ಹಬ್ಬಗಳು-ಉತ್ಸವಗಳು

ಉತ್ಥಾನದ್ವಾದಶೀ: ತುಳಸೀ ಪೂಜೆ; ತುಳುನಾಡಿನ ‘ತುಲಸಿ ಪರ್ಬ’ ‘ಉತ್ಥಾಪನ’ ಆಚರಣೆ

ಮನೆಯ ಮುಂಭಾಗ ವಾಸ್ತವ್ಯಕ್ಕೆ ಶೋಭೆ – ಪಾವಿತ್ರ್ಯವನ್ನು ಒದಗಿಸುವ ತುಳಸಿಕಟ್ಟೆ ವಾಸಸ್ಥಾನದ ಕಲ್ಪನೆ – ವಿನ್ಯಾಸದಲ್ಲಿ‌ ಮಹತ್ವದ ಸ್ಥಾನ ಪಡೆದಿದೆ. ಭೂಮಿ, ನೀರು, ಸಮುದ್ರ, ನದಿ, ಸರೋವರ, ಗಿಡ, ಮರ, ಬಳ್ಳಿ, ಗುಡ್ಡ, ಬೆಟ್ಟಗಳನ್ನು‌‌ ಆರಾಧಿಸುವ ನಮ್ಮ ಮನೋಧರ್ಮ ‌ಅಥವಾ ಜಾಯಮಾನ ತುಳಸಿ ಗಿಡದ ಸ್ವೀಕಾರದಲ್ಲಿ, ಪೂಜೆಯಲ್ಲಿ ಸ್ಪಷ್ಟವಾಗುತ್ತದೆ. ದಿನಚರಿಯ ಅನಿವಾರ್ಯ ಭಾಗವಾಗಿ ಪೂಜೆಗೊಳ್ಳುವ ತುಳಸಿ ನಮ್ಮನ್ನು ಪೂರ್ಣವಾಗಿ ಆವರಿಸಿದೆ, ಮನೆಯಂಗಳದ ಕಟ್ಟೆಯಲ್ಲಿ ಸ್ಥಾನ ಪಡೆದಿದೆ.

ಮನೆಯ ಸುಖ- ದುಃಖಗಳಲ್ಲಿ; ಸಂಭ್ರಮ – ಉಲ್ಲಾಸಗಳಲ್ಲಿ, ನಿರ್ದಿಷ್ಟ ಆಚರಣೆಗಳಲ್ಲಿ ,ವಿಧಿ ನಿರ್ವಹಣೆಗಳಲ್ಲಿ‌ ತುಳಸಿಕಟ್ಟೆ ಪ್ರಧಾನ ಪಾತ್ರ ವಹಿಸುತ್ತದೆ. ಸಮೀಕರಣ ಸಂಸ್ಕೃತಿಯ ದ್ಯೋತಕವಾಗಿ‌ ಇಂದು ತುಳಸಿ ಪೂಜೆ ವ್ಯಾಪಕವಾಗಿ ರೂಢಿಯಲ್ಲಿದೆ. ಕೃಷಿ ಪ್ರಧಾನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ನಾವು ಗದ್ದೆ, ದನ – ಕರು, ಜಾನುವಾರು, ಧಾನ್ಯರಾಶಿ, ಮನೆಗೆ ನೀಡುವ ಪ್ರಾಶಸ್ತ್ಯದೊಂದಿಗೆ ದೈವಸನ್ನಿಧಾನ‌,ನಾಗಬನಗಳಂತೆ ‘ತುಳಸಿಕಟ್ಟೆ’ಯನ್ನು ಸ್ವೀಕರಿಸಿದ್ದೇವೆ .

