ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಶಿಕ್ಷಕರ ಪಾತ್ರ: ಜಾಗೃತಿ, ನಿಲುವು, ಸವಾಲು ಮತ್ತು ಪ್ರತಿಕ್ರಿಯೆ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಶಿಕ್ಷಣ ಮಂಡಳಿ, ನೀತಿ ಆಯೋಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಉದಯ ಕುಮಾರ್ ಎಂ. ಎ. ಅವರು, ಸಾಮಾಜಿಕ – ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ಅವಕಾಶ ನೀಡುವ ಮೂಲಕ ಸಮಾಜದಲ್ಲಿ ಸಾಮ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಿಕ್ಷಣ ಎಂಬ ವಿಷಯದ ಕುರಿತು ಮಾತನಾಡಿದರು.
ಸೇರ್ಪಡೆ ಎನ್ನುವುದು ಶಿಕ್ಷಣದ ಅಡೆತಡೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನಿರ್ಮೂಲನೆ ಮಾಡುವುದೇ ಆಗಿದೆ. ಸಮಾಜದ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಸಾಧನೆ ಮತ್ತು ಅವರ ವೈವಿಧ್ಯತೆಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಈ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಮೂಲಕ ಸಾಧಿಸಬೇಕಿದೆ ಎಂದು ಪ್ರತಿಪಾದಿಸಿದರು.
ಸಮುದಾಯ ಎಂದರೆ ನಿರಾಶ್ರಿತರ ಮಕ್ಕಳು, ಸ್ಥಳಾಂತರಗೊಂಡ ಸಮುದಾಯಗಳು, ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು ಮತ್ತು ಇನ್ನೂ ಅನೇಕ ವರ್ಗಗಳು ಸೇರಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ಎಲ್ಲಾ ಸಮುದಾಯಗಳನ್ನು ಶಿಕ್ಷಣದ ವ್ಯಾಪ್ತಿಗೆ ತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಸಾಂಪ್ರದಾಯಿಕ ವರ್ಗೀಕರಣದಿಂದ ಮುಂದೆ ಸಾಗಿ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಸಮುದಾಯಗಳ ನಡುವೆ ಪರಸ್ಪರ ಸಂಬಂಧ ಕಲ್ಪಿಸುವಲ್ಲಿ ಬಹು ಆಯಾಮಗಳನ್ನು ಗುರುತಿಸಿದೆ ಎಂದರು.
ಸಮಾಜದಲ್ಲಿರುವ ತೃತೀಯ ಲಿಂಗಿಗಳು ಸೇರಿದಂತೆ ಎಲ್ಲಾ ಸಮುದಾಯಕ್ಕೂ ಸರಿ ಸಮಾನವಾದ ಶಿಕ್ಷಣ ಹಾಗೂ ಆರ್ಥಿಕ ಸಹಾಯ (ಸ್ಕಾಲರ್ ಶಿಪ್ ಸೌಲಭ್ಯ), ಉನ್ನತ ಶಿಕ್ಷಣ ಪ್ರವೇಶಾತಿ ವೇಳೆ ಶುಲ್ಕ ವಿನಾಯಿತಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾದ ಶಾಲಾ-ಕಾಲೇಜು ಸ್ಥಾಪನೆಯಂತಹ ಕಾರ್ಯಕ್ರಮಗಳನ್ನು ಈ ನೀತಿಯ ಅಡಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಶಿಕ್ಷಣ ಹಿಂದುಳಿದ ವರ್ಗಗಳಿಗೆ ಹೊರೆಯಾಗದೇ ಅಗ್ಗದಲ್ಲಿ ದೊರೆಯುವಂತಾಗಲಿ ಎಂದು ಸಲಹೆ ನೀಡಿದರು.
ಇದೇ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ. ಎ. ಹರೀಶ್ ಸೇರಿದಂತೆ ನಾನಾ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಹಾಜರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