ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕೌಡಿಚ್ಚಾರು ಸಮೀಪದ ಸೇತುವೆ ಬಳಿ ಹೋಂಡಾ ಆಕ್ಟೀವಾಗೆ ನಾಯಿ ಅಡ್ಡ ಬಂದ ಪರಿಣಾಮ ಆಕ್ಟೀವಾ ಪಲ್ಟಿಯಾಗಿ ಹಿಂಬದಿ ಸವಾರ ಮೃತಪಟ್ಟ ಘಟನೆ ಆ.23 ರಂದು ಮಧ್ಯಾಹ್ನ ನಡೆದಿದೆ.
ಮಾಡ್ನೂರು ಗ್ರಾಮದ ಸಸ್ಪೇಟಿ ನಿವಾಸಿ ಕೃಷ್ಣಪ್ಪ ನಾಯ್ಕ(53.ವ) ಎಂಬವರೇ ಮೃತಪಟ್ಟ ದುರ್ದೈವಿ. ಕೃಷ್ಣಪ್ಪ ನಾಯ್ಕ ರವರು ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು ,ತನ್ನ ಮಗಳ ಜೊತೆ ಹೋಂಡಾ ಆಕ್ಟೀವಾದಲ್ಲಿ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.
ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸೇವೆ ಸಲ್ಲಿಸಿ ಹಿಂತಿರುಗುವಾಗ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸೇತುವೆ ಬಳಿ ತಲುಪುತ್ತಿರುವಾಗ ನಾಯಿಯೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಆಕ್ಟೀವಾ ಪಲ್ಟಿಯಾಗಿದೆ.
ಪಲ್ಟಿಯಾದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಕೃಷ್ಣಪ್ಪ ನಾಯ್ಕರ ತಲೆಗೆ ತೀವ್ರ ಗಾಯಗಳಾಗಿದ್ದು ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಮೃತಪಟ್ಟರು.
ಸವಾರೆ ಕೃಷ್ಣಪ್ಪ ನಾಯ್ಕರ ಪುತ್ರಿ ಸುನೀತಾರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ತೆರಳಿರುತ್ತಾರೆ.
ಮೃತ ಕೃಷ್ಣಪ್ಪ ನಾಯ್ಕರವರಿಗೆ ಮೂರು ಮಂದಿ ಹೆಣ್ಣು ಮಕ್ಕಳು. ಈ ಪೈಕಿ ಹಿರಿಯ ಮಗಳಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ಅ.28ರಂದು ಮದುವೆಗೆ ದಿನಾಂಕ ನಿಗಧಿಯಾಗಿದ್ದು ಅವರು ಮಗಳ ಮದುವೆ ಕಾರ್ಯಕ್ರಮದ ತಯಾರಿಯ ಸಿದ್ದತೆಯಲ್ಲಿದ್ದರು.
ಮೃತರು ಪತ್ನಿ ಸುಶೀಲ, ಪುತ್ರಿಯರಾದ ಸುನೀತಾ, ಸೌಮ್ಯ ಹಾಗೂ ರಮ್ಯರವರನ್ನು ಅಗಲಿದ್ದಾರೆ.