ಸೊಡರಹಬ್ಬ (ದೀಪಾವಳಿ) ಮುಗಿದು ಹನ್ನೆರಡು ದಿನ ತುಳಸಿ ಸನ್ನಿಧಾನದಲ್ಲಿ‌ ಕಾರ್ತಿಕ ದಾಮೋದರ ರೂಪಿ ಪರಮಾತ್ಮನಿಗೆ ವೈದಿಕರು ಪೂಜೆಸಲ್ಲಿಸುತ್ತಾರೆ. ನಾಮ ಸಂಕೀರ್ತನೆಯೊಂದಿಗೆ ಹಾಡುತ್ತಾ ತುಳಸಿಗೆ ಸುತ್ತು ಬರುತ್ತಾರೆ. ಹನ್ನೆರಡನೇ‌ ದಿನ‌ ಉತ್ಥಾನದ್ವಾದಶಿ. ಅಂದು‌ ಸೂರ್ಯಾಸ್ತದ ವೇಳೆ ತುಳಸಿ ವೃಂದಾವನಕ್ಕೆ ಹಾಲೆರೆದು ಗೋವಿಂದನನ್ನು ಎಬ್ಬಿಸುವ ಪೂಜೆ ನಡೆಯುತ್ತದೆ. ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡಿ ಮಲಗಿದ ಭಗವಂತನನ್ನು ಉತ್ಥಾನ ದ್ವಾದಶಿಯಂದು ಎಬ್ಬಿಸುವುದೆಂದು ಒಂದು ಒಡಂಬಡಿಕೆ.

ಪುರಾಣಗಳು ನಮ್ಮ ಆದಿಮ ಆರಾಧನಾ ವಿಧಾನಗಳಿಗೆ, ಆಚರಣೆಗಳಿಗೆ ವೈಭವವನ್ನು ಒದಗಿಸುತ್ತಾ ಸ್ವೀಕರಿಸಲ್ಪಟ್ಟುವು. ಅದು ಸಹಜವೆಂಬಂತೆ ರೂಢಿಗೆ ಬಂದುವು .

“ತುಲಸಿಗ್ ಬಜಿಲ್ ಪಾಡ್ದ್ ತೊಲಸಿಕಟ್ಟೆಗ್ ಒಂಜಿ ಸುತ್ತು ಬತ್ತ್ ದ್ ಉಂತುನಗ…….” ಹೌದು, ತುಳಸಿಕಟ್ಟೆ ದೀಪಾವಳಿಯಂದು ಬಲೀಂದ್ರ ಕಂಬ ನೆಟ್ಟು ಬಲಿಯೇಂದ್ರನನ್ನು ಕರೆದು ಪೊಲಿ ಎಂಬ ಸಮೃದ್ಧಿಯನ್ನು ಯಾಚಿಸುವ ಮುಖ್ಯ ಸ್ಥಳವಾಗಿ ಮಾತ್ರವಲ್ಲ, ಹೊಸ ಭತ್ತದ ಅವಲಕ್ಕಿ ಸಮರ್ಪಿಸಿ ಪಾನಕ ಪೂಜೆ ಮಾಡಿಸುವ ಅಥವಾ ಪೂಜೆಮಾಡುವ, ‘ಮುಡಿಪುಕಟ್ಟುವ’ ಸನ್ನಿಧಾನವಾಗಿಯೂ ನಮ್ಮಲ್ಲಿ ರೂಢಿಯಲ್ಲಿದೆ. ಪ್ರತಿನಿತ್ಯ ನಮ್ಮ ಬದುಕಿನಲ್ಲಿ‌ ಒಂದಿಲ್ಲ ಒಂದು ವಿಧದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ತುಳಸಿಕಟ್ಟೆ.

