ದೇಶ-ವಿದೇಶ ಪ್ರಮುಖ

ದೂರಸಂವೇದಿ ದತ್ತಾಂಶಕ್ಕೆ ನಿರ್ಬಂಧ ರಹಿತ ಪ್ರವೇಶ ಅಗತ್ಯ

ಬೆಂಗಳೂರು ಟೆಕ್ ಶೃಂಗಸಭೆ-2020ರ ಮೊದಲ ದಿನವಾದ ಗುರುವಾರ ನಡೆದ ‘ಉಪಗ್ರಹಗಳು ಮತ್ತು ಸಮಾಜ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಡಾ.ಪ್ರಕಾಶ್ ಚೌಹಾಣ್, ಲೂಕ್ ಸೈಂಟ್ ಪಿರೆ, ಡಾ.ಸ್ಟೀವನ್ ಜಾಲಿ, ಮಿಲಿಂದ್ ಪಿಂಪ್ರಿಕರ್, ಹಾಗೂ ಸೂರಜ್ ರಾವಲ್.

ಬೆಂಗಳೂರು:

ಉಪಗ್ರಹ ಆಧಾರಿತ ಸೇವೆಗಳು ನಮ್ಮ ಜೀವನದ ಭಾಗವಾಗಲಿವೆ. ಈ ನಿಟ್ಟಿನಲ್ಲಿ ದೂರ ಸಂವೇದಿ ದತ್ತಾಂಶಕ್ಕೆ ನಿರ್ಬಂಧ ರಹಿತ ಪ್ರವೇಶದ ಅಗತ್ಯವಿದೆ ಎಂದು ಡೆಹ್ರಾಡೂನ್‌ನ ಭಾರತೀಯ ದೂರ ಸಂವೇದಿ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಕಾಶ್ ಚೌಹಾಣ್ ಪ್ರತಿಪಾದಿಸಿದರು.

ಅವರು ಬೆಂಗಳೂರು ಟೆಕ್ ಶೃಂಗಸಭೆ-2020ರ ಮೊದಲ ದಿನವಾದ ಗುರುವಾರ ನಡೆದ ‘ಉಪಗ್ರಹಗಳು ಮತ್ತು ಸಮಾಜ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವದಾದ್ಯಂತ, ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳ ನೀತಿಗಳಲ್ಲಿ ಬದಲಾವಣೆ ಬರಬೇಕಿದೆ. ಉಪಗ್ರಹ ಆಧಾರಿತ ಸೇವೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಬದಲಾವಣೆಗೆ ಸರ್ಕಾರಗಳು ಒಗ್ಗಿಕೊಳ್ಳಬೇಕು. ದೇಶದ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ನಿರ್ಬಂಧಗಳು ಅಗತ್ಯ ಇವೆ. ಇದರ ಹೊರತಾದ ನಿರ್ಬಂಧಗಳನ್ನು ರದ್ದು ಮಾಡಿ ಬಾಹ್ಯಾಕಾಶ ಆಧಾರಿತ ದತ್ತಾಂಶ, ಬಾಹ್ಯಾಕಾಶ ಆಧಾರಿತ ಸೇವೆಗಳಿಗೆ ನಿರ್ಬಂಧ ರಹಿತ ಪ್ರವೇಶ ದೊರಕುವಂತೆ ಮಾಡಬೇಕಾಗಿದೆ. ಇದು ಭವಿಷ್ಯದ ತಂತ್ರಜ್ಞಾನವಾಗಿದೆ ಎಂದು ಅವರು ಹೇಳಿದರು.

ಬಾಹ್ಯಾಕಾಶ ಮಾಲಿನ್ಯದ ಸವಾಲು:
ಬಾಹ್ಯಾಕಾಶ ಮಾಲಿನ್ಯವು ಜಗತ್ತಿನೆದುರು ನಿಂತಿರುವ ಸವಾಲಾಗಿದೆ. ಹಳೆಯ ಉಪಗ್ರಹಗಳ ಅವಶೇಷಗಳು ಹೊಸ ಉಪಗ್ರಹಗಳ ಮೇಲೆ ಅಪ್ಪಳಿಸುವಿಕೆಯ ಅಪಾಯಗಳನ್ನು ನಾವು ನಿರ್ವಹಿಸಬೇಕಿದೆ. ನಾವು ಹಳೆಯ ಉಪಗ್ರಹಗಳನ್ನು ಮರಳಿ ತರುವ ಕಾರ್ಯದತ್ತ ಕಾರ್ಯೋನ್ಮುಖವಾಗಬೇಕಿದೆ. ಭಾರತ ಕೂಡಾ ಈ ನಿಟ್ಟಿನಲ್ಲಿ ಕೈಜೋಡಿಸುತ್ತದೆ ಎಂದು ಡಾ.ಪ್ರಕಾಶ್ ಚೌಹಾಣ್ ನುಡಿದರು.

