ಜಿಲ್ಲಾ ಸುದ್ದಿಗಳು ಶಿಕ್ಷಣ

ಅವಳಿ-ಜವಳಿ ಮಕ್ಕಳಿಬ್ಬರ ಎಸ್ಎಸ್ಎಲ್ ಸಿ ಫಲಿತಾಂಶ ಸೇಮ್ ಟು ಸೇಮ್

ವಿಜಯಪುರ : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಮುಖ್ಯ ಶಿಕ್ಷಕರಾಗಿರುವ ಲಿಯಾಖತ್ ಅಲಿ ಮುಲ್ಲಾ ಮತ್ತು ವಿಜಯಪುರ ನಗರದ ಯುಬಿಎಸ್‌ ನಂ. 21ರಲ್ಲಿ ಉರ್ದು ಶಿಕ್ಷಕಿಯಾಗಿರುವ ಜಾಹಿದಾ ಪರವೀನ್ ದಂಪತಿಗೆ ಸಬಾ ಮತ್ತು ಝೇಬಾ ಅವಳಿ-ಜವಳಿ ಮಕ್ಕಳು. ಇವರ ಮೊದಲ ಮಗ ಅಬ್ದುಲ್ಲಾ ಮುಲ್ಲಾ ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದು, 2ನೇ ಮಗ ಇನಾಯುತ್ ಉಲ್ಲಾ ಮುಲ್ಲಾ ಬೆಳಗಾವಿಯ ಬಿಮ್ಸ್ ನಲ್ಲಿ ಎಂಬಿಬಿಎಸ್ 2ನೇ ವರ್ಷದಲ್ಲಿ ಓದುತ್ತಿದ್ದಾರೆ. ಆದರೆ, ಮೂರನೇ ಮಕ್ಕಳಾದ ಸಬಾ ಮತ್ತು ಝೇಬಾ ಸಾಧನೆ ಮಾತ್ರ ಇಬ್ಬರು ಪುತ್ರರಿಗಿಂತ ಹೆಚ್ಚು ಅಚ್ಚರಿ ತಂದಿರುತ್ತದೆ.

ಸಬಾ ಮತ್ತು ಝೇಬಾ ಹುಟ್ಟುವಾಗ ಅವಳಿ-ಜವಳಿಯಾಗಿದ್ದ ಇವರು ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳೂ ಸಮಾನವಾಗಿಯೇ ಇವೆ. ಒಟ್ಟು ಅಂಕಗಳು ಸಮನಾಗಿದೆ. ಇದರ ಜೊತೆಯಲ್ಲಿಯೇ ಇವರು ವಿಷಯವಾರು ಪಡೆದಿರುವ ಅಂಕಗಳು ಮತ್ತು ಗಳಿಸಿರುವ ಶೇಕಡಾವಾರು ಅಂಕಗಳೂ ಕೂಡ ಒಂದೇ ಸಮನಾಗಿವೆ. ಅದೂ ಕೂಡ ರಾಜ್ಯಕ್ಕೆ ಇಬ್ಬರೂ 6ನೇ ಸ್ಥಾನ ಪಡೆದಿದ್ದಾರೆ.