ತುಳಸಿ ಪೂಜಾರ್ಹವಾಯಿತು:
• ಜನಪದರ ಬದುಕಿಗೆ ತುಳಸಿಯ ಪ್ರವೇಶ ಯಾವಾಗ ಆಯಿತೆಂದು ನಿಖರವಾಗಿ‌ ಹೇಳಲಾಗದು. ಆದರೆ ವಿಶೇಷ ಔಷಧೀಯ ಗುಣಗಳುಳ್ಳ ಗಿಡ, ಮರ, ಬಳ್ಳಿಗಳು‌ ಗುರುತಿಸಲ್ಪಟ್ಟು ಪ್ರಾಣಾಧಾರ, ಬದುಕಿಗೆ ಆಧಾರವೆಂದು ಅಂಗೀಕರಿಸಲ್ಪಟ್ಟಂದಿನಿಂದ ತುಳಸಿ ನಮಗೆ ಹತ್ತಿರವಾಗಿದ್ದಿರ ಬೇಕು.
• ಕ್ರಿ.ಶ. ಏಳನೇ ಶತಮಾನದ್ದೆಂದು ಹೇಳಲಾಗುವ ಬ್ರಹ್ಮವೈವಸ್ವತ ಪುರಾಣದಲ್ಲಿ ಮೊದಲಬಾರಿಗೆ ತುಳಸಿಯ ಉಲ್ಲೇಖವಿದೆ. ಸಮುದ್ರಮಥನ ಕಾಲದಲ್ಲಿ‌ ತುಳಸಿ ಹುಟ್ಟಿಕೊಂಡಿತೆಂಬ ಕತೆಯೂ ಇದೆ.
• ಸಿರಿಪಾಡ್ದನದಲ್ಲಿ ಸತ್ಯನಾಪುರದ ಎರಮನೆಗೆ (ಅರಮನೆಗೆ) ಬಂದ ಬ್ರಾಹ್ಮಣ ವೇಷಧಾರಿ ‘ಬೆರ್ಮೆರ್’ ಕಾಣಿಸಿಕೊಂಡದ್ದು ‘ತೊಲಚಿ ಮಂಟಮೆನ ಎದುರುಡುಗೆನ…….’ ಎಂಬ ಸಾಲೊಂದು ಗಮನ ಸೆಳೆಯುತ್ತದೆ.
• ‘ಉಡಲ್ ಗ್ ತುಲಸಿ ನೀರ್ ಗೆತೊಂಡೆರ್’ ಎಂಬುದು ಪ್ರಾತರ್ವಿಧಿಯನ್ನು ಹೇಳುವಂತಹುದು. ‘ತುಲಸಿ ನೀರ್ ಬುಡಿಯೆರ್’ ಎಂಬ ಕ್ರಮ ನಿಧನ ಕಾಲದ ವಿಧಿಯಾಚರಣೆಯಾಗಿದೆ.
• ಬೆಳಗ್ಗೆ ಎದ್ದು ಸ್ನಾನ ತೀರಿಸಿ ತುಳಸಿಕಟ್ಟೆಯ ತುಳಸಿಯ ಬುಡಕ್ಕೆ ನೀರೆರೆದು ತುಳಸಿ ದಳಕ್ಕೆ ನೀರು ಹಾಕಿ ತೀರ್ಥದಂತೆ ಸೇವಿಸುವ ಎಂದರೆ “ಭಕ್ತಿಗ್ ಬುಕುತಿ ಪಾಡೊಂಡೆರ್, ತುಲಸಿನೀರ್ ಉಡಲ್ ಗ್ ಗೆತೊಂಡೆರ್” ಹೀಗೆ ನಿತ್ಯವಿಧಿ ತೀರಿಸಿದರು ಎಂಬ ವಿವರ ತುಳು ಜನಪದದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.

ಪ್ರತಿಯೊಬ್ಬ ಹಿಂದೂವಿನ ಮನೆಯ ಅಂಗಳದಲ್ಲಿ ಪಶ್ಚಿಮಾಭಿಮುಖವಾಗಿದೆ ತುಳಸಿಕಟ್ಟೆ‌ ,ತುಳಸಿಗೆ ನೀರೆರೆದು ನಮಸ್ಕರಿಸಿ ಎದ್ದು ನಿಂತು ಕತ್ತೆತ್ತಿ ನೋಡಿದಾಗ ಕಾಣುವುದು ಮಾರು ಮೇಲೇರಿ ಬಂದ ಸೂರ್ಯ .ತುಳಸಿ ಕಟ್ಟೆ ಮತ್ತು ಮನೆಯ ವಾಸ್ತು ಅಷ್ಟು ಪ್ರಧಾನವಾಗಿ ,ಅಚ್ವುಕಟ್ಟಾಗಿ ನೇರ್ಪುಗೊಂಡಿದೆ.

