ಸಾಧಕರಿಗೆ ನಮನ

ದೇಶಕ್ಕೆ ‘ವಂದೇ ಮಾತರಂ’ ಐಕ್ಯಮಂತ್ರ ನೀಡಿದ ಬಂಕಿಮ್ ಚಂದ್ರ ಚಟರ್ಜಿ

“ವಂದೇ ಮಾತರಂ”– ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿ ಹಚ್ಚಿದ, ಜಾತಿ-ಧರ್ಮಗಳನ್ನು ಮೀರಿ ಕೋಟ್ಯಾಂತರ ಜನರನ್ನು ಒಗ್ಗೂಡಿಸಿದ ಈ ಹಾಡು ಇಂದಿಗೂ ಚಿರನೂತನ. ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಬಡಿದೆಬ್ಬಿಸಿದ ಈ ಹಾಡಿನ ಸಾಲುಗಳು ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಸ್ಫೂರ್ತಿಯನ್ನೇ ನೀಡಿದವು. ಭಾರತೀಯರನ್ನು ಒಗ್ಗೂಡಿಸಿದ ಈ ಮಹಾನ್ ಮಂತ್ರದ ರಚನೆಕಾರ ಕವಿ- ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ. ತನ್ನ ಐತಿಹಾಸಿಕ ರಚನೆಗಳ ಮೂಲಕ ದೇಶದ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಹೊಂದಿದವರು ಇವರು.

ಪಶ್ಚಿಮ ಬಂಗಾಲದ ನೈಹಾಟಿ ಸಮೀಪದ ಕಂತಲ್ಪರ ಗ್ರಾಮದಲ್ಲಿ ಜನಿಸಿದ ಬಂಕಿಮ್ ಚಂದ್ರ 3 ಜನ ಸಹೋದರರಲ್ಲಿ ಕಿರಿಯವರು. ತಂದೆ ಸರಕಾರಿ ಅಧಿಕಾರಿ, ನಿವೃತ್ತಿಗೆ ಮೊದಲು ಮಿಡ್ನಾಪುರ್ ನ ಜಿಲ್ಲಾಧಿಕಾರಿಯಾದವರು.ಅಣ್ಣ ಸಂಜೀಬ್ ಚಂದ್ರ ಚಟ್ಟೋಪಾಧ್ಯಾಯ ಕೂಡ ಕಾದಂಬರಿಕಾರ. ಅದೇ ರಕ್ತ ಬಂಕಿಮ್ ಚಂದ್ರರಲ್ಲಿ ಹರಿಯಿತು. ಕವಿಯಾಗಲು ಅಣ್ಣನೇ ಅವರಿಗೆ ಮೊದಲ ಸ್ಫೂರ್ತಿ. ಹೂಗ್ಲಿಯ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಬಂಕಿಮ್ ಪ್ರಥಮ ಕವನ ಬರೆದರು. ನಂತರ ಮಾಹ್ಸಿನ್ ಮತ್ತು ಪ್ರೆಸಿಡೆನ್ಸ್ ಕಾಲೇಜಲ್ಲಿ ಕಲಿತು ಕಲಾ ಪದವಿ ಗಳಿಸುತ್ತಾರೆ. ಕೊಲ್ಕೊತ್ತಾ ವಿಶ್ವ ವಿದ್ಯಾಲಯದಲ್ಲಿ ಪದವಿ ಪೂರ್ತಿಗೊಳಿಸಿ ಗ್ರಾಜ್ಯುವೇಟ್ ಆದ ಪ್ರಥಮ ಇಬ್ಬರು ವಿದ್ಯಾರ್ಥಿಗಳಲ್ಲಿ ಬಂಕಿಮ್ ಚಂದ್ರ ಕೂಡ ಒಬ್ಬರು.

