ಚಂದನವನ- ಸ್ಯಾಂಡಲ್‌ವುಡ್ ಸಿನಿಮಾ-ಮನರಂಜನೆ

ಚಂದನವನದ ಚೆಂದದ ಗಾನ ‘ಉತ್ತರೆ ಉತ್ತರೆ…’: ಮಾಧುರ್ಯದ ಜತೆಗೆ ಭಾವನೆಗಳ ಮೆರವಣಿಗೆ

ಕುರುಕ್ಷೇತ್ರ ಚಿತ್ರದ ‘ಉತ್ತರೆ ಉತ್ತರೆ’ ಗೀತೆಯ ರಸವಿಮರ್ಶೆ

(ಚಿತ್ರ ಕೃಪೆ:: ಲಹರಿ ಮ್ಯೂಸಿಕ್- ಟಿಸೀರೀಸ್ ಯೂಟ್ಯೂಬ್ ಚಾನೆಲ್)

ಉತ್ತರೆ ಉತ್ತರೆ ಕನ್ನಡದಲ್ಲಿ ರಕಾರ ಅಭ್ಯಾಸ ಮಾಡಿಸಲು ಬಳಸಬಹುದಾದ ನಾಲಿಗೆ ನುಲಿ/ tongue twister. ಸುಮಾರು 40ಕ್ಕೂ ಹೆಚ್ಚು ಸಲ ರಕಾರ ಕಿವಿಗೆ ತಾಕುತ್ತದೆ. ರಕಾರ ಮೂರ್ಧನ್ಯ/ Retroflex ಅಕ್ಷರ. ಮಕ್ಕಳು ರಕಾರವನ್ನು ಉಚ್ಚರಿಸಲು ಕಷ್ಟಪಡುತ್ತಾರೆ. ಅದು ಗಡಸು ದನಿಯುಳ್ಳದ್ದು. ಆದರೆ ಅದರೊಂದಿಗೆ ಈ ಗೀತೆಯಲ್ಲಿ ಸಂಯೋಜಿತವಾಗಿರುವ ಇತರೆ ವರ್ಣಗಳು ರಕಾರದ ಕರ್ಕಶ ದನಿ ಗೋಚರವಾಗದಂತೆ ತಡೆಯುತ್ತವೆ. ತೆಲುಗಿನಲ್ಲಿ ದಿ. ಚಕ್ರಿ ಸಂಯೋಜನೆಯ ‘ರಾ ರಮ್ಮನಿ ರಾರಾ ರಮ್ಮನಿ ರಾಮಚಿಲುಕ ಪಲಿಕೆನು ಈ ವೇಳ’ ಈ ರಕಾರದ ಸಾಲು ನೆನಪಾಗುತ್ತಿದೆ. ಆದರೆ ಕುರುಕ್ಷೇತ್ರದ ಉತ್ತರೆ ಉತ್ತರೆಗೆ ರಕಾರ ಬಳಕೆಯಲ್ಲಿ ಅದು ಸಾಟಿಯಲ್ಲ. ಕನ್ನಡದ ಇಲ್ಲಿನ ಪದಪದವನ್ನೂ ಜೇನಿನಲ್ಲಿ ಅದ್ದಿ ಪಲುಕಿದಂತಿದೆ. ಪ್ರತಿ ಪಲುಕೂ ಮಾಧುರ್ಯವನ್ನೇ ಎರಕ ಹೊಯ್ದಂತಿದೆ. ಪಲುಕು ಎಂಬ ಕಾರಣದಿಂದಾಗಿ, ಭದ್ರಾಚಲ ರಾಮದಾಸರ ‘ಪಲುಕೇ ಬಂಗಾರಮಾಯೆನಾ?’ ನೆನಪಿನ ಹತ್ತಿರ ಸುಳಿಯುತ್ತ ಸಾಗಿದೆ.

