಕೈ ಹಿಡಿದು ಜೊತೆ ಜೊತೆಯಲ್ಲೇ ನಡೆದ ಹುಡುಗ ವನಮಾಲಾ ಕೇಶವ ಭಟ್ ಇದೇ ಪಥದಲ್ಲಿ ರೂಪುಗೊಂಡದ್ದು ಬನಾರಿಯ ಭಾಗ್ಯ.. ಅಪ್ಪನ ಬಳಿಕ ಬನಾರಿಯ ಗೋಪಾಲಕೃಷ್ಣ ಯಕ್ಷಗಾನ ಸಂಘಕ್ಕವರೇ ಸಾರಥಿಯಾದರು. ಸ್ವತಃ ಭಾಗವತಿಕೆ ಮಾಡಿದರು. ವಾರದ ಕೂಟಗಳನ್ನು ನಡೆಸಿದರು. ಹವ್ಯಾಸಿಗಳೆಲ್ಲರ ಅಭ್ಯುದಯಕ್ಕೆ ವೇದಿಕೆ ನಿರ್ಮಿಸಿದರು.

ಕೃಷಿಗೂ ಗಮನಕೊಟ್ಟರು. ತೋಟ ವಿಸ್ತರಿಸಿದರು. ಊರಿನ ಕೃಷಿಕರನ್ನು ಸಂಘಟಿಸಿದರು. ಕೃಷಿಕರ ಸಹಕಾರದ ಸೇವಾಸಂಘ ರೂಪಿಸಿ ತಾನೇ ಅಧ್ಯಕ್ಷನಾದರು. ಸಮರ್ಥವಾಗಿ ಮುನ್ನಡೆಸಿ ನಾಡಬಂಧು ಎನಿಸಿಕೊಂಡರು. ಕೃಷಿ ಪಲ್ಲಟ ಗಮನಿಸಿದರು. ರಬ್ಬರ್ ಕೃಷಿಯ ವೇಗ ಅರಿತರು. ತನ್ನೂರಿನಲ್ಲೂ ರಬ್ಬರ್ ಸೊಸೈಟಿ ಸ್ಥಾಪಿಸಿದರು. ಕೃಷಿ ಮತ್ತು ಕೃಷಿಕರ ಜತೆಯಲ್ಲೇ ಬದುಕುತ್ತ ಸಾಂಸ್ಕೃತಿಕ ಸದಭಿರುಚಿ ಬೋಧಿಸಿದರು.

ತಂದೆಯ ಬಳುವಳಿಯಾಗಿ ಅವರಿಗೆ ಸಾಹಿತ್ಯದೊಲವು ಸಿದ್ಧಿಸಿತ್ತು. ಎಲ್ಲಾ ಪತ್ರಿಕೆ, ನಿಯತಕಾಲಿಕ ಓದುತ್ತಿದ್ದರು. ಚುಟುಕು, ಕವಿತೆ, ಕತೆ,ವಿಮರ್ಶೆ ಬರೆಯುತ್ತಿದ್ದರು. ಏನಿಲ್ಲವೆಂದರೂ ತಾನು ಓದಿದ ಮೆಚ್ಚಿದ ವಿಷಯಕ್ಕೊಂದು ಪತ್ರ ಬರೆಯುತ್ತಿದ್ದರು.
ಅವರ ಅಂಚೆಕಾರ್ಡ್ ಪತ್ರ ತಲುಪದ ಕನ್ನಡ ಪತ್ರಿಕೆಗಳೇ ಇರಲಾರವು..!

ಇತ್ತೀಚಿನವರೆಗೂ ಅವರಿಂದ ಪುಂಖಾನುಪುಂಖ ಕಾರ್ಡ್ ಬರುತಿತ್ತು. ಕೆಲವದರಲ್ಲಿ ಲೇಖನ ಬರಹದ ಕುರಿತಾದ ಸ್ಪಂದನ. ಉಳಿದಂತೆ ಅವರಿಗೆ ಕಳಿಸಿ, ಇವರಿಗೆ ಕಳಿಸಿ ಎಂಬ ಸಲಹೆಯ ಅನೇಕ ವಿಳಾಸ..! ಇದೇನೂ ಪುಕ್ಕಟೆ ಸಲಹೆಯಲ್ಲ. ಆದರ ರೊಕ್ಕವನ್ನೂ ಅವರೇ ಕಳುಹಿಸುತಿದ್ದರು..!! ಎಲ್ಲರೂ ಓದಬೇಕೆಂಬುದು ಅವರ ಮನೋಭಿಲಾಷೆ..
ಇಂಥವರು ಎಲ್ಲಿದ್ದಾರೆ..???

ನಮ್ಮ ಕಣಿಪುರವನ್ನವರು ಅಗಾಧ ಪ್ರೀತಿಸುತ್ತಿದ್ದರು. ಮೆಚ್ಚುಗೆಯ ಮಾತನ್ನು ಹೇಳುತ್ತಲೇ ಇರುತ್ತಿದ್ದರು. 80ರ ಹರೆಯ ದಾಟಿದರೂ ಅವರು ಪತ್ರಿಸುತ್ತಲೇ ಇದ್ದರು. ನನಗೆ ಕಣಿಪುರ ಗೋಪಾಲಕೃಷ್ಣ ಹರಸಲೆಂದು ಪ್ರಾರ್ಥಿಸುತ್ತಿದ್ದರು!!!