ಬಾಲ್ಯದಲ್ಲೆ ಜೊತೆಗೂಡಿದ ಸಾಹಿತ್ಯದ ಒಡನಾಟ ಅವರ ಲೇಖನಿಯನ್ನು ಸುಮ್ಮನಿರಿಸಲಿಲ್ಲ. ಕವನಗಳು ಈಶ್ವರಚಂದ್ರ ಗುಪ್ತಾರ “ಸಂಬದ್ ಪ್ರಭಾಕರ್” ವಾರಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಲೇ ಇದ್ದವು. ಕವಿತೆಗಳ ಮೂಲಕ ಆರಂಭಗೊಂಡ ಸಾಹಿತ್ಯ ಲೋಕದ ಪ್ರಯಾಣ ನಂತರ ಕಾದಂಬರಿಗೆ ತಿರುಗಿತು. ಸ್ಪರ್ಧಾ ಕಾರ್ಯಕ್ರಮವೊಂದಕ್ಕಾಗಿ ತನ್ನ ಪ್ರಥಮ ಕಾದಂಬರಿ ಬರೆಯುತ್ತಾರೆ ಬಂಕಿಮ್. ಬಹುಮಾನ ಸಿಗುವುದಿಲ್ಲ ಮತ್ತು ಆ ಕಾದಂಬರಿ ಪ್ರಕಟ ಕೂಡ ಆಗುವುದಿಲ್ಲ. ನಂತರ ಬಂಕಿಮ್ ಚಂದ್ರ ಬರೆದ ಕಾದಂಬರಿ “ರಾಜ್ ಮೋಹನ್ಸ್ ವೈಫ್”. ಇಂಗ್ಲಿಷ್ ನಲ್ಲಿ ಬರೆದ ಈ ಕಾದಂಬರಿ ಭಾರತೀಯನೊಬ್ಬ ಇಂಗ್ಲಿಷ್ ಭಾಷೆಯಲ್ಲಿ ಬರೆದ ಪ್ರಥಮ ಕಾದಂಬರಿಯೆನಿಸಿತು. ನಂತರ ಬಂಗಾಲಿ ಭಾಷೆಯಲ್ಲಿ “ದುರ್ಗೇಷ್ನೊಂದಿನಿ” ಬರೆಯುತ್ತಾರೆ. ನಂತರ ಬರೆದ “ರಾಜ್ ಸಿಂಹ” ಮತ್ತು “ಆನಂದಮಠ” ಬಂಕಿಮ್ ಚಂದ್ರರ ಹೆಸರನ್ನು ಭಾರತೀಯರಿಗೆ ಪರಿಚಯಿಸಿದ ಮೇರು ಕೃತಿಗಳಾದವು.