ಜೀವನಾಧಾರವಾಗಿ ಔಷಧೀಯ ಗುಣಗಳುಳ್ಳ, ಪ್ರಾಣವಾಯು ಆಮ್ಲಜನಕವನ್ನು ಕೊಡುವ ತುಳಸಿ ಮನೆಗೆ, ಮನೆಯಂಗಳಕ್ಕೆ ಶೋಭೆ. ಸತ್ಯ ಶೋಧನೆಗೆ ಭಾಷೆಯ ಮೂಲಕ ಪ್ರಯೋಗವಾಗುವ ಪ್ರಮಾಣ, ವರ, ಶಾಪಗಳಂತಹ ನ್ಯಾಯ, ಸತ್ಯ ಪ್ರತಿಪಾದನೆಯ ಸ್ಥಾನವೂ ಹೌದು.

ವೃದ್ಧಿ – ಕ್ಷಯ (ಅಮೆ – ಕರ) ಅಶೌಚ ನಿವಾರಣೆಗೆ ಪ್ರಕ್ರಿಯೆಗಳು ತುಳಸಿಕಟ್ಟೆಯ ಮುಂಭಾಗವೇ ನೆರವೇರುತ್ತವೆ .
ಮದುವೆ ಮುಂತಾದ ಶುಭ ಸಂದರ್ಭಗಳ ‘ಸುದ್ಧದ’ ಶಾಸ್ತ್ರವು ತುಳಸಿ ಸನ್ನಿಧಿಯಲ್ಲೆ ನಡೆಯುತ್ತವೆ .
ತುಳಸಿ, ತುಳಸಿಕಟ್ಟೆ ಪ್ರತಿಯೊಬ್ಬ ಸಂಪ್ರದಾಯ ಪ್ರಿಯ, ಸಂಸ್ಕೃತಿ ಪ್ರೀತಿಯರಲ್ಲಿ ಬಹುಮಾನ್ಯತೆಯಿಂದ ಒಪ್ಪಲ್ಪಟ್ಟ ಗಿಡ, ಅಥವಾ ಸನ್ನಿಧಾನ.

ದೀಪಾವಳಿಯಂದು ತುಳಸಿಗೆ ಅವಲಕ್ಕಿ ಸಮರ್ಪಿಸದ ಮಂದಿ ಉತ್ಥಾನ ದ್ವಾದಶಿಯವರೆಗಿನ ಅನುಕೂಲವಾದ ಒಂದು ದಿನ ಸಮರ್ಪಿಸುವ ಕ್ರಮವೂ ಇದೆ. “ತುಲಸಿಗ್ ಬಜಿಲ್ ಪಾಡ್ಗ, ಬುಲೆಭಾಗ್ಯ ಉರ್ಕರಡ್ ಪಂಡ್ದ್ ಮಣ್ಣ್, ತುಲಸಿದ ಸತ್ಯೊನು ಕೇಂಡೊಂದು ಪುಡಾಡ್ ಗ್.

-ಕೆ.ಎಲ್.ಕುಂಡಂತಾಯ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಆ. 21: ಸೌಭಾಗ್ಯದಾಯಕ ಸ್ವರ್ಣಗೌರಿ ವ್ರತ

Upayuktha

ದೇವತೆಗಳಿಗೆ ಪ್ರಿಯವಾದ ಮಕರ ಸಂಕ್ರಾಂತಿ- ಬೆಳಕು ವಿಸ್ತರಿಸುವ ಕಾಲ

Upayuktha

ಶಿವರಾತ್ರಿ ವಿಶೇಷ: ಶಿವ ತಾಂಡವ ಸ್ತೋತ್ರ

Upayuktha