ರಚನೆಯ ಶ್ರಮ ಸಾರ್ಥಕ ಎನ್ನಿಸುವಂತೆ ಬದ್ಧತೆಯಿಂದ ಹಾಡಿಸಲಾಗಿದೆ. ಗೀತ ರಚನೆಕಾರ ವಿ. ನಾಗೇಂದ್ರಪ್ರಸಾದ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಗಾಯಕರಾದ.ಶ್ರೇಯಾ ಘೋಷಾಲ್, ವೆಂಕಿ ಅವರು ತಮ್ಮ ವೃತ್ತಿಜೀವನದ ಶ್ರೇಷ್ಠ ಕಲಾಕುಸುಮವೊಂದನ್ನು ಇಲ್ಲಿ ಅರಳಿಸಿದ್ದಾರೆ.

ಆಲಿಸುತ್ತಿದ್ದರೆ ಈ ಹಾಡಿನ ಸಾಲುಗಳನ್ನು ಗುನುಗುವ ಚಟಕ್ಕೆ ವಶವಾಗುವುದು ಖಂಡಿತ. ಇದೊಂದು ಪರವಶಗೊಳಿಸುವ ಭಾವಗಾನ.

ಮಗಧೀರ ಚಿತ್ರದ, ಕೀರವಾಣಿ ಸಂಯೋಜನೆಯ ‘ಧೀರ, ಧೀರ, ಧೀರ; ಮನಸಾಗಲೇದುರಾ, ಚೇರರಾರ ಶೂರ ಮನಸಂದುಕೋ ದೊರ’ ಪ್ರಣಯಗೀತೆಯ ಪ್ರಭಾವ ಇದರ ಮೇಲೆ ನಿಚ್ಚಳವಾಗಿದ್ದರೂ ಸಂಯೋಜನೆಯಲ್ಲಿ ಅದು ಎದ್ದು ಕಾಣದು. ಆದರೆ ಹಿನ್ನೆಲೆಯಲ್ಲಿನ ವಾದ್ಯ ಸಂಗೀತದಲ್ಲಿ ಅದರ ದಟ್ಟ ಪ್ರಭಾವ ಇಣುಕಿದೆ.

ರಚನೆಯಲ್ಲಿ ಶೃಂಗಾರದ ಬಿಸುಪಿದೆ. ರಸಿಕತೆಯ ಲೇಪವಿದೆ. ಎದೆಯ ಮೇರು ಶಿಖರದಲಿ ಒರಗು ಬಾರೆ ಇಂದುವದನೆ ಎನ್ನುವಲ್ಲಿ ಒಂದು ಅಚ್ಚರಿ ಮತ್ತು ವೈರುಧ್ಯವಿದೆ: ಗಂಡು ನೀಡುವ ಆಹ್ವಾನವಿದು! ಇತ್ತೀಚಿನ ಪುರುಷರ ವಕ್ಷವಲಿ ಮೋಹವನ್ನು/ Male pectoral pack craze ನೆನಪಿಸುತ್ತದೆ!! ಅಂಗವಸ್ತ್ರ ತೇಲುವಂತೆ ಮೆಲ್ಲಬೀಸು ಕಳ್ಳಗಾಳಿ ಅಭಿಮನ್ಯುವಿನ ಉಸಿರಾದರೆ, ಖಡ್ಗವನ್ನೇ ಬೆವರುವಂತೆ ಮಾಡಬಲ್ಲ ನೋಟ ಉತ್ತರೆಯದು! ಕಣ್ಣನೋಟದಲ್ಲೇ ನೀ ಕಾಡಬೇಡ ಸಾಜನಾ, ಹೂವಿನಂತ ಹೆಣ್ಣು, ನಾಜೂಕು ನನ್ನ ಯೌವನ ಎಂಬ ಆಲಂಕಾರಿಕ ಸಾಲು ನೆನಪಾಗದಿರದು. ಅಲ್ಲಿ ಹೆಣ್ಣು, ಪುರುಷನ ನೋಟದ ತೀಕ್ಷ್ಣತೆ ಕುರಿತು ಹೇಳಿದ್ದರೆ, ಇಲ್ಲಿ ಪುರುಷಪುಂಗವ ವೀರಾಭಿಮನ್ಯು ಉತ್ತರೆಯ ನೋಟ ಅವನ ಖಡ್ಗವನ್ನೂ ಬೆವರುವಂತೆ ಮಾಡುತ್ತದೆಯೆಂದು ಮಾರ್ನುಡಿಯುತ್ತಾನೆ. ಇಂತಹ ಚತುರುಕ್ತಿ ಕನ್ನಡ ಗೀತ ಸಾಹಿತ್ಯವನ್ನು ಮುಂದಕ್ಕೆ ಮತ್ತು ಎತ್ತರಕ್ಕೆ ಒಯ್ಯುತ್ತದೆ. ಪ್ರಣಯ ಕೇಳಿ ಕಲಿಸುವೆನೆಂದು ಅಭಿಮನ್ಯು‌ ನಿಸ್ಸಂಕೋಚದಿಂದ, ಹಸಿಹಸಿಯಾಗಿ ಅರುಹಿ ವಿರಾಟಪುತ್ರಿ ಉತ್ತರೆಗೆ ರತಿಕ್ರೀಡೆಯಲ್ಲಿ ವಿಹರಿಸಲು ಆಹ್ವಾನವೀಯುತ್ತಾನೆ. ಈ ಆಮಂತ್ರಣದಲ್ಲಿ ಮುಚ್ಚುಮರೆಯೇ ಇಲ್ಲ. ಎಲ್ಲವೂ ಖುಲ್ಲಂ ಖುಲ್ಲಾ ಪ್ಯಾರ್.

