ಓದುಗರ ವೇದಿಕೆ ಸಮುದಾಯ ಸುದ್ದಿ

ಅಭಿಮತ: ಚಿತ್ಪಾವನ ಸಂಘಟನೆ ಬಗ್ಗೆ ಒಂದಿಷ್ಟು…

ಮಾನವನ ಅಭಿವೃದ್ಧಿಗೆ ಸಂಘಟನೆಗಳು ಬೇಕೇ ಬೇಕು. ಮಾನವ ಸಂಘಜೀವಿಯಾದ್ದರಿಂದ ಸಂಘಟನೆಗಳಿಲ್ಲದಿದ್ದರೆ ಆತ ಒಂಟಿಯಾಗುತ್ತಾನೆ ಹಾಗೂ ಬಲವನ್ನು ಕಳಕೊಳ್ಳುತ್ತಾನೆ. ಇವತ್ತು ಏನಾಗಿದೆ ಎಂದರೆ ಸಂಘಟನೆ ರಹಿತವಾದ ಯಾವೊಂದು ವಿಚಾರಕ್ಕೂ ಧ್ವನಿಯೇ ಇಲ್ಲದಂತಾಗಿದೆ. ಕೊನೆ ಪಕ್ಷ ಧ್ವನಿಯನ್ನು ಏರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾದರೂ ಅಥವಾ ತೋರಿಸಿಕೊಳ್ಳಲಿಕ್ಕಾದರೂ ಈ ಸಂಘಟನೆಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಿಂದ ನೋಡಿದಾಗ ಚಿತ್ಪಾವನರ ಸಂಘಟನೆಯೂ ಪ್ರಸ್ತುತವೆ.

ಯಾವುದೇ ಸಂಘಟನೆಗಳು ಜೀವಂತವಾಗಿರಬೇಕಾದರೆ ಅಲ್ಲಿ ಯುವ ಮನಸ್ಸುಗಳು ಇರಬೇಕಾಗುತ್ತದೆ. ದಿನದಿಂದ ದಿನಕ್ಕೆ ಪುಟಿದೇಳುವ ಉತ್ಸಾಹ, ಯಾವುದೇ ಕೆಲಸದಲ್ಲಿ ತಾದಾತ್ಮ್ಯತೆ, ಕುತೂಹಲ, ಹೊಸತರ ಬಗ್ಗೆ ಆಕರ್ಷಣೆ ಜತೆಗೆ ಕಾಯಬಲ ಮುಂತಾದ ಗುಣಗಳಿರುವ ಯುವ ಜನತೆ ಸಂಘಟನೆಗೆ ಜೀವಾಳ. ಇವತ್ತು ಎಪ್ಪತ್ತರ ಹರೆಯದವರೇ ಸಂಘಟನೆಗೆಂದು ಹೊರಡಬೇಕಾದರೆ ಹದಿಹರೆಯದವರ ಕೊರತೆ ಕಾಣುವುದಿಲ್ಲವೇ. ನಮ್ಮಲ್ಲಿ ಅಂದರೆ ಚಿತ್ಪಾವನ ಸಮಾಜದಲ್ಲಿ ಯುವಕರ ಸಂಖ್ಯೆ ವಿರಳವಾಗುತ್ತಿರುವುದು ಶುಭ ಸೂಚಕವಲ್ಲ. ಕಾರಣಗಳು ಹಲವಿರಬಹುದು. ಆದರೆ ಪರಿಣಾಮ ಮಾತ್ರ ಒಳ್ಳೆಯದಲ್ಲ. ನಾವು ಯುವಕರಾಗಿರುವಾಗ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಸೇರುವ ಮಂದಿಯಲ್ಲಿ ಅರ್ಧಕ್ಕೂ ಹೆಚ್ಚು ಯುವಕರಿರುತ್ತಿದ್ದರು ಮಾತ್ರವಲ್ಲ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ವಿಬಿನ್ನ.

ಮೊದಲನೆಯದಾಗಿ ಯುವಜನರೇ ಕಡಿಮೆ. ಎರಡನೆಯದಾಗಿ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೂ ಅವರು ಏಕಾಂಗಿಯಾಗಿ ಮೊಬೈಲ್ ಪ್ರಪಂಚದೊಳಗಿರಬಯಸಿ ಕಾರ್ಯಕ್ರಮಕ್ಕೂ ತಮಗೂ ಸಂಬಂಧವೇ ಇಲ್ಲದಂತಿರುವವರೇ ಜಾಸ್ತಿ. ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ಕೊಟ್ಟು, ಆ ವಿದ್ಯೆಗನುಗುಣವಾಗಿ ಯಾವುದೋ ಒಂದು ಉದ್ಯೋಗಕ್ಕೆ ಕಳುಹಿಸಿಕೊಟ್ಟು ಮನೆಯಲ್ಲಿ ಯೌವನವನ್ನು ಕಳಕೊಂಡ ಹೆತ್ತವರಿಂದ ಸಂಘಟನೆಗಳು ತಲೆ ಎತ್ತಿ ನಿಲ್ಲಬೇಕಾದರೆ ಪವಾಡಗಳೇ ನಡೆಯಬೇಕಾದೀತು. ಮಾತ್ರವಲ್ಲ ಅಂಥ ಸಂಘಟನೆಗಳು ಸ್ಥಿರವಾಗಿ ನಿಲ್ಲುವುದೂ ಪವಾಡಗಳಿಂದಲೇ. ಹಾಗಾದರೆ ಸಂಘಟನೆಗಳು ಸಾಧ್ಯವಿಲ್ಲವೇ..? ಬರಿದೆ ಹತಾಶೆಯೇ..? ಹೇಳಲಾಗದು.