ಆನಂದ ಮಠ ಮುದ್ರಣಗೊಳ್ಳುವುದಕ್ಕೆ ಮೊದಲು ಅವರೇ ಆರಂಭಿಸಿದ್ದ “ಬಂಗದರ್ಶನ್” ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ವಿದೇಶಿ ಆಕ್ರಮಣದ ವಿರುದ್ಧ ಸನ್ಯಾಸಿಗಳ ಹೋರಾಟದ ಕಥಾವಸ್ತು ಹೊಂದಿದ್ದ ಕಾದಂಬರಿ ಅದು. ಈ ಕಥಾಭಾಗದಲ್ಲಿ ಸ್ಫೂರ್ತಿಗಾಗಿ ಹಾಡುವ ಹಾಡು ಇದು. “ಮಾತೃಭೂಮಿಯೇ ನಮ್ಮ ತಾಯಿ. ನಮಗೆ ಬೇರೆ ತಂದೆ, ತಾಯಿ, ಪತ್ನಿ, ಮಕ್ಕಳು ಇಲ್ಲ.ನಮಗೆ ಇವಳೊಬ್ಬಳೇ ಸುಜಲೇ, ಸುಫಲೆ, ಮಲಯಜ ಶೀತಲೆ” ಎಂಬ ಧ್ಯೇಯವಾಕ್ಯ ಹೊಂದಿದ್ದ ಆನಂದ ಮಠ ದೇಶಭಕ್ತಿಯನ್ನು ಮೈಮನಗಳಲ್ಲಿ ಉದ್ದೀಪನಗೊಳಿಸುವ ಕಥಾವಸ್ತು ಹೊಂದಿತ್ತು. ಅದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಾಲ.1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಸ್ವಾತಂತ್ರ್ಯ ಹೋರಾಟ ಮೊನಚು ಕಳೆದುಕೊಂಡಿತ್ತು. ಭಾರತೀಯರ ಒಳ-ಜಗಳ, ಪಿತೂರಿಗಳು ಸ್ವಾತಂತ್ರ್ಯ ಸಂಗ್ರಾಮ ವಿಫಲವಾಗಲು ಕಾರಣವಾದವು. ದೇಶ ಮತ್ತೆ ಬ್ರಿಟಿಷರ ಬಾಹುಗಳಲ್ಲಿ ಸಿಲುಕಿತ್ತು. ದೇಶವಾಸಿಗಳನ್ನು ಒಗ್ಗೂಟಿಸುವ ಐಕ್ಯಮಂತ್ರ ಆಗ ಅಗತ್ಯವಿತ್ತು. ಅದು ಬಂಕಿಮ್ ಚಂದ್ರ ಲೇಖನಿಯಿಂದ ಹರಿದು ಬಂತು.ಆನಂದ ಮಠ ಕಾದಂಬರಿಯಲ್ಲಿ ಸೇರಿಸಿದ ಬಂಗಾಳಿ-ಸಂಸ್ಕ್ರತ ಭಾಷೆಗಳ ಸಂಗಮದ ಈ ಕವಿತೆ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ನ್ಯಾಯಾಧೀಶರಾಗಿ, ಜಿಲ್ಲಾಧಿಕಾರಿಯಾಗಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಸಹಾಯ ಮಾಡಿದ ಬಂಕಿಮ್ ಚಂದ್ರ 1894ರಲ್ಲಿ ನಿಧನರಾಗುತ್ತಾರೆ. ಆ ಹೊತ್ತಿಗೇ ವಂದೆ ಮಾತರಂ ಬಂಗಾಳದ ದೇಶ ಪ್ರೇಮಿಗಳನ್ನು ಒಗ್ಗೂಡಿಸಿರುತ್ತದೆ.

ಜನ ಪರಸ್ಪರ ಭೇಟಿಯಾದಾಗ ವಂದೇ ಮಾತರಂ ಹೇಳಲು ಆರಂಭಿಸಿರುತ್ತಾರೆ. ದೇಶವಾಸಿಗಳನ್ನು ಒಗ್ಗೂಡಿಸುವ ಕನಸು ಕಂಡಿದ್ದ ಬಂಕಿಮ್ ಚಂದ್ರ ಇರದಿದ್ದರೂ ಅವರ ಕನಸು ನನಸಾಗುವ ಸಮಯ ಬಂದಿರುತ್ತದೆ. 1896ರಲ್ಲಿ ಕೊಲ್ಕೊತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಯುವ ಕವಿ ರವೀಂದ್ರನಾಥ್ ಠಾಗೋರ್ ವಂದೇ ಮಾತರಂ ಹಾಡಿದಾಗ ಸೇರಿದ ಇಡೀ ಸಭೆ ರೋಮಾಂಚನಗೊಳ್ಳುತ್ತದೆ.

ಆಗ ಬಂಗಾಲ ವಿಭಜನೆಯ ಸಮಯ,ವಿಭಜನೆಯ ವಿರುದ್ಧದ ಸ್ವಾಭಿಮಾನಿ ಬಂಗಾಲಿಗರಿಗೆ ಇದುವೇ ಐಕ್ಯಮಂತ್ರವಾಯಿತು. ವಂದೇ ಮಾತರಂ ಹಾಡುತ್ತಲೇ ಬ್ರಿಟಿಷರ ವಿರುದ್ಧ ಸೆಟೆದು ನಿಂತರು ದೇಶವಾಸಿಗಳು. ದೇಶದೆಲ್ಲೆಡೆ ವಂದೇ ಮಾತರಂ ಪ್ರತಿಧ್ವನಿಸಿತು. ಮತ್ತೆ ಸ್ವಾತಂತ್ರ್ಯದ ಕೂಗು ಮುಗಿಲು ಮುಟ್ಟಿತು.ಸಾಮಾನ್ಯ ಕವಿತೆಯೊಂದು ದೇಶವನ್ನೇ ಒಗ್ಗೂಡಿಸಿತು. ಬಂಗಾಲ ವಿಭಜನೆಯ ವಿರುದ್ಧ ಮದ್ರಾಸಿನಲ್ಲಿ ನಡೆದ ಹೋರಾಟ “ವಂದೇ ಮಾತರಂ ಚಳವಳಿ” ಎಂದು ಹೆಸರಾಯಿತು. ಬಿಪಿನ್ ಚಂದ್ರಪಾಲ್ ವಂದೇ ಮಾತರಂ ಪತ್ರಿಕೆ ಆರಂಭಿಸಿದರು. 1906ರ ಕೊಲ್ಕೊತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಅನಾವರಣಗೊಂಡ ಪ್ರಥಮ ರಾಷ್ಟ್ರೀಯ ಧ್ವಜದಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು.

ವೀಡಿಯೋ: ವಂದೇಮಾತರಂ

ಬ್ರಿಟಿಷ್ ಸರಕಾರ ವಂದೇ ಮಾತರಂಗೆ ನಿಷೇದ ಹೇರುವ ಮೊದಲೇ ಅದು ಭಾರತೀಯರ ಹೃದಯವಾಸಿಯಾಗಿತ್ತು. ಸ್ವಾತಂತ್ರ್ಯ ಚಳವಳಿಯ ಉರಿ ಏರುತ್ತಿದ್ದಂತೆ ವಂದೇ ಮಾತರಂನ ಕೂಗು ದೇಶದೆಲ್ಲೆಡೆಯಿಂದ ಕೇಳತೊಡಗಿತು. ಇದು ಬ್ರಿಟಿಷ್ ಆಡಳಿತಕ್ಕೆ ನುಂಗಲಾರದ ತುತ್ತಾಯಿತು. ಭಾರತೀಯರ ರಕ್ತದ ಕಣ-ಕಣದಲ್ಲೂ ದೇಶಭಕ್ತಿಯ ಭಾವನೆಯನ್ನು ಬಡಿದೆಬ್ಬಿಸಿದ ಗೀತೆ ಅಂತಿಮವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಕಾರಣವಾಯಿತು. ದೇಶವಾಸಿಗಳನ್ನು ಒಗ್ಗೂಡಿಸುವ ಕನಸು ಕಂಡಿದ್ದ ಬಂಕಿಮ್ ಚಂದ್ರ ಚಟರ್ಜಿ ಆತ್ಮ ಕುಣಿದು ನಲಿದಾಡಿತು.

ಬಂಕಿಮ್ ಚಂದ್ರರು ಅವರ ಮಗಳಿಗೆ ಹೇಳಿದಂತೆ ವಂದೇ ಮಾತರಂ ಬರೆದ ರಾತ್ರಿ ಸ್ವತಃ ಭಾರತ ಮಾತೆಯೇ ಅವರೆದುರು ಕುಳಿತು ಶಬ್ದಗಳನ್ನು ಹೇಳಿದ್ದಳು. ಬೆರಳುಗಳು ಚಲಿಸಿದಂತೆ ಶಬ್ದಗಳು ಮೂಡಿ ಕವನ ರಚನೆಯಾಗಿತ್ತು. ಬಂಕಿಮ್ ಚಂದ್ರ ಚಟರ್ಜಿ ವಂದೇ ಮಾತರಂ ಮೂಲಕ ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಸೇರಿ ಹೋದರು. ಸಾಹಿತ್ಯ ಲೋಕದ ಅತಿ ಗೌರವಾನ್ವಿತ ಸ್ಥಾನ ಅವರಿಗೆ ಲಭಿಸಿತು.