ತುಂಬು ಹರೆಯದ ಅವನಿಗೆ ವಯೋಸಹಜವಾದ “ಪ್ಯಾರ್‌ಗೆ ಆಗ್ಬಿಟ್ಟೈತೆ.” ತೆರೆಯ ಮೇಲೆ ಅಭಿಮನ್ಯು, ಶಶಿರೇಖಾರ ಸಾಗಲಿ ತೇಲಿ ತರಂಗದೊಲು ಹಾಗೂ ನೀನೇನಾ ನನ್ನ ಕರೆದಿಹುದು, ನೀನೇನಾ ನನ್ನ ನೆನೆದಿಹುದು ಎಂಬ ಸಭ್ಯ, ರಮ್ಯ, ಮಡಿವಂತಿಕೆಯ ಸಾಲುಗಳನ್ನು ಕೇಳಿ ಪುಲಕಗೊಂಡ ತಲೆಮಾರು ನಮ್ಮದು. ಆದರೆ ಉತ್ತರೆಯೊಂದಿಗೆ ಬೆರೆಯಲು ಇಲ್ಲಿನ ಅದೇ ಅಭಿಮನ್ಯುವಿಗೆ ಅದೆಂತಹ ಉತ್ಕಟ ಮೋಹ. ಎಲ್ಲವನ್ನೂ ಮಾತಿನಲ್ಲೇ ಹಾಡಾಗಿ ಹರಿಯಬಿಡುತ್ತಾನೆ. ಆರು ದಶಕಗಳಲ್ಲಿ ಕನ್ನಡ ತೆರೆಯ ಮೇಲೆ ಸಂಕೋಚ ಚಿಂದಿ, ಚಿಂದಿ.! ಆದರೂ ಅಭಿಮನ್ಯು ಕಿಲಾಡಿ. ಅವನು ‘ಜಾಗ್ವಾರ್’ ಆದರೂ ಅವನಿಗೆ ಸಂಯಮವಿದೆ. ಹೆಗಲ ಮೇಲೆ ಇಂದ್ರಧನಸ್ಸು ಹೊರುವ ಬಾಹುಬಲದವನು ಎಂದು, ತನಗೆ ತಾನೇ ಪರಾಕು ಪಂಪು ಒತ್ತಿಕೊಳ್ಳುತ್ತ, ಸುರತ ಕೇಳಿಗೆ ಉತ್ತರೆಯೇ ಒಡ್ಡಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ಜೀವಜಗತ್ತಿನಲ್ಲಿ ಎಲ್ಲ ಗಂಡು ಪ್ರಾಣಿಗಳೂ ತಮ್ಮ ಸಾಮರ್ಥ್ಯದ ಬಗೆಗೆ ಅರಿವುಂಟುಮಾಡಿ ಸಂಗಾತಿಯನ್ನು ಸೆಳೆಯಲು ಪ್ರಕೃತಿದತ್ತವಾದ ವಿವಿಧ ತಂತ್ರಗಳನ್ನು ಅನುಸರಿಸುತ್ತವೆ. ಆದರೆ ನಮ್ಮ ಪುರುಷ ಪುಂಗವರಿಗೆ ನುಡಿಯ ನಂಟಿದೆಯಲ್ಲ. ಏನೆಲ್ಲವನ್ನೂ ಮಾತಿನಲ್ಲೇ ಸಂವಹನಿಸಬಲ್ಲರು. ಹಾಗಾಗಿ ಅವರು ಮದಕರಿಯಂತೆ ಘೀಳಿಡಬೇಕಿಲ್ಲ, ಗಂಡು ಕೋಗಿಲೆಯಂತೆ ಕುಹೂಗೀತ ಹಾಡಬೇಕಿಲ್ಲ, ಮಯೂರದಂತೆ ಶಿಖೆಯೆತ್ತಿ, ಗರಿಬಿಚ್ಚಿ ನರ್ತಿಸಬೇಕಿಲ್ಲ! ಉತ್ತರೆಯ ಬಾಳಿನಲ್ಲಿ ಇಂತಹ ಮಿಲನ ಮಹೋತ್ಸವಗಳು ಬೆರಳೆಣಿಕೆಯವು. ಆಕೆಗೆ ಬಹಳ ಬೇಗನೆ ವೈಧವ್ಯ ಪ್ರಾಪ್ತಿಯಾಗುತ್ತದೆ. ಆಕೆಯ ಗರ್ಭವೂ ಅಶ್ವತ್ಥಾಮನ ಕ್ರೋಧಾಗ್ನಿಗೆ, ಸೇಡಿಗೆ ಆಹುತಿಯಾಗುವ ಪ್ರಸಂಗ ಕುರುಕ್ಷೇತ್ರದಲ್ಲಿ ಉಂಟಲ್ಲ. ಹಾಗಾಗಿ ಆಕೆಯ ಬಾಳಿಗೆ ಈ ಯುಗಳಗೀತೆ ಒಂದು ಮುಂಗಡ ಬೋನಸ್; ಅನುಕಂಪ ಭತ್ಯೆ! ಜೀವನಪರ್ಯಂತ ಮೆಲ್ಲಲುಳಿದ ಖಾದ್ಯ.

ಒಟ್ಟಿನಲ್ಲಿ ಇಂತಹ ಹಲವು ಕಾರಣಗಳಿಂದಾಗಿ ಎದೆಯ ಹಾಡಾಗಿ ಹರಿಯಬಲ್ಲ, ಕಾಡಬಲ್ಲ ಭಾವ; ಈ ಚಿತ್ರಗೀತೆಯದು.
– ಕೆ. ರಾಜಕುಮಾರ್

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

 

Related posts

ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಹುಟ್ಟು ಹಬ್ಬದ ಸಂಭ್ರಮ

Harshitha Harish

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸಕ್ಕೆ ನಟ ಪುನೀತ್ ರಾಜ್‍ಕುಮಾರ್ ಭೇಟಿ

Harshitha Harish

ಎಂಟು ವರ್ಷದ ಪ್ರೀತಿ ಯಶಸ್ಸು ಕಂಡ ಡಾರ್ಲಿಂಗ್ ಕೃಷ್ಣ

Harshitha Harish