ನಗರ ಸ್ಥಳೀಯ

ಉಡುಪಿ ನಗರಸಭಾ ವ್ಯಾಪ್ತಿಯ ಭೂ ಹಗರಣ: ಸಂತ್ರಸ್ತರಿಂದ ಫೆ.5ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಉಡುಪಿ: ಉಡುಪಿ ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ 1990 ಮತ್ತು 2000ದ ದಶಕಗಳಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಭೂಪರಿವರ್ತನೆ ಮಾಡಿಸಿ ವಸತಿ ಬಡಾವಣೆಗಳಾಗಿ ಮಾಡಿ ಮಾರಾಟ ಮಾಡಿದ್ದರು.

ಅದನ್ನು ಖರೀದಿಸಿದವರಿಗೆ ಮನೆ ಕಟ್ಟಲು ಕಳೆದ 15 ವರ್ಷಗಳಿಂದ ಒಂದಲ್ಲ ಒಂದು ಕಾನೂನು ತೊಡಕುಗಳು ಉಂಟಾಗುತ್ತಿವೆ. ಇದನ್ನು ಬಗೆಹರಿಸುವಂತೆ ಆಗ್ರಹಿಸಿ ಉಡುಪಿ ನಗರಸಭೆ ಮತ್ತು ಪ್ರಾಧಿಕಾರ ವ್ಯಾಪ್ತಿಯ ಮನೆ ನಿವೇಶನ ಹಗರಣದ ಸಂತ್ರಸ್ತರು ಫೆಬ್ರವರಿ 5ರಂದು ಸಾರ್ವಜನಿಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ 1000ಕ್ಕೂ ಅಧಿಕ ಮಂದಿ ಸಂತ್ರಸ್ತರು ಧರಣಿ ಪ್ರತಿಭಟನೆ ನಡೆಸಲಿದ್ದಾರೆ.

*******
ಸಂತ್ರಸ್ತರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪೂರ್ಣಪಾಠ ಇಂತಿದೆ:

ತಮಗೆ ತಿಳಿದಿರುವಂತೆ 1990 ಮತ್ತು 2000 ದಶಕದಲ್ಲಿ ಉಡುಪಿ ನಗರಸಭೆ ಮತ್ತು ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಖರೀದಿಸಿ, ಭೂಪರಿವರ್ತನೆ ಮಾಡಿ, ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಿದರು. ನಾವೆಲ್ಲರೂ ಆ ಸಮಯದಲ್ಲಿ ಅವರಿಂದ ನೇರವಾಗಿ ಅಥವಾ ಅವರಿಂದ ಖರೀದಿಸಿದವರಿಂದ ಖರೀದಿಸಿದವರು. ನಂತರವೇ ನಮಗೆ ಸಮಸ್ಯೆಯ ಅರಿವಾದದ್ದು.

ಆ ರೀತಿಯಲ್ಲಿ ಭೂಪರಿವರ್ತನೆ ಮಾಡುವಾಗ ವಸತಿ ಬಡಾವಣೆಗಳಲ್ಲಿ ಸಮುದಾಯದ ಉಪಯೋಗಕ್ಕೆ ಎಷ್ಟೆಷ್ಟು ಜಾಗವನ್ನು ಹೇಗೆ ಮೀಸಲಿಡಬೇಕೆಂಬ ನಿಯಮಗಳು ಆ ಮೊದಲೇ ಇದ್ದರೂ ಮತ್ತು ಅವುಗಳನ್ನು ಕರ್ನಾಟಕ ಸರಕಾರ 1984ರಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದರೂ, ಆಗ ಉಡುಪಿಯಲ್ಲಿ ಅವೆಲ್ಲವನ್ನೂ ಅಮಾನತುಮಾಡಿ, ಅವುಗಳನ್ನು ಪಾಲಿಸದೆ ಬಡಾವಣೆಗಳನ್ನು ರೂಪಿಸಿ, ನಿವೇಶನಗಳನ್ನು ಮಾಡಿ ಮಾರಲು ಅನುವುಮಾಡಿಕೊಡಲಾಯಿತು. ಯಾವ ತೊಡಕೂ ಇಲ್ಲದೆ ನಿವೇಶನಗಳು ನಮ್ಮ ಹೆಸರಿಗೆ ನೋಂದಣಿಯಾದ ಕಾರಣ ನಮಗೆ ಸಮಸ್ಯೆ ಇರುವುದು ಅರಿವಿಗೆ ಬರಲಿಲ್ಲ ಮತ್ತು ಬಡಾವಣೆಗಳು ನಿಯಮಬದ್ಧವಾಗಿವೆ ಎಂದು ತಿಳಿದುಕೊಂಡಿದ್ದೆವು.

ನಾವು ಯಾವಾಗ ಮನೆಕಟ್ಟಲು ಯೋಜನೆ ಹಾಕಿದೆವು, ಆಗ ಆ ಎಲ್ಲ ನಿಯಮಗಳು ನಮಗೆ ಅನ್ವಯವಾಗತೊಡಗಿದವು! ಯಾರ ಲಾಭಕ್ಕಾಗಿ ಕಂದಾಯ ಇಲಾಖೆ ಇಂತಹ ಕುಕೃತ್ಯವನ್ನು ಎಸಗಿತು ಎಂಬುದು ನಿಗೂಢ. ಈಗ ‘ನಿಮ್ಮಿಂದ ಅಕ್ರಮವಾಗಿದೆ, ದಂಡಕಟ್ಟಿ ನಿಯಮಾನುಸಾರ ಸಮುದಾಯದ ಉಪಯೋಗಕ್ಕೆ ಜಾಗ ಒಪ್ಪಿಸಿ ಸಕ್ರಮ ಮಾಡಿಕೊಳ್ಳಿ’ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ತಾಕೀತುಮಾಡಿ ನಮ್ಮಿಂದ ಅಕ್ರಮ-ಸಕ್ರಮಕ್ಕೆ ಅರ್ಜಿ ಸ್ವೀಕರಿಸಿದೆ.