ಉದಾಹರಣೆಗೆ ಈ ವರ್ಷ ಕೊರೋನ ಭೀತಿಯಿಂದ ಊರಲ್ಲಿ ನಡೆದ ಜಾತ್ರೆ ಸಮಾರಂಭಗಳಿಗೆ ಯುವಕರ ಕಲರವ ಇದ್ದದ್ದು ಎಲ್ಲರ ಅರಿವಿಗೆ ಬಂದಿದೆ. ಎಷ್ಟೋ ವರುಷಗಳಿಂದ ಬಿಕೋ ಎನ್ನುತ್ತಿದ್ದ ಇಂಥ ಸಮಾರಂಭಗಳು ಯುವ ಜನತೆಯ ಉಪಸ್ಥಿತಿಯಲ್ಲಿ ಈ ವರ್ಷ ಕಳೆ ತುಂಬಿರುವುದು ಮಾತ್ರ ಸತ್ಯ. ಆದ್ದರಿಂದ ಯುವಕರಿಗೂ ಸಂಘಟನೆಗಳಿಗೂ ಅವಿನಾಭಾವ ಸಂಬಂಧವಿರುವುದಂತು ನಿಜವೇ. ಕಾಲ ಬದಲಾದಂತೆ ಪರಿಸ್ಥಿತಿಗಳೂ ಬದಲಾಗುವುದು ಸಹಜ.

ಈಗ ನಮಗಿರುವ ಒಂದು ದಾರಿ ಎಂದರೆ, ಯುವಕರ ಬದಲಿಗೆ ನಮ್ಮ ಮನಸನ್ನೇ ಯುವ ಮನಸನ್ನಾಗಿ ಪರಿವರ್ತಿಸಿಕೊಳ್ಳುವುದು. ಇದು ಸಾಧ್ಯವೇ..? ಖಂಡಿತ ಸಾಧ್ಯ. ಕೆಲವು ಪ್ರಾಯ ಸಹಜವಾದ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು, ನಮ್ಮ ಯೌವನದ ಅನುಭವಗಳನ್ನು ಉಪಯೋಗಿಸಿಕೊಂಡು, ಜತೆಗೆ ನಮ್ಮೊಂದಿಗಿರುವ ಯುವಕರನ್ನು ಪ್ರೋತ್ಸಾಹಿಸಿಕೊಂಡು, ಹಳೆಬೇರು ಹೊಸಚಿಗುರು ಎನ್ನುವಂತೆ ಹೊಂದಾಣಿಕೆಯಿಂದ ವರ್ತಿಸಿದರೆ ಚಿತ್ಪಾವನ ಸಮಾಜದಂಥ ಕಡಿಮೆ ಸಂಖ್ಯೆಯ ಸಂಘಟನೆಗಳೂ ಸಾಧ್ಯವಾದಷ್ಟು ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಬಹುದು.

ಅದಲ್ಲದೆ ಬರಿದೆ ಒಂದು ದಿನ ಸಂಘಟನೆಯ ನೆಪದಲ್ಲಿ ಸಭೆ ಸೇರಿ ಏನೋ ಒಂದು ನಿರ್ಧಾರ ಮಾಡಿ, ಲಘುಪಹಾರ ಮುಗಿಸಿ ಮನೆಗೆ ಹೋದರೆ, ಮರುದಿನದಿಂದಲೇ ಅದು ಶಕ್ತಿಯನ್ನು ಕಳಕೊಳ್ಳತೊಡಗಿದರೆ ಅದಕ್ಕೆ ಮರುಜೀವ ಕೊಡಲು ಬಹಳ ಕಷ್ಟ. ಆವಾಗಲೇ ನಮಗೆ ಯುವ ಮನಸ್ಸುಗಳ ಅವಶ್ಯಕತೆ ಇರುವುದು… ಸಂಘಟನಾ ಶಕ್ತಿ ಬೆಳೆಸುವಂತೆ ಭಗವಂತ ನಮಗೆಲ್ಲರಿಗೂ ಶಕ್ತಿ ಕೊಡಲಿ..
ಜೈ ಚಿತ್ಪಾವನ ಸಮಾಜ…
***********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ಇದೀಗ ಸಿಗ್ನಲ್ Appನಲ್ಲಿ… ಗ್ರೂಪ್‌ಗೆ ಸೇರಲು ಮೊದಲು ಸಿಗ್ನಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಲಿಂಕ್ ಕ್ಲಿಕ್ ಮಾಡಿ.

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹೇಗಿದ್ದ ಕಾಲ ಹೇಗಾಯಿತು! ಕೃತಕತೆಯಿಂದ ಸಹಜತೆಗೆ ಹೊರಳಿಸಲು ಮಹಾಮಾರಿ ಬರಬೇಕಾಯಿತೆ…?

Upayuktha

ಅಭಿಮತ: ಕಾರ್ಪೊರೇಟ್ ಕೃಷಿಗಿಂತ Co-operative ಕೃಷಿ ಉತ್ತಮ

Upayuktha

ಚಾತುರ್ಮಾಸ್ಯ: ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ

Upayuktha