ಪ್ರಚಲಿತ ವಿದ್ಯಮಾನಗಳು ಲೇಖನಗಳು

ಅವಲೋಕನ: ಭಾರತವನ್ನು ನೆನಪಿಸುತ್ತಿರುವ ಅಮೆರಿಕದ ಚುನಾವಣಾ ಪ್ರಚಾರ

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಹ ಭಾಷೆ ಮತ್ತು ವಿಷಯಗಳ ಆಯ್ಕೆಯಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿಯುತ್ತಿರುವುದು ನಿಜಕ್ಕೂ ಕಳವಳಕಾರಿ. ಹಿಂದೆಯೂ ಕೆಲವೊಮ್ಮೆ ಹೀಗೆ ನಡೆದಿರಬಹುದು. ಆದರೆ ವಿಶ್ವದ ದೊಡ್ಡಣ್ಣ, ನಾಗರಿಕ ಪ್ರಜ್ಞೆಯ ಮತದಾರರನ್ನು ಹೊಂದಿರುವ ಅಮೆರಿಕದಲ್ಲಿ 2020 ರ ಈ ಸಮಯದಲ್ಲೂ ಆರೋಪ ಪ್ರತ್ಯಾರೋಪಗಳು ಭಾರತದ ಚುನಾವಣೆಯನ್ನು ನೆನಪಿಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ.

ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ನಡುವಿನ ಪ್ರಚಾರದಲ್ಲಿ ವೈಯಕ್ತಿಕ ಮೂದಲಿಕೆ, ದೇಶ ದ್ರೋಹದ ಆಪಾದನೆಗಳು ಮುಖ್ಯವಾಗುತ್ತಿರುವುದು ವಿಷಾದನೀಯ. ಇಂದಿನ ಕೊರೋನಾ ಹಾವಳಿಯ ಸಂದರ್ಭದಲ್ಲಿ, ಜಾಗತಿಕವಾಗಿ ಚೀನಾ ಒಡ್ಡುತ್ತಿರುವ ಸವಾಲುಗಳ ನಡುವೆ ಅಮೆರಿಕ ಚರ್ಚಿಸಬೇಕಾದ ವಿಷಯಗಳೇ ಬೇರೆ.

ಬಹುಸಂಖ್ಯಾತ ಬಿಳಿಯರು, ಅಲ್ಪಸಂಖ್ಯಾತ ಕರಿಯರು, ಚೀನಾ, ಭಾರತ, ಯುರೋಪಿಯನ್, ಆಫ್ರಿಕನ್ ಮುಂತಾದ ದೇಶಗಳ ಮೂಲದವರು ಹೀಗೆ ಅಲ್ಲಿಯೂ ವಿಭಿನ್ನ ಹಿನ್ನೆಲೆಯ ಮತದಾರರಿದ್ದಾರೆ.

ಸ್ವಾತಂತ್ರ್ಯ ಸಮಾನತೆಯ ಗುತ್ತಿಗೆ ಪಡೆದಂತೆ ಮಾತನಾಡುವ ಅಮೆರಿಕನ್ನರು ಈಗಲೂ ವರ್ಣಬೇಧ ನೀತಿಯ ದೌರ್ಜನ್ಯವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಹಣವಿದೆ, ತಂತ್ರಜ್ಞಾನವಿದೆ, ವಿದ್ಯೆ ಇದೆ, ಬುದ್ದಿ ಇದೆ, ಅನುಭವವಿದೆ. ಆದರೂ ಈ ಮೂರನೇ ದರ್ಜೆಯ ವಾಗ್ದಾಳಿಗಳು ಅಸಹ್ಯ ಮೂಡಿಸುತ್ತಿದೆ.

ಒಂದು ಕಾಲದಲ್ಲಿ ಅಮೆರಿಕದ ಪ್ರಜಾಪ್ರಭುತ್ವ, ಚುನಾವಣೆ, ಉತ್ತಮ ಸಾಮರ್ಥ್ಯದ ಅಭ್ಯರ್ಥಿಗಳು, ಪ್ರಬುದ್ಧ ಮತದಾರರು ಎಲ್ಲವನ್ನೂ ವಿಶ್ವದ ಅನೇಕ ದೇಶಗಳು ತಿರುಗಿ ನೋಡುವಂತೆ ಇರುತ್ತಿತ್ತು. ಕೆಲವೇ ವರ್ಷಗಳ ಹಿಂದೆ ಬರಾಕ್ ಒಬಾಮ ಅವರ ವಿರುದ್ಧ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಸೋತರೂ ಅವರನ್ನು ಒಬಾಮಾ ವಿದೇಶಾಂಗ ಕಾರ್ಯದರ್ಶಿ ( ಸಚಿವೆ ) ಯಾಗಿ ಆಯ್ಕೆ ಮಾಡಿದರು. ದೇಶದ ಹಿತಾಸಕ್ತಿಯ ವಿಷಯ ಬಂದಾಗ ವ್ಯಕ್ತಿಗಳು ಪಕ್ಷಗಳು ಅಲ್ಲಿ ಗೌಣವಾಗುತ್ತಿದ್ದವು.