ನಾವು ಅಕ್ರಮ ನಡೆಸಿಲ್ಲವಾದರೂ `ಸಮಸ್ಯೆ ಬೇಗ ಮುಗಿಯಲಿ’ ಎಂಬ ದೃಷ್ಟಿಯಿಂದ ನಮ್ಮಲ್ಲಿ ಹಲವರು ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೂ ಕಳೆದ 15-20 ವರ್ಷಗಳಿಂದ ಒಂದಲ್ಲ ಒಂದು ಕಾನೂನಿನ ತೊಡಕಿನಿಂದಾಗಿ ನಮಗೆ ನ್ಯಾಯ ಮರೀಚಿಕೆಯಾಗಿದೆ. ಒಂದು ಅಂದಾಜಿನ ಪ್ರಕಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಾವು ಎರಡು ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಿದ್ದೇವೆ. ಅವರಲ್ಲಿ ಹೆಚ್ಚಿನವರು ಈ ಉದ್ದೇಶಪೂರ್ವಕ ವಿಳಂಬದಿಂದ ಅತೀವ ಸಂಕಷ್ಟಕ್ಕೆ ಈಡಾಗಿದ್ದಾರೆ.

ಸುಪ್ರೀಂ ಕೋರ್ಟ್ನಲ್ಲಿ ದಾವೆಗೆ ಕಾರಣವಾದ ಬೆಂಗಳೂರಿನ ಬಿ.ಡಿ.ಎ. ನಿವೇಶನ ಹಗರಣದೊಂದಿಗೆ ಉಡುಪಿಯ ಸಮಸ್ಯೆಯನ್ನು ತಗುಲಿಹಾಕಿದ್ದೊಂದು ಮಹಾಪ್ರಮಾದ. ಅವೆರಡೂ ತೀರಾ ಭಿನ್ನವಾದ ವಿಚಾರಗಳು. ಇದರಿಂದ ಯಾವ ಅನುಕೂಲವಾಯಿತೆಂದರೆ ಈ ವಂಚನೆಯಲ್ಲಿ ಶಾಮೀಲಾದವರೆಲ್ಲ ‘ನಾವು ಏನೂ ಮಾಡುವಂತಿಲ್ಲ. ವಿಷಯ ಸುಪ್ರೀಂ ಕೋರ್ಟ್ನಲ್ಲಿದೆಯಲ್ಲಾ!’ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ನಿವೇಶನ ನಮ್ಮ ಹೆಸರಿನಲ್ಲಿದೆ ಎಂಬುದನ್ನು ಬಿಟ್ಟರೆ ನಾವು ಹಣ, ಸುಖ, ಶಾಂತಿ, ನೆಮ್ಮದಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗಲಾದರೂ ನಮಗೆ ನ್ಯಾಯ ಒದಗಿಸುವ ಯತ್ನ ಮಾಡಬೇಕು ಮತ್ತು ಆ ನಿಟ್ಟಿನಲ್ಲಿ ಭರವಸೆಯನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲು ದಿನಾಂಕ 5-2-2021, ಶುಕ್ರವಾರ, ಪೂರ್ವಾಹ್ನ 11.30ಕ್ಕೆ ಜಿಲ್ಲಾಧಿಕಾರಿಯವರ ಕಚೇರಿಯ ಮುಂದೆ ಧರಣಿ ಕೂರಲಿದ್ದೇವೆ ಮತ್ತು ಮನವಿಯನ್ನು ಸಲ್ಲಿಸಲಿದ್ದೇವೆ. ನಮಗೆ ನ್ಯಾಯ ಸಿಗುವ ತನಕ ಪ್ರತಿವಾರವೂ ಶಾಂತಿಯುತವಾದ ಧರಣಿ, ಸತ್ಯಾಗ್ರಹಗಳನ್ನು ನಡೆಸುತ್ತೇವೆ.

ಧನ್ಯವಾದಗಳು, ವಂದನೆಗಳು.
ನಿಮ್ಮ ವಿಶ್ವಾಸಿಗಳಾದ

-ಉಡುಪಿ ನಗರಸಭೆ ಮತ್ತು ಪ್ರಾಧಿಕಾರ
ವ್ಯಾಪ್ತಿಯ ಮನೆನಿವೇಶನ ಹಗರಣದ ಸಂತ್ರಸ್ತರು,
ಉಡುಪಿ ಜಿಲ್ಲೆ.

 

Related posts

ಧರ್ಮಸ್ಥಳದಲ್ಲಿ ನವರಾತ್ರಿ ಭಜನೆ

Upayuktha

ಎಂಸಿಎಫ್ ವತಿಯಿಂದ ಗೃಹರಕ್ಷಕ ಸಿಬ್ಬಂದಿಗೆ ಸ್ಯಾನಿಟೈಸರ್ ವಿತರಣೆ

Upayuktha

ಕೆ.ಪಿ.ರಾವ್, ಕುಂಡಂತಾಯ, ಖಂಡಿಗೆ, ಮುರಲಿ ಅವರಿಗೆ ಕಾಂತಾವರ ಕನ್ನಡ ಸಂಘದ ಪ್ರಶಸ್ತಿ ಪ್ರದಾನ

Upayuktha