ವಿಜಯಪುರ ನಗರದ ಸಿಕ್ಯಾಬ್ ಕೆಕೆಜಿಎಸ್‌ ನಲ್ಲಿ ಒಂದರಿಂದ ನಾಲ್ಕನೇ ತರಗತಿ ಓದಿದ ಇವರು ನಂತರ ವಿಜಯಪುರ ನಗರದ ನವರಸಪುರದಲ್ಲಿರುವ ಸಿಕ್ಯಾಬ್ ಇಂಗ್ಲಿಷ್ ಮಾಧ್ಯಮ ಸ್ಕೂಲ್ ನಲ್ಲಿ 5 ರಿಂದ 10ನೇ ತರಗತಿ ವರೆಗೆ ಓದಿದ್ದಾರೆ. ಅಲ್ಲಿದ್ದಾಗಲೂ ಅಷ್ಟೇ, ಇಬ್ಬರಲ್ಲಿ ಪ್ರತಿಬಾರಿ ಒಬ್ಬರಿಗೊಬ್ಬರು ಸ್ಪರ್ಧೆ. ಒಮ್ಮೆ ಸಬಾ ಫಸ್ಟ್ ಬಂದರೆ, ಮತ್ತೋಮ್ಮೆ ಝೇಬಾ ಫಸ್ಟ್ ಬರುತ್ತಿದ್ದಳು. ಈಗ ಇಬ್ಬರೂ ಒಂದೇ ಸಮನಾದ ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದ ಇವರು, ರಾತ್ರಿ 11ರ ವರೆಗೂ ಓದುವ ಮೂಲಕ ಮತ್ತು ಪರಸ್ಪರ ಚರ್ಚೆ ಹಾಗೂ ಮನನ ಮಾಡಿಕೊಳ್ಳುವ ಮೂಲಕ ಈಗ ಯಶಸ್ಸು ಕಂಡಿದ್ದಾರೆ. ಇವರು ತಲಾ 620 ಅಂಕಗಳನ್ನು ಪಡೆದಿದ್ದಾರೆ. ಪ್ರಥಮ ಭಾಷೆ ಇಂಗ್ಲಿಷ್ ನಲ್ಲಿ 125, ದ್ವಿತೀಯ ಭಾಷೆ ಕನ್ನಡದಲ್ಲಿ-100, ತೃತೀಯ ಭಾಷೆ ಹಿಂದಿಯಲ್ಲಿ 100 ಮತ್ತು ಗಣಿತ-98, ವಿಜ್ಞಾನ-99 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಇಬ್ಬರೂ ಸೇಮ್ ಟೂ ಸೇಮ್ ಪಡೆಯುವ ಮೂಲಕ ಎಲ್ಲರೂ ಅಚ್ಚರಿ ಗೊಳಿಸುವಂತೆ ಮಾಡಿದ್ದಾರೆ.

ಮಕ್ಕಳ ಸಾಧನೆಗೆ ತಂದೆ ಲಿಯಾಖತ್ ಅಲಿ ಮುಲ್ಲಾ ಮತ್ತು ತಾಯಿ ಜಾಹಿದಾ ಪರವೀನ್ ಮುಲ್ಲಾ ತುಂಬ ಸಂತಸ ವ್ಯಕ್ತಪಡಿಸಿದ್ದಾರೆ. ಇವರ ಸಹೋದರರಾದ ಅಬ್ದುಲ್ಲಾ ಮುಲ್ಲಾ ಮತ್ತು ಇನಾಯತ್ ಉಲ್ಲಾ ಮುಲ್ಲಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವರ ಸಾಧನೆಗೆ ತನ್ನ ತಂದೆ-ತಾಯಿ, ಸಹೋದರರು, ಸಿಕ್ಯಾಬ್ ಶಾಲೆಯ ಶಿಕ್ಷಕರು ಮತ್ತು ಹಿತೈಷಿಗಳೇ ಕಾರಣ ಎಂದು ಸಂತಸ ವ್ಯಕ್ತಪಡಿಸಿರುವ ಇವರು, ಇಬ್ಬರಿಗೂ ಸಮಾನ ಅಂಕ ಬರುವ ಬಗ್ಗೆ ಗೊತ್ತಿರಲಿಲ್ಲ. ಒಂದೆರಡು ಅಂಕಗಳು ಹೆಚ್ಚು ಕಡಿಮೆ ಆಗಬಹುದು ಎಂದು ಕೊಂಡಿದ್ದೇವು. ಆದರೆ, ಅಂಕ ಗಳಿಸುವಲ್ಲಿಯೂ ತಾವಿಬ್ಬರೂ ಸಮಾನ ಸಾಧನೆ ಮಾಡಿರುವುದ ತಮ್ಮ ಸಂತಸ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಹೊಂದಿರುವುದಾಗಿ ತಿಳಿಸಿದರು.

Related posts

ತಲಪಾಡಿಯಲ್ಲಿ ಲೋಕಾರ್ಪಣೆಗೊಂಡ ಶಾರದಾ ಇಮ್ಯೂನಿಟಿ ಕ್ಲಿನಿಕ್

Upayuktha

ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ಅಗ್ರ ಶ್ರೇಯಾಂಕ ಮನ್ನಣೆ

Upayuktha

ನಿಟ್ಟೆ: ಎಐಸಿಟಿಇ ಪ್ರಾಯೋಜಿತ ಎಸ್‍ಟಿಟಿಪಿ ಸರಣಿ ಉದ್ಘಾಟನೆ

Upayuktha

Leave a Comment

error: Copying Content is Prohibited !!