ಈಗ ನೋಡಿದರೆ ಟ್ವಿಟರ್ ಮಾತಿನ ಮಲ್ಲ ಡೊನಾಲ್ಡ್ ಟ್ರಂಪ್ ಭಾರತೀಯ ರಾಜಕಾರಣಿಗಳು ನಾಚುವಂತೆ ವಿರೋಧಿ ಅಭ್ಯರ್ಥಿಯನ್ನು ದೇಶ ದ್ರೋಹಿ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಅತ್ಯಂತ ಕೆಟ್ಟ ನಡೆ ಮತ್ತು ಹಾಸ್ಯಾಸ್ಪದ. ಅಮೆರಿಕದ ಸಾಮರ್ಥ್ಯಕ್ಕೆ ತೀರಾ ಅವಮಾನಕರ.

ದ್ವಿಪಕ್ಷೀಯ ಆಡಳಿತ ವ್ಯವಸ್ಥೆಯ ಅಮೆರಿಕದಲ್ಲಿ ದೇಶದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ವ್ಯಕ್ತಿ ದೇಶ ದ್ರೋಹದ ಕೆಲಸ ಮಾಡಲು ಸಾಧ್ಯವೇ, ಆ ರೀತಿಯ ಆರೋಪಗಳೇ ನಿಜವಾಗಿಯೂ ದೇಶ ದ್ರೋಹ.

“ಮೊದಲು ಅಮೆರಿಕ ” ಎಂಬ ಘೋಷಣೆಯ ಮೂಲಕ ಅಧಿಕಾರಕ್ಕೇರಿದ ಟ್ರಂಪ್ ಅಧಿಕಾರದ ಕೊನೆಗೆ ದೊಡ್ಡಣ್ಣ ಸ್ಥಾನವೇ ಅಲುಗಾಡುವಂತೆ ಮಾಡಿದ್ದಾರೆ. ವಿಶ್ವಸಂಸ್ಥೆ, ಆಫ್ರಿಕಾ ದೇಶಗಳಲ್ಲಿ ಅಮೆರಿಕ ಹಿಡಿತ ಸಡಿಲಗೊಳ್ಳಲು ಮತ್ತು ಚೀನಾದ ಪ್ರಾಬಲ್ಯ ಹೆಚ್ಚಾಗಲು ಈ ಟ್ರಂಪ್ ಅವರ ಆಡಳಿತಾತ್ಮಕ ಸಣ್ಣತನವೇ ಕಾರಣ.

ಈಗಿನ ಸಂದರ್ಭದಲ್ಲಿ ವಿಶ್ವದ ದೊಡ್ಡಣ್ಣನ ಪಾತ್ರ ನಿರ್ವಹಿಸಲು ಅಮೆರಿಕವೇ ಸೂಕ್ತ. ಕೆಲವು ಹಿಡನ್ ಅಜೆಂಡಾ, ದುರಹಂಕಾರ ಮತ್ತು ತಪ್ಪು ನಡೆಗಳ ನಡುವೆಯೂ ಅಮೆರಿಕ ಮಾನವ ಹಕ್ಕುಗಳ ವಿಷಯದಲ್ಲಿ ಒಂದಷ್ಟು ಕಾಳಜಿ ಹೊಂದಿದೆ. ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಯುದ್ದೋತ್ಸಾಹಿಯಾದರೂ ಚೀನಾ ರಷ್ಯಾದಷ್ಟು ಸರ್ವಾಧಿಕಾರಿ ಮನೋಭಾವ ಹೊಂದಿಲ್ಲ.

ಆದ್ದರಿಂದ ಅಮೆರಿಕದ ಈ ರೀತಿಯ ಚುನಾವಣಾ ಪ್ರಚಾರ ಸಹಿಸಲಾಗುತ್ತಿಲ್ಲ. ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯೂ ಹೇಗೆ ಕೆಲವೊಮ್ಮೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಮತ್ತು ಗೆಲ್ಲುವ ಮಾನದಂಡಗಳು ಹೇಗೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಭಾರತವೂ ಸೇರಿದಂತೆ ಅನೇಕ ಉದಾಹರಣೆಗಳು ಇವೆ. ಅದು ಪ್ರಜಾಪ್ರಭುತ್ವ ದೌರ್ಬಲ್ಯ.

ಅಮೆರಿಕದ ಮತದಾರರು ಇದನ್ನು ಮೀರಿ ನಿಲ್ಲುವ ಪ್ರಯತ್ನ ಮಾಡಲಿ. ಭಾರತ ಅದರಿಂದ ಪಾಠ ಕಲಿಯಲಿ ಎಂದು ನಿರೀಕ್ಷಿಸೋಣ.

ಮಾನವ ಜನಾಂಗದ ಅಭಿವೃದ್ಧಿ ನಾಗರಿಕತೆಯತ್ತ ಸಾಗಬೇಕೆ ಹೊರತು ಮಾನವ ಮತ್ತೆ ಮಂಗನಂತಾಗಬಾರದು.

-ಎಚ್‌.ಕೆ ವಿವೇಕಾನಂದ

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸ್ಮರಣೆ: ಬುದ್ಧನ ನೆನಪಲ್ಲೊಂದು ಯಾನ….

Upayuktha

ಕೃತಕ ಕಾಲಿನಿಂದಲೇ ಧೀಂಗಿಣ: ಮನಸೂರೆಗೊಳ್ಳುವ ಹವ್ಯಾಸಿ ಯಕ್ಷಗಾನ ಕಲಾವಿದ ಮನೋಜ್ ಕುಮಾರ್

Upayuktha

ಶಿಕ್ಷಣ ಚಿಂತನ: ಸಂಭ್ರಮ… ಫಲಿತಾಂಶದ್ದೊ, ಕಲಿಕೆಯದ್ದೊ?

Upayuktha