ಗ್ರಾಮಾಂತರ ಸ್ಥಳೀಯ

ಕದ್ರಂಜೆಯಲ್ಲಿ ಮುಷ್ಟಿ ಕಾಣಿಕೆ ವಿಧಿ: ಶಿವಾಲಯೋತ್ಥಾನಕ್ಕೆ ಮುಷ್ಟಿಯಾದ ಗ್ರಾಮಸ್ಥರು

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆ ತೀರಾ ಪುಟ್ಟ ಹಳ್ಳಿ. ಇಲ್ಲಿ ಗುರುವಾರ ಗ್ರಾಮಕ್ಕೆ ಗ್ರಾಮವೇ ಭಕ್ತಿ ಸಂಭ್ರಮದಿಂದ ಒಟ್ಟು ಸೇರಿದ ಅಪೂರ್ವ ಕ್ಷಣ.

ಐದಾರು ದಶಕಗಳಿಂದ ಯಾರದೋ ಅವಜ್ಞೆಯಿಂದ ಊರ ದೇವ ರುದ್ರ ಸನ್ನಿಧಿ ನೆಲಸಮವಾಗಿತ್ತು.‌ ಅದೇ ದೇವಳದ ಚಾವಡಿಯಲ್ಲೇ ನಡೆಯುತ್ತಿದ್ದ ಶಾಲೆಯಲ್ಲಿ ಕಲಿತ ನೂರಾರು ಮಂದಿಯೂ ಅಸಹಾಯಕರಾದರು. ಅಲ್ಲೇ ಸುತ್ತಲ್ಲಿದ್ದ ಅಗ್ರಹಾರದಲ್ಲಿದ್ದ ಬ್ರಾಹ್ಮಣ ಕುಟುಂಬಗಳೂ ಊರು ಬಿಟ್ಟು ನಗರದೆಡೆಗೆ ಗುಳೇ ಹೊರಟಿದ್ದರು.

ಆದರೆ ಅಂತೂ ಕಾಲ ಕೂಡಿ ಬಂದಿತ್ತು.. ಮತ್ತೆ ಊರ ಜನ ಒಂದಾದರು. ‌ಕದ್ರಂಜೆಯ ಮಹಾಲಿಂಗೇಶ್ವರನಿಗೆ ತಮ್ಮಿಂದಾದ ಅಪರಾಧದ ಬಗ್ಗೆ ಕ್ಷಮೆ ಕೇಳಿದರು.‌ ಕೇರಳದ ನುರಿತ ಜ್ಯೋತಿಷಿ ಮಾಧವನ್ ಪೊದುವಾಳ್ ನೇತೃತ್ವದಲ್ಲಿ ಪ್ರಶ್ನ ಚಿಂತನವಾಯಿತು. ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ ನ ವಿಶ್ವಸ್ತ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರೂ ಸ್ಥಳಕ್ಕೆ ಧಾವಿಸಿ ಶೀಘ್ರ ಶಿವಾಲಯೋತ್ಥಾನವಾಗಲೆಂದು ಪ್ರಾರ್ಥಿಸಿದರು. ಅಷ್ಟ ಮಂಗಲದಲ್ಲಿ ಕಂಡು ಬಂದ ದೋಷಗಳಿಗೆ ಪ್ರಾಯಶ್ಚಿತ್ತವೂ ತಿಂಗಳೊಂದರಲ್ಲೇ ನೆರವೇರಿಸಲಾಯಿತು.‌

ಈ ಪ್ರಕ್ರಿಯೆಯ ಅಂತಿಮ ಹಂತವಾಗಿ ಗುರುವಾರ ಪ್ರಾಯಶ್ಚಿತ್ತ ಹೋಮ ಹವನ ಕಲಶಾಭಿಷೇಕ ವಿಧಿಗಳನ್ನು ವೈದಿಕರಿಂದ ನೆರವೇರಿಸಿದ ಬಳಿಕ ಸರ್ವಾಪರಾಧ ಪ್ರಾಯಶ್ಚಿತ್ತಕ್ಕಾಗಿ ಮತ್ತು ರುದ್ರ ಸನ್ನಿಧಿಯ ಉತ್ಥಾನಕ್ಕಾಗಿ ಪೂರ್ಣ ಶ್ರದ್ಧೆ ಪೂರ್ಣ ತನುಮನಧನ ಸಹಿತ ಒಗ್ಗಟ್ಟಿನಿಂದ ದೇವಳ ಪುನರ್ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗುವ ಸಂಕೇತವಾಗಿ ಮುಷ್ಟಿ ಕಾಣಿಕೆ ವಿಧಿ ನೆರವೇರಿತು.

‌ಮಹಾಲಿಂಗೇಶ್ವರನ ಮುಂಭಾಗದಲ್ಲಿ ಇಟ್ಟ ದೊಡ್ಡ ಪಾತ್ರೆಗೆ ಸಮಸ್ತ ಗ್ರಾಮಸ್ಥರು ಆಬಾಲವೃದ್ಧರಾದಿಯಾಗಿ ಸಾಲು ಸಾಲಾಗಿ ಬಂದು ಮುಷ್ಟಿ ಕಾಣಿಕೆ ಒಪ್ಪಿಸಿ ಇಡೀ ಗ್ರಾಮದ ಹತ್ತು ತಾಯ ಮಕ್ಕಳೊಂದಾಗಿ ಗ್ರಾಮಾಧಿಪತಿಯ ಮಂದಿರ ಕಟ್ಟುತ್ತೇವೆಂದು ಶ್ರದ್ಧೆಯಿಂದ ಪ್ರಾರ್ಥಿಸಿದರು.

ಪುಟ್ಟ ಹಳ್ಳಿಯಲ್ಲಿ ಕಂಡು ಬಂದ ಅಪೂರ್ವ ದೃಶ್ಯ ಈ ನೆಲದ ಸನಾತನ ಧರ್ಮಪ್ರಜ್ಞೆಯ ಜಾಗೃತ ಸ್ಥಿತಿಗೆ ಸಾಕ್ಷಿಯಾಯಿತು.‌ ದಶಕಗಳ ಬಳಿಕ ಈ ಸಂಭ್ರಮವನ್ನು ಊರ ಹಿರಿಯರು ಬಿಚ್ಚು ಮನಸ್ಸಿನಿಂದ ಕೊಂಡಾಡಿ ತಮಗೆ ತಾವೇ ಸಂತೋಷಪಟ್ಟರು. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ವ್ಯವಸ್ಥೆಯಲ್ಲಿ ಸಹಕರಿಸಿದರು.‌ ಒಂದೂವರೆ ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆಯೂ ಮಾಡಲಾಗಿತ್ತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ವಿಸಿ ಪುತ್ತೂರು ಪ್ರಿನ್ಸಿಪಾಲರಿಗೆ ಮಾನವಿಕ ವಿಭಾಗದಿಂದ ಬೀಳ್ಕೊಡುಗೆ

Upayuktha

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Upayuktha

ಪಡಿತರ ಸಮಸ್ಯೆ ಇದ್ದರೆ ಈ ನಂಬರ್‌ಗಳಿಗೆ ದೂರು ನೀಡಿ

Upayuktha