ಗ್ರಾಮಾಂತರ ಸ್ಥಳೀಯ

ಉಜಿರೆ ಬೆನಕ ಆಸ್ಪತ್ರೆಯ ಸಭಾಭವನ ಲೋಕಾರ್ಪಣೆ

ಗುಣಮಟ್ಟದ ಆರೋಗ್ಯಸೇವೆ ನೀಡುವಲ್ಲಿ ಬೆನಕ ಸಭಾಭವನ ಮಹತ್ತರ ಹೆಜ್ಜೆ: ಹರೀಶ್ ಪೂಂಜಾ

ಉಜಿರೆ: ಜನರ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಜಾಗೃತಿ ಹಾಗೂ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು ಅನುಕೂಲಕರವಾಗಿ ರೂಪಿತವಾದ ಬೆನಕ ಸಭಾಭವನ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಮಹತ್ತರ ಹೆಜ್ಜೆ ಎಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಶ್ಲಾಘಿಸಿದರು.

ಅವರು ದೀಪಪ್ರಜ್ವಲನೆ ಮಾಡುವ ಮೂಲಕ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬೆನಕ ಸಭಾಭವನವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಶ್ರೀ.ಕೆ.ಪ್ರತಾಪಸಿಂಹ ನಾಯಕ್ ಅವರು ಮಾತನಾಡುತ್ತಾ ಆತ್ಮ ನಿರ್ಭರ ಭಾರತದ ಆಶಯ ಸಾಕಾರಗೊಳಿಸುವಲ್ಲಿ ವೃತ್ತಿ ಪರತೆ ಹಾಗೂ ಸಮಾಜಮುಖಿ ಚಿಂತನೆ ಅಗತ್ಯ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕ ವೃತ್ತಿಪರತೆಯನ್ನು ಹೆಚ್ಚಿಸುವ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಆಶಯದ ಬೆನಕ ಸಭಾಭವನ ನಾಡಿನ ಅಭಿವೃದ್ಧಿಯಲ್ಲಿ ದೊಡ್ಡ ಕಾಣಿಕೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಸನ್ನಿವೇಶದಲ್ಲಿ ನಾವು ರಾಷ್ಟ್ರೀಯ ಅಭಿಯಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ದಾರಿ ಯಾವುದೆಂದರೆ ನಾವು ಮಾಡುವ ಕೆಲಸದಲ್ಲಿ ಪರಿಣತಿಯನ್ನು ಸಾಧಿಸುವುದು, ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಆಗಿದೆ. ಕಲಿಕೆ ಎಂದರೆ ನಿತ್ಯ ನಿರಂತರ ಪ್ರಕ್ರಿಯೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳು ಆಗುತ್ತಲೇ ಇದೆ. ಅದನ್ನು ತಿಳಿದುಕೊಂಡು, ಅಳವಡಿಸುವ ಪ್ರಕ್ರಿಯೆ ಅತೀ ಅಗತ್ಯವಾದುದು. ಈ ನಿಟ್ಟಿನಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು ಪರಿಣತರಿಂದ ವಿಶೇಷ ಉಪನ್ಯಾಸ, ತರಬೇತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ನಡೆಸಲು ಅನುಕೂಲಕರವಾಗುವ ರೀತಿಯಲ್ಲಿ ಬೆನಕ ಸಭಾಭವನವನ್ನು ಅಣಿಗೊಳಿಸಲಾಗಿದೆ. ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ನಮ್ಮದು ಒಂದು ಪುಟ್ಟ ಪ್ರಯತ್ನ ಇದು ಎಂದು ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಗೋಪಾಲಕೃಷ್ಣ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ನುಡಿದರು.

ವೇದಿಕೆಯಲ್ಲಿ ಹಿರಿಯರಾದ ಶ್ರೀ ಸೀತಾರಾಮ ಭಟ್ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಹಾಗೂ ಜನರಲ್ ಮ್ಯಾನೇಜರ್ ದೇವಸ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮೊದಲಿಗೆ ಡಾ.ಅಂಕಿತಾ ಜಿ.ಭಟ್ ಪ್ರಾರ್ಥಿಸಿ, ಡಾ.ಭಾರತಿ.ಜಿ.ಕೆ ವಂದಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಹಾಗೂ ಪದಾಧಿಕಾರಿಗಳು, ಸೇವಾಭಾರತಿ ಕನ್ಯಾಡಿ ಇದರ ಅಧ್ಯಕ್ಷ ವಿನಾಯಕ್ ರಾವ್, ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ಪದಾಧಿಕಾರಿಗಳು, ಸ್ಥಳೀಯ ವೈದ್ಯರು ಹಾಗೂ ಬೆನಕ ಆಸ್ಪತ್ರೆಯ ಸಿಬ್ಬಂಧಿ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮಂಗಳೂರು: ನೂತನ ನೋಂದಾಯಿತ ಪೌರ ರಕ್ಷಕರಿಗೆ ಜೀವ ರಕ್ಷಣಾ ತರಬೇತಿ ಶಿಬಿರ

Upayuktha

ಋಷಿವಾಕ್ಯ-ವಿಜ್ಞಾನ ಮೇಳೈಸಿದ ಸಂಸ್ಕಾರಯುತ ಶಿಕ್ಷಣದ ಕೇಂದ್ರ- ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠ

Upayuktha

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯಕ್ಕೆ ಬಾಳೆ ಮುಹೂರ್ತ

Upayuktha