ಇದಲ್ಲದೇ ಕಪಾಲಕುಂಡಲ, ಮೃಣಾಲಿನಿ, ಇಂದಿರಾ,ರಾಧಾರಾಣಿ ಕಾದಂಬರಿಗಳ ಮೂಲಕವೂ ಸಾಹಿತ್ಯ ಪ್ರಿಯರ ಮನಗೆದ್ದ ಬಂಕಿಮ್ ಚಂದ್ರ ದೇಶದ ಸಾಹಿತ್ಯ ಕ್ಷೇತ್ರದ ಬಹುದೊಡ್ಡ ಹೆಸರು. ಅನೇಕ ಮಹತ್ವದ ಕಾದಂಬರಿ, ಕವನ ಸಂಕಲನಗಳನ್ನು ಹೊರ ತಂದಿದ್ದರೂ ಜನ ಇಂದಿಗೂ ನೆನೆಸುವುದು ಅವರ ಆನಂದ ಮಠ ಮತ್ತು ವಂದೇ ಮಾತರಂ ಗೀತೆಯನ್ನೇ.

ಇಡೀ ಭಾರತದಲ್ಲಿ ಮಿಂಚಿನ ಸಂಚಾರ ಮಾಡಿಸಿದ ವಂದೇ ಮಾತರಂ ಭಾರತೀಯರ ಹೃದಯದಲ್ಲಿ ಇಂದಿಗೂ ಶಾಶ್ವತವಾಗಿ ನೆಲೆಯೂರಿದೆ. ನಮ್ಮೆಲ್ಲರ ಹೃದಯದಲ್ಲಿ ದೇಶಪ್ರೇಮದ ಭಾವನೆಯನ್ನು ಸ್ಫುರಿಸುವ ಗೀತೆಯ ಜನಕನ ನೆನಪೇ ನಮಗಿಂದು ರೋಮಾಂಚನ ತರಿಸುತ್ತಿದೆ. ದೇಶವಿಂದು 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ.ದೇಶ ಭಕ್ತಿಯೆಂಬುದು ಫ್ಯಾಷನ್ ಆಗಿರುವ ಕಾಲದಲ್ಲಿ ಗಂಭೀರವಾಗಿ ಚಿಂತಿಸಬೇಕಾದ್ದು ಅನಿವಾರ್ಯವಾಗಿದೆ. ಅಸಂಖ್ಯ ದೇಶಪ್ರೇಮಿಗಳ ಬಲಿದಾನ ಇಂದಿನ ಸುಖ ಜೀವನಕ್ಕೆ ಕಾರಣವಾಗಿದೆ. ಆದರೆ ನಾವು ಸ್ವಾತಂತ್ರ್ಯದ ಮಹತ್ವ ಅರಿಯದಿರುವುದು ದುರದೃಷ್ಟಕರ. ಅಂದು ವಂದೇ ಮಾತರಂ ದೇಶವಾಸಿಗಳನ್ನು ಒಗ್ಗೂಡಿಸಿದಂತೆ ದೇಶದ ಅಭಿವೃದ್ಧಿಗೆ ಇಂದು ನಾವೆಲ್ಲರೂ ಒಗ್ಗೂಡಬೇಕಾಗಿದೆ. ವಂದೇ ಮಾತರಂ ಮತ್ತೆ ಭಾರತೀಯರಲ್ಲಿ ಐಕ್ಯತೆಯ ಭಾವವನ್ನು ಮೂಡಿಸಲಿ ಎಂಬ ಆಶಾಭಾವದೊಂದಿಗೆ ಮಹಾನ್ ಕವಿಗೆ ನಮನಗಳು.

– ತೇಜಸ್ವಿ. ಕೆ, ಪೈಲಾರು, ಸುಳ್ಯ

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸ್ಮರಣೆ: ಕಪೂರ್ ಕುಟುಂಬದ ಎವರ್‌ಗ್ರೀನ್‌ ಹೀರೋ ರಿಷಿಕಪೂರ್

Upayuktha

ಡ್ಯಾನ್ಸರ್, ಕೊರಿಯೋಗ್ರಾಫರ್ ರೆಮೊ ಡಿ’ಸೋಜಾ

Upayuktha

ಬೆಟ್ಟದಡಿಯ ಹುಲ್ಲಾಗಿ, ಮನೆಗೆ ಮಲ್ಲಿಗೆಯಾದ ಮಹೇಶ್ವರಪ್ಪ

Upayuktha

Leave a Comment

error: Copying Content is Prohibited !!