ಇಂಥ ವಿನಾಕಾರಣ ಪ್ರೀತಿಯ, ನಿರ್ವಂಚನೆಯ ಮನಸ್ಸಿನ ಮಮತೆಯ ಮಾಧುರ್ಯಭರಿತ ಮನಸಿನ ವನಮಾಲಾ ಕೇಶವ ಭಟ್ಟರು ಈ ಕೋವಿಡ್ ಕಾಲದಲ್ಲಿ ದಿಡೀರನೆ ಅಗಲಿದ್ದಾರೆಂದರೆ ನಂಬಲೇಬೇಕಾಗಿದೆ.!

ಕುಗ್ರಾಮ ಬನಾರಿಯಲ್ಲಿದ್ದುಕೊಂಡೇ ಅವರದ್ದು ಬಹುಮುಖೀ ಚಟುವಟಿಕೆ. ಯಕ್ಷಗಾನ, ಬರವಣಿಗೆ, ಸಹಕಾರಿ ರಂಗ, ಕೃಷಿ ಇತ್ಯಾದಿ ಅವರಿಗೆ ಉಸಿರಿನಷ್ಟೇ ಮುಖ್ಯ. ಈ ಮಾದರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಕಂಡರೆ ಅವರಿಗೆ ಅವರ ಮಕ್ಕಳಷ್ಟೆ ಪ್ರೀತಿ. ಅದೇ ಬೆಂಬಲದ ಪ್ರೋತ್ಸಾಹ. ಊರಿನಲ್ಲಿ ಅವರ ಕೈಗಳಿಂದ ಗುಪ್ತ ಸಹಾಯ, ಬೆಂಬಲ, ಬೆನ್ತಟ್ಟುವಿಕೆ ಪಡೆದವರು ಒಬ್ಬಿಬ್ಬರೇನಲ್ಲ..

ಅವರು ಕೃತಿ ರಚಿಸಿದ್ದಾರೆ. ರಚಿಸಿದವರನ್ನು ಮಾನಿಸಿದ್ದಾರೆ. ಬನಾರಿ ಯಕ್ಷಗಾನ ಕೇಂದ್ರದಲ್ಲಿ ಅನೇಕರನ್ನು ಕುಣಿಸಿ, ಗೌರವಿಸಿದ್ದಾರೆ. ತನ್ನ ಮನೆಯನ್ನೂ, ಮಕ್ಕಳನ್ನು, ಕುಟುಂಬವನ್ನೂ ಸಾಂಸ್ಕೃತಿಕ ಸದಭಿರುಚಿಗಳಿಂದ ಬೆಳೆಸಿದ್ದಾರೆ. ಪರಿಣಾಮ ಕುಟುಂಬದಲ್ಲಿ ಕಲಾವಿದರು, ವೈದ್ಯರು, ಸಹೃದಯರೇ ಇದ್ದಾರೆ. ಬದುಕಿನ ಅರ್ಥಪೂರ್ಣತೆ ಎಂದರೆ ಇದಲ್ಲವೇ…?

ಇದನ್ನು ಕ.ಸಾ.ಪ ಪರಿಗಣಿಸಿದೆ. 2018ರಲ್ಲಿ ಮುಳ್ಳೇರಿಯದಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಸನ್ಮಾನಿಸಿ ಗೌರವಿಸಿದೆ. ಇವತ್ತವರ ಅಗಲಿಕೆಯ ಸುದ್ದಿ ಅರಿತಾಕ್ಷಣ ಈ ವಿಚಾರಗಳೆಲ್ಲ ಕಣ್ಮುಂದೆ ತೇಲಿತು. ಮನಸು ಮಾತಾಡಿತು. ಕಣಿಪುರ ಪತ್ರಿಕೆಯನ್ನು ಒಪ್ಪಿದ, ಅಪ್ಪಿದ ಹಾರೈಸಿದ ಕ್ಷಣಗಳು ಗಾಢವಾಗಿ ಕೆಣಕಿತು.

ಅಂತಿಮ ದರ್ಶನ ಪಡೆಯೋಣ ಎಂದರೆ ಕೋವಿಡ್ ಕಾಲ! ಏನೇ ಇರಲಿ, ಮರೆಯಬಾರದ ಬದುಕನ್ನು ಸವೆಸಿದ ವನಮಾಲಾ ಕೇಶವ ಭಟ್ಟರು ಮರೆಯಾದರೂ ನನ್ನ ನೆನಪಿನ ಅಂಗಳದಲ್ಲಿ ಕುಣಿಯುತ್ತಿದ್ದಾರೆ..ನೆನಪುಗಳಾಗಿ.. ಅವರ ದಿವ್ಯಾತ್ಮಕ್ಕೆ ಭಾವಪೂರ್ಣ ಕಂಬನಿಗಳು…

– ಎಂ. ನಾ. ಚಂಬಲ್ತಿಮಾರ್.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಭಾರತದ ಖಗೋಳ ವಿಜ್ಞಾನಿ ಡಾ.ಗೋವಿಂದ್ ಸ್ವರೂಪ್ ನಿಧನ

Harshitha Harish

ಟ್ರಂಪ್ ನನ್ನು ದೇವರಂತೆ ಪೂಜಿಸುತ್ತಿದ್ದ ಟ್ರಂಪ್ ಅಭಿಮಾನಿ ನಿಧನ

Harshitha Harish

ಕೇರಳದಲ್ಲಿ ಕೊರೊನಾಗೆ ಮೊದಲ ಪೊಲೀಸ್ ಅಧಿಕಾರಿ ಬಲಿ

Harshitha Harish

Leave a Comment