ಭಾರತ ಸರ್ಕಾರದಿಂದ ಸಮರ್ಥ ಬಳಕೆ:
ಭಾರತ ಸರ್ಕಾರ ಉಪಗ್ರಹ ದತ್ತಾಂಶವನ್ನು ಸಮರ್ಥವಾಗಿ ಬಳಸುತ್ತಿದೆ ಎಂದು ಒತ್ತಿ ಹೇಳಿದ ಡಾ.ಪ್ರಕಾಶ್ ಚೌಹಾಣ್, 2015ರ ಘಟನೆಯೊಂದನ್ನು ಉಲ್ಲೇಖಿಸಿದರು. 2015ರಲ್ಲಿ ಪ್ರಧಾನ ಮಂತ್ರಿಯವರು ಸ್ವತಃ 65ಕ್ಕೂ ಹೆಚ್ಚು ಕೇಂದ್ರ ಸಚಿವಾಲಯಗಳ ಜತೆಗೆ ಸಭೆ ನಡೆಸಿದ್ದರು. ಭೂ ವೀಕ್ಷಣೆ, ಉಪಗ್ರಹ ಸಂವಹನ, ಉಪಗ್ರಹ ನ್ಯಾವಿಗೇಶನ್‌ನಂತಹ ಬಾಹ್ಯಾಕಾಶ ತಂತ್ರಜ್ಞಾನವನ್ನು ಆಡಳಿತ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಹೇಗೆ ಬಳಸಬಹುದು ಎಂಬುದೇ ಆ ಸಭೆಯ ಕೇಂದ್ರ ವಸ್ತುವಾಗಿತ್ತು ಎಂದು ಹೇಳಿದರು. ಭಾರತದಲ್ಲಿ ಭೂ ವೀಕ್ಷಣಾ ಉಪಗ್ರಹ ದತ್ತಾಂಶ, ಉಪಗ್ರಹ ಸಂವಹನ, ಉಪಗ್ರಹ ನ್ಯಾವಿಗೇಶನ್ ದತ್ತಾಂಶಗಳನ್ನು ಅನ್ನು ಇ-ಆಡಳಿತ, ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮಗಳಲ್ಲಿ ಬಳಸಲಾಗುತ್ತಿದೆ ಎಂದು ವಿವರಿಸಿದರು.

ಭಾರತದ ಸುಮಾರು ಶೇ.55ರಷ್ಟು ಜನಸಂಖ್ಯೆ ಅವಲಂಬಿತವಾಗಿರುವ ಕೃಷಿ ಕ್ಷೇತ್ರದಲ್ಲಿ ಬೆಳೆ ವಿಮೆಗಾಗಿ ವಿಮಾ ಕಂಪನಿಗಳು ಹೆಚ್ಚಿನ ರೆಸೊಲ್ಯೂಶನ್‌ನೊಂದಿಗಿನ ಭೂ ವೀಕ್ಷಣೆ ದತ್ತಾಂಶವನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿವೆ. ನೈಸರ್ಗಿಕ ವಿಪತ್ತಿನ ಅಪಾಯವನ್ನು ತಗ್ಗಿಸಲು, ಆಹಾರ ಸುರಕ್ಷತೆಗಾಗಿ ಕೃಷಿ ಅಭಿವೃದ್ಧಿ, ಜಲಾನಯನ ಅಭಿವೃದ್ಧಿ, ಹಸಿರು ಇಂಧನವಾದ ಸೌರ ವಿದ್ಯುತ್ ಕ್ಷೇತ್ರದಲ್ಲಿ ಸೌರ ವಿಕಿರಣ, ಮೋಡ ಇತ್ಯಾದಿಯ ಲೆಕ್ಕಾಚಾರಕ್ಕಾಗಿ ಉಪಗ್ರಹ ತಂತ್ರಜ್ಞಾನಗಳ ಬಳಕೆಯಾಗುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ನೀಲಿ ಆರ್ಥಿಕತೆಯ ಅಭಿವೃದ್ಧಿಯಲ್ಲೂ ಉಪಗ್ರಹ ಆಧಾರಿತ ಅವಲೋಕನಗಳು ಅತ್ಯಗತ್ಯವಾಗಿದೆ.

ದೊಡ್ಡ ಕಂಪನಿಗಳು, ಇ-ಕಾಮರ್ಸ್ ಕಂಪನಿಗಳಿಗೆ ತಮ್ಮ ಸರಕುಗಳ ರವಾನೆ., ಡೆಲಿವರಿಯನ್ನು ಟ್ರ್ಯಾಕ್ ಮಾಡಲು ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಕೂಡಾ ಅತ್ಯಂತ ಮುಖ್ಯವಾಗಿದೆ. ಕೋವಿಡ್ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಕೂಡಾ ಜಿಐಎಸ್ ನೆರವಾಗಿದೆ. ಪೊಲೀಸ್ ಇಲಾಖೆಗೆ ಕ್ರೈಮ್ ಮ್ಯಾಪಿಂಗ್‌ಗೆ ಜಿಐಎಸ್ ಆಧಾರಿತ ಪದ್ಧತಿ ಅನುಕೂಲಕರವಾಗಿದೆ. ಭವಿಷ್ಯದಲ್ಲಿ ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಸಹಕಾರ ಅಗತ್ಯ:
ಚರ್ಚೆಯಲ್ಲಿ ಭಾಗವಹಿಸಿದ ವಿಶ್ವಸಂಸ್ಥೆಯ ಬಾಹ್ಯಾಕಾಶ ವ್ಯವಹಾರಗಳ ಕಚೇರಿಯ ಸ್ಪೇಸ್ ಅಪ್ಲಿಕೇಶನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಲೂಕ್ ಸೈಂಟ್ ಪಿರೆ ಅವರು ಅಂತಾರಾಷ್ಟ್ರೀಯ ಸಹಕಾರದ ಅಗತ್ಯತೆಯನ್ನು ಒತ್ತಿ ಹೇಳಿದರು.
ಬಾಹ್ಯಾಕಾಶ ಮಾಲಿನ್ಯ ತಡೆಯಲು, ಅವಶೇಷಗಳನ್ನು ಮಿತಿಗೊಳಿಸಲು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಿದೆ. ವಿಶ್ವದ ಎಲ್ಲಾ ದೇಶಗಳು ಈ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಬಾಹ್ಯಾಕಾಶ ನಿಲ್ದಾಣದ ಬಳಕೆಯನ್ನು ಪರಿಣಾಮಕಾರಿಯಾಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಅಗತ್ಯ ಎಂದು ಕರೆ ನೀಡಿದರು.

ಉಪಗ್ರಹ ತಂತ್ರಜ್ಞಾನದಲ್ಲಿ ಸರ್ಕಾರಗಳು ಹಾಗೂ ಖಾಸಗಿ ಉದ್ಯಮಗಳ ಮಧ್ಯೆ ಸಹಕಾರ ಹಾಗೂ ಹೊಂದಾಣಿಕೆಯಿಲ್ಲ. ಎರಡೂ ಜತೆಗೂಡಿದಾಗಲಷ್ಟೇ ಈ ಕ್ಷೇತ್ರ ಬೆಳವಣಿಗೆ ಸಾಧಿಸಲಿದೆ. ಇಡೀ ಕ್ಷೇತ್ರದಲ್ಲಿ ಪರಸ್ಪರ ಸಹಭಾಗಿತ್ವ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಲೂಕ್ ಸೈಂಟ್ ಪಿರೆ ಹೇಳಿದರು.

ವಿಪತ್ತು ನಿರ್ವಹಣೆಯಲ್ಲಿ ಡೇಟಾ ಸಂಗ್ರಹಣೆ ನಿಧಾನವಾಗಿ ಆಗುತ್ತಿದೆ. ಆದರೆ ವೇಗಗೊಳ್ಳಬೇಕಿದೆ. ಆಗ ಈ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಅಮೆರಿಕದ ಏರೋಸ್ಪೇಸ್ ಕಂಪನಿಯಾದ ಲಾಖೀಡ್ ಮಾರ್ಟಿನ್‌ನ ಮುಖ್ಯ ಇಂಜಿನಿಯರ್ ಡಾ.ಸ್ಟೀವನ್ ಜಾಲಿ ಅವರು ಈ ಚರ್ಚೆಯನ್ನು ನಿರ್ವಹಿಸಿದರು. ಕೇನಿಯಸ್‌ನ ಅಧ್ಯಕ್ಷರಾದ ಮಿಲಿಂದ್ ಪಿಂಪ್ರಿಕರ್ ಹಾಗೂ ಲಾಖೀಡ್ ಮಾರ್ಟಿನ್‌ನ ಟೆಕ್ನಿಕಲ್ ಫೆಲೋ ಸೂರಜ್ ರಾವಲ್ ಉಪಸ್ಥಿತರಿದ್ದರು.

 

 

 

Related posts

ದೇಶಾದ್ಯಂತ 21 ಸಾವಿರ ಪರಿಹಾರ ಶಿಬಿರಗಳ ಸ್ಥಾಪನೆ; 23 ಲಕ್ಷಕ್ಕೂ ಅಧಿಕ ಬಡವರಿಗೆ ಆಹಾರ ವಿತರಣೆ ವ್ಯವಸ್ಥೆ

Upayuktha

ಸೂರ್ಯಗ್ರಹಣ: ನಭೋಮಂಡಲದ ಕೌತುಕ ವೀಕ್ಷಿಸಿ ಸಂಭ್ರಮಿಸಿದ ಜನ

Upayuktha

ಕಳವಳ ಮೂಡಿಸುತ್ತಿರುವ ಕರೋನಾ ವೈರಸ್; ಚೀನಾದಿಂದ ಬಂತು ಹೊಸ ರೋಗ…

Upayuktha

Leave a Comment